Screenshot 2023 03 09 19 57 18 243 com.google.android.apps .nbu .files

ಕಾಂಗ್ರೆಸ್ ಪಕ್ಷದ 120 ಅಭ್ಯರ್ಥಿಗಳ ಪಟ್ಟಿ ಕೇಂದ್ರ ಚುನಾವಣಾ ಸಮಿತಿಗೆ..

POLATICAL STATE

ಕಾಂಗ್ರೆಸ್ ಪಕ್ಷದ 120 ಅಭ್ಯರ್ಥಿಗಳ ಪಟ್ಟಿ ಕೇಂದ್ರ ಚುನಾವಣಾ ಸಮಿತಿಗೆ..

ಪಕ್ಷದ ಸ್ಕ್ರೀನಿಂಗ್ ಕಮಿಟಿ ಕಳೆದ ಮೂರು ದಿನಗಳಿಂದ ಸಭೆ ನಡೆಸುತ್ತಿದ್ದು, ಸುಮಾರು 170 ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ಮಾಡಲಾಗಿದ್ದು, ಇನ್ನು 50 ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಬಾಕಿ ಇದೆ. ಚರ್ಚೆಯಾಗಿರುವ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಟ್ಟಿದ್ದೇವೆ. ಎಲ್ಲ ಕಡೆಗಳಲ್ಲಿ ಒಮ್ಮತದ ತೀರ್ಮಾನವನ್ನು ತೆಗೆದುಕೊಂಡಿದ್ದು, ಎಲ್ಲ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದೆ.

ಪಕ್ಷದಲ್ಲಿ ನಾಯಕರ ಸಂದಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇನ್ನು ಕೆಲವು ಕ್ಷೇತ್ರಗಳಲ್ಲಿ ನಾಯಕರುಗಳನ್ನು ಕರೆಸಿ ಚರ್ಚೆ ಮಾಡಬೇಕಿದೆ. ನಾಳೆಯಿಂದ ಎಲ್ಲೆಲ್ಲಿ ಭಿನ್ನಾಭಿಪ್ರಾಯಗಳಿವೆಯೋ ಆ ಕ್ಷೇತ್ರದ ನಾಯಕರನ್ನು ಕರೆಸಿ ಮಾತನಾಡುತ್ತೇವೆ. ಇಂದು ಚಿಕ್ಕಮಗಳೂರು ಜಿಲ್ಲೆ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಬಿಜೆಪಿ ಸರ್ಕಾರ ಸೋಲಿಸಲೇಬೇಕು ಎಂದು ಅನೇಕರಲ್ಲಿ ಆಸೆ ಇದೆ. ಹೀಗಾಗಿ ಎಲ್ಲರ ಜತೆ ಚರ್ಚೆ ಮಾಡಿ ಒಮ್ಮತದ ತೀರ್ಮಾನ ಮಾಡುತ್ತೇವೆ’ ಎಂದರು.

ರಾಜಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, ‘ಈ ಬಗ್ಗೆ ಯಾವ ತೀರ್ಮಾನ ಮಾಡಲಾಗಿದೆ ಎಂದು ಈಗ ಹೇಳುವುದಿಲ್ಲ. ರಾಜ್ಯದಲ್ಲಿ ಪಕ್ಷ ಗೆಲ್ಲುವುದು ಮುಖ್ಯವೇ ಹೊರತು ವ್ಯಕ್ತಿಗಳಲ್ಲ. ಸಾಮಾಜಿಕ ನ್ಯಾಯ ಹಾಗೂ ಪಕ್ಷದ ಗೆಲುವು, ಪಕ್ಷದ ಕುರಿತ ಬದ್ಧತೆ ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ’ ಎಂದರು.

