22 7 23 Jnanabodhini School 1

ಪಾವಗಡ : ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ…!

DISTRICT NEWS ತುಮಕೂರು

ಪಾವಗಡದ ಹೆಸರಾಂತ ವಿದ್ಯಾಲಯವಾದ ಜ್ಞಾನಬೋಧಿನಿ ಸಂಸ್ಥೆಯಲ್ಲಿ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಬೋಧಿನಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ರವರು ವಹಿಸಿದ್ದರು. ಶಾಲೆಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಗ್ರಾಮಾಂತರ ವಿಭಾಗದ ಶಾಲೆಗಳಲ್ಲಿ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಮ್ಮ ಸಂಸ್ಥೆ ಇದೀಗ ಅತ್ಯಾಧುನಿಕ ಯಂತ್ರೋಪಕರಣಗಳುಳ್ಳ ಹಾಗೂ ನೇತ್ರ ತಜ್ಞರುಗಳುಳ್ಳ ನೂತನ ಸಂಚಾರಿ ಕಣ್ಣಿನ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಸಂತೋಷವನ್ನು ತಂದಿದೆ. ಈ ತೆರನಾದ ನೇತ್ರ ತಪಾಸಣಾ ಶಿಬಿರದಲ್ಲಿ ಮಕ್ಕಳು ಧೈರ್ಯದಿಂದ ತಮ್ಮ ದೃಷ್ಟಿಯ ನ್ಯೂನತೆಯನ್ನು ನೇತ್ರ ತಜ್ಞರಿಗೆ ತಿಳಿಸಿದ್ದಲ್ಲಿ ತತ್‍ಕ್ಷಣ ಅವರ ನ್ಯೂನತೆಯನ್ನು ದೂರ ಮಾಡುವುದಕ್ಕೆ ನಮಗೆ ಸಹಕಾರವಾಗುತ್ತದೆ ಎಂದರು.

ಈ ಶಿಬಿರದಲ್ಲಿ ಉಚಿತವಾದ ನೇತ್ರ ತಪಾಸಣೆ, ಔಷಧೋಪಚಾರ ಹಾಗೂ ಅತ್ಯಂತ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಶ್ರೀ ಸುದೇಶ್ ಬಾಬು ರವರು, ಶ್ರೀ ಸ್ವಾಮಿ ಜಪಾನಂದಜೀ ರವರ ಸೇವಾ ಯೋಜನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಅದರಲ್ಲಿಯೂ ಮಕ್ಕಳಲ್ಲಿ ಸರ್ವ ರೀತಿಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಇದೀಗ ನೇತ್ರ ತಪಾಸಣಾ ಶಿಬಿರಗಳನ್ನು ಶಾಲೆಗಳಲ್ಲಿ ನಿರಂತರವಾಗಿ ಏರ್ಪಡಿಸುತ್ತಾ ನೂರಾರು ಮಕ್ಕಳ ನ್ಯೂನತೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕಾರ್ಯವಹಿಸುತ್ತಿರುವುದು ನಮಗೆ ಅತೀವ ಸಂತೋಷವನ್ನು ತಂದಿದೆ ಎಂದು ತಿಳಿಸಿದರು.

22 7 23 Jnanabodhini School 4

ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಅನಿಲ್ ಕುಮಾರ್ ರವರು ಬಯಸದೇ ಭಾಗ್ಯದಂತೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಗ್ರಾಮಾಂತರ ಶಾಲೆಗಳಲ್ಲಿ ಈ ನೇತ್ರ ತಪಾಸಣಾ ಶಿಬಿರವನ್ನು ನಡೆಸುತ್ತಿರುವುದು ನಿಜಕ್ಕೂ ಸಂತೋಷಕರವಾದ ವಿಚಾರ. ಇಂದು ನಮ್ಮ ಸಂಸ್ಥೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದು ನಮ್ಮ ಒಂದು ಭಾಗ್ಯ ಎಂದು ಬಣ್ಣಿಸಿದರು. ಸರಿಸುಮಾರು 120 ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಪಾಸಣೆಗೆ ಒಳಗಾಗಿ ಔಷಧೋಪಚಾರ ಹಾಗೂ ಇತರ ನೇತ್ರ ಚಿಕಿತ್ಸೆಯನ್ನು ಪಡೆದರು.

ಇದೇ ಸಂದರ್ಭದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ, ಬೆಂಗಳೂರಿನಿಂದ ನೇತ್ರ ತಜ್ಞರು ಹಾಗೂ ಸಹಾಯಕರು ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯಿಂದ ನೇತ್ರ ತಜ್ಞರು ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಿಂದ ಹಿರಿಯ ತಜ್ಞರಾದ ಡಾ.ಚಂದ್ರಕಲಾ ಹಾಗೂ ಇತರ ನೇತ್ರ ಪರೀಕ್ಷಕರು ಭಾಗವಹಿಸಿದ್ದರು.

ಯೋಜನೆಯ ಮತ್ತೊಬ್ಬ ಸಂಯೋಜಕರಾದ ಶ್ರೀ ಲೋಕೇಶ್ ದೇವರಾಜ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಟ್ಟಿನಲ್ಲಿ ನಿರಂತರವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸೇವಾ ಯೋಜನೆಗಳನ್ನು ನಡೆಸುತ್ತಿರುವ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯವೈಖರಿಗೆ ಜ್ಞಾನಬೋಧಿನಿ ಸಂಸ್ಥೆಯ ಸಿಬ್ಬಂದಿ ಮುಕ್ತಕಂಠದಿಂದ ಶ್ಲಾಘಿಸಿದರು.