IMG 20220204 WA0038

ಗಣರಾಜ್ಯೋತ್ಸವ:ಕರ್ನಾಟಕ ಸ್ತಬ್ಧಚಿತ್ರಕ್ಕೆ ಪ್ರಶಸ್ತಿಯ ಗರಿ….!

Genaral STATE

ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ –

ಕರ್ನಾಟಕ ಸ್ತಬ್ಧಚಿತ್ರಕ್ಕೆ ಪ್ರಶಸ್ತಿಯ ಗರಿ

ಬೆಂಗಳೂರು, ಫೆಬ್ರವರಿ 02, (ಕರ್ನಾಟಕ ವಾರ್ತೆ):
ಜನವರಿ 26 ರಂದು ಗಣರಾಜ್ಯೋತ್ಸವ ಸಮಾರಂಭದ ಸುಸಂದರ್ಭದಲ್ಲಿ ಕರ್ನಾಟಕ  ಸಾಂಪ್ರದಾಯಿಕ ಕರಕುಶಲ ಕಲೆಯ ತೊಟ್ಟಿಲು ಎಂಬ ವಿಷಯದ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಎರಡನೇ ಅತ್ಯುತ್ತಮ ಸ್ತಬ್ಧ ಚಿತ್ರ ಪ್ರಶಸ್ತಿ ಲಭಿಸಿದ್ದು, ಈ ಮಾಹಿತಿಯನ್ನು ರಾಜ್ಯದ ಜನತೆಯೊಂದಿಗೆ ಹಂಚಿಕೊಳ್ಳುವುದು ಹೆಮ್ಮೆ ವಿಷಯವಾಗಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ  ಎನ್ ಮಂಜುನಾಥ್ ಪ್ರಸಾದ್ ಮತ್ತು ಆಯುಕ್ತ  ಡಾ. ಪಿ ಎಸ್ ಹರ್ಷ ನೇತೃತ್ವದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಸುಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.  

IMG 20220204 WA0040
ಸ್ತಭ್ದ ಚಿತ್ರ

ಈ ಬಾರಿ ಆಯ್ಕೆಯಾದ 15 ರಾಜ್ಯಗಳ ಸ್ತಬ್ದಚಿತ್ರಗಳಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ಸ್ತಬ್ದಚಿತ್ರ ನಮ್ಮ ಕರ್ನಾಟಕದ್ದಾಗಿದೆ. ಅಲ್ಲದೆ, ರಾಜ್ಯದ ಸ್ತಬ್ದಚಿತ್ರ ಸತತವಾಗಿ ಹದಿಮೂರನೇ ಬಾರಿಗೆ ಆಯ್ಕೆಯಾಗಿದೆ ಎಂಬುದು ದಾಖಲಾರ್ಹ ಸಂಗತಿ.

ಕೌಶಲ್ಯದಿಂದ ತಯಾರಿಸಿದ ಮಡಿಕೆ, ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಶ್ರೀಗಂಧದ ಚಿಕಣಿ (ಮಿನಿಯೇಚರ್ಸ್ ಅಥವಾ  ಕಿರು ಮಾದರಿ ವಸ್ತುಗಳು), ಕೈಮಗ್ಗದ ಸೀರೆಗಳು, ಕೈಯಿಂದಲೇ ವಿಶಿಷ್ಠ ಕಲಾಕೃತಿಗಳೂ ಒಳಗೊಂಡಂತೆ 16 ಕರಕುಶಲ ವಸ್ತುಗಳು ಭೌಗೋಳಿಕ ಸೂಚಿ ಸಂಕೇತದ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದೇ ಕರೆಯುತ್ತಾರೆ. ಚೆನ್ನಪಟ್ಟಣ ಮತ್ತು ಕಿನ್ನಾಳ ಮರದ ಕೆತ್ತನೆ ವಸ್ತುಗಳು (ಇನ್ಲೇ ಕಾರ್ವಿಂಗ್ಸ್), ಕಂಚಿನ ಪ್ರತಿಮೆಗಳು, ಮೆರುಗೆಣ್ಣೆಯ ಹಾಗೂ ಬಿದರಿಯ ಕಲಾಕೃತಿಗಳು ಕರ್ನಾಟಕದ ಪ್ರಮುಖ ಕಲೆಗಳಾಗಿವೆ.

ಟಿರ್ರಾಕೋಟ ಅತ್ಯಂತ ಹಳೆಯ ಕಲೆಯಾಗಿದೆ. ವಿಜಯನಗರದ ಅರಸರು ಪೋಷಿಸುತ್ತಿದ್ದ ಕಿನ್ನಾಳದ ಮೆರುಗೆಣ್ಣೆಯ ಕಲಾಕೃತಿಗಳು, ಕರ್ನಾಟಕದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಮತ್ತು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಶ್ರೀಗಂಧದ ಕಲಾಕೃತಿಗಳು ಹಾಗೂ ದಂತದ ಕೆತ್ತನೆಯ ಕಲೆ ರಾಜ್ಯಕ್ಕೆ ವಿಶಿಷ್ಠ .
 
ಸ್ವಾತಂತ್ರ್ಯ ಹೋರಾಟಗಾರರು, ಅಭಿನೇತ್ರಿ., ಸಮಾಜ ಸೇವಕರು, ಕಲಾ ಉತ್ತೇಜಕರೂ ಎಲ್ಲವೂ ಆಗಿದ್ದ ಕರ್ನಾಟಕದವರೇ ಆದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ನಶಿಸಿಹೋಗುತ್ತಿದ್ದ ಪಾರಂಪಾರಿಕ ಕರಕುಶಲ ವಸ್ತುಗಳ ತಯಾರಿಕಾ ಕಲೆಯನ್ನು ಉಳಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಗಮನಾರ್ಹ.

IMG 20220204 WA0039


 ಸ್ತಬ್ದಚಿತ್ರದಲ್ಲಿ ಏನಿದೆ ?

ಕರ್ನಾಟಕದ ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ ಹಾಗೂ ಈ ಕಲಾಕೃತಿಯ ಕೆಳಗಿನ ಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ. ಜೊತೆಗೆ, ಗಂಜೀಫಾ ಕಲಾಕೃತಿಗಳಿವೆ.
 
ಸ್ತಬ್ದಚಿತ್ರದ ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ. ಹೂಜಿಯ ಇಕ್ಕೆಲೆಗಳಲ್ಲಿ ಕರಾವಳಿಯ ವೈಶಿಷ್ಠ್ಯವನ್ನು ಬಿಂಬಿಸುವ ಭೂತಾರಾಧನೆಯ ಮುಖವಾಡವನ್ನು ಹೊತ್ತ ಲೋಹದ ಕಲಾಕೃತಿಗಳಿವೆ. ಹೂಜಿಯ ಹಿಂಬದಿಯಲ್ಲಿ ಬಿದರಿ ಕಲೆ ಬಳಸಿ ಸಿದ್ದಪಡಿಸಿರುವ ನವಿಲುಗಳಿವೆ.
 
ಅಲ್ಲದೆ, ಮಧ್ಯ ಭಾಗದ ಹಿಂಬಂದಿಯಲ್ಲಿ ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಸ್ತಬ್ದಚಿತ್ರದ ಕೇಂದ್ರ ಬಿಂದುವಿನಂತೆ ಕಂಗೊಳಿಸುತ್ತಿದೆ. ಆಂಜನೇಯ ಸ್ವಾಮಿಯ ಮೂರ್ತಿಯ ಅಕ್ಕ-ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಮೆರುಗೆಣ್ಣೆಯ ಆಟಿಕೆಗಳು, ನವಲಗುಂದ ಧರಿ (ಜಮಖಾನೆ), ಶ್ರೀಗಂಧ ಮರದ ಕೆತ್ತನೆಯ ಹಾಗೂ ಮಣ್ಣಿನ ಕಲಾಕೃತಿಗಳಿವೆ.

ತದನಂತರ, ಸ್ತಬ್ದಚಿತ್ರದ ಕೊನೆಯಲ್ಲಿ ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಿದ ಕಲಾಲೋಕದ ಮಹಾ ಮಾತೆ, ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾದ್ಯಾಯ ಅವರು ಗಂಧದ ಪೆಟ್ಟಿಗೆ, ನವಿಲಿನಾಕಾರದ ದೀಪದ ಕಲಶಗಳು, ಸಂಡೂರಿನ ಬಾಳೆ ನಾರಿನ ಚೀಲಗಳು ಹೀಗೆ ವಿವಿಧ ಕರಕುಶಲ ವಸ್ತುಗಳನ್ನು ಬಾಗಿನ ರೂಪದಲ್ಲಿ ನೀಡುತ್ತಿರುವ ದೃಶ್ಯಾವಳಿಯ ದೊಡ್ಡ ಪ್ರತಿಮೆ ಇದೆ.
 
ಅದೇ ಭಾಗದಲ್ಲಿ ಕರ್ನಾಟಕದ ಕೈಮಗ್ಗದ ಹಿರಿಮೆಯ ಇಳಕಲ್ ಕಸೂತಿ ಸೀರೆಗಳು, ಮೊಳಕಾಲ್ಮೋರು ಸೀರೆಗಳು ಹಾಗೂ ಮೈಸೂರು ರೇಷ್ಮೆ ಸೀರೆಗಳು, ಕಿನ್ನಾಳ ಕಲೆಯಲ್ಲಿ ತಯಾರಿಸಿದ ಬಾಲೆಯರ ಕಲಾಕೃತಿಗಳು, ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಬೆತ್ತ, ಬಿದಿರು, ಕಾಡುಬಳ್ಳಿಗಳು ಹಾಗೂ ತಾಟಿನಿಂಗು ಮರದ ಎಲೆಯಿಂದ ತಯಾರಿಸಿದ ಬಗೆ ಬಗೆಯ ಬುಟ್ಟಿಗಳೂ ಕೂಡಾ ಸ್ತಬ್ದಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿದೆ.
ಸ್ತಬ್ದಚಿತ್ರದ ಹಿಂದೆ !

ಈ ಬಾರಿಯ ಸ್ತಬ್ದಚಿತ್ರ ನಿರ್ಮಾಣ ಕಾರ್ಯದಲ್ಲಿ ಹೆಸರಾಂತ ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ಒಂದು ನೂರಕ್ಕೂ ಹೆಚ್ಚು ಕಲಾವಿದರು, ಸುಪ್ರಸಿದ್ಧ ಸಂಗೀತ ನಿರ್ದೇಶಕ ಪ್ರವೀಣ್ ದಯಾನಂದ ರಾವ್ ಮತ್ತು ತಂಡ ಹಾಗೂ ಜಾನಪದ ತಜ್ಞ ಡಾ ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡವೂ ಶ್ರಮಿಸಿದೆ.

 
ರಾಷ್ಟ್ರದ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಸುಸಂದರ್ಭದಲ್ಲಿ ಸ್ತಬ್ದಚಿತ್ರ ಪ್ರದರ್ಶನದಲ್ಲಿ ವಿಶಾಲ ಮೈಸೂರು ರಾಜ್ಯ ( ಕರ್ನಾಟಕ ರಾಜ್ಯವು ) ಪಾಲ್ಗೊಳ್ಳಲು ಮೊದಲು ಪ್ರಾರಂಭಿಸಿದ್ದು 1972 ರಲ್ಲಿ !

ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರು ಈ ಜವಾಬ್ದಾರಿಯನ್ನು ಅಂದಿನ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ವಹಿಸಿದ್ದರು. ಅಂದಿನಿಂದ ಇಂದಿನವರೆಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ರಾಜ್ಯ ಸರ್ಕಾರದ ಪರವಾಗಿ ಸ್ತಬ್ದಚಿತ್ರ ನಿರ್ಮಾಣ ಹಾಗೂ ಪ್ರದರ್ಶನದ ಕಾರ್ಯವನ್ನು ನಿರ್ವಹಿಸುತ್ತಲಿದೆ.
 

ಇದೀಗ ಭಾರತ ಸ್ವಾತಂತ್ರ್ಯದ ಅಮೃತ ವರ್ಷ ಮಹೋತ್ಸವ ವರ್ಷದಲ್ಲಿ ನವದೆಹಲಿಯಲ್ಲಿನ ಗಣರಾಜ್ಯೋತ್ಸವ ದಿನಾಚರಣೆಯ ಸಂಭ್ರಮದಲ್ಲಿ ಕರ್ನಾಟಕದ ಪಾಲ್ಗೊಳ್ಳುವಿಕೆ 50 ನೇ  ವರ್ಷದ್ದಾಗಿದೆ.