ಹೊಂದಾಣಿಕೆ ರಾಜಕೀಯಕ್ಕೆ ಬಿಜೆಪಿ ಸಿದ್ಧವಿಲ್ಲ
* ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು: ಕೇಂದ್ರ ಗೃಹ ಸಚಿವ ಅಮಿತ್ ಶಾ
ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬವಾದ, ಭ್ರಷ್ಟಾಚಾರÀವನ್ನು ದೂರವಿಡಲು ಬಿಜೆಪಿ ಬೆಂಬಲಿಸಿ ಎಂದು ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ತಿಳಿಸಿದರು.
ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶವನ್ನು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿ ಮಾತನಾಡಿದ ಅವರು, ನಾವು ಸ್ಪಷ್ಟ ಬಹುಮತದೊಂದಿಗೆ ಗೆದ್ದು ಆಡಳಿತ ನಡೆಸಲಿದ್ದೇವೆ. ಜೆಡಿಎಸ್ ನಮಗೆ ಲೆಕ್ಕಕ್ಕಿಲ್ಲ. ಆ ಪಕ್ಷ ಸೇರಿದಂತೆ ಯಾವುದೇ ಪಕ್ಷದ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ದೇಶಭಕ್ತರ ಜೊತೆ ನಿಲ್ಲಬೇಕೇ ಅಥವಾ ದೇಶವನ್ನು ಭಾಗಗಳನ್ನಾಗಿ ಮಾಡುವವರ ಜೊತೆ ನಿಲ್ಲಬೇಕೇ ಎಂದು ಜನರು ನಿರ್ಧಾರ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪಿಎಫ್‍ಐ ಬೆಂಬಲಿಗರ ಜೊತೆ ಇರಬೇಕೇ ಅಥವಾ ದೇಶವನ್ನು ಕಾಪಾಡುವ, ರಾಮಮಂದಿರ ನಿರ್ಮಿಸುವ ಪಕ್ಷದ ಜೊತೆ ನಿಲ್ಲಬೇಕೇ ಎಂದು ಜನರು ತೀರ್ಮಾನ ಮಾಡಬೇಕು. ಟಿಪ್ಪು ಸುಲ್ತಾನನನ್ನು ಹೀರೋ ಮಾಡುವವರನ್ನು ದೂರವಿಡಿ ಎಂದು ಮನವಿ ಮಾಡಿದರು.
ಮೆಟ್ರೋ ರೈಲು ಯೋಜನೆ ಮೂಲಕ ಇಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಿದ್ದೇವೆ. ಬೆಂಗಳೂರು ನಗರ– ವಿಮಾನನಿಲ್ದಾಣ ನಡುವಿನ ಮೆಟ್ರೋ ರೈಲು ಸಂಪರ್ಕ ಕಾಮಗಾರಿ ನಡೆದಿದೆ. ಯಡಿಯೂರಪ್ಪ- ಬೊಮ್ಮಾಯಿ ಜೋಡಿ ಬೆಂಗಳೂರು ವಿಕಾಸಕ್ಕಾಗಿ 2 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ತಂದಿದ್ದಾರೆ ಎಂದು ವಿವರ ನೀಡಿದರು.
ಸ್ಟಾರ್ಟಪ್‍ಗಳ ಕೇಂದ್ರ ಬೆಂಗಳೂರು. ಅಭಿವೃದ್ಧಿ, ಬಂಡವಾಳ ಹೂಡಿಕೆಯಲ್ಲೂ ಅದು ಅತ್ಯಂತ ಮುಂದಿದೆ ಎಂದು ಅವರು ತಿಳಿಸಿದರು. ಹೈವೇಗಳ ನಿರ್ಮಾಣ, ರೈಲ್ವೆ ಮಾರ್ಗಗಳ ಆಧುನೀಕರಣಕ್ಕೆ ಗರಿಷ್ಠ ಹಣ ಹರಿದುಬಂದಿದೆ ಎಂದ ಅವರು, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದತಿ ಮಾಡಿದ್ದನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್- ಜೆಡಿಎಸ್- ಸಮತಾ- ಮಮತಾ ಇದನ್ನು ವಿರೋಧಿಸಿದ್ದರು ಎಂದು ತಿಳಿಸಿದರು. ಕಾಶ್ಮೀರದಲ್ಲಿ ರಕ್ತಪ್ರವಾಹ ಹರಿಯುತ್ತದೆ ಎಂದು ಬೆದರಿಸಿದ್ದರು ಎಂದರು.
