ಜೆಡಿಎಸ್- ಬಿಜೆಪಿ ಮೈತ್ರಿ ಖಚಿತಪಡಿಸಿದ ಜೆಡಿಎಸ್ ವರಿಷ್ಠ ನಾಯಕರು
ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು ನಿಜ ಎಂದ ಹೆಚ್.ಡಿ.ದೇವೇಗೌಡರು
ಶೀಘ್ರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹೊಸ ರಾಜಕೀಯ ಅಧ್ಯಾಯ ಆರಂಭ: ಹೆಚ್.ಡಿ.ಕುಮಾರಸ್ವಾಮಿ
ಅರಮನೆ ಮೈದಾನದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಮಾವೇಶ
ಬೆಂಗಳೂರು: ಕೆಲ ದಿನಗಳ ಹಿಂದೆ ನಾನು ದೆಹಲಿಗೆ ಹೋಗಿದ್ದೂ ನಿಜ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೂ ನಿಜ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಹೇಳಿದರು. ಹಾಗೆಯೇ; ಇನ್ನು ಕೆಲ ದಿನಗಳಲ್ಲಿಯೇ ಕರ್ನಾಟಕದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದರು. ಈ ಮೂಲಕ ಜೆಡಿಎಸ್ ಪಕ್ಷದ ಉಭಯ ವರಿಷ್ಠ ನಾಯಕರೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಬಗ್ಗೆ ಕೆಲ ದಿನಗಳಿಂದ ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ವರಿಷ್ಠ ನಾಯಕರಿಬ್ಬರೂ ಮಾತನಾಡಿದರು.
ಮಾಜಿ ಪ್ರಧಾನಿಗಳು ಹೇಳಿದ್ದಿಷ್ಟು;
ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಪ್ರೀತಿ, ವಿಶ್ವಾಸ ಇದೆ. 2018ರಲ್ಲಿಯೇ ದಿಲ್ಲಿಯಲ್ಲಿ ಒಮ್ಮೆ, “ಈ ಕೂಡಲೇ ರಾಜೀನಾಮೆ ನೀಡಿ. ನಾಳೆಯೇ ಹೊಸದಾಗಿ ಪ್ರಮಾಣ ಸ್ವೀಕಾರ ಮಾಡಿ. ಬಿಹಾರದ ನಿತೀಶ್ ಕುಮಾರ್ ಅವರಂತೆ ನಿಮ್ಮನ್ನೂ ದೀರ್ಘಾವಧಿ ಮುಖ್ಯಮಂತ್ರಿಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದರು. ಆದರೆ, ನನ್ನನ್ನು ನೋಡಿಕೊಂಡು ಕುಮಾರಸ್ವಾಮಿ ಅವರು ಮೋದಿ ಅವರ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದರು.
ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಎಲ್ಲಿದೆ? 28 ಸ್ಥಾನಗಳಲ್ಲಿ ಕನಿಷ್ಠ 24 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ. 4 ಸ್ಥಾನಗಳು ಬಿಜೆಪಿಗೆ ಹೋಗಬಹುದು, ಜೆಡಿಎಸ್ ಎಲ್ಲಿದೆ ಎಂಬ ಚರ್ಚೆ 3 ದಿನಗಳಿಂದ ನಡೆಯುತ್ತಿದೆ. ಅದಕ್ಕೆ ಉತ್ತರ ಕೊಡುವ ಕಾಲ ಬಂದಿದೆ.
ಒಂದು ಪ್ರಶ್ನೆ. ಹೊಸ ಮೈತ್ರಿ ಮಾತುಕತೆಯ ನೈತಿಕತೆ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ನಾನು ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದೆ ಎನ್ನುವುದರಲ್ಲಿ ರಹಸ್ಯ ಏನೂ ಇಲ್ಲ. ಆದರೆ, ನೈತಿಕತೆ ಬಗ್ಗೆ ಮಾತನಾಡುವ ರಾಜ್ಯದ ಯಾವ್ಯಾವ ನಾಯಕರಿಗೆ ಅದೆಷ್ಟು ನೈತಿಕತೆ ಇದೆ ಎಂದು ನಾನು ವಿಶ್ಲೇಷಣೆ ಮಾಡಬಲ್ಲೆ. ಆದರೆ, ವ್ಯಕ್ತಿಗತ ನಿಂದನೆ ಮಾಡುವುದು ನನ್ನ ಉದ್ದೇಶ ಅಲ್ಲ, ಈ 9೧ನೇ ವಯಸ್ಸಿನಲ್ಲಿ ಅಂಥ ನಿಂದನೆಯಿಂದ ನಾನೇನು ಸಾಧಿಸ್ತೀನಿ.
ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದೆ. ಈ ಸಭೆ ಕರೆಯಬೇಕು, ದಿವಸ ಚೆನ್ನಾಗಿದೆ ಹಾಗೂ ಇಲ್ಲಿ ಬಂದಿರುವ ಕಾರ್ಯಕರ್ತರಿಗೆ ಪಕ್ಷ ಉಳಿಸುವ ಶಕ್ತಿ ಇದೆ. ದೇವೆಗೌಡರು ದೆಹಲಿಗೆ ಹೋಗಿ ಯಾರನ್ನೋ ಭೇಟಿ ಮಾಡಿದರು ಅಂತ ಹೇಳುತ್ತಿದ್ದಾರೆ. ಹೌದು… ಭೇಟಿಯಾಗಿದ್ದೆ. 40 ವರ್ಷ ಈ ಪಕ್ಷಕ್ಕಾಗಿ ದುಡಿದಿದ್ದೇನೆ. ಈಗ ಈ ಪಕ್ಷವನ್ನು ಉಳಿಸಲೇಬೇಕು. ಈಗಷ್ಟೇ ಅಲ್ಲ, ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೋದಾಗಲು ಪಕ್ಷ ಕಟ್ಟಿದ್ದೇನೆ.
ಮೋದಿ ಅವರು ಕುಮಾರಸ್ವಾಮಿಯವರನ್ನು ಕರೆದು, “ನೀನು ರಾಜೀನಾಮೆ ಕೊಡು, ನೀನು ಬದುಕಿರೋವರೆಗೂ ನಿನ್ನ ಸಿಎಂ ಮಾಡ್ತೀನಿ” ಎಂದು ಹೇಳಿದ್ದರು. ಹೇಗೆ ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಮಾಡಿದ್ದೆನೋ ಅದೇ ರೀತಿ ನಿನ್ನನ್ನೂ ಸಿಎಂ ಮಾಡ್ತೀನಿ ಅಂದರು. ಆದರೆ, ನಮ್ಮ ತಂದೆಗೆ ನೋವು ಕೊಡೊಲ್ಲ ಎಂದು ವಾಪಸ್ ಬಂದರು… ಅವರ ಆರೋಗ್ಯ ಕೆಟ್ಟಿದೆ ಎಂದು ವಾಪಸ್ ಬಂದರು. ಆಗ ಎಲ್ಲಿದ್ದರು ಕಾಂಗ್ರೆಸ್ನವರು? ಎಲ್ಲಿದ್ದರು ಅವರು? ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು ಎಲ್ಲಿದ್ದರು? ಅವರಿಗೆ ದೇವೆಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯಾ?
ಬಿಜೆಪಿ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೆ ಹೌದು, ದೇವೆಗೌಡ ಮತ್ತೆ ಪ್ರಧಾನಿ ಆಗೊದಕ್ಕೆ ಈ ಭೇಟಿ ಮಾಡಿದ್ದಲ್ಲ, ಈ ಪಕ್ಷ ಉಳಿಸಲು. ಮೋದಿಯವರು ಅವರಾಗಿಯೇ ವಿಶ್ವಾಸದಿಂದ ಭೇಟಿ ಮಾಡಲು ಮುಂದೆ ಬಂದಾಗ ಅವರ ಜತೆ ಮಾತನಾಡಿದ್ದು ಸತ್ಯ. ಆದರೆ ನಾವು ಯಾವ ಸೀಟನ್ನು ಕೇಳಲಿಲ್ಲ.
