895344e0 5518 43cb a38f 29f6eac7709e

ದೇಶಕ್ಕೆ ಮಾರಕವಾದ ವರ್ಷ,ಕೇಂದ್ರ ,ರಾಜ್ಯದಲ್ಲಿ ಅಧಿಕಾರದಲ್ಲಿರುವವರೇ ಕಾರಣ – ಡಿಕೆಶಿ

STATE POLATICAL

ಕೇವಲ ಪ್ರಾಕೃತಿಕವಾಗಿ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವವರೂ ಕೂಡ ಈ ಮಾರಕಕ್ಕೆ ಕಾರಣ. ಆಡಳಿತದಲ್ಲಿನ ವೈಫಲ್ಯ, ಕಳಪೆ ನಾಯಕತ್ವದಿಂದ ದೇಶದಲ್ಲಿ ಪ್ರತಿಯೊಬ್ಬನ ಜೀವನ ನಾಶವಾಗುವಂತೆ ಮಾಡಿದೆ. ಜನ ಹಸಿವಿನಿಂದ ಸಾಯುತ್ತಿದ್ದಾರೆ.

ಬೆಂಗಳೂರು ಮೇ ೩೦:-ಈ ವರ್ಷ ದೇಶಕ್ಕೆ ಮಾರಕವಾದ ವರ್ಷ. ಕೇವಲ ಪ್ರಾಕೃತಿಕವಾಗಿ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವವರೂ ಕೂಡ ಈ ಮಾರಕಕ್ಕೆ ಕಾರಣ. ಆಡಳಿತದಲ್ಲಿನ ವೈಫಲ್ಯ, ಕಳಪೆ ನಾಯಕತ್ವದಿಂದ ದೇಶದಲ್ಲಿ ಪ್ರತಿಯೊಬ್ಬನ ಜೀವನ ನಾಶವಾಗುವಂತೆ ಮಾಡಿದೆ. ಜನ ಹಸಿವಿನಿಂದ ಸಾಯುತ್ತಿದ್ದಾರೆ. ಕಾರ್ಮಿಕರನ್ನು ಅಸ್ಪೃಷ್ಯರಂತೆ ಕಾಣುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಸರ್ಕಾರಗಳು ವೈಫಲ್ಯವಾಗಿದ್ದು, ದೇಶವನ್ನು ಶೂನ್ಯಕ್ಕೆ ತಂದು ನಿಲ್ಲಿಸಿದ್ದಾರೆ.

ಸ್ವಾತಂತ್ರ ಪೂರ್ವದಲ್ಲಿನ ಹೋರಾಟಗಳ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಸ್ವಾತಂತ್ರಯ ಬಂದ ನಂತರ ದೇಶವನ್ನು ಕಟ್ಟಲು, ಪ್ರಜಾತಂತ್ರ ವ್ಯವಸ್ಥೆ ಉಳಿಸಿಕೊಳ್ಳಲು ಮಾಡಿದ ಹೋರಟದಿಂದ ಸಂವಿಧಾನ, ಗಣರಾಜ್ಯವನ್ನು ಕಂಡುಕೊಂಡೆವು. ಆದರೆ ಇಂದು ಈ ಸಂವಿಧಾನ ಹಾಗೂ ಗಣರಾಜ್ಯ ವ್ಯವಸ್ಥೆಯನ್ನೇ ಬದಲಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ.

ದೇಶದ ಆರ್ಥಿಕ ಪರಿಸ್ಥಿತಿ ಪ್ರತಿ ಹಂತದಲ್ಲೂ ಹದಗೆಡುತ್ತಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದ್ದು, ಇಂದು ಪ್ರತಿ ಡಾಲರ್ ಗೆ 75.52 ರೂಪಾಯಿಗೆ ತಲುಪಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಕುಸಿದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಕಚ್ಚಾ ತೈಲ ಬೆಲೆ ಐತಿಹಾಸಿಕ ಪ್ರಮಾಣದಲ್ಲಿ ಕುಸಿದಿದ್ದರೂ, ಅದರ ಲಾಭ ಜನರಿಗೆ ನೀಡದೇ ಕೇಂದ್ರ ಸರ್ಕಾರ ಸುಲಿಗೆ ಮಾಡುತ್ತಿದೆ. ಇದರ ಲಾಭ ಕೇವಲ ಸರ್ಕಾರ ಪಡೆದುಕೊಳ್ಳುತ್ತಿರುವುದು ಇದೇ ಮೊದಲು. ಭಾರತದಲ್ಲಿ ಸದ್ಯ ಪ್ರತಿ ಪೆಟ್ರೋಲ್ ಮೂಲ ಬೆಲೆ 18ರಿಂದ 20 ರೂಪಾಯಿ ಇದ್ದರೆ ಉಳಿದೆಲ್ಲವೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಟ್ಯಾಕ್ಸ್ ಹೆಸರಲ್ಲಿ ವಸೂಲಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವೇ ಪ್ರತಿ ಲೀಟರ್ ಗೆ ಸುಮಾರು 30 ರಿಂದ 33 ರೂಪಾಯಿಯಷ್ಟು ತೆರಿಗೆ ವಸೂಲಿ ಮಾಡುತ್ತಿದೆ.

1bca5c97 19ae 496c 9f85 950f866937e4

ಕೊರೋನಾ ಪೂರ್ವದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಜಿಡಿಪಿ ಶೇ.3.1ಕ್ಕೆ ಕುಸಿತ ಕಂಡಿತ್ತು. ಈಗ ಅದು ಮತ್ತಷ್ಟು ಕುಸಿತ ಕಂಡಿದೆ ಎಂದು ತಜ್ಞರು ಹೇಳುತ್ತಿರುವುದನ್ನು ಮಾಧ್ಯಮಗಳೇ ತೋರಿಸಿವೆ. ದೇಶದಲ್ಲಿ ಆಟೋಮೊಬೈಲ್, ಮ್ಯಾನ್ಯುಫ್ಯಾಕ್ಚರ್, ಕೃಷಿ, ರಿಯಲ್ ಎಸ್ಟೇಟ್, ಕನ್ಸ್ಟ್ರಕ್ಷನ್ ಸೇರಿದಂತೆ ಬಹುತೇಕ ಎಲ್ಲ ವಲಯಗಳೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ.

40 ವರ್ಷಗಳಲ್ಲೇ ದಾಖಲೆ ನಿರುದ್ಯೋಗ ಪ್ರಮಾಣ. ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.25ರಿಂದ ಶೇ.28ರವರೆಗೂ ತಲುಪಿದೆ. ನಮ್ಮ ದೇಶದ ಯುವ ಜನಾಂಗ ಅನೇಕ ಕನಸುಗಳನ್ನು ಇಟ್ಟುಕೊಂಡು ನಿಮ್ಮನ್ನು ಅಧಿಕಾರಕ್ಕೆ ತಂದರು. ಆದರೆ ನೀವು ಮಾಡಿದ್ದೇನೆ. ಇವರ ಉದ್ಯೋಗ ಕಿತ್ತುಕೊಂಡಿದ್ದೀರಿ.

ಕೇಂದ್ರ ಸರ್ಕಾರದ ಕಳೆದೊಂದು ವರ್ಷದ ಸಾಧನೆ ಎಂದರೆ ಅದು ಮತೀಯ ದ್ವೇಷಕ್ಕೆ ಕುಮ್ಮಕ್ಕು. ಸಿಎಎ ವಿಚಾರದಿಂದ ಹಿಡಿದು, ಕೊರೋನಾ ವಿಚಾರದವರೆಗೂ ಪ್ರತಿ ಹಂತದಲ್ಲೂ ಒಂದು ಕೋಮು, ಒಂದು ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಾ ದೇಶದ ಜನರಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಭಾರತದಲ್ಲಿ ಭಾರತೀಯನೇ ತನ್ನ ಪೌರತ್ವದ ಬಗ್ಗೆ ಪ್ರಶ್ನೆ ಮಾಡಿಕೊಳ್ಳುವಂತಹ ಸ್ಥಿತಿ ತಂದಿಟ್ಟರು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆಯೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ. ಜನ ಜಾಗೃತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಇಂತಹ ಕೀಳು ರಾಜಕಾರಣ ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಅವುಗಳನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ಯೋಗಸ್ಥರು ಮಾತ್ರವಲ್ಲ ಉದ್ಯೋಗದಾತರನ್ನು ಪರಿಗಣಿಸಿ ಎಂದು ಹೇಳಿದರೂ ಅವರಿಗೆ ಸರಿಯಾದ ನೆರವು ಸಿಕ್ಕಿಲ್ಲ. ಅವರಿಗೆ ಆರ್ಥಿಕ ನೆರವು ನೀಡುವುದನ್ನು ಬಿಟ್ಟು, ಸಾಲ ನೀಡುವುದಾಗಿ ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ಬುಲೆಟ್ ರೈಲು, ಸ್ಮಾರ್ಟ್ ಸಿಟಿ ಅಂತೆಲ್ಲಾ ಹೇಳಿದರೂ. ಎಲ್ಲಿವೆ ಅವೆಲ್ಲಾ? ಅದಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ. ಎಲ್ಲ ಸಂಸದರು ಗ್ರಾಮ ದತ್ತುಪಡೆಯಬೇಕು ಎಂದರು. ಒಂದು ರೂಪಾಯಿ ಕೊಡದೇ ಎಲ್ಲವನ್ನು ಸಂಸದರ ನಿಧಿಯಿಂದನೇ ಮಾಡಿ ಎಂದು ಹೇಳಲು ಇವರೇ ಬೇಕಾ?

ಕೊರೋನಾ ಪರಿಸ್ಥಿತಿ ನಿಭಾಯಿಸಲು ಪೂರ್ವ ತಯಾರಿ ನಡೆಸಲಿಲ್ಲ. ಕಾರ್ಮಿಕರು, ರೈತರಿಗೆ ನೆರವಾಗುವುದನ್ನು ಬಿಟ್ಟು. ಚಪ್ಪಾಳೆ ಹೊಡೆಸಿ, ಗಂಟೆ ಬಾರಿಸಿ, ದೀಪ ಹಚ್ಚಲು ಹೇಳಿದರು. ಈ ವಿಚಾರದಲ್ಲಿ ತಜ್ಞರನ್ನಾಗಲಿ, ಪ್ರತಿಪಕ್ಷಗಳನ್ನಾಗಲಿ ಸಂಪರ್ಕಿಸಿ ಸಲಹೆ ತೆಗೆದುಕೊಳ್ಳಲಿಲ್ಲ. ಸಲಹೆ ತೆಗೆದುಕೊಳ್ಳುವುದು ನಿಮಗೆ ಪ್ರತಿಷ್ಠೆಯ ವಿಚಾರವಾಯಿತು.

ಯಾವ ರೈತರಿಗೆ ಮಾರುಕಟ್ಟೆ ಕಲ್ಪಿಸಿ, ಎಷ್ಟು ಬೆಳೆ ಮಾರಾಟವಾಗಿ ಅವರಿಗೆ ಎಷ್ಟು ದುಡ್ಡು ಸಿಕ್ಕಿದೆ ಅಂತಾ ಪಟ್ಟಿ ನೀಡಲಿ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರನ್ನು ಅಸ್ಪೃಷ್ಯರಂತೆ ಕಂಡರು. ಕ್ಷೌರಿಕರು, ಆಟೋ, ಕ್ಯಾಬ್ ಚಾಲಕರು, ಮಡಿವಾಳರು ಸೇರಿದಂತೆ ಅನೇಕರ ಜೀವನ ಬೀದಿಗೆ ಬಿದ್ದಿದೆ. ಅವರಲ್ಲಿ ಯಾರಿಗೆ ಪರಿಹಾರ ಸಿಕ್ಕಿದೆ.

ಗ್ರಾಮ ಲೆಕ್ಕಿಗರು ಹಾಗೂ ಇತರೆ ಅಧಿಕಾರಿಗಳನ್ನು ಬಳಸಿಕೊಂಡು ಗ್ರಾಮಗಳಲ್ಲಿ ಯಾರಿಗೆ ನಷ್ಟ ಆಗಿದೆ ಎಂದು ಪರಿಶೀಲಿಸಿ, ವಿಡಿಯೋ ದಾಖಲೆ ಮಾಡಿಸಿ ಅಲ್ಲೇ ಚೆಕ್ ಬರೆದುಕೊಡಲು ನಿಮ್ಮಿಂದ ಸಾಧ್ಯವಾಗಲಿಲ್ಲ.

ಮಾನ್ಯ ಮುಖ್ಯಮಂತ್ರಿಗಳೇ ನೀವು ಪರಿಹಾರ ಘೋಷಿಸಿ ತಿಂಗಳಾಗುತ್ತಾ ಬಂದಿದೆ. ಈವರೆಗೂ ಯಾರಿಗಾದರೂ ಒಂದು ರೂಪಾಯಿ ತಲುಪಿದೆಯಾ. 24 ಗಂಟೆ ಕಾಲಾವಕಾಶ ನೀಡುತ್ತೇನೆ. ಯಾರಿಗೆ ಅದರ ಲಾಭ ಸಿಕ್ಕಿದೆ ನೀವೆ ಹೇಳಿ. ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದರೂ ಅಗತ್ಯ ಕ್ರಮ ಕೈಗೊಳ್ಳಲು ನಿಮ್ಮಿಂದ ಸಾಧ್ಯವಾಗಲಿಲ್ಲವಲ್ಲ.

ಕಾರ್ಮಿಕರು ಅವರ ಊರುಗಳಿಗೆ ಹೋಗಲು ಅನುಕೂಲ ಕಲ್ಪಿಸದೇ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಸಾರಿಗೆ, ರೈಲು ಸೇವೆ ನೀಡದೇ, ಕಾರ್ಮಿಕರು ನೂರಾರು ಕಿ.ಮೀ ನಡೆದುಕೊಂಡು ಹೋಗುವಂತೆ ಮಾಡಿದರು. ಏಪ್ರಿಲ್ ತಿಂಗಳಲ್ಲೇ ಲಾಕ್ ಡೌನ್ ನಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ಮೋದಿ ಸರ್ಕಾರದ ಸಾಧನೆ. ಕಾರ್ಮಿಕರನ್ನು ಪ್ರೀತಿಯಿಂದ ಕಾಣಲಿಲ್ಲ. ಅವರನ್ನು ಉಳಿಸಿಕೊಳ್ಲುವ ಪ್ರಯತ್ನ ಮಾಡಲಿಲ್ಲ.

ಬಿಜೆಪಿಯವರಿಗೆ ಅಧಿಕಾರ ಪ್ರಮುಖ ಆದ್ಯತೆ ಹೊರತು ಜನರ ಸೇವೆ ಅಲ್ಲ. ಅವರಿಗೆ ಜನರ ಸೇವೆ ಪ್ರಮುಖ ಆದ್ಯತೆ ಆಗಿದ್ದರೆ, ಅವರು ರೌತರು, ಕಾರ್ಮಿಕರ ವಿಚಾರದಲ್ಲಿ ಇಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಿರಲಿಲ್ಲ.

ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿರುವ ಮೋದಿ ಸರ್ಕಾರ ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರಗಳಿಗೆ ಒತ್ತಡ ಹೇರುವ ಮೂಲಕ ವಿದೇಶಿ ಕಂಪನಿಗಳ ಕೈಗೆ ರೈತರ ಜುಟ್ಟು ನೀಡುವ ಕುತಂತ್ರ ನಡೆಸಿದೆ. ಇದಕ್ಕೂ ಮುನ್ನ ಏಷ್ಯಾ ರಾಷ್ಟ್ರಗಳ ಮುಕ್ತ ಮಾರುಕಟ್ಟೆಗೆ ಮುಂದಾಗಿದ್ದ ಕೇಂದ್ರ ಸರ್ಕಾರ ವಿದೇಶಗಳ ಹಾಲು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತರಲು ಪ್ರಯತ್ನಿಸಿದರು. ಆಗ ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಮೆತ್ತಗೆ ಜಾರಿಕೊಂಡ ಮೋದಿ, ಈಗ ಕೃಷಿ ಕ್ಷೇತ್ರಕ್ಕೆ ಬಹುರಾಷ್ಟ್ರೀಯ ಕಂಪನಿಗಳನ್ನು ತಂದು ರೈತರನ್ನು ನಿಯಂತ್ರಿಸಲು ಅವಕಾಶ ನೀಡುತ್ತಿದ್ದಾರೆ.

ಲಾಕ್ ಡೌನ್ ಹೇರಿದ ಸರ್ಕಾರ ಈಗ ಅದರ ದುಷ್ಪರಿಣಾಮಗಳಿಗೆ ಕಾರ್ಮಿಕರನ್ನು ಬಲಿ ಕೊಡಲು ಮುಂದಾಗಿದೆ. ಮುಂದಿನ ಕೆಲ ವರ್ಷಗಳ ಕಾಲ ಕಾರ್ಮಿಕ ಕಾಯ್ದೆ ರದ್ದು ಮಾಡಿ ಅವರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದೆ. ಇದರಿಂದ ಕಾರ್ಮಿಕರನ್ನು ನಿಗದಿತ ಸಮಯಕ್ಕಿಂತ ಹೆಚ್ಚು ದುಡಿಸಿಕೊಳ್ಳಬಹುದು. ಕಾರ್ಮಿಕರನ್ನು ಕಂಪನಿಗಳು ಮನಸೋಇಚ್ಛೆ ಕೆಲಸದಿಂದ ತೆಗೆಯುವುದು ಸೇರಿದಂತೆ ಅನೇಕ ಕಾರ್ಮಿಕ ದೌರ್ಜನ್ಯಗಳಿಗೆ ಉತ್ತೇಜನ ನೀಡಲು ಮುಂದಾಗಿದೆ.

ನೆರೆ ವಿಚಾರದಿಂದ ಹಿಡಿದು, ನರೇಗಾ ಬಾಕಿ, ಆರ್ಥಿಕ ಹಣಕಾಸು ಹಂಚಿಕೆ, ಅನುದಾನದಿಂದ ಕೊರೋನಾ ವಿಚಾರದವರೆಗೂ ರಾಜ್ಯಕ್ಕೆ ಪ್ರತಿ ಹಂತದಲ್ಲೂ ಅನ್ಯಾಯ. ಹೀಗಾಗಿ ರಾಜ್ಯ ಹಾಗೂ ದೇಶದ ಜನರನ್ನು ದೇವರೇ ಕಾಪಾಡಬೇಕು.

ಮೋದಿ ಘೋಷಿಸಿರುವ 20 ಲಕ್ಷ ಕೋಟಿಯ ಸುಳ್ಳಿನ ಪ್ಯಾಕೇಜ್ ನಿಂದ ದೇಶದ ಜನಸಂಖ್ಯೆಯ ಶೇ. 10ರಷ್ಟು ಜನರಿಗೂ ಸಹಾಯವಾಗುವುದಿಲ್ಲ. ನರೇಗಾಗೇ ಶೇ.10ರಷ್ಟು ಹಣ ನೀಡಿದ್ದು ಬಿಟ್ಟರೆ ಉಳಿದೆಲ್ಲವೂ ಬ್ಯಾಂಕುಗಳಿಂದ ಸಾಲ ನೆರವು ನೀಡುತ್ತಾರಂತೆ. ಯಾವುದಾದರೂ ಬ್ಯಾಂಕ್ ಯಾರಿಗಾದರೂ ಸಹಾಯ ಮಾಡಿರುವ ಉದಾಹರಣೆ ಇದೆಯೇ. ಬ್ಯಾಂಕ್ ಗಳು ನೆರವು ನೀಡುವುದನ್ನು ಬಿಟ್ಟು ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ.

f0316cb9 c91c 432e 94ec d3fcaa97ff36 1

ಸಾರ್ವಜನಿಕ ವಲಯಗಳನ್ನು ಖಾಸಗಿಕಾರಣ ಮಾಡುವುದು ಯಾವ ಸಾಧನೆ?  ಸಾರ್ವಜನಿಕ ವಲಯಗಳನ್ನು ನಡೆಸಲಾಗದೇ ಖಾಸಗೀಕರಣ ಮಾಡುವುದು ನಿಮ್ಮ ವೈಫಲ್ಯ ಹಾಗೂ ದೌರ್ಬಲ್ಯಕ್ಕೆ ಸಾಕ್ಷಿ.

ಬಿಜೆಪಿ ಆಂತರಿಕ ವಿಚಾರ ನಮಗೆ ಬೇಡ

ಕಾಂಗ್ರೆಸ್ ಪಕ್ಷದ ನಾಯಕರಾಗಲಿ, ಪದಾಧಿಕಾರಿಗಳಾಗಲಿ ಅಥವಾ ಕಾರ್ಯಕರ್ತರಾಗಲಿ, ಅನ್ಯ ರಾಜಕೀಯ ಪಕ್ಷಗಳ ಆಂತರಿಕ ಬೆಳವಣಿಗೆಗಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

 

ಈ ವಿಚಾರಗಳ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷದ ಅಧ್ಯಕ್ಷನಾಗಿ ನಾನು ಮಾತ್ರ ಮಾತನಾಡುತ್ತೇನೆ. ಸದ್ಯ ಪಕ್ಷವನ್ನು ಮತ್ತಷ್ಟು ಸಂಘಟಿಸುವುದು ಮತ್ತು ಸದೃಢಗೊಳಿಸಬೇಕಿದ್ದು, ಇದು ನಮ್ಮ ಏಕೈಕ ಗುರಿಯಾಗಿರಬೇಕು. ಈ ಗುರಿಸಾಧನೆಯತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.

ನನ್ನ ಸಹೋದರ ಕೂಡ ನಿನ್ನೆ ಒಂದು ಕಡೆ ಹೇಳಿಕೆ ನೀಡಿದ್ದಾರೆ. ಅವರಿಗೂ ಸೇರಿ ಎಲ್ಲರಿಗೂ ಈ ವಿಚಾರವಾಗಿ ಸೂಚನೆ ನೀಡುತ್ತಿದ್ದೇನೆ. ಯಾರೂ ಬೇರೆ ಪಕ್ಷಗಳ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಬಾರದು ಎಂದು ಮಾಧ್ಯಮಗಳ ಮೂಲಕ ತಿಳಿಸುತ್ತೇನೆ.