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕ್ರೆಡಿಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಹೆದ್ದಾರಿಯಲ್ಲಿ ಸರ್ಕಾರ ಮೊದಲು ಸರ್ವೀಸ್ ರಸ್ತೆ ಮಾಡಿಕೊಡಲಿ, ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ಎನ್ನುತ್ತಾರೆ, ಈ ರಸ್ತೆಯಲ್ಲಿ ಸಾಗುವಾಗ ಗಾಡಿಗಳು ತೊಂದರೆ ಅನುಭವಿಸುತ್ತಿವೆ. ಕಳೆದ ಆರು ತಿಂಗಳಲ್ಲಿ ಎಷ್ಟು ಅಪಘಾತಗಳಾಗಿವೆ. ಹೀಗಾಗಿ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಲಿ. ಈ ಯೋಜನೆ ಬಿಜೆಪಿ ಅವರ ಕಾಲದಲ್ಲಿ ಆರಂಭವಾಗಿದೆ ಆದರೆ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿ ಅದಕ್ಕೆ ಅನುಮತಿ ನೀಡಿ ಶಂಕುಸ್ಥಾಪನೆ ಮಾಡಿದ್ದು ಆಸ್ಕರ್ ಫರ್ನಾಂಡೀಸ್ ಅವರು ಕೇಂದ್ರ ಸಚಿವರಾಗಿದ್ದಾಗ’ ಎಂದು ತಿಳಿಸಿದರು.

IMG 20230309 WA0059

ಕಾಂಗ್ರೆಸ್ ಪಕ್ಷಕ್ಕೆ ಹೋಗುವವರು ಹೋಗಲಿ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಯಾರನ್ನು ಕಳುಹಿಸಲು ಇಚ್ಛೇ ಇದೆಯೋ ಅವರನ್ನು ಕಳುಹಿಸಲಿ. ಹೋಗುವವರನ್ನು ಬೇಡ ಎನ್ನಲು ಆಗುವುದಿಲ್ಲ, ಬರುವವರನ್ನು ತಡೆಯಲು ಆಗುವುದಿಲ್ಲ. ಅವರ ಮಾತಿನಲ್ಲೂ ಸತ್ಯವಿದೆ. ಮಿಕ್ಕ ವಿಚಾರ ನಂತರ ಮಾತನಾಡೋಣ’ ಎಂದು ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:

ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷವು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದೆ. ಎಲ್ಲ 224 ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಬಹಳ ಒಮ್ಮತದ ತೀರ್ಮಾನ ಬಂದಿದೆ. ಈ ಸಭೆಯ ವಿಚಾರಗಳನ್ನು ಸದ್ಯದಲ್ಲೇ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು. ನಾವು ಈ ಚುನಾವಣೆಯಲ್ಲಿ ನಮ್ಮ 150 ಕ್ಷೇತ್ರ ಗೆಲ್ಲುವ ಗುರಿಯತ್ತ ಸಾಗುತ್ತೇವೆ.

ಈ ಮಧ್ಯೆ ವಿಧಾನಪರಿಷತ್ ಸದಸ್ಯರಾದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಪುಟ್ಟಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲು ಬಯಸುತ್ತಿದ್ದಾರೆ. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿದ್ದು, ಇದರ ವಿರುದ್ಧ ಬೇಸತ್ತು ಈ ತೀರ್ಮಾನ ಮಾಡಿದ್ದಾರೆ. ಅವರ ಈ ನಿರ್ಧಾರದಿಂದ ನಮಗೆ ಸಂತೋಷವಾಗಿದೆ.

