ಕಾಂಗ್ರೆಸ್ ಸರಕಾರ 5 ವರ್ಷ ಇದ್ದರೆ ರಾಜ್ಯದ ಸಾಲದ ಪ್ರಮಾಣ 10 ಲಕ್ಷ ಕೋಟಿ ರೂಪಾಯಿಗೆ ಏರಿಕೆ!!
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಹೆಚ್.ಡಿ.ಕುಮಾರಸ್ವಾಮಿ ಕಳವಳ
ಗ್ಯಾರಂಟಿಗಳು ಹಳ್ಳ ಹಿಡಿದಿವೆ; ಶಕ್ತಿ ಯೋಜನೆಯ ಸುಳ್ಳಿನ ಟಿಕೆಟ್ ಹಣವನ್ನು ಯಾವ ರಾಜ್ಯಕ್ಕೆ ಕೊಡುತ್ತಿದ್ದೀರಿ? ಎಂದು ಪ್ರಶ್ನೆ*
ಹಾಸನ: ಈ ಸರಕಾರ ಇನ್ನೂ 5 ವರ್ಷ ಇದ್ದರೆ ರಾಜ್ಯದ ಸಾಲದ ಪ್ರಮಾಣ 10 ಲಕ್ಷ ಕೋಟಿ ರೂಪಾಯಿ ಗಡಿ ದಾಟಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ; ಮುಖ್ಯಮಂತ್ರಿ ಟಾಂಗ್ ಕೊಟ್ಟಿರುವ ಅವರು, ವಿಶ್ವಮಾನ್ಯತೆ ಪಡೆದ ವಿತ್ತ ತಜ್ಞರು ನಮ್ಮ ಮುಖ್ಯಮಂತ್ರಿಗಳು. ಅವರ ಸರಕಾರದಲ್ಲಿ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನುವಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಹಾಸನದಲ್ಲಿ ಇಂದು ಪಕ್ಷದ ಶಾಸಕರ ಜತೆಯಲ್ಲಿ ಶ್ರೀ ಹಾಸನಾಂಬೆ ದರ್ಶನ ಪಡೆದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಆರ್ಥಿಕವಾಗಿ ಅಪಾಯದ ಪರಿಸ್ಥಿತಿ ಎದುರಿಸುತ್ತಿದೆ. ಅಸಮರ್ಪಕ ನಿರ್ವಹಣೆಯಿಂದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದ ಸಾಲದ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂದು ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.
135 ಸ್ಥಾನ ಸಿಕ್ಕರೂ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ನಗಬೇಕೊ,ಅಳಬೇಕೋ ಗೊತ್ತಾಗುತ್ತಿಲ್ಲ. ಬರಗಾಲಕ್ಕೆ ಸಂಬಂಧಿಸಿದಂತೆ ಲಘುವಾಗಿ ಮಾತನಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೆಚ್ ಡಿಕೆ ತರಾಟೆಗೆ ತೆಗೆದುಕೊಂಡರು.
ಒಂದು ಗ್ಯಾರಂಟಿ ಜಾರಿ ಆಗಿಲ್ಲ. ಜಾರಿ ಆಗಿರುವ ಗ್ಯಾರಂಟಿಗಳಿಂದ ಜನರಿಗೆ ಉಪಯೋಗ ಆಗುತ್ತಿಲ್ಲ. ಪ್ರಚಾರದಲ್ಲಿ ಈ ಸರಕಾರ ಕಾಲ ಕಳೆಯುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಹಾಸನದಲ್ಲಿ ಗೃಹಲಕ್ಷ್ಮಿ ಯೋಜನೆ 90% ಮಹಿಳೆಯರಿಗೆ ತಲುಪಿಲ್ಲ ಎಂದು ಅಧಿಕಾರಿಗಳ ಜತೆ ನಿನ್ನೆಯ ದಿನ ಸಿಎಂ ಚರ್ಚೆ ನಡೆಸಿದ್ದಾರೆ. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಮಾತ್ರ ಕಾಣುವುದು ಎನ್ನುವ ಶಾಸಕ ಶಿವಲಿಂಗೇಗೌಡ ಅವರ ಅರಸಿಕೆರೆ ಕ್ಷೇತ್ರದಲ್ಲಿಯೇ ಈ ಸರಕಾರದ ಕನಸಿನ ಯೋಜನೆ ಗೃಹಲಕ್ಷ್ಮಿ ಯಶಸ್ವಿಯಾಗಿ ತಲುಪಿಲ್ಲ ಎಂದು ಅಧಿಕಾರಿಗಳ ಜತೆ ಚರ್ಚೆ ಸ್ವತಃ ಸಿಎಂ ನಡೆಸಿದ್ದಾರೆ. ಈ ಗ್ಯಾರಂಟಿಗಳ ಹಣೆಬರಹ ಏನಾಗಿದೆ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಶಕ್ತಿ ಯೋಜನೆಗೆ ಹಣ ಒದಗಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಈಗಾಗಲೇ ಆ ದುಡ್ಡು ಸ್ವಾಹಾ ಆಗುತ್ತಿದೆ. ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ಬೇಕಾಬಿಟ್ಟಿ ಟಿಕೆಟ್ ಹರಿಯಲಾಗುತ್ತಿದೆ,
ವಿಡಿಯೋಗಳೆ ಸಾಕ್ಷಿಗೆ ಇವೆ. ಈ ಯೋಜನೆಯಡಿ ಪ್ರಯಾಣಿಕರ ಸಂಖ್ಯೆ ಏರುತ್ತಿದೆಯೋ? ಅಥವಾ ನಿಮ್ಮ ಸರಕಾರ ಮತ್ತು ಅಧಿಕಾರಿಗಳು ಹೆಣ್ಣುಮಕ್ಕಳ ಪ್ರಯಾಣದ ಸುಳ್ಳು ಲೆಕ್ಕ ತೋರಿಸಿ ಆ ಟಿಕೆಟ್ ಹಣವನ್ನು ಯಾವ ರಾಜ್ಯಕ್ಕೆ ಕಳುಹಿಸುತ್ತಿದ್ದಿರೋ? ಇದು ನಿಮ್ಮ ಸರಕಾರದ ಕಾರ್ಯಕ್ರಮಗಳ ದುಸ್ಥಿತಿ. ಇಂದಿರಾ ಕ್ಯಾಂಟಿನ್ ಗತಿ ಕೂಡ ಇದೇ ಆಗಿದೆ ಎಂದು ಅವರು ಕಿಡಿ ಕಾರಿದರು.
ಬಿಜೆಪಿಯವರು 25 ಜನ ಇದ್ದಾರೆ, ಕೇಂದ್ರದಿಂದ ಅನುದಾನ ತರಲಿ ಎನ್ನುವ ಕಾಂಗ್ರೆಸ್ ಪಕ್ಷವು ಮೊದಲು ರಾಜ್ಯ ಸರಕಾರದ ಬಗ್ಗೆ ಮಾತನಾಡಲಿ. ಮೊದಲು ನಿಮ್ಮ ಕೆಲಸ ನೀವು ಮಾಡಿ ಎಂದು ಕುಟುಕಿದ ಅವರು; ಬರ ವೀಕ್ಷಣೆಗೆ ಅಂತ ಟಾಸ್ಕ್ ಫೋರ್ಸ್ ಸಿದ್ದ ಮಾಡಿದ್ದಾರೆ. ಇದು ಬರ ವೀಕ್ಷಣೆಗೆ ಅಂತ ಸಿದ್ದಗೊಳಿಸಿರುವ ತಂಡವಲ್ಲ, ಯಾವ ಜಿಲ್ಲೆಯಲ್ಲಿ ಯಾರು ಸಮರ್ಥ ನಾಯಕರಿದ್ದರೆ, ಅವರನ್ನು ಹುಡುಕಿ ಅವರನ್ನು ಹೇಗೆ ಬಲೆ ಕೆಡವಬೇಕು ಎಂದು ಹೇಳಿ ಕಳಿಸಿಕೊಟ್ಟ ತಂಡಗಳಿವು ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಹಿರಿಯ ಶಾಸಕ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿರಿಯ ನಾಯಕರು ಹಾಜರಿದ್ದರು.
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೋ ನೋಡೊಣ
ಸರಕಾರದ ಭವಿಷ್ಯವನ್ನು ಕಾಣದ ಶಕ್ತಿ ತೀರ್ಮಾನ ಮಾಡಲಿದೆ!!
ಕಾಂಗ್ರೆಸ್‌ಗೆ 1994ರ ಪರಿಸ್ಥಿತಿ ಮರುಕಳಿಸುವುದು ದೂರವಿಲ್ಲ ಎಂದ ಮಾಜಿ ಸಿಎಂ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುತ್ತಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ಟೀಕಾಪ್ರಹಾರ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಸರಕಾರದ ಭವಿಷ್ಯದ ಬಗ್ಗೆ ಮಾರ್ಮಿಕವಾಗಿ ಹೇಳಿದರು.
ಹಾಸನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; ‘ಎಲ್ಲರನ್ನೂ ಕರೆದುಕೊಂಡು ಹೋಗಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. I.N.D.I.A ಮೈತ್ರಿಕೂಟದಿಂದಲೇ ಒಬ್ಬೊಬ್ಬರಾಗಿ ಕಿತ್ತುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಕುತಂತ್ರಿಗಳು ಎಂದು ಹೇಳಿ ಅಖಿಲೇಶ್ ಯಾದವ್ ಹೊರಗೆ ಕಾಲಿಟ್ಟಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಆಮೇಲೆ ನಮ್ಮನ್ನು ಕರೆದೊಯ್ಯವಿರಂತೆ ಎಂದು ಟೀಕಿಸಿದರು.
ಇದೆಲ್ಲ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಈ ಹಿಂದೆ ಏನೆಲ್ಲ ಆಗಿದೆ ಎಂದು ನೋಡಿದ್ದೇವೆ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾದಾಗ ಬಿಜೆಪಿಯಿಂದ ಅಂದು ಯಾರನ್ನೆಲ್ಲ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದರು, 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಯಾರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡರು? ಕೊನೆಗೆ 78 ಸ್ಥಾನಗಳಿಗೆ ಬಂದು ನಿಂತರು. 1989ರಲ್ಲಿ 180 ಸ್ಥಾನ ಪಡೆದು ಆಳ್ವಿಕೆ ಮಾಡಿದ್ದ ನೀವು, 1994ರಲ್ಲಿ 38 ಸಂಖ್ಯೆಗಳಿಗೆ ಕುಸಿದಿದ್ದಿರಿ. ಆ ದಿನ ದೂರವಿಲ್ಲ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಕಾಣದ ಶಕ್ತಿ ಇದೆ, ದೇವರು ಎಲ್ಲಿವರೆಗೂ ಪಾಪ ಮಾಡುವವರನ್ನು ನೋಡಿಕೊಂಡು ಕೂರುತ್ತಾನೆ?ಯಾವುದೋ ಒಂದು ಶಕ್ತಿ ಕೊನೆಗೆ ತೀರ್ಮಾನ ಮಾಡುತ್ತದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಏನಾಗುತ್ತದೆ ಎಂದು ನೋಡೊಣ ಎಂದು ಮಾರ್ಮಿಕವಾಗಿ ಹೇಳಿದರು ಮಾಜಿ ಮುಖ್ಯಮಂತ್ರಿ ಅವರು.