ಲೋಕಸಭಾ ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಅಖಿಲ ಭಾರತ ರೆಡ್ಡಿ ಸಮಾವೇಶ : ಪೂರ್ವ ಭಾವಿ ಸಭೆಗೆ ಹಲವು ರಾಜ್ಯಗಳ ಮುಖಂಡರು ಭಾಗಿ
ರೆಡ್ಡಿ ಜನಾಂಗದ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ – ರಾಮಲಿಂಗಾ ರೆಡ್ಡಿ
ಬೆಂಗಳೂರು, ನ, 19; ರೆಡ್ಡಿ ಸಮುದಾಯದ ಹಲವು ಬೇಡಿಕೆಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಈಡೇರಿಸಿದ್ದು, ರೆಡ್ಡಿ ಜನಾಂಗದ ಸಮಗ್ರ ಶ್ರೇಯೋಭಿವೃದ್ಧಿಗೆ ಹಾಲಿ ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಲಿಂಗಾ ರೆಡ್ಡಿ ಹೇಳಿದ್ದಾರೆ.
ಕೋರಮಂಗಲದ ಕರ್ನಾಟಕ ರೆಡ್ಡಿ ಜನಸಂಘ ಆವರಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಅಂದರೆ ಬರುವ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ “ಅಖಿಲ ಭಾರತ ರೆಡ್ಡಿ ಸಮಾವೇಶದ ಪೂರ್ವಭಾವಿ ಸಭೆ”ಯಲ್ಲಿ ಮಾತನಾಡಿದ ಅವರು, ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಅಧ್ಯಯನ ಪೀಠಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದರು. ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಪ್ರತಿಮೆ ವಿಧಾನಸೌಧ ಆವರಣದಲ್ಲಿ ಸ್ಥಾಪಿಸಿ ಪ್ರಮುಖ 8 ಬೇಡಿಕೆಗಳಲ್ಲಿ 6 ಬೇಡಿಕೆಗಳನ್ನು ಈಡೇರಿಸಲಾಗಿದೆ. ರಾಷ್ಟ್ರಮಟ್ಟದ ಸಮಾವೇಶದಲ್ಲಿ ರೆಡ್ಡಿ ಜನಾಂಗದ ಉಳಿದ ಬೇಡಿಕೆಗಳ ಈಡೇರಿಕೆಗಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ವೇಮನಾನಂದ ಸ್ವಾಮೀಜಿ ಮಾತನಾಡಿ, ರಾಷ್ಟ್ರಮಟ್ಟದ ಸಮಾವೇಶ ಯಶಸ್ಸಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ರೆಡ್ಡಿ ಜನಾಂಗದ ಶಕ್ತಿ ಮತ್ತು ಸಾಮರ್ಥ್ಯವನ್ನು ದೇಶಕ್ಕೆ ತೋರಿಸಲು ಇದು ಉತ್ತಮ ಅವಕಾಶವಾಗಿದೆ. ಅಖಿಲ ಭಾರತ ರೆಡ್ಡಿ ಫೆಡರೇಷನ್ ಸ್ಥಾಪನೆ ಮಾಡುವ ಮೂಲಕ ನಮ್ಮ ಜನಾಂಗ ಮತ್ತಷ್ಟು ಸಂಘಟಿತರಾಗಲು ಇದು ಸಕಾಲ. ಎಂದು ಹೇಳಿದರು.
ಕರ್ನಾಟಕ ರೆಡ್ಡಿ ಜನಸಂಘದ ರಾಜ್ಯಾಧ್ಯಕ್ಷ ಎಸ್. ಜಯರಾಮರೆಡ್ಡಿ ಮಾತನಾಡಿ, ರಾಷ್ಟ್ರಮಟ್ಟದ ಸಮಾವೇಶದ ರೂಪರೇಷೆಗಳನ್ನು ಸಿದ್ಧಪಡಿಸುವ ಸಭೆಗೆ ತಮಿಳುನಾಡು, ಕೇರಳ, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾದಿಂದ ಸಮುದಾಯದ ಮುಖಂಡರು ಆಗಮಿಸಿದ್ದು, ಇದು ಶುಭ ಸೂಚನೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ರೆಡ್ಡಿ ಜನಾಂಗವನ್ನು ಮಂಚೂಣಿಗೆ ತರುವುದು ತಮ್ಮ ಪರಮಗುರಿಯಾಗಿದೆ. ಇದೇ ಉದ್ದೇಶಕ್ಕಾಗಿ ರಾಷ್ಟ್ರಮಟ್ಟದ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಿ. ವೆಂಕಟಶಿವಾ ರೆಡ್ಡಿ, ಕೆ.ಎನ್. ಕೃಷ್ಣಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರೊ.ಪಿ. ಸದಾಶಿವ ರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.