ಕಾಂಗ್ರೆಸ್ ಲೂಟಿಯಿಂದ ರಾಜ್ಯವನ್ನು ದೂರವಿಡಲು ಗರಿಷ್ಠ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ: ನರೇಂದ್ರ ಮೋದಿ
ಬೆಂಗಳೂರು: ಕರ್ನಾಟಕವನ್ನು ಕಾಂಗ್ರೆಸ್ ಲೂಟಿಯಿಂದ ದೂರವಿಡಲು ಗರಿಷ್ಠ ಬಿಜೆಪಿ ಸಂಸದರನ್ನು ಇಲ್ಲಿಂದ ಆಯ್ಕೆ ಮಾಡಿ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿದರು.
ಕಲಬುರ್ಗಿಯ ಎನ್.ವಿ ಆಟದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಕರ್ನಾಟಕದ ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಮತ್ತು ಕಾಂಗ್ರೆಸ್ ಖಾತೆ ತೆರೆಯಲು ಅವಕಾಶ ಕೊಡುವುದಿಲ್ಲ ಎಂಬ ಗ್ಯಾರಂಟಿ ಕೊಡಿ ಎಂದು ತಿಳಿಸಿದರು. ಕಮಲದ ಚಿಹ್ನೆಗೆ ಮತ ಕೊಡಿ ಎಂದು ತಿಳಿಸಿದರು.
ಕರ್ನಾಟಕವನ್ನು ಕಾಂಗ್ರೆಸ್ ಕುಟುಂಬದ ಎಟಿಎಂ ಮಾಡಿಕೊಂಡಿದ್ದಾರೆ. ಇಂಡಿ ಒಕ್ಕೂಟ ಮತ್ತು ಕಾಂಗ್ರೆಸ್‍ನ ಮುಖಂಡರು ಕೂಡ ಅಬ್ ಕೀ ಬಾರ್ ಮೋದಿ ಸರಕಾರ್ ಎಂದು ಹೇಳುತ್ತಿದ್ದಾರೆ. ಈ ಬಾರಿ ಜನಾದೇಶ ಬಿಜೆಪಿ ಪರವಾಗಿ ಇರಲಿ ಎಂದು ಅವರು ವಿನಂತಿಸಿದರು. ರಾಜ್ಯದ ಎಲ್ಲ ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಜನರಲ್ಲಿ ಕೋರಿದರು.
ಬಿಜೆಪಿಯ ಕೇಂದ್ರ ಸರಕಾರವು ಕರ್ನಾಟಕದ ಅಭಿವೃದ್ಧಿಗೆ ಸದಾ ಶ್ರಮಿಸಿದೆ. ನಾವು ಅನುಭವ ಮಂಟಪದ ಪ್ರೇರಣೆ ಪಡೆದಿದ್ದೇವೆ ಎಂದ ಅವರು, ಕರ್ನಾಟಕದ ಗೌರವ ಮತ್ತು ಹೆಮ್ಮೆ ಹೆಚ್ಚಿಸಲು ಶ್ರಮಿಸಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ಸಿಗರು ಈ ದೇಶದ ಪರಂಪರೆಗೆ ಅಗೌರವ ಸೂಚಿಸುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಅದರ ಮುಖಂಡರು ಎಷ್ಟೇ ಉಡುಪು ಬದಲಿಸಿದರೂ ಅದರ ಮೂಲಗುಣ ಬದಲಾಗುವುದಿಲ್ಲ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಬಗ್ಗೆ ಆಕ್ರೋಶವಿದೆ. ಕಾಂಗ್ರೆಸ್ಸಿನ ಬಗ್ಗೆ ಇಷ್ಟು ಕಡಿಮೆ ಸಮಯದಲ್ಲಿ ಜನರು ವಿಶ್ವಾಸ ಕಳಕೊಂಡಿದ್ದಾರೆ ಎಂದು ನುಡಿದರು.
ಎಷ್ಟೇ ಅವಕಾಶ ಕೊಟ್ಟರೂ ಕಾಂಗ್ರೆಸ್ ಬದಲಾಗುವುದಿಲ್ಲ. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ. ಜನರ ಮನಸ್ಸಿನಲ್ಲಿ ಆಕ್ರೋಶ ಹೆಚ್ಚಾಗಿದೆ. ಆತಂಕದಿಂದ ಜನತೆ ಜೀವಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಕುಟುಂಬವಾದಿಗಳಿಗೆ ಭ್ರಷ್ಟಾಚಾರವೇ ಆಮ್ಲಜನಕ ಎಂದು ಟೀಕಿಸಿದರು. ನಮೋ ಇನ್ ಕನ್ನಡ ಮೂಲಕ ಮೋದಿ ಮೇರಿ ಜೇಬ್ ಮೇ ಹೈ ಎಂದು ಹೆಮ್ಮೆಯಿಂದ ನೀವು ಹೇಳುವಂತಾಗಲಿ ಎಂದು ತಿಳಿಸಿದರು.
