IMG 20230224 WA0132 1

ಸದನ ಕಾರ್ಯಕಲಾಪಗಳ ಅಂಕಿತೀಕರಣ ರಾಜ್ಯ ವಿಧಾನ ಮಂಡಲದ ಹೊಸ ಹೆಜ್ಜೆ …!

Genaral STATE

ಸದನ ಕಾರ್ಯಕಲಾಪಗಳ ಅಂಕಿತೀಕರಣ ರಾಜ್ಯ ವಿಧಾನ ಮಂಡಲದ ಹೊಸ ಹೆಜ್ಜೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು, ಮಾರ್ಚ್ 24
( ಕರ್ನಾಟಕ ವಾರ್ತೆ ) :ಲೋಕಸಭೆ ಹಾಗೂ ರಾಜ್ಯಸಭೆ ಮಾದರಿಯಲ್ಲಿಯೇ ಸದನದ ಕಾರ್ಯ ಕಲಾಪಗಳನ್ನು ಅಂಕಿತೀಕರಣ (ಡಿಜಿಟಲೀಕರಣ) ಗೊಳಿಸುವತ್ತ ಕರ್ನಾಟಕ ವಿಧಾನ ಮಂಡಲವು ಹೊಸ ಹೆಜ್ಜೆಯನ್ನು ಇಟ್ಟಿದೆ ಎಂದು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ತಿಳಿಸಿದರು

ರಾಜ್ಯ ವಿಧಾನ ಮಂಡಲದ ಕಾರ್ಯಕಲಾಪಗಳ ಅಂಕಿತೀಕರಣ ಇ-ವಿಧಾನ್ ಯೋಜನೆಗೆ ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ರಾಜ್ಯ ವಿಧಾನಸಭೆಯ ಅಂದಿನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು 2016 ರಲ್ಲಿ ಚಾಲನೆ ನೀಡಿದ್ದ ಇ-ವಿಧಾನ ಹೆಸರಿನ ಈ ಯೋಜನೆಯು ಸಕಾಲದಲ್ಲಿ ಸೂಕ್ತ ಅನುದಾನದ ಲಭ್ಯವಾಗದ ಕಾರಣ ನಿರೀಕ್ಷೆಯಂತೆ ಜಾರಿಗೊಳಿಸಲು ಸಾಧ್ಯವಾಗದೇ ನಿಧಾನವಾದದ್ದು ನಿಜ. ಆದರೆ, 2020 ರ ವರೆಗೆ ತಟಸ್ಥವಾಗಿದ್ದ ಈ ಯೋಜನೆ 15 ನೇ ವಿಧಾನಸಭೆಯ ಅವಧಿಯು ಮುಕ್ತಾಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಲೋಕಾರ್ಪಣೆ ಗೊಳ್ಳುತ್ತಿರುವುದು ತಮಗೆ ಪೂರ್ಣ ಪ್ರಮಾಣದ ಸಂತೋಷವಲ್ಲದಿದ್ದರೂ ಒಂದು ರೀತಿಯಲ್ಲಿ ಸಮಾಧಾನ ತಂದಿದೆ. ಇದೀಗ ಶೇಕಡಾ 80 ರಷ್ಟು ಅಂಕಿತೀಕರಣ‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.

ಕರ್ನಾಟಕ ವಿಧಾನಸಭೆಯಲ್ಲಿ 1951 ರಿಂದ ಕಾರ್ಯಕಲಾಪಗಳ ದಾಖಲೀಕರಣ ಆಗಿದೆ.

ಸದನದೊಳಗಿನ ಎಲ್ಲಾ ಪ್ರಮುಖ ಕಾರ್ಯ ಕಲಾಪಗಳು ಹಾಗೂ ಘಟನಾವಳಿಗಳನ್ನು ರಾಜ್ಯ ವಿಧಾನ ಸಭಾ ಸಚಿವಾಲಯವು ಪುಸ್ತಕ ರೂಪದಲ್ಲಿ ಹೊರತಂದಿದೆ.

ಯಾರು ? ಯಾಳ್ಳೊರು ? ( ಹೂಸ್ ಹೂ ) ಮಹತ್ವದ ನಿರ್ಣಯಗಳು ಹಾಗೂ ಪರಿಶೀಲನಾ ವರದಿಗಳು ಒಳಗೊಂಡಂತೆ ಎಲ್ಲವೂ ವಿಧಾನಸಭಾ ಗ್ರಂಥಾಲಯದಲ್ಲಿ ಲಭ್ಯವಿದೆ. ಆದರೆ, ಅವುಗಳಲ್ಲಿರುವ ಅಗತ್ಯ ಮಾಹಿತಿಯನ್ನು ಹುಡುಕಲು ಸಮಯ ಮತ್ತು ಶ್ರಮವನ್ನು ವ್ಯಯಿಸಬೇಕಾಗುತ್ತದೆ.

ಇದೀಗ ಸದನದ ಕಾರ್ಯ ಕಲಾಪಗಳು ಡಿಜಿಟಲೀಕರಣ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಶ್ರಮವಿಲ್ಲದೆ ವಿಷಯಾಧಾರಿತ, ಸದಸ್ಯರ ನಾಮಾಧಾರಿತ ಹಾಗೂ ವರ್ಷವಾರು ಹುಡುಕಾಟವನ್ನು ಕ್ಷಣಮಾತ್ರದಲ್ಲಿ ಮಾಡಿ ಮಾಹಿತಿಗಳನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿಯೇ ಪ್ರಪ್ರಥಮವಾಗಿ ಹುಡುಕಾಟಕ್ಕೆ ಅವಕಾಶ ಕಲ್ಪಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಈ ಯೋಜನೆಯ ವಿಶೇಷವಾಗಿದೆ. ಎಸ್ ಎಸ್ ಎಮ್ ಎಸ್ ಇನ್ಫೋಟೆಕ್ ಎಂಬ ಸಂಸ್ಥೆಯು ದೃಷ್ಟಿಯ ಮೂಲಕ ಅಕ್ಷರವನ್ನು ಗುರುತಿಸುವ ( ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ ) ಹೆಸರಿನ ಈ ನವ ನವೀನ ತಂತ್ರಾಂಶವನ್ನು ರೂಪಿಸಿದೆ. ಈ ಯೋಜನೆಯ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ತಗುಲಬಹುದಾದ 73,64,000 ರೂ ವೆಚ್ಚದಲ್ಲಿ ಈ ಸಂಸ್ಥೆಗೆ ಈವರೆಗೆ,49,16,000 ರೂ ಪಾವತಿಸಲಾಗಿದೆ.

ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿನ ಪ್ರಶ್ನೋತ್ತರ ವೇಳೆ ಶೂನ್ಯ ವೇಳೆ ಗಮನ ಸೆಳೆಯುವ ಸೂಚನೆ ಹಾಗೂ ಎಲ್ಲಾ ರೀತಿಯ ಚರ್ಚೆಗಳನ್ನು www.kla.kar.nic.in ಅಂತರ್ಜಾಲ ತಾಣದಲ್ಲಿ ಮೂಲಕ ಸಂಪರ್ಕ ಸಾಧಿಸಿ ಮಾಹಿತಿಗಳನ್ನು ವೀಕ್ಷಿಸಬಹುದು

ಸಂಶೋಧಕರು,ವಿದ್ಯಾರ್ಥಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇ-ವಿಧಾನ್ ಹೆಸರಿನ ಈ ಯೋಜನೆ ಅನುಕೂಲವಾಗಲಿದೆ.

ಅಷ್ಟೇ ಅಲ್ಲ ! ಜನಸಾಮಾನ್ಯರೂ ಕೂಡಾ ಪ್ರಜಾಪ್ರಭುತ್ವದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ.

ಈ ಯೋಜನೆಯಲ್ಲಿ ಈವರೆಗೆ 13 ನೇ ವಿಧಾನಸಭೆಯ ಅಧಿವೇಶನದಿಂದ ನಾಲ್ಕನೇ ವಿಧಾನಸಭಾ ಅಧಿವೇಶನದವರೆಗೂ ಹಿಮ್ಮುಖವಾಗಿ ಮಾಹಿತಿಯನ್ನು ಅಳವಡಿಸಲಾಗಿದೆ. ಸಧ್ಧದಲ್ಲಿಯೇ ಒಂದು, ಎರಡು ಮತ್ತು ಮೂರನೇ ವಿಧಾನಸಭಾ ಅಧಿವೇಶನದ ಮಾಹಿತಿಗಳನ್ನು ಅಳವಡಿಸುವತ್ತ ಕ್ರಮ ಕೈಗೊಳ್ಳಲಾಗುತ್ತಿದೆ.