IMG 20230302 WA0023

JD(S) : ಕಾಂಗ್ರೆಸ್ ನಾಯಕರು ಅಬ್ಬೆಪಾರಿಯಂತೆ ನಡೆಸಿಕೊಂಡರು…!

POLATICAL STATE

ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಂವಾದ

ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ಕಾಲು ಮುರುಕ ಕುದುರೆ ಕೊಟ್ಟು ಏರು ಎಂದ ಮನೆ ಮುರುಕ

ಸಂವಿಧಾನದತ್ತವಾಗಿ ಪ್ರಮಾಣ ಸ್ವೀಕರಿಸಿದ್ದ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ನಾಯಕರು ಅಬ್ಬೆಪಾರಿಯಂತೆ ನಡೆಸಿಕೊಂಡರು ಎಂದು ಆಕ್ರೋಶ

ಮೈತ್ರಿ ಸರಕಾರದ ಸಂಕಟಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಹೆಚ್ಡಿಕೆ


ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮೈತ್ರಿ ಸರಕಾರ ಮಾಡಿದಾಗ ಆಡಳಿತ ನಡೆಸಲು ಹೆಜ್ಜೆಹೆಜ್ಜೆಗೂ ನನಗೆ ಕಿರುಕುಳ ನೀಡಿದರು. ಸಂವಿಧಾನದತ್ತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಒಬ್ಬ ಮುಖ್ಯಮಂತ್ರಿಯನ್ನು ಅತ್ಯಂತ ಕೀಳಾಗಿ, ಅಬ್ಬೆಪಾರಿಯಂತೆ ನಡೆಸಿಕೊಂಡರು ಎಂದು ಗಂಭೀರ ಆರೋಪ ಮಾಡಿದರು.

ಮೈಸೂರು ಪತ್ರಕರ್ತರ ಸಂಘ ಇಂದು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು.

ರೈತರ ಸಾಲಮನ್ನಾ ಮಾಡಲು ಕಾಂಗ್ರೆಸ್‌ ನಾಯಕರು ಅಡ್ಡಿಪಡಿಸಿದರು. ಸಾಲಮನ್ನಾ ಭರವಸೆ ನಿಮ್ಮದು, ನಮ್ಮದಲ್ಲ. ಮನ್ನಾ ಮಾಡುವ ನಿರ್ಧಾರದಿಂದ ಹಿಂದೆ ಸರಿಯಿರಿ ಕಾಂಗ್ರೆಸ್ ನಾಯಕರು ನನ್ನ ಮೇಲೆ ಒತ್ತಡ ಹೇರಿದ್ದರು. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬಂದಿಲ್ಲ‌. ಹೀಗಾಗಿ ಸಾಲಮನ್ನಾ ಸಾಧ್ಯವಿಲ್ಲ ಅಂತ ಜನರಿಗೆ ಹೇಳಿ ಎಂದು ಒತ್ತಡ ಹೇರಿದ್ದರು. ನಾನು ಈ ಒತ್ತಡಕ್ಕೆ ಮಣಿಯಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಫಲಿತಾಂಶ ಬಂದ ಮೇಲೆ ಕಾಂಗ್ರೆಸ್‌ ನಾಯಕರು ಸರಕಾರ ಮಾಡಲು ನಮಗೆ ದುಂಬಾಲು ಬಿದ್ದರು. ನಿಮಗೆ ಬೇಷರತ್‌ ಬೆಂಬಲ ಎಂದು ಭರವಸೆ ನೀಡಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ, ನಾವು ಬೆಂಬಲ ಕೊಡುತ್ತೇವೆ ಎಂದು ಅಶೋಕ ಹೋಟೆಲ್‌ʼನಲ್ಲಿ ನಾನು ಮತ್ತು ದೇವೇಗೌಡರು ಅವರ ಮುಖಕ್ಕೆ ಹೇಳಿದೆವು. ಆದರೂ ನೀವೇ ಮುಖ್ಯಮಂತ್ರಿಯಾಗಿ, ಐದು ವರ್ಷ ನಿಮಗೆ ಬೇಷರತ್ತು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಆಮೇಲೆ ರಾಜ್ಯ ಕಾಂಗ್ರೆಸ್‌ ನಾಯಕರು ಮಾಡಿದ್ದೇನು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ವಿವರಿಸಿದರು.

