ಬೆಳಗಾವಿ : ಕಾಂಗ್ರೆಸ್ ಪಕ್ಷದ ಯುವ ಕ್ರಾಂತಿ ಸಮಾವೇಶ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಕೈ ನಾಯಕರು 4 ನೇ ಗ್ಯಾರಂಟಿಯ ಘೋಷಿಸಿದರು.
ಕಾಂಗ್ರೆಸ್ ಪಕ್ಷ ಪ್ರತಿ ಪಧವಿಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3 ಸಾವಿರ, ಡಿಪ್ಲಮೋ ಮಾಡಿರುವ ಯುವಕರಿಗೆ 1500 ರೂ.ಗಳನ್ನು 2 ವರ್ಷಗಳ ಕಾಲ ನೀಡಲಾಗುವುದು. 10 ಲಕ್ಷ ಯುವಕರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲಿದೆ
ರಾಹುಲ್ ಗಾಂಧಿಮಾತುಗಳು
ಕೆಲ ತಿಂಗಳ ಹಿಂದೆ ಕರ್ನಾಟಕದ ಮೂಲಕ ಭಾರತ ಜೋಡೋ ಯಾತ್ರೆ ಸಾಗಿತ್ತು. ಈ ಯಾತ್ರೆ ಸಂದರ್ಭದಲ್ಲಿ ಎಲ್ಲ ವರ್ಗದ ಜನ ಅಭೂತಪೂರ್ವ ಬೆಂಬಲ ನೀಡಿ ನಮಗೆ ಶಕ್ತಿ ತುಂಬಿದ್ದಿರಿ, ಯಾತ್ರೆ ಯಶಸ್ಸುಗೊಳಿಸಿದ್ದಿರ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಇಡೀ ದೇಶಕ್ಕೆ ಈ ಯಾತ್ರೆ ಸಂದೇಶ ರವಾನಿಸಿತ್ತು. ಈ ದೇಶ ಎಲ್ಲರಿಗೂ ಸೇರಿದ್ದು, ಒಂದಿಬ್ಬರ ಸ್ವತ್ತ. ಅಧಾನಿ ಅವರ ಸ್ವತ್ತಲ್ಲ. ಈ ದೇಶ ರೈತರು, ಯುವಕರು, ಬಡವರಿಗೆ ಸೇರಿದ ದೇಶವಿದೆ.
ನಮ್ಮ ಯಾತ್ರೆಯಲ್ಲಿ ದೊಡ್ಡ ರಥ ಇರಲಿಲ್ಲ, ಎಲ್ಲರೂ ಸಮಾನರಾಗಿ ಹೆಜ್ಜೆ ಹಾಕುತ್ತಿದ್ದರು. ಈ ಯಾತ್ರೆ ಎಲ್ಲರಿಗೂ ಭಾತೃತ್ವ ಸಂದೇಶ ನೀಡಿತ್ತು. ರಾಜ್ಯದಲ್ಲಿ ಸಿಕ್ಕ ಬೆಂಬಲ ಎಲ್ಲೆಡೆ ಸಿಕ್ಕಿತ್ತು. ದ್ವೇಷದ ಮಾರುಕಟ್ಟೆಯಲ್ಲಿ ಲಕ್ಷಾಂತರ ಮಂದಿ ಪ್ರಿತಿಯ ಅಂಗಡಿ ತೆರೆದರು.
ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಯಾತ್ರೆ ಸಮಯದಲ್ಲಿ ಯುವಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿದೆ ಎಂದರು. ಕೇವಲ ಯುವಕರು ಮಾತ್ರವಲ್ಲ ರಾಜ್ಯ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಎಲ್ಲ ವರ್ಗದವರು ಹೇಳಿದ್ದಾರೆ. ಗುತ್ತಿಗೆದಾರರ ಸಂಘ, ಶಾಲೆಗಳ ಸಂಸ್ಥೆ ಪ್ರಧಾನಿಗೆ ಪತ್ರ ಬರೆದು ಕರ್ನಾಟಕದಲ್ಲಿ 40 % ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರು ನೀಡಿದ್ದರೂ ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ನೀಡಿಲ್ಲ.