ಮೋದಿಜಿ ಅವರು ದೇಶವನ್ನು ಸುರಕ್ಷತೆಯಿಂದ ಕಾಪಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮತಬ್ಯಾಂಕಿಗಾಗಿ ಪಿಎಫ್‍ಐ, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಆದರೆ, ನಾವು ಹಾಗಲ್ಲ. ದೇಶದ ಸುರಕ್ಷತೆ, ಸರ್ವತೋಮುಖ ಅಭಿವೃದ್ಧಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಬೇಕಿದೆ ಎಂದು ತಿಳಿಸಿದರು.
ಗುಜರಾತ್ ಸೇರಿ 7 ರಾಜ್ಯಗಳ ಚುನಾವಣೆಯಲ್ಲಿ 5 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನೆಲಕಚ್ಚಿದೆ. ಗುಜರಾತ್‍ನಲ್ಲಿ ವಿಪಕ್ಷ ಸ್ಥಾನಮಾನವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಅವರು ನೆನಪಿಸಿದರು. ಕೇಂದ್ರ- ರಾಜ್ಯ ಸರಕಾರಗಳ ಸಾಧನೆ ಹೇಳಲು ಹಲವಷ್ಟು ದಿನಗಳೇ ಬೇಕು. ಅದನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಕೇಂದ್ರ- ರಾಜ್ಯ ಸರಕಾರಗಳ ಸಾಧನೆ ಮತ್ತು ಸಫಲತೆಯೊಂದಿಗೆ ನಾವು ಕರ್ನಾಟಕದಲ್ಲಿ ಚುನಾವಣೆ ಎದುರಿಸಲಿದ್ದೇವೆ. ನರೇಂದ್ರ ಮೋದಿಜಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮೋದಿಜಿ ಅವರು ಚುನಾವಣೆಗೆ ಸನ್ನದ್ಧರಾಗಿದ್ದಾರೆ. ಆದರೆ, ಅವರ ಸಾಧನೆಗಳನ್ನು ಬೂತ್ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದೆ ಎಂದು ಮನವಿ ಮಾಡಿದರು.
40 ಕೋಟಿಗೂ ಹೆಚ್ಚು ಜನರಿಗೆ ಜನಧನ್ ಖಾತೆ, ಕೋಟಿಗಟ್ಟಲೆ ಶೌಚಾಲಯ ನಿರ್ಮಾಣ, ಬಡವರ ಮನೆಗೆ ಸಿಲಿಂಡರ್ ಸಂಪರ್ಕ, 5 ಲಕ್ಷ ವಿಮೆ- ಇವೆಲ್ಲವೂ ನಮ್ಮ ಸರಕಾರದ ಸಾಧನೆಗಳು ಎಂದ ಅವರು, ಚೀನಾದಲ್ಲಿ ಮತ್ತೆ ಕೋವಿಡ್ ಹರಡುತ್ತಿದೆ. ಆದರೆ, ಮೋದಿಜಿ ಸರಕಾರವು 130 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಿ ಕೋವಿಡ್‍ಮುಕ್ತ ದೇಶವನ್ನಾಗಿ ಮಾಡಿದೆ ಎಂದು ವಿವರಿಸಿದರು.
ಉಚಿತ ಪಡಿತರ ಕೊಡುಗೆ ನಮ್ಮ ಸರಕಾರದ್ದು. ದೇವೇಗೌಡ, ಸಿದ್ದರಾಮಯ್ಯ ಅವರು ಬಡವರ ಬಗ್ಗೆ ಕೇವಲ ಮಾತನಾಡುತ್ತಾರೆ. ನಿಮ್ಮ ಮತ್ತು ನಮ್ಮ ಸಾಧನೆಯ ಹೋಲಿಕೆಗೆ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದರು.