ಮಂಡ್ಯದಲ್ಲಿ ಬಿಜೆಪಿಯ ಮತಗಳು ಇಲ್ಲವೇ? ರಾಮನಗರದಲ್ಲಿ ಬಿಜೆಪಿಯ ಓಟ್ ಇಲ್ವೇ? ಕೋಲಾರ, ತುಮಕೂರಿನಲ್ಲಿ ಇಲ್ವೇ?? ಹಾಗಂದ ಮಾತ್ರಕ್ಕೆ ಜೆಡಿಎಸ್ನಲ್ಲಿ ಏನೂ ಇಲ್ಲ ಎಂದು ಯಾರೂ ಭಾವಿಸಬಾರದು. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾತುಕತೆಯ ವೇಳೆಯೇ ಹೇಳಿದ್ದೇನೆ. ವಿಜಯಪುರದಲ್ಲಿ, ರಾಯಚೂರಿನಲ್ಲಿ ನನ್ನ ಪಕ್ಷದ ಶಕ್ತಿ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿದ್ದೇನೆ. ಬೀದರ್ ನಲ್ಲಿ ಎರಡು ಕ್ಷೇತ್ರಗಳಲ್ಲಿ ನಮ್ಮ ಶಕ್ತಿ ಇದೆ. ಚಿಕ್ಕಮಗಳೂರಿನ ಲೋಕಸಭೆ ಕ್ಷೇತ್ರದಲ್ಲಿಯೂ ನಮ್ಮ ಶಕ್ತಿ ಇದೆ. ನಾನು ವಿನಮ್ರವಾಗಿ ಈ ವಿಷಯ ತಿಳಿಸಿದ್ದೇನೆ.
ಈ ವಿಚಾರವಾಗಿ ಕುಮಾರಸ್ವಾಮಿ ಅವರು ಅಂತಿಮವಾಗಿ ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳಬೇಕೆಂದು ಬಿಜೆಪಿ ನಾಯಕರ ಜತೆ ಕೂತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ
ಕುಮಾರಸ್ವಾಮಿ ಅವರು ಹೇಳಿದ್ದು:
ಕೇವಲ ಮೂರೇ ತಿಂಗಳ ಆಡಳಿತಾವಧಿಯಲ್ಲಿ ದುರಾಡಳಿತದ ಪರಾಕಾಷ್ಠೆ ಮುಟ್ಟಿರುವ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯದ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ. ವಿಪಕ್ಷಗಳು ಒಟ್ಟಾಗಿ ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ.
ಕಾಂಗ್ರೆಸ್ ನವರು ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದೇಬಿಟ್ಟೆವು ಎಂದು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಅದಕ್ಕೆ ಈ ಹೊಸ ರಾಜಕೀಯ ಅಧ್ಯಾಯ ಚೆಕ್ ಮೇಟ್ ಇಡುತ್ತದೆ. ಈ ಅಹಂಕಾರಕ್ಕೆ ಇತಿಶ್ರೀ ಹಾಡುತ್ತೇವೆ.
2006ರಲ್ಲಿ ದೇವೇಗೌಡರ ವಿರುದ್ಧವಾಗಿ ಬಿಜೆಪಿ ಜತೆ ಸರಕಾರ ಮಾಡಿದ್ದೆ. ಇವತ್ತು ಅವರ ಒಪ್ಪಿಗೆಯ ಮೇರೆಗೆ ಪಡೆದು ಮೈತ್ರಿ ಮಾಡಿಕೊಳ್ಳುತ್ತಿದ್ದೇನೆ. 2006ರಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ಇರಲು ಕಾಂಗ್ರೆಸ್ ಹೂಡಿದ ಷಡ್ಯಂತ್ರವೇ ಕಾರಣ. ಆವತ್ತು ಶಾಸಕರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡಿಕೊಂಡು ಹೋದರವರು ಈಗ ಮುಸ್ಲಿಮರ ರಕ್ಷಣೆ ಮಾಡುವವನು ನಾನೇ ಅಂತ ಹೇಳುತ್ತಿದ್ದಾರೆ. ಮುಸ್ಲೀಮರ ರಕ್ಷಣೆ ಜವಾಬ್ದಾರಿ ಕೊನೆಗೆ ಇಬ್ರಾಹಿಂ ಅವರ ಹೆಗಲಿಗೇ ಬರುತ್ತದೆ.
2006ರ ಅಧ್ಯಾಯ ಮತ್ತೆ ಪುನರಾವರ್ತನೆ ಮಾಡಲು ನಿರ್ಧಾರ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡುತ್ತೇನೆ. ನಿಮ್ಮ ರಕ್ಷಣೆ, ನಾಡಿನ ರಕ್ಷಣೆ ಉದ್ದೇಶದಿಂದ ಹೊಸ ಅಧ್ಯಾಯ ಶುರು ಮಾಡುತ್ತಿದ್ದೇನೆ. ಏಳಿ ಎದ್ದೇಳಿ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ ಮುನ್ನಡೆಯೋಣ.
ಕಾಂಗ್ರೆಸ್ಸಿನವರ ಅಹಂಕಾರವನ್ನು ಮಟ್ಟ ಹಾಕಲಿಕ್ಕಾಗಿಯೇ ಈ ನಿರ್ಧಾರ ಮಾಡಿದ್ದೇವೆ. ಅದರ ಹೊರತಾಗಿ ಯಾರನ್ನೂ ಮೂಲೆಗುಂಪು ಮಾಡುವ ಉದ್ದೇಶ ನಮ್ಮದಲ್ಲ. ʼಸಿ.ಎಂ.ಇಬ್ರಾಹಿಂ ಅವರೇ ಯಾವತ್ತೂ ಪಕ್ಷ ನಿಮ್ಮ ಕೈ ಬಿಡುವುದಿಲ್ಲ. ನೀವು ಅಧಿಕಾರ ಬಿಟ್ಟು ಬಂದಿದ್ದೀರಾ. ನಿಮಗೆ ನಾವು ಕೈ ಬಿಡುವುದಿಲ್ಲʼ.
ಇವತ್ತಿನ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜನತಾ ಪರಿವಾರದ ಕೊಂಡಿಗಳೇ. ಎರಡೂ ಪಕ್ಷಗಳು ಲೋಕನಾಯಕ ಜಯಪ್ರಕಾಶ ನಾರಾಯಣರ ಹೋರಾಟದ ಫಲವಾಗಿ ಹುಟ್ಟಿದವು. ತುರ್ತು ಪರಿಸ್ಥಿತಿ ವಿರುದ್ಧ ಒಟ್ಟಾಗಿ ಹೋರಾಡಿವೆ. ಎಮರ್ಜೆನ್ಸಿ ವಿರುದ್ದವೇ ಜನತಾ ಪರಿವಾರ ಹುಟ್ಟಿತು. ಆದರೆ, ಜನತಾ ಪರಿವಾರದ ಅನೇಕರು ಇಂದು ಎಲ್ಲಾ ಕಡೆ ಸುತ್ತಾಡಿ ಅಧಿಕಾರದ ಸವಿ ಉಂಡು ಈಗ ಕಾಂಗ್ರೆಸ್ ಜತೆ ಕೂತಿದ್ದಾರೆ. ಅಂಥವರಿಗೆ ಯಾವ ನೈತಿಕತೆ ಇದೆ? ನಿಮಗೆ ಯಾವ ನೈತಿಕತೆ ಇದೆ ಇವರಿಗೆ ದೇವೇಗೌಡರ ಬಗ್ಗೆ ಮಾತಾಡೋಕೆ?
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ಅಲ್ಕೋಡ್ ಹನುಮಂತಪ್ಪ, ಕೋರ್ ಕಮಿಟಿ ಸಂಚಾಲಕ ವೈಎಸ್ ವಿ ದತ್ತಾ, ಮಾಜಿ ಉಪ ಸ್ಪೀಕರ್ ಕೆ.ಎಂ.ಕೃಷ್ಣಾರೆಡ್ಡಿ, ಶಾಸಕಿ ಕರೆಮ್ಮ ನಾಯಕ್ ಮುಂತಾದವರು ಮಾತನಾಡಿದರು. ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಹೆಚ್.ಡಿ.ರೇವಣ್ಣ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾಪೂರ್ಯಾ ನಾಯಕ್, ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿ ಎಲ್ಲಾ ಶಾಸಕರು, ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಹಾಜರಿದ್ದರು.