ಮೈಸೂರು ಸ್ಯಾಂಡಲ್ ಸೋಪ್ ಕಾರ್ಪೊರೇಷನ್ ನಲ್ಲಿ ಹಗರಣ ನಡೆದು ಶಾಸಕನ ಪುತ್ರ ಸಿಕ್ಕಿಬಿದ್ದಾಗ 8 ಕೋಟಿ ಸಿಗುತ್ತದೆ. ಸರ್ಕಾರ ಅವರ ರಕ್ಷಣೆ ಮಾಡುತ್ತದೆ. ಪಿಎಸ್ಐ ನೇಮಕಾತಿ, ಸಹಾಯಕ ಪ್ರಾದ್ಯಾಪಕ, ಸಹಾಯಕ ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ಎಲ್ಲ ಆರೋಪ ಲಕ್ಷಾಂತರ ಯುವಕರ ದೂರಾಗಿದೆ.
ದೆಹಲಿಯ ಸಂಸತ್ತಿನಲ್ಲಿ ನಾನು ಅದಾನಿ ಅವರ ಬಗ್ಗೆ ಮಾತನಾಡುತ್ತಾ ದೇಶದ ಎಲ್ಲ ವ್ಯಾಪಾರ ವ್ಯವಹಾರ ಅದಾನಿ ಅವರಿಗೆ ನೀಡಲಾಗುತ್ತಿದೆ. ಬಂದರು, ವಿಮಾನ ನಿಲ್ದಾಣ, ರಸ್ತೆ ಎಲ್ಲವೂ ಅವರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೂಡ ಭ್ರಷ್ಟಾಚಾರ ಮಾಡುತ್ತಿದೆ.
ಯುವಕರ ಸಂಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಪ್ರತಿ ಪಧವಿಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3 ಸಾವಿರ, ಡಿಪ್ಲಮೋ ಮಾಡಿರುವ ಯುವಕರಿಗೆ 1500 ರೂ.ಗಳನ್ನು 2 ವರ್ಷಗಳ ಕಾಲ ನೀಡಲಾಗುವುದು. 10 ಲಕ್ಷ ಯುವಕರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲಿದೆ. ಇನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ 2.50 ಲಕ್ಷ ಉದ್ಯೋಗವನ್ನು ಭರ್ತಿ ಮಾಡಲಾಗುವುದು.
ಯಾತ್ರೆ ಸಮಯದಲ್ಲಿ ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡಿದ್ದರು. ಅವರ ಕಷ್ಟಕ್ಕೆ ಪರಿಹಾರ ನೀಡಲು ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ, ಅನ್ನ ಭಾಗ್ಯ ಯೋಜನೆ ಮೂಲಕ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.
ಇನ್ನು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸುವ ವಿಚಾರವಾಗಿ ಸರ್ಕಾರ ಪೂರ್ಣಗೊಳಿಸಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಪ್ರಚಂಡ ಜಯಗಳಿಸಿ ಬಿಜೆಪಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವಂತೆ ಮಾಡಬೇಕು. ರಾಜ್ಯ ಚುನಾವಣೆ ಸಮಯದಲ್ಲಿ ನೀವು ಯಾವ ಜಿಲ್ಲೆಗೆ ಹೇಳುತ್ತೀರೋ ಅಲ್ಲಿಗೆ ನಾನು ಬರಲು ಸಿದ್ಧ. ನಾವೆಲ್ಲರೂ ಸೇರಿ ಬಿಜೆಪಿಯನ್ನು ಮಣಿಸೋಣ.