ಈ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ವಿದ್ಯಾರ್ಥಿ ವೇತನ ಕಸಿದುಕೊಂಡಿದೆ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡುತ್ತಿದ್ದು, ಬಿಜೆಪಿ ಸರ್ಕಾರದ ಆಲೋಚನೆಗಳನ್ನು ಶಿಕ್ಷಣ ವ್ಯವಸ್ಥೆ ಮೇಲೆ ಹೇರಲಾಗುತ್ತಿದೆ. ಪುಟ್ಟಣ್ಣ ಅವರ ಇನ್ನು ನಾಲ್ಕೈದು ವರ್ಷಗಳ ಅಧಿಕಾರ ಇದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೊಂದು ಧೈರ್ಯದ ನಡೆ. ಇದೊಂದು ನಿಸ್ವಾರ್ಥ ನಿರ್ಧಾರ. ಈ ವಿಚಾರವಾಗಿ ಅವರು ನಾನು ಹಾಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದರು. ಅನೇಕರು ತಮ್ಮ ಅಧಿಕಾರ ಅವಧಿ ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಪಕ್ಷ ಸೇರಲು ಬರುತ್ತಾರೆ. ಆದರೆ ಪುಟ್ಟಣ್ಣ ಅವರು ಪೂರ್ಣಾವಧಿ ಅಧಿಕಾರ ಇರುವಾಗಲೂ ಅದಕ್ಕೆ ರಾಜೀನಾಮೆ ನೀಡಿ ಶಿಕ್ಷಕರು, ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಲು ರಾಜೀನಾಮೆ ನೀಡಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಅವರು ತಮ್ಮ ರಾಜೀನಾಮೆ ನೀಡಿದ ತಕ್ಷಣ, ಮುಂದೆ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ವ್ಯವಸ್ಥೆ ಬಲಪಡಿಸಲು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ 6.5 ಕೋಟಿ ಜನರ ಆಶೀರ್ವಾದದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಪುಟ್ಟಣ್ಣ ಅವರ ಅನುಭವದಿಂದ ಲಾಭ ಪಡೆದುಕೊಳ್ಳಿದೆ. ಅವರು ಯಾವುದೇ ಷರತ್ತುಗಳಿಲ್ಲದೇ ಪಕ್ಷ ಸೇರುತ್ತಿದ್ದಾರೆ.

IMG 20230309 WA0060

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:

ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರ ಅಧಿಕಾರ ಅವಧಿ ಇನ್ನು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಇದೆ. ಆದರೂ ಬಿಜೆಪಿ ತೊರೆದು, ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವುದು ಬಹಳ ವಿರಳ. ಅವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೋಮುವಾದ, ಅಭಿವೃದ್ಧಿಗೆ ತಿಲಾಂಜಲಿ ಇಟ್ಟು ಜನರ ಭಾವನೆ ಕೆರಳಿಸುವ ವಿಚಾರಗಳಿಗೆ ಬೇಸತ್ತು ಆ ಪಕ್ಷ ತೊರೆದಿದ್ದಾರೆ.

ಸುಮಾರು 20 ವರ್ಷಗಳ ಕಾಲ ವಿಧಾನ ಪರಿಷತ್ ನಲ್ಲಿ ಕೆಲಸ ಮಾಡಿ ಉಪ ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅಪಾರವಾದ ಅನುಭವ ಇದ್ದು, ಶಿಕ್ಷಕರ ವರ್ಗದಲ್ಲಿ ಬಹಳ ಹೆಸರು ಮಾಡಿರುವ ನಾಯಕರು. ಈ ಕ್ಷೇತ್ರಗಳಲ್ಲಿ ಶಿಕ್ಷಕರ ಸಮಸ್ಯೆ ಬಗೆಹರಿಸದಿದ್ದರೆ ಗೆಲ್ಲುವುದು ಬಹಳ ಕಷ್ಟ. ಸತತ ನಾಲ್ಕು ಬಾರಿ ಗೆಲವು ಸಾಧಿಸಿದ್ದರೆ, ಅದು ಅವರ ಜನಪರ ಕೆಲಸಕ್ಕೆ ಸಾಕ್ಷಿ. ಅವರ ಆಗಮನದಿಂದ ಪಕ್ಷಕ್ಕೆ ಶಕ್ತಿ ಬರಲಿದೆ. ಅವರ ತೀರ್ಮಾನ ಬಹಳ ಧೈರ್ಯದ ತೀರ್ಮಾನವಾಗಿದೆ.

