IMG 20200806 220215

ರಾಜ್ಯದ ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮ….!

STATE Genaral

ರಾಜ್ಯದ ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮಕೈಗೊಳ್ಳಲಾಗಿದೆ
– ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು, ಆಗಸ್ಟ್ 6 (ಕರ್ನಾಟಕ ವಾರ್ತೆ) :
ರಾಜ್ಯದಲ್ಲಿ ಕಳೆದ ವಾರದಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ 19 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ಸಹ ಇದೇ ತಿಂಗಳಿನಲ್ಲಿ ಇಂತಹ ಪರಿಸ್ಥಿತಿ ಉಂಟಾಗಿತ್ತು, ಪ್ರಸ್ತುತ ಪರಿಸ್ಥಿತಿ ಕುರಿತು ಮುಂದಾಗಬಹುದಾದ ಪ್ರವಾಹ ಪರಿಸ್ಥಿತಿ ಎದುರಿಸಲು ಕಳೆದ ಏಪ್ರಿಲ್‍ನಿಂದ ವಿವಿಧ ಪೂರ್ವಭಾವಿ ಸಿದ್ಧತೆ ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು, ರಾಜ್ಯದ ಮಳೆ ಪರಿಸ್ಥಿತಿ, ಮಳೆ ಮುನ್ಸೂಚನೆ ಮತ್ತು ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಲಾಗುತ್ತಿದೆ.

ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಜಿಲ್ಲಾದಿಕಾರಿಗಳಿಗೆ ಇಂದಿನಿಂದ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಾವೇರಿ ತೀರದಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದ್ದು, ಜಲಾಶಯಗಳ ಒಳಹರಿವು ಹೆಚ್ಚಲಿದೆ. ಇಂದು ಮಧ್ಯಾಹ್ನದಿಂದ ನಾನು 11 ಜಿಲ್ಲೆಗಳ ಜಿಲ್ಲಾದಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿ ಮಾಹಿತಿ ಪಡೆದು ಮುನ್ನೆಚ್ಚೆರಿಕೆ ವಹಿಸಲು ಸೂಚನೆ ನೀಡಲಾಗಿದೆ.

IMG 20200806 220210

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ ಭಾಗದಲ್ಲಿ ಕೆಲವು ಮನೆಗಳು ಹಾಳಾಗಿದ್ದು, ಕೂಡಲೇ ರೂ.10,000/- ಪರಿಹಾರ ಪಾವತಿಸಲು ಸೂಚಿಸಿದ್ದೇನೆ. ಉಡುಪಿ ಜಿಲ್ಲೆಯ ಬೈಂದೂರು ಭಾಗದಲ್ಲಿ 150 ಮಿ.ಮೀ ವರೆಗೆ ಮಳೆ, ಮರಗಳು ಉರುಳಿದ್ದು ತೆರವುಗಳಿಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಮರಗಳು ಉರುಳಿದ್ದು, ಶಿವಮೊಗ್ಗದ ಕೆಲವು ಭಾಗದಲ್ಲಿ ಹೆಚ್ಚುಮಳೆಯಾಗಿದೆ. ಹಾಸನದಲ್ಲಿ ಯಾವುದೇ ಹಾನಿ ವರದಿಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಮರಗಳು ಉರುಳಿದ್ದು ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಜುಲೈ 25 ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಯಂತ್ರೋಪಕರಣಗಳನ್ನು ಖರೀಧಿಸಲು ಸಹ ಅನುಮತಿ ನೀಡಲಾಗಿದೆ. ಗ್ರಾಮಾಪಂಚಾಯತಿ ಮಟ್ಟದ ಯೋಜನೆ ರೂಪಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ.

ಮುಂದಿನ ಮೂರು ದಿನಗಳ ಮಳೆ ಮುನ್ಸೂಚನೆ:
1. ಕರಾವಳಿ ಭಾಗ: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಬಾರಿ ಮಳೆಯಾಗುವುದು ಮುನ್ಸೂಚನೆ ಇದೆ.
2. ಮಲೆನಾಡು ಭಾಗ: ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ
3. ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಬೀದರ್ ಹಾಗೂ ಕಲಬುರಗಿಯಲ್ಲಿ ಮಧ್ಯಮ ಮಳೆ
4. ದಕ್ಷಿಣ ಒಳನಾಡು: ದಾವಣಗೆರೆ, ಮೈಸೂರು, ಚಾಮರಾಜನಗರ ಮತ್ತು ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದ ಜಲಾಶಯಗಳು ಹಾಗೂ ಮಳೆಹಾನಿ ಕುರಿತು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅಂತರ ರಾಜ್ಯ ತಂಡವು ಮಹಾರಾಷ್ಟ್ರ ಜಲಾಶಯಗಳ ಹೊರಹರಿವಿನ ಬಗ್ಗೆ ಅಧ್ಯಯನ ನಡೆಸಲಿವೆ. ಎನ್‍ಡಿಆರ್‍ಎಫ್ ತಂಡವು ಕೊಡಗು, ಧಾರವಾಡ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬೇಟಿ ನೀಡುವುದು. ಎಸ್‍ಡಿಆರ್‍ಎಫ್ ತಂಡವು ಸಹ ಸಕ್ರೀಯವಾಗಿ ತೊಡಗಿಸಿಕೊಂಡಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.