ಮಲ್ಲಿಕಾರ್ಜುನ ಖರ್ಗೆ
ಈ ಚುನಾವಣೆ ಕರ್ನಾಟಕ ರಾಜ್ಯಕ್ಕೆ ಬಹಳ ಮಹತ್ವವಾದ ಚುನಾವಣೆ. ಇಡೀ ದೇಶಕ್ಕೆ ಈ ಚುನಾವಣೆ ಸಂದೇಶ ನೀಡಲಿದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಿದೆ. ನಿಮ್ಮೆಲ್ಲರ ಆಶೀರ್ವಾದ, ಸಹಕಾರ ನಮ್ಮ ಮೇಲೆ ಸದಾ ಇರಬೇಕು. ನಾನು ಎಐಸಿಸಿ ಅದ್ಯಕ್ಷನಾದ ನಂತರ ಬೆಳಗಾವಿ ಭೂಮಿಗೆ ಬಂದಿದ್ದೇನೆ. ಈ ಬೆಳಗಾವಿ ಕಾಂಗ್ರೆಸ್ ಪಕ್ಷಕ್ಕೆ ಪವಿತ್ರವಾದ ಭೂಮಿ. ಮಹಾತ್ಮ ಗಾಂಧಿ ಅವರು 100 ವರ್ಷಗಳ ಹಿಂದೆ 39ನೇ ಕಾಂಗ್ರೆಸ್ ಅಧಿವೇಶನ ನಡೆಸಿ ಇದೇ ಭೂಮಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಈಗ ನಾನು ಅದೇ ಸ್ಥಾನಕ್ಕೆ ಆಯ್ಕೆ ಮಾಡಿದ್ದೀರಿ. ಇದಕ್ಕಾಗಿ ನಿಮ್ಮೆಲ್ಲರಿಗೂ ವಂದನೆಗಳು.
ಗಾಂಧಿ ಅವರು 1924ರಲ್ಲಿ ಕಾಂಗ್ರೆಸ್ ಪಕ್ಷದ ಗುರಿ, ಧ್ಯೇಯ ಧೋರಣೆಯನ್ನು ತಿಳಿಸಿದ್ದರು. ನಾನು ಎಂತಹ ಭಾರತ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ ಎಂದರೆ ಅತ್ಯಂತ ಬಡವನು ತನ್ನ ದೇಶ ಎಂದು ಭಾವಿಸಬೇಕು. ಅವರ ಧ್ವನಿ ಎಲ್ಲರಿಗೂ ಕೇಳಿಸಬೇಕು. ಮಹಿಳೆಯರು ಸುರಕ್ಷಿತವಾಗಿರುವಂತಹ ಭಾರತ ನಿರ್ಮಾಣ ಮಾಡುತ್ತೇನೆ ಎಂದಿದ್ದರು. ಇದನ್ನು ಜಾರಿಗೆ ತಂದಿದ್ದ ನೆಹರೂ ಅವರು ಇದೇ ಭೂಮಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಕಾಂಗ್ರೆಸ್ ಪಕ್ಷ ಇಲ್ಲಿನ 18 ಕ್ಷೇತ್ರಗಳಲ್ಲಿ 15-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದ್ದರು. ಈ ಬಾರಿ ನಮ್ಮ ನಾಯಕರ ಒಘ್ಗಟ್ಟು ನೋಡಿದರೆ ಈ ಬಾರಿ 18ಕ್ಕೆ 18 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ.
ರಾಜ್ಯದ ಇತಿಹಾಸದಲ್ಲಿ ಇಷ್ಟು ಭ್ರಷ್ಟಾಚಾರ ಇರಲಿಲ್ಲ. ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಇವರು ಮೋದಿ ಅವರಿಗೆ ದೂರು ನೀಡಿದ್ದಾರೆ. ಗುತ್ತಿಗೆದಾರರ ದೂರು ನೀಡಿದಾಗ ಇದರ ತನಿಖೆಗೆ ಅಮಿತ್ ಶಾ ಅವರು ಯಾಕೆ ಆದೇಶ ಮಾಡಲಿಲ್ಲ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದದ ವರೆಗೆ ಎಲ್ಲಾ ವರ್ಗ, ಸಮುದಾಯದವರನ್ನು ಮಾತನಾಡಿಸುತ್ತಾ ಅವರ ಸಂಕಷ್ಟ ಆಲಿಸಿ 4 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.
ಕಾಶ್ಮೀರದಲ್ಲಿ 46 ದಿನದ ಹಿಂದೆ ಹೇಳಿದ ಮಾತಿನ ಬಗ್ಗೆ ನಿನ್ನೆ ದೆಹಲಿ ಪೋಲೀಸರು ಸಾಕ್ಷಿ ಕೇಳಿಕೊಂಡು ರಾಹುಲ್ ಗಾಂಧಿ ಅವರ ಮನೆ ಮುಂದೆ ಹೋಗಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ನೀಡುತ್ತಿದ್ದರೂ ಇಲ್ಲಿ ತನಿಖೆ ಮಾಡುತ್ತಿಲ್ಲ. ರಾಜ್ಯದಲ್ಲಿ 100 ರೂ. ಕಾಮಗಾರಿ ಇದ್ದರೆ 200 ರೂ. ಅಂದಾಜು ನಿಗದಿ ಮಾಡಿ ರಾಜ್ಯದವರು 40% ಕೇಂದ್ರದವರು 40% ಕಮಿಷನ್ ಪಡೆಯುತ್ತಿದ್ದಾರೆ.
ಮೋದಿ ಅವರು ಬೆಳಗಾವಿಗೆ ಬಂದು ನನ್ನ ಬಗ್ಗೆ ಮಾತನಾಡಿದ್ದಾರೆ. ನನ್ನ ರಿಮೋಟ್ ಕಟ್ರೋಲ್ ಬೇರೆಯವರ ಬಳಿ ದೆ ಎಂದಿದ್ದಾರೆ. ನಿಮ್ಮ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ. ಅದಾನಿ ಅವರ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಶ್ನೆ ಕೇಳಿದರೆ ಅದನ್ನು ತೆಗೆದು ಹಾಕುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ಜಾತಿವಾದ ಇದೆ, ಜಾತಿ ತಾರತಮ್ಯವಿದೆ ಎಂದು ಹೇಳಿದರೆ ಅದು ತಪ್ಪಾ? ಬಿಜೆಪಿಯವರು ಸುಳ್ಳನ್ನು ಹೇಳುತ್ತಿದ್ದಾರೆ.
ಇದು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮನ ನಾಡು. ಈ ಭಾಗದಲ್ಲಿ ವೀರರು ಶೂರರು ಇದ್ದಾರೆ. ಈ ಜನರನ್ನು ಇಡಿ, ಸಿಬಿಐ ಮಣಿಸುವುದಿಲ್ಲ. ಇವರ ಬೆದರಿಕೆಗೆ ರಾಹುಲ್ ಗಾಂಧಿ ಅವರು ಎಂದಿಗೂ ಹೆದರುವುದಿಲ್ಲ. ಇವರು ಎಷ್ಟು ದಿನ ತೊಂದರೆ ನೀಡುತ್ತಾರೋ ನೀಡಲಿ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಮೋದಿ ಅವರೇ ನೀವು ನಮ್ಮನ್ನು ಮಣ್ಣಿನಲ್ಲಿ ಹೂತು ಹಾಕಲು ಪ್ರಯತ್ನಿಸಿ. ನಾವು ಬೀಜವಾಗಿದ್ದು, ನಾವು ಪದೇ ಪದೆ ಹುಟ್ಟಿಬರುತ್ತೇವೆ.
ಕಾಂಗ್ರೆಸ್ ಪಕ್ಷ ಗೃಹಲಕ್ಷಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಣೆ ನೀಡಲಾಗಿದೆ. ದೇಶದಲ್ಲಿ 50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನು ತುಂಬುತ್ತಿಲ್ಲ. ಇವರು ಹೇಳಿದ 2 ಕೋಟಿ ಉದ್ಯೋಗ ಎಲ್ಲಿ ಹೋದವು ಗೊತ್ತಿಲ್ಲ. ರಾಜ್ಯದಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದೂವರೆ ವರ್ಷಗಳಲ್ಲಿ ಎಲ್ಲಾ ಹುದ್ದೆ ತುಂಬುತ್ತೇವೆ.
ಸಿದ್ದರಾಮಯ್ಯ:
ಇಂದಿನ ಯುವಕ್ರಾಂತಿ ಸಮಾವೇಶಕ್ಕೆ ದೊಡ್ಡ ಪ್ರಮಾಣದಲ್ಲಿ ನೀವು ಭಾಗವಹಿಸಿದ್ದೀರಿ. ನೀವೆಲ್ಲರೂ ಇಂದು ರಾಜ್ಯದಲ್ಲಿ ಯುವ ವಿರೋಧಿ, ಭ್ರಷ್ಟ, ಜನ ವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆದು ಮುಂದಿನ ಐದು ವರ್ಷಗಳ ಭವಿಷ್ಯ ರೂಪಿಸುವ ಸರ್ಕಾರ ತರುವ ಶಪಥವನ್ನು ಇಲ್ಲಿ ಮಾಡಬೇಕು.
ಈ ಸಮಯದಲ್ಲಿ ನಾವು ರಾಜೀವ್ ಗಾಂಧಿ ಅವರನ್ನು ಸ್ಮರಿಸಬೇಕು. ಅವರು ದೇಶದ 18 ವರ್ಷದ ಯುವಕ ಯುವತಿಯರಿಗೆ ಮತದಾನದ ಹಕ್ಕು ನೀಡಿದರು. ಜಗತ್ತಿನಲ್ಲಿ ಎಲ್ಲಾದರೂ ಸಾಮಾಜಿಕ, ರಾಜಕೀಯ ಬದಲಾವಣೆ ಆಗಿದ್ದರೆ ಅದು ಯುವ ಸಮೂಹದಿಂದ. ಹೀಗಾಗಿ ರಾಜೀವ್ ಗಾಂಧಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಭಾಗವಹಿಸಬೇಕು ಎಂದು ಯುವಕರಿಗೆ ಮತದಾನದ ಹಕ್ಕು ನೀಡಿದರು.
ಇನ್ನು ಸಂಪರ್ಕ ಹಾಗೂ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಯುವಕರಿಗೆ ಉದ್ಯೋಗ ಕೊಟ್ಟರು. ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷವಾಗಿದೆ. ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗಿದೆ. ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಂಡ ಇವರು ನಿರುದ್ಯೋಗ ಯುವಕ ಯುವತಿಗೆ ಏನು ಮಾಡಿದ್ದಾರಾ? ರಾಜ್ಯದಲ್ಲಿ ಚುನಾವಣೆ ಇದೆ ಎಂದು ಮೋದಿ ಅವರು ಮತಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ. ರಾಜ್ಯದಲ್ಲಿ ಆಕ್ಸಿಜನ್ ಇಲ್ಲದಾಗ, ಕೋವಿಡ್ ನಿಂದ ಲಕ್ಷಾಂತರ ಜನ ಸತ್ತಾಗ ಬರಲಿಲ್ಲ. ಆದರೆ ಈಗ ಮತ ಕೇಳಲು ಬರುತ್ತಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭ್ರಷ್ಟರಾಗಿದ್ದು, ಅವರು ಜನರಿಗೆ ಮುಖ ತೋರಿಸಲಾಗದೆ ಮೋದಿ ಅವರನ್ನು ಕರೆತರುತ್ತಿದ್ದಾರೆ. ಮೋದಿ ಅವರೇ ನೀವು ಜನರನ್ನು ಸದಾ ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ. ನೀವು ಹಿಂದುತ್ವದ ಆಧಾರದ ಮೇಲೆ ಮತ ಪಡೆದು, ಅಧಿಕಾರಕ್ಕೆ ಹೋದ ನಂತರ ಯುವಕರನ್ನು ಮರೆತಿದ್ದೀರಿ. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದಿರಿ. ಕಳೆದ 9 ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ ನೀವು ಇದ್ದ ಉದ್ಯೋಗವನ್ನು ಕಸಿದುಕೊಂಡಿದ್ದೀರಿ. ಸುಮಾರು 60 ಲಕ್ಷ ಸಣ್ಣ ಕೈಗಾರಿಕೆಗಳು ಬಂದ್ ಆದವು. 2.5 ಕೋಟಿ ಉದ್ಯೋಗ ನಷ್ಟವಾಗಿ ಯುವಕರು ಬೀದಿಪಾಲಾದರು.
