ಶ್ರೀ ರಾಮಕೃಷ್ಣ ಸೇವಾಶ್ರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್, ಅವರಿಗೆ ಗೌರವ ಸಮರ್ಪಣೆ….!
ಪಾವಗಡ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಾವಗಡದ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷರು ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್, ಅಧ್ಯಕ್ಷರು, ಶ್ರೀರಾಮಕೃಷ್ಣ ಸೇವಾಶ್ರಮ ರವರಿಗೆ ಗೌರವ ಸಲ್ಲಿಸಲು ನೂತನ ಸದಸ್ಯರೊಂದಿಗೆ ಅಧ್ಯಕ್ಷರಾದ ಶ್ರೀ ಆರ್.ಟಿ.ಮಲ್ಲಿಕಾರ್ಜುನಪ್ಪ, ವಕೀಲರು ರವರು ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದೂರ ತರಂಗ ಯೋಜನೆಯಡಿ ಪಾವಗಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಉದ್ಘಾಟಿಸಲ್ಪಟ್ಟ ಯೋಜನೆಯಡಿಯಲ್ಲಿ ಮಕ್ಕಳಿಗೆ ಅತ್ಯುತ್ತಮವಾದ ಪಾಠ ಪ್ರವಚನಗಳನ್ನು ಮಾಡುವಂತಾಗಿದೆ ಎಂದು ವಿವರಿಸಿದರು. ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಯೋಗದಲ್ಲಿ ದೂರತರಂಗ ಶಿಕ್ಷಣ ಯೋಜನೆ ತಮಗೆ ದೊರಕಿದ್ದು ತಮ್ಮ ಅದೃಷ್ಟವೆಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ತತ್‍ಕ್ಷಣಕ್ಕೆ ನೋಟ್ ಪುಸ್ತಕಗಳು ಹಾಗೂ ಇತರ ಪರಿಕರಗಳನ್ನು ಒದಗಿಸಬೇಕೆಂದು ವಿನಂತಿಸಿಕೊಂಡರು. ಕಳೆದ ವರ್ಷಕ್ಕಿಂತ ಈ ವರ್ಷ ಸರ್ಕಾರಿ ಶಾಲೆಯಾಗಿದ್ದಾಗ್ಯೂ ಶಾಲೆಗೆ ಮಕ್ಕಳು ಸೇರುವ ಸಂಖ್ಯೆ ಹೆಚ್ಚಿದ್ದು ಈಗ ಸರಿಸುಮಾರು 331 ಮಕ್ಕಳಿರುತ್ತಾರೆ. ಈ ಮಕ್ಕಳೆಲ್ಲಾ ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಹಾಗೂ ಕಾರ್ಮಿಕರು, ಆಟೋ ಚಾಲಕರು ಮುಂತಾದವರ ಮಕ್ಕಳಾಗಿ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಜೊತೆಗೆ ಈ ಶಾಲೆ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ದತ್ತು ಪಡೆದ ಶಾಲೆಯಾದ್ದರಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ಒಕ್ಕೊರಲಿನಿಂದ ಪೂಜ್ಯ ಸ್ವಾಮಿ ಜಪಾನಂದಜೀ ರವರಲ್ಲಿ ವಿನಂತಿಸಿಕೊಂಡರು.
ಕುಡಿಯುವ ನೀರು : ದುರದೃಷ್ಟವಶಾತ್ ಶಾಲೆಗೆ ಮತ್ತು ಶಾಲಾ ಶೌಚಾಲಯಕ್ಕೆ ನೀರಿನ ಕೊರತೆ ಎದುರಾಗಿದ್ದು ಅತ್ಯಂತ ಹೀನ ಸ್ಥಿತಿಯಲ್ಲಿ ನೀರಿನ ಸ್ಥಿತಿ ಇರುವುದರಿಂದ ಪೂಜ್ಯ ಸ್ವಾಮೀಜಿಯವರು ತತ್‍ಕ್ಷಣ ಈ ಒಂದು ಜೀವನಾಡಿಯಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಬೇಕೆಂದು ವಿನಂತಿಸಿಕೊಂಡರು. ಪೂಜ್ಯ ಸ್ವಾಮೀಜಿಯವರು ಅವರ ವಿನಂತಿಗೆ ಸ್ಪಂದಿಸಿ ಸದ್ಯದಲ್ಲಿಯೇ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದರು. ಒಟ್ಟಿನಲ್ಲಿ ಪಾವಗಡ ಪಟ್ಟಣದ ಮಧ್ಯ ಭಾಗದಲ್ಲಿರುವ ಸರ್ಕಾರಿ ಶಾಲೆಯು ಶ್ರೀರಾಮಕೃಷ್ಣ ಸೇವಾಶ್ರಮದ ದತ್ತು ಶಾಲೆಯಾಗಿ ಪರಿವರ್ತನೆ ಹೊಂದಿದ್ದು ಮಕ್ಕಳಿಗೆ ನೋಟ್ ಪುಸ್ತಕ, ಶಾಲಾ ಬ್ಯಾಗು, ಮುಂತಾದವುಗಳನ್ನು ಮುಂದಿನ ವಾರದಲ್ಲಿ ನೀಡುವುದಾಗಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದರು. ತಮ್ಮ ಭೇಟಿ ಅತ್ಯಂತ ಫಲಪ್ರದವಾಯಿತು ಎಂಬ ಸಂತೋಷದ ಹಿನ್ನೆಲೆಯಲ್ಲಿ ಬಂದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಸಂತೋಷದಿಂದ ಮರಳಿದರು.
ವರದಿ: ಶ್ರೀನಿವಾಸುಲು ಎ