Session Photos 10

ವಿಧಾನಸಭೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಂಜೂರಾಗಿರುವ ಜಮೀನುಗಳನ್ನು ಪರಭಾರೆಗೆ ನಿಯಮಾನುಸಾರ ಅನುಮತಿ….!

Genaral STATE

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾಗಿರುವ ಜಮೀನುಗಳನ್ನು ಪರಭಾರೆಗೆ ನಿಯಮಾನುಸಾರ ಅನುಮತಿ-  ಕೃಷ್ಣ ಭೈರೇಗೌಡ

ಬೆಂಗಳೂರು ಜುಲೈ-22 (ಕರ್ನಾಟಕ ವಾರ್ತೆ)
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸರ್ಕಾರದಿಂದ ತಮಗೆ ಮಂಜೂರಾಗಿರತಕ್ಕಂತಹ ಜಮೀನುಗಳನ್ನು ಪರಭಾರೆ ಮಾಡಬಾರದು. ಒಂದು ವೇಳೆ ಜಮೀನು ಪರಭಾರೆ ಮಾಡಬೇಕಾದ್ದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಮಾಯಕರು ಬಡವರು ಆರ್ಥಿಕ ಮುಗ್ಗಟ್ಟಿನಿಂದ ಬಡತನದ ಹಿನ್ನೆಲೆಯಲ್ಲಿ ತಮಗೆ ಮಂಜೂರಾದ ಜಮೀನನ್ನು ಕಳೆದುಕೊಳ್ಳಬಾರದು ಎಂಬುದು ಸರ್ಕಾರದ ಒಟ್ಟಾರೆ ಆಶಯ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರು ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ವಿಧಾನಸಭೆಯಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಅವರ ಪ್ರಶ್ನೆಗೆ   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮಗೆ ಮಂಜೂರಾಗಿರತಕ್ಕಂತಹ ಜಮೀನುಗಳನ್ನು ಪರಭಾರೆ ಮಾಡಬಾರದು ಎಂಬುದು, ಒಂದು ವೇಳೆ ಪರಬಾರೆ ಮಾಡಲು ಇಚ್ಛಿಸಿದಲ್ಲಿ ಸರ್ಕಾರದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾದ ಜಮೀನನ್ನು ಪರಭಾರೆ ಮಾಡಲು ಈ ಹಿಂದೆ ಹಲವು ನ್ಯೂನ್ಯತೆಗಳಿದ್ದವು. ಯಾವುದೇ ರೂಪು ರೇಷೆಗಳಿರಲಿಲ್ಲ. ಈಗ ಸರ್ಕಾರದಿಂದ ಒಂದು ಮಾನದಂಡ ರೂಪಿಸಿದೆ. ಈಗ ಜಮೀನು ಪರಭಾರೆ ಮಾಡಲು ಒಂದು ಸ್ವರೂಪವನ್ನು ನಿಗಧಿಪಡಿಸಿ ಅರ್ಜಿಯ ವಿನ್ಯಾಸವನ್ನು ಸಿದ್ದಪಡಿಸಿದೆ. ಅದರಂತೆ ಅರ್ಜಿದಾರರು ಜಮೀನು ಪರಭಾರೆ ಮಾಡಲು ನಿಯಮಾನುಸಾರ ಅರ್ಜಿ ಭರ್ತಿ ಮಾಡಿ   ಸಲ್ಲಿಸಬೇಕಾಗಿರುತ್ತದೆ.

ರಾಜ್ಯವ್ಯಾಪಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮಗೆ ಮಂಜೂರಾಗಿರತಕ್ಕಂತಹ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರದ ಅನುಮತಿ ಕೋರಿ ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೂ 625 ಪ್ರಸ್ತಾವನೆಗಳನ್ನು ಸಲ್ಲಿಸಲ್ಪಟ್ಟಿವೆ. ಈ ಪ್ರಸ್ತಾವನೆಗಳ ಪೈಕಿ 408 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸದ 217 ಪ್ರಸ್ತಾವನೆಗಳನ್ನು ಸ್ಪಷ್ಟೀಕರಣ ಕೇಳಿ ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಉತ್ತರಿಸಿದರು.