ದೇಶದ ಮೆರಿಟ್ ವಿದ್ಯಾರ್ಥಿಗಳು ವಿದೇಶಿ ಪಾಲಾಗುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಡಿಸೆಂಬರ್ 2022ಕ್ಕೆ 12,89,000 ಯುವಕರು ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದಾರೆ. ಇದು ಪ್ರತಿಭಾ ಪಲಾಯನ. ಇದಕ್ಕೆ ಮೋದಿ ಅವರು ಉತ್ತರ ನೀಡುತ್ತಾರಾ? ಮೋದಿ ಅವರು ಬಂದಾಗ ನಿರುದ್ಯೋಗ, ಬೆಲೆ ಏರಿಕೆ, ರೈತರು, ಮಹಿಳೆಯರು, ದಲಿತರು, ಹಿಂದುಳಿದ, ಅಲ್ಪಸಂಖ್ಯಾತರ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ. ಕೇವಲ ಭಾವನಾತ್ಮಕ ವಿಚಾರ ಮಾತನಾಡುತ್ತಿದ್ದಾರೆ.
ಈ ಚುನಾವಣೆಯನ್ನು ಹಣಬಲದಿಂದ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇವರು 40% ಕಮಿಷನ್ ಮೂಲಕ ಹಣ ಲೂಟಿ ಮಾಡಿ ಈಗ ಚುನಾವಣೆಗೆ ಹಣ ಖರ್ಚು ಮಾಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಕಡಿಮೆಯಾಗಿದೆ. ನಾವು ಅಧಿಕಾರದಲ್ಲಿದ್ದಾಗ 1.62 ಲಕ್ಷ ಸರ್ಕಾರಿ ಉದ್ಯೋಗ, 11 ಲಕ್ಷ ಖಾಸಗಿ ಉದ್ಯೋಗ ನೀಡಿದ್ದೆವು. ಇಂತಹ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕೆ ಬೇಡವೆ ಎಂಬ ಚರ್ಚೆ ಆಗಬೇಕು. ರಾಜ್ಯದಲ್ಲಿ ಮತ್ತೆ ಉದ್ಯೋಗ ಸೃಷ್ಟಿಯಾಗಬೇಕಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಇನ್ನು ಶಿಕ್ಷಣ ಕ್ಷೇತ್ರ ಹಾಳು ಮಾಡುತ್ತಿದ್ದಾರೆ. 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆಗಿಲ್ಲ. ನೂತನ ಶಿಕ್ಷಣ ನೀತಿ ಹೆಸರಲ್ಲಿ ಅವೈಜ್ಞಾನಿಕ, ಅವೈಚಾರಿಕ ಶಿಕ್ಷಣ ನೀಡುತ್ತಿದ್ದಾರೆ. ಯುವಕರೇ ನೀವೆ ದೇಶ ಹಾಗೂ ರಾಜ್ಯದ ಭವಿಷ್ಯ. ನೀವು ರಾಜ್ಯ ಹಾಗೂ ರಾಜ್ಯದ ಆರ್ಥಿಕತೆ ಉಳಿಸಬೇಕಾದರೆ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು. ಮತ್ತೆ ಕಾಂಗ್ರೆಸ್ ಸರ್ಕಾರವನ್ನು ತರಬೇಕು.