ದಕ್ಷಿಣದಲ್ಲಿ ಬಿಜೆಪಿಯ ಆಡಳಿತದ ಮಹಾದ್ವಾರ ಕರ್ನಾಟಕ. ಮಂಡ್ಯದ ರ್ಯಾಲಿ ಅತ್ಯಂತ ಬೃಹತ್ತಾದುದು ಎಂದು ಮೆಚ್ಚುಗೆ ಸೂಚಿಸಿದ ಅವರು, ಕಾಂಗ್ರೆಸ್ ಪಕ್ಷದವರು ಹೊಸ ವಿಚಾರಗಳನ್ನು ತಂದು ಮತ ಕೇಳುತ್ತಾರೆ. ಕಾಂಗ್ರೆಸ್ಸಿಗೆ ಆಡಳಿತವು ಭ್ರಷ್ಟಾಚಾರಕ್ಕೆ ಸಾಧನ. ಗೆದ್ದರೆ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ನೆನಪಿಸಿದರು.
ಜೆಡಿಎಸ್- ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿ ಆಗಿದ್ದರೂ ಬಳಿಕ ಬಿಜೆಪಿ ಎದುರು ಬಂದಾಗ ಜೊತೆಗೂಡುತ್ತವೆ. 2018ರಲ್ಲೂ ಹೀಗೇ ಆಗಿತ್ತು. ಬಳಿಕ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರಕಾರ ಕುಸಿದು ಬಿತ್ತು. ಬಳಿಕ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಬೂತ್ ಅಧ್ಯಕ್ಷರು ನಮ್ಮ ಪಕ್ಷದ ಮಾಲೀಕರು ಎಂದ ಅವರು, ನಾಡಪ್ರಭು ಕೆಂಪೇಗೌಡರಿಗೆ ನಮನ ಸಲ್ಲಿಸಿದರು. ವಿಮಾನನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ, ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟನೆ ಆಗಿದೆ. ಬೆಂಗಳೂರಿನಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆದ್ದು ಕರ್ನಾಟಕದಲ್ಲಿ ಬಿಜೆಪಿ ಬಹುಮತ ಪಡೆಯುವಂತೆ ಮಾಡಬೇಕಿದೆ ಎಂದರು.
ಬೂತ್ ಸಶಕ್ತೀಕರಣ ಕೆಲಸ ನಿಮ್ಮದು. ದೇಶ ಸಶಕ್ತವಾಗಿ ಮಾಡುವ ಕೆಲಸ ಮೋದಿಜಿ ಅವರದು. ಸಾಮಥ್ರ್ಯವಂತ ದೇಶಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ವಿನಂತಿಸಿದರು. ಬೆಂಗಳೂರಿನ ಬೂತ್ ಅಧ್ಯಕ್ಷರು ಮತ್ತು ಬಿಎಲ್‍ಎ-2 ಸಭೆ ಇದಾಗಿದ್ದು, ಎಲ್ಲ ಅಪೇಕ್ಷಿತರು ಪಾಲ್ಗೊಂಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕರ್ನಾಟಕದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ. ಅರುಣಾ, ರಾಜ್ಯದ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.
ಸಕಾರಾತ್ಮಕ ಮತಗಳಿಂದ ಬಿಜೆಪಿ ಗೆಲುವು: ಬಸವರಾಜ ಬೊಮ್ಮಾಯಿ
ಸಕಾರಾತ್ಮಕವಾಗಿ ಮತ ಗಳಿಸಿ ಗೆಲುವು ಸಾಧಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ನಡೆದ ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಬೇಕಿದೆ. ಅಮಿತ್ ಶಾ ಅವರು ಬಂದಿದ್ದರಿಂದ ನಮ್ಮ ಬಲ ಇಮ್ಮಡಿಯಾಗಿದೆ. ಬಿಜೆಪಿ 2023ರಲ್ಲಿ ಮತ್ತೆ ಅಧಿಕಾರ ಪಡೆಯುವ ವಿಶ್ವಾಸ ಬಂದಿದೆ ಎಂದು ತಿಳಿಸಿದರು.
ದೇಶದಲ್ಲಿ 2 ಸಾವಿರ ಪಕ್ಷಗಳಿವೆ. ಬಿಜೆಪಿ ಸದಸ್ಯರಾಗಿ ಹೆಮ್ಮೆಯಿಂದ ನಾವ್ಯಾಕೆ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಜಗತ್ತಿನ ಅತ್ಯಂತ ದೊಡ್ಡ ಪಕ್ಷ ಬಿಜೆಪಿ. ವಿಚಾರದಲ್ಲೂ ಅದು ದೊಡ್ಡದು. ದೇಶ ಮೊದಲು ಎಂಬ ಚಿಂತನೆ ನಮ್ಮದು ಎಂದು ತಿಳಿಸಿದರು.
ಬೇರೆ ಪಕ್ಷದಲ್ಲಿ ಇರುವವರು ಅಧಿಕಾರಕ್ಕಾಗಿ ಇರುತ್ತಾರೆ. ನಾವು ದೇಶಸೇವೆಗಾಗಿ ಪ್ರಯತ್ನಿಸಿದರೆ, ಅವರ ಪಕ್ಷದವರು ಸೋನಿಯಾ ಶ್ರದ್ಧೆ ಹೊಂದಿದವರು ಎಂದು ಟೀಕಿಸಿದರು. ದೇಶ ಉಳಿಸಿ ದೇಶಕ್ಕೆ ಉಜ್ವಲ ಭವಿಷ್ಯ ಕೊಡಲು ನಾವು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಉತ್ತಮ ನೀತಿ, ಸಿದ್ಧಾಂತ, ಸಮರ್ಥ ನಾಯಕತ್ವ, ಕ್ರಿಯಾಶೀಲ ಸದಸ್ಯರನ್ನು ಬಿಜೆಪಿ ಹೊಂದಿದೆ. ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕ ಮೋದಿಜಿ ನಮ್ಮ ಜೊತೆಗಿದ್ದಾರೆ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ದೇಶ- ರಾಜ್ಯ ಹಿನ್ನಡೆ ಅನುಭವಿಸಿತ್ತು. ಆದರೆ, ಸಮರ್ಥ ನಿರ್ಧಾರ ಕೈಗೊಳ್ಳುವ ಅತ್ಯುತ್ತಮ ನಾಯಕರು ಬಿಜೆಪಿಯಲ್ಲಿದ್ದಾರೆ ಎಂದು ವಿಶ್ಲೇಷಿಸಿದರು.
ತ್ರಿವಳಿ ತಲಾಖ್ ರದ್ದತಿ, 370 ನೇ ವಿಧಿ ರದ್ದು ಮತ್ತಿತರ ಪ್ರಮುಖ ನಿರ್ಧಾರಗಳನ್ನು ಕೇಂದ್ರವು ಅಮಿತ್ ಶಾ ಅವರ ನೇತೃತ್ವದಲ್ಲಿ ಮಾಡಿದೆ. ಸಿದ್ದರಾಮಯ್ಯ ಆಡಳಿತದ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದರು. ನಾವು ಸಾಲ ಮಾಡಿದ್ದಕ್ಕೆ ಕೋವಿಡ್ ಕಾರಣವಾಯಿತು. ಕೋವಿಡ್ ಇದ್ದರೂ ಆರ್ಥಿಕ ಪ್ರಗತಿ ಸಾಧನೆಗಾಗಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.
ಕೇಂದ್ರದ 10 ಹಲವಾರು ಯೋಜನೆಗಳು ನಮ್ಮ ಮುಂದಿವೆ. ರೈಲ್ವೆ, ಬಂದರಿಗೆ ಹೆಚ್ಚಿನ ಶಕ್ತಿ ತುಂಬಿದ್ದಾರೆ. ಎಲ್ಲರ ಮನೆಗೆ ಜಲ ಮಿಷನ್ ಯೋಜನೆ ತಲುಪಿಸಲು ಮೋದಿಜಿ ಮತ್ತು ಬಿಜೆಪಿ ಮುಂದಾಗಿವೆ ಎಂದು ಮೆಚ್ಚುಗೆ ಸೂಚಿಸಿದರು. ಕರ್ನಾಟಕದ 75 ವರ್ಷಗಳ ಆಡಳಿತದಲ್ಲಿ 25 ಲಕ್ಷ ಮನೆಗೆ ನೀರು, ಕಳೆದ 3 ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಹಿಂದೆ ದೌರ್ಭಾಗ್ಯದ ಸರಕಾರ ಇತ್ತು. ಈಗ ಕಾಂಗ್ರೆಸ್‍ನವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ನಾವು ಪುರಾವೆಯೊಂದಿಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಭ್ರಷ್ಟಾಚಾರದ ವಿವರ ಕೊಟ್ಟಿದ್ದೇವೆ. ಎಸಿಬಿ ರಚನೆ ಮಾಡಿದ್ದು ಸಿದ್ದರಾಮಯ್ಯರ ಹಗರಣ ಮುಚ್ಚಿಕೊಳ್ಳಲು; ಲೋಕಾಯುಕ್ತ ಮುಚ್ಚಿದ್ದೂ ಇದೇ ಕಾರಣಕ್ಕಾಗಿ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯರ ಎಲ್ಲ ಕೇಸುಗಳು ಲೋಕಾಯುಕ್ತದ ಮುಂದೆ ಬರಲಿವೆ ಎಂದು ತಿಳಿಸಿದರು.
ಉಚಿತ ವಿದ್ಯುತ್, ರೈತ ವಿದ್ಯಾನಿಧಿ ಸೇರಿ ಕೇಂದ್ರ- ರಾಜ್ಯ ಸರಕಾರಗಳ ಎಲ್ಲ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದನ್ನು ತಿಳಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್‍ನಲ್ಲಿ ಭಯ- ಆತಂಕ: ನಳಿನ್‍ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ರಾಜ್ಯ ರಾಜಕೀಯದಲ್ಲಿ ನಿನ್ನೆಯಿಂದ ಪರಿವರ್ತನೆ ಆಗಿದೆ. ಕಾಂಗ್ರೆಸ್ ಒಳಗೆ ಮತ್ತು ಜೆಡಿಎಸ್ ಒಳಗೆ ಭಯ- ಆತಂಕ ಆರಂಭವಾಗಿದೆ. ಬಿಜೆಪಿ 150 ಸ್ಥಾನ ಪಡೆಯುವ ಸಂಕಲ್ಪ ಮಾಡಿದ್ದೇವೆ. ಬೆಂಗಳೂರಿನಲ್ಲೂ ಕಾಂಗ್ರೆಸ್ ಕಟ್ಟೆ ಒಡೆದು ಬಿಜೆಪಿ ಗೆಲುವು ಆಗಲಿದೆ ಎಂದು ನುಡಿದರು.
ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಜನಸ್ಪಂದನ, ಸಹಕಾರ ಸಿಕ್ಕಿದೆ. ಹಾಸನದಲ್ಲೂ ನಮ್ಮ ಪತಾಕೆ ಹಾರಲಿದೆ. ಜನಮಾನಸದಲ್ಲಿ ಬಿಜೆಪಿ ಎದ್ದು ನಿಂತಿದೆ. ಶೇ 60ಕ್ಕೂ ಹೆಚ್ಚು ಮತ ಗಳಿಸುವ ಸಂಕಲ್ಪ ನಮ್ಮದಾಗಲಿದೆ ಎಂದು ತಿಳಿಸಿದರು. ಬೂತ್ ವಿಜಯಕ್ಕೆ ಪೂರಕವಾದ ಧ್ವಜಾರೋಹಣ ಮಾಡಬೇಕು. ವಿಜಯ ಸಂಕಲ್ಪ ಅಭಿಯಾನ ಜನವರಿ 21ರಿಂದ 29ರವರೆಗೆ ಮುಂದುವರಿಯಲಿದೆ ಎಂದರು.
ರೈತ ವಿದ್ಯಾನಿಧಿಯಂಥ ಹತ್ತಾರು ಯೋಜನೆಗಳು, ಕೇಂದ್ರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ. ಮನೆಮನೆಗಳಲ್ಲಿ ಈ ಕಾರ್ಯ ನಡೆಯಲಿದೆ ಎಂದು ವಿವರಿಸಿದರು. ಇದೇವೇಳೆ ಸದಸ್ಯತ್ವ ಅಭಿಯಾನ ಮಾಡಬೇಕು. 50 ಲಕ್ಷ ಯುವಕರನ್ನು ಸದಸ್ಯರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಕೇಂದ್ರ- ರಾಜ್ಯದ ಫಲಾನುಭವಿಗಳ ಸಂಪರ್ಕ, ಸಮಾವೇಶ ಮಾಡಿ ಜನರ ಮನ ಒಲಿಸಬೇಕು ಎಂದು ತಿಳಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಉತ್ತರಪ್ರದೇಶ, ಉತ್ತರಾಖಂಡ ಸೇರಿ ಹಲವೆಡೆ ಗೆದ್ದಿರುವ ಉದಾಹರಣೆಗಳು ನಮ್ಮ ಮುಂದಿವೆ. ಬೂತ್ ಅತ್ಯುತ್ತಮ ನಿರ್ವಹಣೆಯು ನಮ್ಮ ಗೆಲುವಿಗೆ ಪ್ರಮುಖ ಸಾಧನ ಆಗಲಿದೆ ಎಂದು ತಿಳಿಸಿದರು.