ಪುಟ್ಟಣ್ಣ ಅವರು ಬಹಳ ವರ್ಷಗಳ ಸ್ನೇಹಿತರು. ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಇವರು ಸ್ನೇಹಪರ ವ್ಯಕ್ತಿಯಾಗಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷ ಅವರ ಹಿರಿತನ, ಸೇವೆ ಪರಿಗಣಿಸಿ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲಿದೆ.

ಪುಟ್ಟಣ್ಣ:

ನಾನು ಇಂದು 4.30ಕ್ಕೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ವಿಶ್ವವಿದ್ಯಾಲಯ ಅಧ್ಯಕ್ಷನಾಗಿದ್ದೆ. 2 ಬಾರಿ ಚುನಾಯಿತ ಸೆನೆಟ್ ಸದಸ್ಯನಾಗಿದ್ದೇನೆ. 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಗೆಲವು ಸಾಧಿಸಿದ್ದೇನೆ. ನಾನು ರಾಜ್ಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಿದ್ದು, ಮತ್ತೆ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಆದರೆ ನಾನು ಯಾವ ಉದ್ದೇಶದಿಂದ ಬಿಜೆಪಿ ಸೇರಿದೆನೋ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ ಸತ್ತಂತೆ ಬದುಕುವ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ವಿವರವಾಗಿ ಹೇಳುತ್ತೇನೆ.

ಅಲ್ಲಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿದ್ದೇನೆ. ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೂ ಹಾಗೂ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿದ್ದೇನೆ. ಶಿಕ್ಷಕರ ಕ್ಷೇತ್ರದ ಯಾವುದೇ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿಲ್ಲ. ಇತ್ತೀಚೆಗೆ ನಡೆದ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸಿದಾಗ, ನಾವು ಯಾವ ಮುಖ ಇಟ್ಟುಕೊಂಡು ಶಿಕ್ಷಕರು ಹಾಗೂ ಪಧವೀದರರ ಮತ ಕೇಳಲಿ ಎಂದು ಪ್ರಶ್ನೆ ಮಾಡಿದ್ದೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ 142 ದಿನ ಧರಣಿ ಮಾಡಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಅವರ ಸಮಸ್ಯೆಗೆ ಸ್ಪಂದಿಸಲು ಹಲವು ಬಾರಿ ಭೇಟಿ ಮಾಡಿದರೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾನು ಈ ತೀರ್ಮಾನ ಮಾಡಿದೆ.

ಅಂದು ನಾನು ಮಧ್ಯರಾತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಮನವೊಲಿಸಿ ಎಂದು ಮನವಿ ಮಾಡಿದೆ. ನಂತರ ಅವರು ಮನವಿಗೆ ಸ್ಪಂದಿಸಿ ಪ್ರತಿಭಟನಾ ನಿರತರ ಮನವೊಲಿಸಿದರು. ನನ್ನ 20 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಭ್ರಷ್ಟಾಚಾರವನ್ನು ನಾನು ನೋಡಿಲ್ಲ. ಬಿಜೆಪಿ ಪಕ್ಷ ಸೇರಿ ತಪ್ಪು ಮಾಡಿದೆ ಎಂದು ನನ್ನ ಆತ್ಮಸಾಕ್ಷಿ ಕೇಳುತ್ತಿತ್ತು. ಶಿಕ್ಷಣ ಕ್ಷೇತ್ರದಲ್ಲಿ ನಾನು ಸೇವೆ ಮಾಡಿಕೊಂಡು ಬಂದಿದ್ದು, ಇಂದು ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ ಅವರ ಸಮ್ಮುಖದಲ್ಲಿ ಪಕ್ಷ ಸೇರುತ್ತಿದ್ದೇನೆ. ಈ ನಾಯಕರು ನನ್ನನ್ನು ಮುಕ್ತವಾಗಿ ಸ್ವಾಗತಿಸಿ, ನನ್ನ ಅನುಭವ ಉಪಯೋಗಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇನೆ. ನನ್ನನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ.