ಲೋಡ್ ಶೆಡ್ಡಿಂಗ್ ವಿರೋಧಿಸಿ. ಜೆಡಿಎಸ್ ಪ್ರತಿಭಟನೆ.
ಪಾವಗಡ : ಲೋಡ್ ಶೆಡ್ಡಿಂಗ್ ವಿರೋಧಿಸಿ
ಜೆ ಡಿ.ಎಸ್ ಪಕ್ಷ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಿಂದ ಆಗಮಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಗ್ರೇಡ್2 ತಹಶೀಲ್ದಾರ್ ಮೂರ್ತಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ, ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್ ಸಿ ಅಂಜಿನಪ್ಪ ಮಾತನಾಡಿ.ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನಲ್ಲಿ ಲೋಡ್ ಶೆಡ್ಡಿಂಗ್‌ನಿಂದ ರೈತರು ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
ಪ್ರತಿ ದಿನವೂ ಏಳುಗಂಟೆ ವಿದ್ಯುತ್ ಸರಬರಾಜು ಮಾಡಬೇಕಾಗಿದ್ದರೂ ಕೇವಲ ಒಂದೂವರೆ – ಎರಡು ಗಂಟೆಗಳ ಕಾಲ ನೀಡುತ್ತಿದ್ದಾರೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಫ್ಯಾಕ್ಟರಿಗಳಿಗೆ ಮಾತ್ರ ನಿರಂತರ ಜ್ಯೋತಿ ಮಾರ್ಗದಲ್ಲಿ ನೀಡುತ್ತಿದ್ದಾರೆ ಎಂದು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ತಾಲ್ಲೂಕಿಗೆ 200 ಮೆಗಾ ವ್ಯಾಟ್ ವಿದ್ಯುತ್ ಅನ್ನು ನೀಡಿ, ಉಳಿದ ವಿದ್ಯುತ್ತನ್ನು ಎಲ್ಲಿಗೆ ಬೇಕಾದರೂ ಸರಬರಾಜು ಮಾಡಿಕೊಳ್ಳಲಿ ಎಂದರು.
ರೈತರಿಗೆ ಬೆಳಗಿನ ಅವಧಿಯಲ್ಲಿಯೇ ವಿದ್ಯುತ್ ನೀಡಬೇಕು, ರಾತ್ರಿ ಅವಧಿ ನೀಡುವುದರಿಂದ ರೈತರು ಹಲವಾರು ತೊಂದರೆಗಳಿಗೆ ಒಳಪಡುತ್ತಾರೆ ಎಂದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ,
ಸರ್ಕಾರ ಮತ್ತು ಬೆಸ್ಕಾಂ ಇಲಾಖೆಗೆ ರೈತರ ಬಗ್ಗೆ ಕಾಳಜಿ ಇಲ್ಲ. ಸೋಲಾರ್ ನಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಮೊದಲು ತಾಲ್ಲೂಕಿಗೆ ನೀಡಬೇಕು,ಬೆಸ್ಕಾಂ ಇಲಾಖೆ ವಿದ್ಯುತ್ತನ್ನು ಸಕ್ರಮವಾಗಿ ಪೂರೈಸುವಲ್ಲಿ ವಿಫಲಗೊಂಡಿದೆ ಎಂದರು.
ರೈತರಿಗೆ, ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಪೂರೈಸಬೇಕೆಂದರು. ಟ್ರಾನ್ಸ್ಫಾರ್ಮರ್ ಸುಟ್ಟು ಹೋದರೆ 24 ಗಂಟೆಗಳಲ್ಲಿ ಸರಿಪಡಿಸಬೇಕೆಂದು ತಿಳಿಸಿದರು.
ತಾಲೂಕಿನಲ್ಲಿ ಬರದ ಛಾಯೆ ಇರುವುದರಿಂದ ರೈತರಿಗೆ ಪ್ರತಿ ಎಕರೆ 10,000 ನಷ್ಟ ಪರಿಹಾರ ನೀಡಬೇಕು, ರೈತರು ರಾಷ್ಟ್ರಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲಗಳನ್ನು ಸಂಪೂರ್ಣವಾಗಿ ಸಾಲ ಮನ್ನಾ ಮಾಡಬೇಕು .
ಜಾನುವಾರುಗಳ ಮೇವಿಗೆ ಗೋಶಾಲೆ ಆರಂಭಿಸಬೇಕು, ಜಲಜೀವನ ಮಿಷನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದರು.
ಪ್ರತಿಭಟನೆಯಲ್ಲಿ ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಈರಣ್ಣ, ಮಹಾಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಗೋವಿಂದ್ ಬಾಬು, ಬಲರಾಮ್ ರೆಡ್ಡಿ , ಚನ್ನ ಮಲ್ಲಪ್ಪ,
ಗಡ್ಡಂ ತಿಮ್ಮರಾಜು ,ಮನು ಮಹೇಶ್, ಮಣಿ, ವೆಂಕಟೇಶ್, ಮುಂತಾದವರು ಹಾಜರಿದ್ದರು..
ವರದಿ. ಶ್ರೀನಿವಾಸಲು.ಎ