ಬೂತ್ ಗಟ್ಟಿಗೊಳಿಸಲು ಈ ವಿಜಯ ಅಭಿಯಾನ ಪೂರಕ. ಬೂತ್ ಸಶಕ್ತೀಕರಣದ ಮೂಲಕ ನಾವು ಪಕ್ಷದ ಗೆಲುವಿಗೆ ಮುಂದಾಗಬೇಕು. ಬೂತ್‍ನಲ್ಲಿ ಲೀಡ್ ತರುವ ಸಂಕಲ್ಪ ನಮ್ಮದಾಗಲಿ ಎಂದು ಕಿವಿಮಾತು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಕಾಂಗ್ರೆಸ್ ಭ್ರಷ್ಟಾಚಾರ- ಹಗರಣಗಳದ್ದೇ ಚರ್ಚೆ ಆಗುತ್ತಿತ್ತು. ಇವತ್ತು ಬಿಜೆಪಿ ಸರಕಾರದ ಸಾಧನೆ, ಪಕ್ಷದ ಕಾರ್ಯವನ್ನು ಚರ್ಚಿಸುತ್ತಾರೆ. ಕುಟುಂಬ ರಾಜಕಾರಣವನ್ನು ನಾವು ದೂರ ಇಡುತ್ತೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಬೂತ್ ಅಧ್ಯಕ್ಷರು ಆಯಾ ಬೂತ್‍ನ ಪ್ರಭಾವಿ ವ್ಯಕ್ತಿಗಳನ್ನು ಗುರುತಿಸಬೇಕು. ಪಕ್ಷವು ಬೂತ್‍ನಲ್ಲಿ ಅತಿ ಹೆಚ್ಚು ಮತ ಗಳಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಗರಿಷ್ಠ ಶಾಶಕ ಸ್ಥಾನ ಗೆಲ್ಲುವ ಬಿಜೆಪಿ ಕರ್ನಾಟಕ ಮತ್ತು ದೇಶದಲ್ಲಿ ಗೆಲುವನ್ನು ತನ್ನದಾಗಿಸಿಕೊಳ್ಳಲಿದೆ ಎಂದು ತಿಳಿಸಿದರು. ಇನ್ನು 4 ದಶಕಗಳ ಕಾಲ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಗೆಲುವಿಗಾಗಿ ಸಂಕಲ್ಪ ಮಾಡಿ ಎಂದು ನರೇಂದ್ರ ಮೋದಿಜಿ ಹೇಳಿದ್ದಾರೆ. ಅದನ್ನು ಈಡೇರಿಸಲು ಸಿದ್ಧರಾಗಬೇಕು ಎಂದು ತಿಳಿಸಿದರು.
ಮೋದಿಜಿ- ಅಮಿತ್ ಶಾ ಅವರು ಬೆಂಕಿ ಬಿರುಗಾಳಿ ಇದ್ದಂತೆ. ಅವರನ್ನು ತಡೆಯುವ ಶಕ್ತಿ ಕಾಂಗ್ರೆಸ್ಸಿಗರಿಗೆ ಇಲ್ಲ. ರಾಹುಲ್ ಗಾಂಧಿ ಗಡ್ಡ ಬಿಟ್ಟು ಚುನಾವಣೆಯಿಂದ ದೂರ ನಿಂತಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಕರ್ನಾಟಕದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ. ಅರುಣಾ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯದ ಸಚಿವರು, ಶಾಸಕರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ಬೆಂಗಳೂರಿನ ಬೂತ್ ಅಧ್ಯಕ್ಷರು ಮತ್ತು ಬಿಎಲ್‍ಎ-2 ಸಭೆ ಇದಾಗಿದ್ದು, ಎಲ್ಲ ಅಪೇಕ್ಷಿತರು ಭಾಗವಹಿಸಿದ್ದರು.