IMG 20221230 WA0018

Bengaluru:ರಾಜ್ಯದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುವ ಸಹಕಾರಿ ರಂಗ…!

BUSINESS STATE

ರಾಜ್ಯದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುವ ಸಹಕಾರಿ ರಂಗ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಡಿಸೆಂಬರ್ 30 :

ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರ ರಂಗ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಿದ್ದು, ಕರ್ನಾಟಕದಲ್ಲಿ ಸಹಕಾರ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಹಕಾರ ಇಲಾಖೆ & ರಾಜ್ಯದ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ವತಿಯಿಂದ ಆಯೋಜಿಸಿರುವ ಸಹಕಾರ ಫಲಾನುಭವಿಗಳ ಸಮಾವೇಶದಲ್ಲಿಕೇಂದ್ರದ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಷಾ ಅವರೊಂದಿಗೆ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಸಹಕಾರ ಕ್ಷೇತ್ರ ಅತ್ಯುತ್ತಮವಾಗಿ ಬೆಳೆದಿದೆ :

ಮನುಷ್ಯ ಸಂಘಜೀವಿ. ಹಾಗಾಗಿ ಊರು , ಸಮುದಾಯಗಳ ನಿರ್ಮಾಣವಾಯಿತು. ಸಂಘಟಿತರಾಗಿರಲು ಸಹಕಾರ ಬೇಕು. ಮನುಕುಲ ಸಹಕಾರದ ಮೇಲೆ ನಿಂತಿದೆ. ಪ್ರತಿ ಹಂತದಲ್ಲಿ ಪರಸ್ಪರ ಸಹಕಾರವಿದ್ದಾಗ ಎಲ್ಲರ ಬಾಳು ಬೆಳಗುತ್ತದೆ. ಈ ಧ್ಯೇಯದೊಂದಿಗೆ ಸಹಕಾರ ಚಳವಳಿ ನಡೆದಿದೆ. ಎಸ್.ಎಸ್.ಪಾಟೀಲರು ಪ್ರಥಮ ಸಹಕಾರಿ ಸಂಘವನ್ನು ಕಟ್ಟಿ ಸಹಕಾರ ಚಳವಳಿಗೆ ನಾಂದಿ ಹಾಡಿದರು. ಅಂದಿನಿಂದ ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಅತ್ಯುತ್ತಮವಾಗಿ ಬೆಳೆದಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಸಹಕಾರ ಅತ್ಯಂತ ಯಶಸ್ವಿಯಾಗಿ ಬೆಳೆದಿದೆ. ಹಾಲು ಉತ್ಪಾದನೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಸಹಕಾರ ರಂಗದಲ್ಲಿ ಬೆಳೆಯುತ್ತಿದೆ. ಕರ್ನಾಟಕ ಸಹಕಾರ ಇತಿಹಾಸದಲ್ಲಿ ಹಲವಾರು ಮೈಲಿಗಲ್ಲುಗಳಿವೆ. ಈ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ, ಸಹಕಾರಿ ಬ್ಯಾಂಕ್ ಗಳು, ಕೆಎಂಎಫ್ ಎಲ್ಲರಿಗೂ ಮಾದರಿಯಾಗಿದೆ ಎಂದರು.

IMG 20221230 WA0016

ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರ ರಂಗ ನಿಯಂತ್ರಿಸಬಹುದು:

ಸಹಕಾರ ಮತ್ತು ಸರ್ಕಾರಗಳ ನಡುವೆ ಅನೋನ್ಯ ಸಂಬಂಧದ ಅವಶ್ಯಕತೆ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮುಖಾಂತರ ಸಹಕಾರಿ ರಂಗವನ್ನು ಅರ್ಥಪೂರ್ಣಗೊಳಿಸಬಹುದು. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರ ರಂಗ ನಿಯಂತ್ರಿಸಲು ಸಾಧ್ಯಿವಿದ್ದು, ಈ ಬಗ್ಗೆ ಚಿಂತನೆಯಾಗಬೇಕು ಎಂದರು.

ದುಡಿಯುವ ವರ್ಗಕ್ಕೆ ಬೆಂಬಲ :
ಸಹಕಾರಿ ರಂಗಕ್ಕೆ ಕ್ರಿಯಾಶೀಲ ಸಚಿವ
ಎಸ್.ಟಿ.ಸೋಮಶೇಖರ್ ರಿಂದ ಸಹಕಾರಿ ರಂಗದ ಭವಿಷ್ಯ ಉಜ್ವಲವಾಗುತ್ತಿದೆ. ರೈತಾಪಿ ವರ್ಗದ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಯೋಜನೆಯನ್ನು ಪುನ:ಜಾರಿ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಚಿಕಿತ್ಸೆ ನೀಡುವ ಈ ಯೋಜನೆಗೆ 300 ಕೋಟಿ ರೂ.ಗಳನ್ನು ನೀಡಲಾಗಿದೆ. 11 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ನೀಡಲಾಗಿದ್ದು, ರೈತ ಕೂಲಿಕಾರ್ಮಿಕರು, ಮೀನುಗಾರರ , ನೇಕಾರರ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗುತ್ತಿದೆ. ಸುಮಾರು 33 ಲಕ್ಷ ರೈತರಿಗೆ ಸಾಲ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಕುಶಲಕರ್ಮಿಗಳ ನೆರವಿಗೆ ಸಹಕಾರಿ ರಂಗ ಬರಬೇಕು :
ಕರಕುಶಲ ಕಾರ್ಮಿಕರಾದ ಬಡಿಗರು, ಕಮ್ಮಾರರು, ಕುಂಬಾರರು, ಮೇದಾರರು, ವಿಶ್ವಕರ್ಮದವರು ಸೇರಿದಂತೆ ಹಲವು ಕುಶಲಕರ್ಮಿಗಳಿಗೆ 50 ಸಾವಿರ ರೂ.ಗಳ ಧನಸಹಾಯವನ್ನು ನೀಡಲಾಗುತ್ತಿದ್ದು, ಸಹಕಾರಿ ರಂಗ ಈ ವಿಷಯದಲ್ಲಿ ಆಸಕ್ತಿವಹಿಸಿ ಗ್ರಾಮೀಣ ಪ್ರದೇಶದಲ್ಲಿರುವ ಕುಶಲಕರ್ಮಿಗಳಿಗೆ ಸಹಾಯ ಮಾಡುವಂತೆ ಸಹಕಾರಿ ರಂಗದವರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ವಿಶ್ವಾಸಾರ್ಹತೆ :
ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ನಂಬಿಕೆಯನ್ನು ಉಳಿಸಿಕೊಳ್ಳಲು ಕಟಿಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಸಹಕಾರಿ ರಂಗದಲ್ಲಿ ಸೇವೆ ಮಾಡಬೇಕೇ ವಿನ: ಸಹಕಾರಿ ಸಾಹುಕಾರರಾಗಬಾರದು. ಸಹಕಾರಿ ರಂಗ ದಕ್ಷ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ತಿ ಸದಾನಂದ ಗೌಡ, ಸಚಿವರಾದ ಎಸ್.ಟಿ.ಸೋಮಶೇಖರ್, ಅಶ್ವತ್ಥನಾರಾಯಣ, ಆರ್.ಅಶೋಕ್ , ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.