IMG 20230302 WA0022

ಕಾಂಗ್ರೆಸ್‌ ನಾಯಕರು ಸರಕಾರ ರಚಿಸಲು ಇನ್ನಿಲ್ಲದ ಆತುರ ತೋರಿದಾಗ ನಾನು ಹೇಳಿದ್ದೆ. ಯಾಕೆ ವಿನಾಕಾರಣ ತರಾತುರಿ ಮಾಡುತ್ತೀರಿ ಎಂದು ನಾನೇ ಹೇಳಿದ್ದೆ. ಆದರೂ ಅವರು ದುಂಬಾಲು ಬಿದ್ದು ಸರಕಾರ ಮಾಡಿಸಿದರು. ನನ್ನ ಮಗನ ಆರೋಗ್ಯ ಸರಿ ಇಲ್ಲ. ಸಿಎಂ ಸ್ಥಾನ ನಮಗೆ ಬೇಡ. ನಿಮ್ಮಲ್ಲೇ ಯಾರಾದರೂ ಸಿಎಂ ಆಗಲಿ, ಬೇಕಾದರೆ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ಹೆಚ್.ಡಿ.ದೇವೇಗೌಡರು ಹೇಳಿದ್ದರು. ಆದರೆ ದೇವೇಗೌಡರ ಮಾತಿಗೆ ಕಾಂಗ್ರೆಸ್ ನಾಯಕರು ಒಪ್ಪದೆ ನನ್ನನ್ನು ಮುಖ್ಯಮಂತ್ರಿ ಮಾಡಿದರು. ಆಮೇಲೆ ಶುರುವಾಗಿದ್ದೇ ನನ್ನನ್ನು ಹಿಂಸಿಸುವ ಹಿಂಸಾಕಾಂಡ ಎಂದು ಕುಮಾರಸ್ವಾಮಿ ಅವರು ಆ ಸಂದರ್ಭದವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಶುರುವಿಲ್ಲೇ ಷರತ್ತುಗಳು:

ಸಚಿವ ಸಂಪುಟ ರಚನೆ ವೇಳೆಯಲ್ಲೇ ಕಾಂಗ್ರೆಸ್ ನಾಯಕರ ವಿವಿಧ ಕಂಡೀಷನ್ ಆರಂಭವಾದವು. ನಾವು 78 ಶಾಸಕರಿದ್ದೇವೆ. ನಮಗೆ ಹೆಚ್ಚು ಖಾತೆಗಳು ಬೇಕು, ಪ್ರಮುಖ ಖಾತೆಗಳೇ ಬೇಕು. ಹಣಕಾಸು, ಇಂಧನ, ಜಲ ಸಂಪನ್ಮೂಲ ಸೇರಿ ಎಲ್ಲ ಪ್ರಮುಖ ಖಾತೆಗಳು ನಮಗೆ ಬೇಕು ಎಂದು ಪಟ್ಟು ಹಿಡಿದರು. ನಾನು ಸಾಲಮನ್ನಾ ಭರವಸೆ ಕೊಟ್ಟಿದ್ದೆ. ಹೀಗಾಗಿ ಹಣಕಾಸು ಖಾತೆ ಕೊಡುವ ಹಾಗೆಯೇ ಇರಲಿಲ್ಲ. ಇನ್ನು, ಕಾಂಗ್ರೆಸ್‌ ಪಕ್ಷದ ಅಯಾ ಮಂತ್ರಿಗಳು ತಮ್ಮ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ತಮ್ಮ ಮಾತೇ ನಡೆಯಬೇಕೆಂದು ಪಟ್ಟು ಹಿಡಿದಿದ್ದರು. ಯಾವ ಇಲಾಖೆಯ ವಿಚಾರದಲ್ಲೂ ಮುಖ್ಯಮಂತ್ರಿ ಆಗಿದ್ದ ನಾನು ಯಾವ ತೀರ್ಮಾನವನ್ನು ಸ್ವತಂತ್ರವಾಗಿ ಮಾಡಲು ಆಗಲಿಲ್ಲ. ಓರ್ವ ಮಂತ್ರಿಯಂತೂ ನನ್ನ ಇಲಾಖೆಯ ವಿಚಾರಕ್ಕೆ ಬರಬೇಡಿ ಎಂದು ನೇರವಾಗಿ ನನಗೇ ಹೇಳಿದ್ದರು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸಭೆಗೆ ಕರೆಯುವ ಸೌಜನ್ಯ ತೋರಲಿಲ್ಲ:

ಹಿರಿಯ ಅಧಿಕಾರಿಗಳನ್ನು ವರ್ಗ ಮಾಡುವುದು ಮುಖ್ಯಮಂತ್ರಿಯ ಅಧಿಕಾರ. ಅದಕ್ಕೂ ನನಗೆ ಅವಕಾಶ ನೀಡಲಿಲ್ಲ. ಒಬ್ಬ ಎಂಜಿನಿಯರ್‌ ವರ್ಗ ಮಾಡಿದ್ದಾಗ ಅಧಿಕಾರ ವಹಿಸಿಕೊಳ್ಳಲು ಓರ್ವ ಕಾಂಗ್ರೆಸ್‌ ಸಚಿವ ಆ ಎಂಜಿನಿಯರ್‌ ಗೆ ಬಿಡಲಿಲ್ಲ. ಇನ್ನು, ನಾನು ಹಲವು ಬಾರಿ ಕೇಳಿದರೂ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಒಟ್ಟುಗೂಡಿಸಿ ಜಂಟಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಿಲ್ಲ. ಒಮ್ಮೆ ನನ್ನನ್ನು ತಮ್ಮ ಆಪ್ತರೊಬ್ಬರ ಹೋಟೆಲ್ಲಿಗೆ ಕರೆಸಿಕೊಂಡ ಸಿದ್ದರಾಮಯ್ಯ, ಅಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೂ ಒಳಕ್ಕೂ ನನ್ನನ್ನು ಕರೆಯಲಿಲ್ಲ. ಹೋಟೆಲಿನ ಹೊರಗೆ ಕೊಂಚ ಹೊತ್ತು ನಾನು ಅಬ್ಬೆಪಾರಿಯಂತೆ ಹೊರಗೆ ನಿಂತು ವಾಪಸ್‌ ಬಂದೆ. ಸಂವಿಧಾನದತ್ತವಾಗಿ ಪ್ರಮಾಣ ಸ್ವೀಕರಿಸಿದ್ದ ಮುಖ್ಯಮಂತ್ರಿಯನ್ನು ಕಾಂಗ್ರೆಸ್‌ ಪಕ್ಷ ನಡೆಸಿಕೊಂಡ ಬಗೆ ಇದು. ಎಲ್ಲವನ್ನೂ ವಿಷಕಂಠನಂತೆ ಸಹಿಸಿಕೊಂಡೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ನಾನು ಈ ಎಲ್ಲ ವಿಷಯಗಳನ್ನು ಹೇಳುತ್ತಿದ್ದೇನೆ. ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಈ ಸತ್ಯಗಳನ್ನು ಹೇಳುತ್ತಿದ್ದೇನೆ. ರಾಜ್ಯದ ಜನರಿಗೆ ಈ ವಿಷಯಗಳು ಗೊತ್ತಾಗಬೇಕಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬಿಜೆಪಿ ಸರಕಾರ ಬರಲು ಕಾಂಗ್ರೆಸ್‌, ಸಿದ್ದರಾಮಯ್ಯ ಅವರೇ ಕಾರಣ:

