ನಕಲಿ ವೈದ್ಯರ ನಿಯಂತ್ರಣಕ್ಕೆ ಕ್ರಮ – ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಜುಲೈ 22, (ಕರ್ನಾಟಕ ವಾರ್ತೆ) :ನಕಲಿ ವೈದ್ಯರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣ್ಣ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲಬುರಗಿ ನಗರದಲ್ಲಿ ಇದುವರೆಗೂ 23 ನಕಲಿ ವೈದ್ಯರನ್ನು ಗುರುತಿಸಲಾಗಿದೆ. ಕೆ.ಪಿ.ಎಂ.ಇ ನೋಂದಣಿ ಹಾಗೂ ವೈದ್ಯಕೀಯ ಅರ್ಹತೆ ಇಲ್ಲದೇ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್‍ಗಳನ್ನು ಮುಚ್ಚಿಸಿ ತಲಾ ರೂ 50,000/- ದಂಡ ವಿಧಿಸಲಾಗಿದೆ. ಕಲಬುರಗಿ ನಗರವನ್ನು ಹೊರತುಪಡಿಸಿ ಅಫಜಲಪೂರದಲ್ಲಿ 03, ಚಿಂಚೋಳಿಯಲ್ಲಿ 06, ಚಿತ್ತಾಪುರದಲ್ಲಿ 02, ಜೇವರ್ಗಿಯಲ್ಲಿ 08, ಆಳಂದದಲ್ಲಿ 12 ಮತ್ತು ಸೇಡಂ ತಾಲ್ಲೂಕಿನಲ್ಲಿ 04 ನಕಲಿ ವೈದ್ಯರನ್ನು ಗುರುತಿಸಿ ಸದರಿಯವರ ಕ್ಲಿನಿಕ್‍ಗಳನ್ನು ಮುಚ್ಚಿಸಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಲು ಕೆ.ಪಿ.ಇ.ಎಂ ಅಧಿನಿಯಮ 2007 ಸೆಕ್ಷನ್ 21ರಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳನ್ನು ಪ್ರಾಧಿಕೃತ ಅಧಿಕಾರಿಗಳನ್ನಾಗಿ ನೇಮಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಪ್ರಾಧಿಕೃತ ಅಧಿಕಾರಿಗಳು ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ನಕಲಿ ವೈದ್ಯರಾಗಿದ್ದಲ್ಲಿ ಕೆ.ಪಿ.ಇ.ಎಂ ತಿದ್ದುಪಡಿ ಅಧಿನಿಯ 2017 ಸೆಕ್ಷನ್ 19 (1)ರಂತೆ ನೋಂದಣಿ ಇಲ್ಲದ ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸಿದ್ದಲ್ಲಿ, ನಡೆಸುತ್ತಿದ್ದಲ್ಲಿ ಅಥವಾ ನಿರ್ವಹಿಸುತ್ತಿದ್ದಲ್ಲಿ ಅವರ ಅಪರಾಧ ನಿರ್ಣಯದ ನಂತರ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿರುತ್ತದೆ. ಅದರಂತೆ 2024ನೇ ಮೇ 22 ರಂದು ಕಲಬುರಗಿಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೆ.ಪಿ.ಇ.ಎಂ ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಕಲಬುರಗಿ ಜಿಲ್ಲೆಯ 58 ನಕಲಿ ವೈದ್ಯರ ವಿರುದ್ಧ ಒಟ್ಟು ರೂ. 25,60,000/- ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.