IMG 20231028 WA0024

Karnataka: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ 34,000 ಕೋಟಿ ಮೀಸಲು…!

Genaral STATE

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ರೂ. 34,000 ಕೋಟಿ ಮೀಸಲು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 28 (ಕರ್ನಾಟಕ ವಾರ್ತೆ):-
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಪ್ರಸಕ್ತ ವರ್ಷದ ಆಯವ್ಯಯದಲ್ಲಿ ರೂ. 34,000 ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು, ಈ ವರ್ಗದ ಜನರ ಅಭಿವೃದ್ಧಿ ಹಾಗೂ ಹಕ್ಕನ್ನು ಕಾಪಾಡಲು ಸರ್ಕಾರ ಸದಾ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂದು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡುವ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನವನ್ನು ಕೈಗೊಂಡ ಕಾರಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ವಿಶೇಷ ಅನುದಾನ ಖರ್ಚು ಮಾಡಲು ಸಾಧ್ಯವಾಯಿತು ಎಂದರು.
ಪ್ರತ್ಯೇಕವಾಗಿ ಈ ವರ್ಗದ ಜನರಿಗೆ ವಿಶೇಷ ಅನುದಾನ ಮೀಸಲಿಡುವ ಬಗ್ಗೆ ಕಾನೂನು ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದ್ದು, ಯಾವುದೇ ಸರ್ಕಾರಗಳು ಬಂದರೂ ಈ ಕಾನೂನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಜನ ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿಯಾಗಲಿ. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಪ್ರತಿ ಸಾಧಕರಿಗೆ ರೂ. 5 ಲಕ್ಷ ನಗದು ಮತ್ತು 20 ಗ್ರಾಂ ಚಿನ್ನದ ಪದಕ ನೀಡಲಾಗಿದೆ ಎಂದು ತಿಳಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಈ ಶುಭಾ ದಿನದಂದು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಲಾಗಿದ್ದು, ವಿಕಾಸಸೌಧದ ಕೊಠಡಿ ಸಂಖ್ಯೆ 228ರಲ್ಲಿ ಇದಕ್ಕಾಗಿ ಕಚೇರಿಯನ್ನು ಸಹಾ ಇಂದು ಉದ್ಘಾಟಿಸಲಾಗಿದ್ದು, ಇದರ ಉಪಯೋಗವನ್ನು ಜನರು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಶ್ರೀ ಮಹರ್ಷಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಸಹಕಾರ ಸಚಿವ ಕೆ. ಎನ್. ರಾಜಣ್ಣ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಉಗ್ರಪ್ಪ, ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.