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಪಕ್ಷ ದ್ರೋಹ ಮಾಡಿದ್ದೇ ಜಾಸ್ತಿ. ಬಿಜೆಪಿ ಟೀಂ ಜೆಡಿಎಸ್ ಎಂದು ಕಾಂಗ್ರೆಸ್ʼನವರು ಅಪ್ರಚಾರ ಮಾಡಿ ೨೦೧೮ರಲ್ಲಿ ನಮ್ಮ ಪಕ್ಷದ ಕತ್ತು ಕೊಯ್ದರು. ಸಿದ್ದವನದಲ್ಲಿ ಸಿದ್ದರಾಮಯ್ಯ ವಿಶ್ರಾಂತಿಗೆಂದು ಹೋಗಿ ಮೈತ್ರಿ ಸರಕಾರವನ್ನು ಮುಗಿಸಲು ಮದ್ದು ಅರೆದರು. ಅಲ್ಲಿ ಕೂತು ಸಂಚು ರೂಪಿಸಿದರು. ಸಿದ್ದವನದಲ್ಲೇ ಕೂತು, ಈ ಸರಕಾರ ಲೋಕಸಭೆ ಚುನಾವಣೆವರೆಗೂ ಮಾತ್ರ ಇರುತ್ತದೆ ಎಂದು ಹೇಳಿದ್ದು ಯಾರು? ಬಿಜೆಪಿ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೇ ʼಒಳ ಹೊಂದಾಣಿಕೆʼ ಇತ್ತು. ಈಗಿನ ಬಿಜೆಪಿ ಸರಕಾರ ಬರಲು ಕಾಂಗ್ರೆಸ್‌ ಪಕ್ಷ ಹಾಗೂ ಸಿದ್ದರಾಮಯ್ಯ ಅವರೇ ಕಾರಣ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಕಾಲು ಮುರುಕ ಕುದುರೆ ಕೊಟ್ಟ ಮನೆ ಮುರುಕ:

ನಾನು ಎಲ್ಲಿ ಸಾಲಮನ್ನಾ ಮಾಡಿಬಿಡುತ್ತೇನೋ ಎಂದು ಕಾಂಗ್ರೆಸ್ ಪಕ್ಷದವರು ಬಜೆಟ್ ಮಂಡಿಸಲಿಕ್ಕೂ ನನಗೆ ಅಡ್ಡಿ ಉಂಟು ಮಾಡಿದರು. ಸಿದ್ದರಾಮಯ್ಯ, ಜೆ.ಸಿ.ಮಾಧುಸ್ವಾಮಿ ಹಾಗೂ ಅಂದಿನ ಸ್ಪೀಕರ್ ಕುಮ್ಮಕ್ಕಾಗಿ ಬಜೆಟ್ ಮಂಡನೆಗೆ ಅವಕಾಶವೇ ನೀಡಬಾರದು ಎಂದು ತಂತ್ರಗಾರಿಕೆ ಮಾಡಿದ್ದರು. ದೇವವರ್ಗದಲ್ಲಿ ನಮ್ಮ‌ ಶಾಸಕರ ಪುತ್ರನೊಬ್ಬ ಸೀಡಿ ಮಾಡಿಕೊಂಡು ಬಾರದೆ ಇದ್ದಿದ್ದರೆ ನಾನು ಎರಡನೇ ಬಜೆಟ್ ಮಂಡಿಸೋಕೆ ಆಗುತ್ತಿರಲಿಲ್ಲ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಆ ಸರಕಾರದಲ್ಲಿ ಕತ್ತೆ ದುಡಿದ ರೀತಿ ದುಡಿದ್ದೇನೆ. ಈಗ ನೋಡಿದರೆ ಕೊಟ್ಟ ಕುದುರೆ ಏರದವನೂ ವೀರನೂ ಅಲ್ಲ ಶೂರನ ಅಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಇವರು ನನಗೆ ಕಾಲಿಲ್ಲದ ಕುದುರೆ ಕೊಟ್ಟಿದ್ದರು. ʼಕಾಲು ಮುರುಕ ಕುದುರೆʼ ಕೊಟ್ಟು ಅದನ್ನು ಏರು ಎನ್ನುವವರನ್ನು ನಮ್ಮ ಕಡೆ ʼಮನೆ ಮುರುಕʼ ಅನ್ನುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ʼಮನೆ ಮುರಕʼ ಎಂದು ಕರೆದರು ಕುಮಾರಸ್ವಾಮಿ ಅವರು.

