Session Photos Vidhana Parishath 12

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ :ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ

POLATICAL STATE
ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜುಲೈ 22, (ಕರ್ನಾಟಕ ವಾರ್ತೆ) : ತಪ್ಪಿತಸ್ಥರಿಗೆ ನಿಶ್ಚಿತವಾಗಿ ಶಿಕ್ಷೆ ಆಗಬೇಕು. ಇದರಲ್ಲಿ ಯಾವುದೇ ರೀತಿಯ ರಾಜಿ ಸಂದಾನ ನಮ್ಮ ಸರ್ಕಾರ ಮಾಡುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಹಣ ದುರುಪಯೋಗವಾಗಿರುವ ಕುರಿತು ನಿಯಮ 68ರ ಮೇರೆಗೆ ನಡೆದ ಚರ್ಚೆಗೆ ಸರ್ಕಾರದಿಂದ ಉತ್ತರ ನೀಡುತ್ತಾ ಮಾತನಾಡಿದ ಮುಖ್ಯಮಂತ್ರಿಗಳು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ 33 ಲಕ್ಷ ಅಕ್ರಮ ನೆಡೆದಿದೆ ಎಂದು ವಿರೋಧಪಕ್ಷದವರು ಆರೋಪಿಸಿದ್ದಾರೆ. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ವಿರುದ್ಧವಾಗಿದೆ ಎಂದು ಹೇಳಿ ಸತ್ಯಕ್ಕೆ ದೂರವಾದ ಆರೋಪ ಮಾಡಿದ್ದಾರೆ. ಆದರೆ ಅವರ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಿಳಿಸಿದರು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆ ಸರ್ಕಾರ ಆಗಲಿ, ಆರ್ಥಿಕ ಇಲಾಖೆಯಾಗಲಿ ಅಥವಾ ನನಗೆ ಯಾವುದೇ ರೀತಿಯ ಸಂಬಂಧ ಇಲ್ಲ. ಅಕ್ರಮ ನಡೆದಿರುವ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ. ತಪ್ಪಿತಸ್ಥರು ಗೊತ್ತಾಗಬೇಕು, ತನಿಖೆ ಮುಗಿದ ಮೇಲೆ ಚಾರ್ಜ್‍ಶೀಟ್ ಆಗಬೇಕು ನಂತರ ಆರೋಪ ಸಾಬೀತಾಗ ಬೇಕು. ಆರೋಪ ಸಾಬೀತಾದ ನಂತರ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ. ಸರ್ಕಾರವು ಎಲ್ಲಿಯೂ ರಾಜಿ ಸಂದಾನಗಳನ್ನು ಮಾಡಿಕೊಳ್ಳದೇ ನ್ಯಾಯಾಲಯದ ಮೂಲಕ ಶಿಕ್ಷೆ ಕೊಡಿಸಲಾಗುವುದು ಎಂದು ತಿಳಿಸಿದರು.Session Photos Vidhana Parishath 11
ವಿರೋಧ ಪಕ್ಷದವರು ಗೋಬೆಲ್ಸ್ ಥಿಯರಿಯನ್ನು ಬಳಸುತ್ತಿದ್ದಾರೆ. ಗೊಬೆಲ್ಸ್ ಹಿಟ್ಲರ್ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿದ್ದವರು, ಇವರನ್ನು ಸುಳ್ಳುಗಳನ್ನು ಹೇಳುವುದಕ್ಕಾಗಿಯೇ ಅವರ ಮಂತ್ರಿಮಂಡಲದಲ್ಲಿ ಇಟ್ಟುಕೊಂಡಿದ್ದರು. ಆ ತಂತ್ರಗಾರಿಕೆ ಬಳಸಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಯಾವಾಗಲೂ ಸುಳ್ಳು ಆರೋಪ ಮಾಡಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಇವರ ಜಾಯಮಾನ. ಸುಳ್ಳುಗಳನ್ನು ಸತ್ಯ ಮಾಡುವುದು ಕಷ್ಟ ಎಂದು ತಿಳಿಸಿದರು.
ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ, ಅಲ್ಪಸಂಖ್ಯಾತರ, ರೈತರ, ಮಹಿಳೆಯರ ಮತ್ತು ಕಾರ್ಮಿಕರ ವಿರುದ್ದವಾಗಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿರುವರು. ಅವರು ಯಾರೂ ಸಾಮಾಜಿಕ ನ್ಯಾಯದ ಪರವಾಗಿಲ್ಲ. ಸಂವಿಧಾನವನ್ನು ವಿರೋಧಿಸುವವರು ಅವರು. ಸಂವಿಧಾನವು ಎಲ್ಲರಿಗೂ ಜಾತಿ-ಭೇದ, ಭಾಷೆ ಪ್ರಾಂತ್ಯ ಎಲ್ಲವನ್ನು, ಎಲ್ಲರನ್ನೂ ಒಳಗೊಂಡಂತೆ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಆದರೆ ವಿರೋಧ ಪಕ್ಷದವರಿಗೆ ಅದರಲ್ಲಿ ನಂಬಿಕೆ ಇಲ್ಲ. ಸಂವಿಧಾನವನ್ನೇ ತಿದ್ದಲು ಹೊರಟವರು. ಈ ಹಗರಣವನ್ನು ತೆಗೆದುಕೊಂಡು ಸರ್ಕಾರಕ್ಕೆ ಮಸಿ ಬಳಿಯುವ ಕೆÀಲಸ ಮಾಡಲು ಹೊರಟಿದ್ದಾರೆ. ಆದರೆ ನಮ್ಮ ಸರ್ಕಾರ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ. ದೀನ ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ, ರೈತರ, ಕಾರ್ಮಿಕರ ಪರವಾದ ಸರ್ಕಾರ. ಎಲ್ಲರಿಗೂ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಡುವ ಸರ್ಕಾರ. ಈ ಹಗರಣದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆ ಆಗುತ್ತದೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
2013ರಲ್ಲಿ ಕರ್ನಾಟಕದಲ್ಲಿ ಎಸ್.ಟಿ.ಪಿ / ಟಿ.ಎಸ್.ಪಿ ಕಾಯಿದೆಯನ್ನು ಜಾರಿಗೆ ತಂದ ಸರ್ಕಾರ ಕಾಂಗ್ರೇಸ್ ಸರ್ಕಾರ. ಅದು ನಮ್ಮ ಸರ್ಕಾರ. ಇಡೀ ದೇಶದಲ್ಲಿ ಆಂಧ್ರ ಪ್ರದೇಶ ಮತ್ತು ತೆಲಾಂಗಣದಲ್ಲಿ ಈ ಕಾಯಿದೆ ಇದೆ. ಬೇರೆ ಯಾವ ರಾಜ್ಯದಲ್ಲಿಯೂ ಈ ಕಾಯಿದೆ ಇಲ್ಲ ಕೇಂದ್ರ ಸರ್ಕಾದಲ್ಲಿ ಈ ಕಾಯಿದೆಯನ್ನು ಜಾರಿ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು. ಈ ಕಾನೂನು ಮಾಡಿದವರು ನಾವು ಮೊದಲು 5 ಸಾವಿರ 6 ಸಾವಿರ ಮಾತ್ರ ಖರ್ಚು ಆಗುತ್ತಿತ್ತು. ನಮ್ಮ ಕಾಂಗ್ರೇಸ್ ಸರ್ಕಾರವು 2024-25ನೇ ಸಾಲಿನ ಆಯವ್ಯಯದಲ್ಲಿ 39121 ಕೋಟಿ ರೂಗಳನ್ನು  ಎಸ್.ಸಿ.ಪಿ / ಟಿಎಸ್.ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.
ಪ್ರತಿ ವರ್ಷ ಬಜೆಟ್ ಗಾತ್ರ ಹೆಚ್ಚಾಗಬೇಕು. ಪರಿಶಿಷ್ಟ ಜಾತಿಯವರು 17.15 ರಷ್ಟಿದ್ದಾರೆ. ಪರಿಶಿಷ್ಟ ಪಂಗಡದವರು 6.95 ರಷ್ಟಿದ್ದಾರೆ. ಒಟ್ಟು 24.1 ರಷ್ಟಿದ್ದಾರೆ. ಈ ವರ್ಷ ಬಜೆಟ್‍ನಲ್ಲಿ 169 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಖರ್ಚು ಮಾಡುತ್ತಿದ್ದರೆ, ಅದರಲ್ಲಿ 39 ಸಾವಿರ ಕೋಟಿಗಳನ್ನು ಎಸ್.ಟಿ.ಪಿ. / ಟಿ.ಎಸ್.ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವಂತಹ ಕೆಲಸಗಳನ್ನು ಮಾಡುತ್ತಿರುವುದು ನಮ್ಮ ಕಾಂಗ್ರೇಸ್ ಸರ್ಕಾರ ಮಾತ್ರ ಎಂದು ತಿಳಿಸಿದರು.
ಕಾಂಟ್ರಾಕ್ಟ್‍ನಲ್ಲಿ ಮೀಸಲಾತಿ ತಂದಿದ್ದು ನಮ್ಮ ಕಾಂಗ್ರೇಸ್ ಸರ್ಕಾರ. ಶ್ರೀಮತಿ ರತ್ನಪ್ರಭ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ, ಅವರಿಂದ ವರದಿ ಪಡೆದು ಬಡ್ತಿಯಲ್ಲಿ ಮೀಸಲಾತಿಯನ್ನು ತಂದಿದ್ದು ನಮ್ಮ ಸರ್ಕಾರ. ಕಾಯ್ದೆ ಜಾರಿ ಮಾಡಲು ವಿರೋಧ ಪಕ್ಷದವರು ಪಿ.ಟಿ.ಸಿ.ಎಲ್ ಕಾಯಿದೆಯನ್ನು ಜಾರಿ ಮಾಡಲಿಲ್ಲ. ಆದರೆ ಪಿಟಿ.ಸಿ.ಎಲ್ ಕಾಯಿದೆಯನ್ನು ಜಾರಿಗೆ ತಂದಿದ್ದು ನಾವು. ಎಲ್ಲರಿಗೂ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು. ಅರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತ್ರಂತ್ರವು ಸಾಕಾರವಾಗುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನಕ್ಕೂ ಮುನ್ನ ಮಾಡಿದ ಭಾಷಣದಲ್ಲಿ ಹೇಳಿರುವ ಮಾತುಗಳನ್ನು ಇದೇ ಸಮಯದಲ್ಲಿ ಮುಖ್ಯಮಂತ್ರಿಗಳು ಸದನದಲ್ಲಿ ತಿಳಿಸಿದರು.
ಇದೇ ಸಮಯದಲ್ಲಿ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಮುಖ್ಯಮಂತ್ರಿಗಳ ಉತ್ತರಕ್ಕೆ ವಿರೋಧ ವ್ಯಕ್ತಪಡಿಸಲಾರಂಭಿಸದರು. ನಂತರ ಮುಖ್ಯಮಂತ್ರಿಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಹಗರಣದ ಕುರಿತು ಮುಂದುವರೆದ ಉತ್ತರವನ್ನು ಲಿಖಿತ ರೂಪದಲ್ಲಿ ಸದನದಲ್ಲಿ ಮಂಡಿಸಿದರು.