ತಳಹಂತದಲ್ಲಿ ಗಟ್ಟಿ ಸಂಘಟನೆ ಪಕ್ಷದ ಶಕ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಗೆ 65 ಸ್ಥಾನ ಬರಬಹುದು: ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಮಾರ್ಚ್ 10: ಪಕ್ಷದಲ್ಲಿ ಗಟ್ಟಿಯಾದ ಸಂಘಟನೆ ಬೂತ್ ಮಟ್ಟದಲ್ಲಿದ್ದು ಅದೇ ನಮ್ಮ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಚುನಾವಣೆ ಮೂರನೇ ಹಂತದ ಪ್ರಚಾರ ನಡೆಯುತ್ತಿದೆ. ಬೂತ್ ವಿಜಯ, ಬೂಟ್ ಮಟ್ಟದ ವಿಜಯ ಸಂಕಲ್ಪ, ಈಗ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲೆಯಲ್ಲಿ ಮೋರ್ಚಾಗಳ ಸಮ್ಮೇಳನ ಆಗುತ್ತಿದೆ. ನನ್ನ ಪ್ರಕಾರ 224 ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಂಘಟನಾತ್ಮಕ ಕೆಲಸಗಳು ನಡೆಯುತ್ತಿವೆ ಎಂದರು.
ಅದ್ಭುತ ಬೆಂಬಲ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಕೆಲಸ, ನರೇಂದ್ರ ಮೋದಿಯವರ ಕಾರ್ಯಕ್ರಮ, ನನ್ನ ಕೆಲಸಗಳೂ ಸೇರಿ ದೊಡ್ಡ ಪ್ರಮಾಣದ ಕೆಲಸ ಕೆಳ ಮಟ್ಟದಿಂದ ದೊರೆಯುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ ಅದ್ಭುತವಾದ ಬೆಂಬಲ ದೊರೆಯುತ್ತಿದ್ದು, ಸಂಪೂರ್ಣವಾದ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ಗೆ 65 ಸ್ಥಾನ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಗೆ 65 ಸ್ಥಾನ ಬರುತ್ತದೆ ಎಂದಿದ್ದು, ತಮ್ಮ ಪಕ್ಷಕ್ಕೆ ದೊರೆಯುವ ಸ್ಥಾನ 65 ಎಂದು ಬಹುಶಃ ಹೇಳುತ್ತಿದ್ದಾರೆ ಎಂದರು.
ಹಲವಾರು ಆಯಾಮಗಳ ಮೇಲೆ ನಿರ್ಧಾರ
ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಹಾಗೇನಿಲ್ಲ, ಹಲವಾರು ಆಯಾಮಗಳಲ್ಲಿ ಸಮೀಕ್ಷೆ ಮಾಡಿ ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಒಂದೇ ಬಾರಿಗೆ ಟಿಕೆಟ್ ತಪ್ಪುತ್ತದೆ ಎಂದು ಹೇಳುವುದು, ಅಥವಾ ಎಲ್ಲರಿಗೂ ಸಿಗಲಿದೆ ಎನ್ನುವುದು ರಾಜಕಾರಣದಲ್ಲಿ ಸರಿಯಲ್ಲ ಎಂದರು.
ಬಿಜೆಪಿ ಸೇರುವ ವಿಶ್ವಾಸವಿದೆ
ಜನಾರ್ದನರೆಡ್ಡಿಯವರು ಬಿಜೆಪಿ ಗೆ ಪುನಃ ಸೇರ್ಪಡೆಯಾಗುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಇನ್ನೂ ತಮ್ಮ ತೀರ್ಮಾನವನ್ನು ಪ್ರಕಟ ಮಾಡಿಲ್ಲ. ಮೂರು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಅವರ ನಿರ್ಣಯವನ್ನು ಅವರು ತೆಗೆದುಕೊಳ್ಳುತ್ತಾರೆ. ಅವರು ಮತ್ತು ಬಿಜೆಪಿಗೆ ಹಳೆ ಸಂಬಂಧವಿರುವುದು ಸತ್ಯ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.
ಅಂತಿಮ ನಿರ್ಧಾರ
ಸಂಸದೆ ಸುಮಾಲತಾ ಅವರು ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ಅವರನ್ನು ಭೇಟಿಯಾಗಿ ದ್ದಾರೆ. ಈಗಾಗಲೇ ಹಲವಾರು ಸುತ್ತಿನ ಚರ್ಚೆಯಾಗಲಿದ್ದು ಅವರು ಅಂತಿಮ ನಿರ್ಧಾರ ಇಂದು ತೆಗೆದುಕೊಂಡು ಪ್ರಕಟಿಸಲಿದ್ದಾರೆ ಎಂದರು.
ಪಕ್ಷಾಂತರದ ಬಗ್ಗೆ ಊಹಾಪೋಹ
ಕೆಲವು ಊಹಾಪೋಹಗಳಿವೆ. ಚುನಾವಣೆ ಸಮಯದಲ್ಲಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೋಗಿಬರುವವರಿದ್ದಾರೆ. ಕಾದು ನೋಡೋಣ ಎಂದರು.