ಹಳ್ಳಿಗಳಲ್ಲಿ ನಡೆಯಲಿ ಪ್ರಜಾಧ್ವನಿ:

ಕಾಂಗ್ರೆಸ್ ನಾಯಕರು ನಗರ ಪ್ರದೇಶದಲ್ಲಿ ಪ್ರಜಾಧ್ವನಿ ಮಾಡುವುದಲ್ಲ. ತಾಲೂಕುಗಳಲ್ಲಿ 500 ರೂ ಕೊಟ್ಟು ಜನರನ್ನು ಕರೆ ತರುವುದಲ್ಲ, ಬದಲಾಗಿ ಹಳ್ಳಿಗಳಿಗೆ ಹೋಗಿ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನೂ ಶೌಚಾಲಯ ವ್ಯವಸ್ಥೆಯೇ ಇಲ್ಲ. ನನ್ನ ಮನೆಗೆ ಬಂದು ಸಮಸ್ಯೆ ಹೇಳುವ ಜನರ ಕಷ್ಟ ಕೇಳಿ. ನಾನು ಇಂಥ ಜನರಿಗಾಗಿ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ಇದನ್ನು ಯಾರೇ ಆರ್ಥಿಕ ತಜ್ಞ ರೂಪಿಸಿದ್ದಲ್ಲ. ಕೆಲವರು ಭಾಗ್ಯಗಳನ್ನು ಕೊಟ್ಟು ಸಮಾಜವನ್ನು ಉದ್ಧಾರ ಮಾಡಿದ್ದೇನೆ ಎನ್ನುತ್ತಾರೆ. ಆದರೆ, ಐದು ವರ್ಷ ಆಡಳಿತ ನಡೆಸಿದ ಅವರು ಹಳ್ಳಿಗಳಿಗೆ ಹೋಗಿ ನೋಡೊದರೆ ಗೊತ್ತಾಗುತ್ತದೆ, ತಮ್ಮ ಆಡಳಿತ ಹಣೆಬರಹ ಏನು ಎಂದು. ಈಗ ನೋಡಿದರೆ; ಕಾಂಗ್ರೆಸ್ ನಾಯಕರು ಘೋಷಣೆ ಮಾಡಿರುವ ಉಚಿತ ವಿದ್ಯುತ್, 2000 ಹಣ ಕಾರ್ಯಕ್ರಮ ರೂಪಿಸಲು 48 ಸಾವಿರ ಕೋಟಿ ರೂ. ಬೇಕು. ಹಣ ಎಲ್ಲಿಂದ ತರುತ್ತಾರೆ? ಹಿಂದೆ ಇದೇ ಕಾಂಗ್ರೆಸ್‌ ಪಕ್ಷ 7 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಕೇವಲ 5 ಕೆಜಿಗೆ ಆಗುವಷ್ಟು ಹಣ ಮಾತ್ರ ಮೀಸಲಿಟ್ಟಿದ್ದರು. 2 ಕೆಜಿ ಹೊರೆ ನನ್ನ ಮೇಲೆ ಬಿತ್ತು ಎಂದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕಾಂಗ್ರೆಸ್ ಜೊತೆಗೆ ಸರಕಾರ ಮಾಡಿ ತಪ್ಪು ಮಾಡಿದೆ ಎನಿಸಿದರೂ, ರೈತರ ಸಾಲಮನ್ನಾ ಮಾಡಿದ ತೃಪ್ತಿ ನನಗಿದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಲು ಅವರು ಪ್ರಯತ್ನಿಸಿದರು, ಆದರೆ ನನ್ನ ಇಮೇಜ್ʼಗೆ ಎಲ್ಲೂ ಧಕ್ಕೆ ಆಗಿಲ್ಲ. ಈ ಬಾರಿ ಯಾರೊಂದಿಗೂ ಹೊಂದಾಣಿಕೆ ‌ಮಾಡಿಕೊಳ್ಳಲ್ಲ, 120 ಸ್ಥಾನ ಬರುವ ವಿಶ್ವಾಸ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಿಜೆಪಿ ಜತೆ ಸೇರಿ ಸರಕಾರ ಮಾಡಲ್ಲ. ಅಂದು ಬಿಜೆಪಿ ಜತೆಗೆ ಸಮ್ಮಿಶ್ರ ಸರಕಾರ ಮಾಡಿದಾಗ ಬಿಜೆಪಿ ಬೇರೆ ರೇತಿ ಇತ್ತು. ಈಗ ಬಿಜೆಪಿಗರು ಅಧಿಕಾರದ ರುಚಿ ನೋಡಿದ್ದಾರೆ. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ ಆಗಿವೆ. ಅಂದು ಸಮ್ಮಿಶ್ರ ಸರಕಾರ ಮಾಡದೆ ಇದ್ದಿದ್ದರೆ ಕೋಲಾರದ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಸಮ್ಮಿಶ್ರ ಸರಕಾರದಲ್ಲಿ ನಾನು ಟ್ರ್ಯಾಪ್ ಆಗಿದ್ದಂತೂ ಸತ್ಯ. ಕಾಂಗ್ರೆಸ್ಸಿಗೆ ನಮ್ಮಿಂದ ಸಹಾಯ ಆಗಿದೆ, ಅವರಿಂದ ಜೆಡಿಎಸ್ ಪಕ್ಷಕ್ಕೆ ಸಹಾಯ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಮೋದಿ, ಅಮಿತ್ ಶಾ ಅವರಿಬ್ಬರು ಎಷ್ಟು ಬಾರಿ ರಾಜ್ಯಕ್ಕೆ ಬಂದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ ಜನರು ಬಿಜೆಪಿ ಸರಕಾರವನ್ನು ಗೆಲ್ಲಿಸಿದರೆ ಹತ್ತು ಪರಪ್ಪನ ಅಗ್ರಹಾರ ಜೈಲುಗಳನ್ನು ಕಟ್ಟಿಸಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಬಿಜೆಪಿ ಹಾಳಾಗಿದೆ. ಈಗಂತೂ ಬಿಜೆಪಿ ಸ್ಪೀಡ್ʼಗೆ ಬ್ರೇಕ್ ಹಾಕಲು ನನ್ನಂದ ಸಾಧ್ಯವೇ ಹೊರತು ಕಾಂಗ್ರೆಸ್ʼನಿಂದ ಸಾಧ್ಯವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಕುಮಾರಸ್ವಾಮಿ ಅವರು ಹೇಳಿದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ತಿಂಗಳ 20ರಿಂದ 30ರೊಳಗೆ ದಿನಾಂಕ ಪ್ರಕಟ ಆಗಬಹುದು. ಸದ್ಯದಲ್ಲೇ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಲಿದೆ. ಹೀಗಾಗಿ ಎಲ್ಲಾ ಪಕ್ಷಗಳಲ್ಲೂ ತಯಾರಿ ಮಾಡಿಕೊಳ್ಳುತ್ತಿವೆ. ಒಂದು ಕಾಲದಲ್ಲಿ ಜೆಡಿಎಸ್‌ ಪಕ್ಷ ಐಸಿಯುಗೆ ಹೋಗಿದೆ ಎನ್ನುತ್ತಿದ್ದವರಿಗೆ ಈಗ ನಡುಕ ಶುರುವಾಗಿದೆ. ಈ ಪಕ್ಷ 10ರಿಂದ 20 ಸ್ಥಾನ ಗೆಲ್ಲಬಹುದು ಅನ್ನುವ ಮಾತು ಹೇಳುತ್ತಿದ್ದರು. ಅವರು ನಮ್ಮ ವೇಗ ಕಂಡು ಅವಾಕ್ಕಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಬಸವಣ್ಣ, ಕಾರ್ಯದರ್ಶಿ ಸುಬ್ರಹ್ಮಣ್ಯ, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಮಾಜಿ ಮುಖ್ಯಮಂತ್ರಿಗಳನ್ನು ಗೌರವಿಸಲಾಯಿತು.