ಬೆಂಗಳೂರು: ಬಿಜೆಪಿ ಯಾವ ರೀತಿ ದೇಶದಲ್ಲಿ ದ್ವೇಷ ಹರಡಿ, ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸಿಗರಾಗಿ ಈ ದೇಶದ ರಕ್ಷಣೆ ನಮ್ಮ ಜವಾಬ್ದಾರಿ. ಆರ್ ಎಸ್ಎಸ್ ಹಾಗೂ ಬಿಜೆಪಿಯಿಂದ ನವ ಭಾರತವನ್ನು ರಕ್ಷಣೆ ಮಾಡಬೇಕು.ಎಂದು ರಾಹುಲ್ ಗಾಂಧಿ ತಿಳಿಸಿದರು.
ಸದ್ಯದಲ್ಲೇ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಕಾಣಿಸುತ್ತಿದೆ. ರಾಜ್ಯದ ಎಲ್ಲಾ ನಾಯಕರು ಭಾರತ ಜೋಡೋ ಯಾತ್ರೆ ಸಮಯದಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದರು. ಇದೇ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಬಿರುದು ಪಡೆದಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹೆಗ್ಗುರುತಾಗಿದೆ. ಪ್ರಧಾನಮಂತ್ರಿಗಳು ಬಿಜೆಪಿ ನಾಯಕರು ಏನೇ ಹೇಳಿದರೂ ಅವರು ಕಳೆದ ಐದು ವರ್ಷಗಳಲ್ಲಿ ಏನ್ನನೂ ಮಾಡಿಲ್ಲ ಎಂದು ರಾಜ್ಯದ ಜನರಿಗೆ ಅರಿವಾಗಿದೆ. ಈ ಸರ್ಕಾರಕ್ಕೆ ಪಾಠ ಕಲಿಸಲು ಜನ ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಾಲ್ಕು ಯೋಜನೆ ಜಾರಿ ಮಾಡುವ ಘೋಷಣೆ ಮಾಡಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿಯನ್ನು ಜನರಿಗೆ ಮುಟ್ಟಿಸಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ನಂತರ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತ ಉತ್ತಮ ಆಡಳಿತ ನೀಡಲಾಗುವುದು. ಹಾಲಿ ಬಿಜೆಪಿ ಸರ್ಕಾರದ ವರ್ತನೆಯನ್ನು ನಮ್ಮ ಸರ್ಕಾರ ಮುಂದುವರಿಸುವುದಿಲ್ಲ. ಸ್ವಚ್ಛ, ಜನರ ಕಷ್ಟ ಆಲಿಸುವ, ಅವರ ಬದುಕು ಬದಲಿಸುವ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾನು ಖರ್ಗೆ, ಸಿದ್ದರಾಮಯ್ಯ, ಶಿವಕುಮಾರ್ ಅವರಿಗೆ ನಾನು ಯಾವುದೇ ಕ್ಷಣದಲ್ಲಿ ಇಲ್ಲಿಗೆ ಬಂದು ಕೆಲಸ ಮಾಡಲು ಸಿದ್ಧನಿರುವುದಾಗಿ ಹೇಳಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಬರಲು ನನಗೆ ಬಹಳ ಇಷ್ಟ. ನಾನು ಕಾಂಗ್ರೆಸ್ ಪಕ್ಷ ಹೆಚ್ಚಿನ ಬಹುಮತ ಪಡೆಯಲು ಎಲ್ಲ ಸಹಾಯ ಮಾಡಲು ಸಿದ್ಧ.
ಚುನಾವಣೆಯನ್ನು ಅಲ್ಪ ಬಹುಮತದಿಂದ ಗೆಲ್ಲುವುದರಲ್ಲಿ ಅರ್ಥವಿಲ್ಲ. ನಾವು ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಬಿಜೆಪಿ ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದ್ದು, ಮುಂದಿನ ಸರ್ಕಾರವನ್ನು ಬೀಳಿಸಲು ಅದೇ ಹಣ ಬಳಸುತ್ತಾರೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತದ ಗೆಲುವು ನೀಡಬೇಕು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಕಾರ್ಯಕರ್ತರನ್ನು ನಾಯಕರೆಂದು ಪರಿಗಣಿಸಿ ಅವರ ಧ್ವನಿಯು ಸರ್ಕಾರದ ಭಾಗವಾಗುವಂತೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು.