ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್ ಬಿಜೆಪಿ ಒಟ್ಟಾಗಿ ಹೋರಾಡಬೇಕೆನ್ನುವುದು ಜನರ ಬಯಕೆ : ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ:ಕಾಂಗ್ರೆಸ್ ಸರ್ಕಾರದ ದುರಾಡಳಿತ ಹೆಚ್ಚಾಗಿದೆ. ಅದರ ವಿರುದ್ದ ವಿರೋಧ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕೆಂಬುದು ರಾಜ್ಯದ ಜನರ ಅಪೇಕ್ಷೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ. ಕೆಲವು ಉದ್ದೇಶಕ್ಕಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಒಂದು ಕಡೆ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಮತ್ತೊಂದು ಕಡೆ ಸಚಿವರುಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ರಾಜ್ಯದಲ್ಲಿ ರಸ್ತೆಗೆ ಒಂದು ಹಿಡಿ ಮಣ್ಣನ್ನು ಹಾಕಲಾರದ ಸ್ಥಿತಿ ನಿರ್ಮಾಣ.ಈ ರೀತಿ ಆದರೆ ಇಡೀ ರಾಜ್ಯ ಅಧೋಗತಿ ಹೋಗುತ್ತದೆ. ಇದನ್ನು ನಿಲ್ಲಿಸುವ ಉದ್ದೇಶದಿಂದ ನಾವಂತೂ ಹೋರಾಟ ಮಾಡುತ್ತಿದ್ದೇವೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ವಿರೋಧ ಪಕ್ಷದ ಜವಾಬ್ದಾರಿ ಇದೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹತ್ತಿರ ಬರುತ್ತಿವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಲ್ಲವೇ ಆಗ ಇಬ್ಬರೂ ಅಸಹಾಯಕರಿದ್ದರೆ ? ಜೆಡಿಎಸ್ ಗೆ ಎಷ್ಟು ಸ್ಥಾನ ಕೊಡಬೇಕು ಅನ್ನುವುದನ್ನು ವಸ್ತು ಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಬರ ಘೋಷಣೆಗೆ ನೆಪ
ರಾಜ್ಯದಲ್ಲಿ ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳು ಅಡ್ಡಿಯಾಗುತ್ತಿವೆ ಎಂದು ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಈ ಹಿಂದೆಯೂ ಇದೇ ನಿಯಮಗಳಿದ್ದವು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಘೋಷಣೆ ಮಾಡಲಿಲ್ಲವೇ.? ನಾವು ಸಹ ಕೇಂದ್ರ ಸರ್ಕಾರ ಕೊಡುವುದಕ್ಕಿಂತ ಹೆಚ್ಚಿನ ಹಣ ಕೊಟ್ಟಿದ್ದೇವು.
ನಿಯಮ ಬದಲಾವಣೆಗಾಗಿ ನಾವು ಕಾದುಕೊಂಡು ಕುಳಿತಿದ್ದವೇ ಎಂದು ಪ್ರಶ್ನಿಸಿದರು.
ನಾವು ಬರ ಪರಿಹಾರದ ಎರಡು ಪಟ್ಟು ಮೊತ್ತ ಕೊಟ್ಟಿದ್ದೇವು. ರಾಜ್ಯ ಸರ್ಕಾರಕ್ಕೆ ಜನರಿಗೆ ಸಹಾಯ ಮಾಡಬೇಕೆಂಬ ಮನಸಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಮೊದಲನೇ ಕಂತು ಈಗಾಗಲೇ ಬಂದಿದೆ. ಇವರಿಗೆ ರೈತರ ಸಂಕಷ್ಟ ಪರಿಹಾರ ಮಾಡೋ ಮನಸ್ಸಿಲ್ಲ. ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿ ಕೂಡಲೇ ಬರ ಘೋಷಣೆ ಮಾಡಬೇಕು ಎಂದರು.
ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಸಬೇಕು
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿರುವುದರಿಂದ ಖಾಸಗಿ ವಾಹನಗಳ ಮಾಲೀಕರು ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರ ಖಾಸಗಿ ಬಸ್ ಮಾಲೀಕರ ಸಮಸ್ಯೆ ಬಗೆಹರಿಸುತ್ತೇವೆ ಅಂತ ಹೇಳುತ್ತಲೇ ಬಂದಿದ್ದಾರೆ. ಸುಮ್ಮನೆ ಸಭೆ ಮಾಡಿದರು, ಈಗ ಖಾಸಗಿ ಬಸ್ ಮಾಲೀಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಹಾವೇರಿಯ ಹೊಸರಿತ್ತಿ ಲಾಕಪ್ ಡೆತ್ ಪ್ರಕರಣ ಕುರಿತು ಮಾಹಿತಿ ತೆಗೆದುಕೊಳ್ಳುತ್ತೇನೆ. ಈ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರೆ ಖಂಡಿತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದು ಹೇಳಿದರು