ಭ್ರಷ್ಟಾಚಾರ ಇಲ್ಲದೆ ಕಾಂಗ್ರೆಸ್ಸಿಗರು ಶ್ವಾಸೋಚ್ವಾಸ ಮಾಡುವುದಿಲ್ಲ. ಇಲ್ಲಿ ಅರಾಜಕತೆ ಹೆಚ್ಚಾಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಉಚಿತ ವಿದ್ಯುತ್ ಬದಲು ಕತ್ತಲೆಯ ಬದುಕು ಜನರದಾಗಿದೆ. ಪಂಪ್ ಚಾಲೂ ಆಗುತ್ತಿಲ್ಲ. ಮೋದಿ ಸರಕಾರವು 50 ಲಕ್ಷಕ್ಕೂ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್ ಮೂಲಕ ವರದಾನವಾಗಿದೆ. ಮೊದಲು ಬಿಜೆಪಿ ಸರಕಾರ 4 ಸಾವಿರ ಸೇರಿಸಿ ಕೊಡುತ್ತಿತ್ತು. ಆದರೆ, ಅದನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿದರು.
ಯುವಜನರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ಸ್ಥಗಿತಗೊಂಡಿದೆ. ಚಿಕ್ಕ ಚಿಕ್ಕ ಅಭಿವೃದ್ಧಿ ಕಾರ್ಯಕ್ಕೂ ಹಣ ಇಲ್ಲ. ಶಾಸಕರಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ತಿಳಿಸಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ಸಿಗರಿಗೆ ಮತ್ತೆ ಅಧಿಕಾರ ಪಡೆಯುವ ಧೈರ್ಯ ಇಲ್ಲ. ಅದಕ್ಕಾಗಿ ಲೂಟಿ ಮುಂದುವರೆಸಿದ್ದಾರೆ ಎಂದರು.
ಆಯುಷ್ಮಾನ್ ಯೋಜನೆ ಮೂಲಕ ಕೋಟಿಗಟ್ಟಲೆ ಜನರಿಗೆ ಆರೋಗ್ಯ ಸುರಕ್ಷೆ ನೀಡಿದ್ದೇವೆ. ಉಚಿತ ಆರೋಗ್ಯ ವಿಮೆ ಮೋದಿ ಗ್ಯಾರಂಟಿಯಾಗಿದೆ. ಕರ್ನಾಟಕದ 75 ಲಕ್ಷಕ್ಕೂ ಹೆಚ್ಚು ಕುಟುಂಬಕ್ಕೆ ನಳ್ಳಿ ಮೂಲಕ ನೀರು ವ್ಯವಸ್ಥೆ ಮಾಡಿದ್ದೇವೆ. ಇದೆಲ್ಲ ಮೋದಿ ಗ್ಯಾರಂಟಿಯಾಗಿದೆ. ಹಿಂದೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಇರಲಿಲ್ಲ. ರಾಜ್ಯದ 40 ಲಕ್ಷಕ್ಕೂ ಹೆಚ್ಚು ಮನೆಗೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ನೀಡಿ, ತಾಯಂದಿರನ್ನು ಕಟ್ಟಿಗೆಯ ಹೊಗೆಯಿಂದ ದೂರವಿಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಮನೆ ಕೊಟ್ಟಿದ್ದೇವೆ ಎಂದು ವಿವರಿಸಿದರು.
ಅತ್ಯುತ್ತಮ ರೈಲ್ವೆ ಸಂಪರ್ಕ ನೀಡಿದ್ದು, ವಂದೇ ಭಾರತ್, ಪ್ಯಾಸೆಂಜರ್ ರೈಲು ಆರಂಭಿಸಿದ್ದನ್ನು ವಿವರಿಸಿದ ಅವರು, ಕಾಂಗ್ರೆಸ್ ಸರಕಾರಗಳು ರೈಲ್ವೆ ಸೇರಿ ಮೂಲಸೌಕರ್ಯವನ್ನು ಕಡೆಗಣಿಸಿದ್ದವು ಎಂದು ವಿವರಿಸಿದರು. ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಮೂಲಕ ಹೆಚ್ಚು ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು.
ಜಗದ್ಗುರು ಬಸವೇಶ್ವರ ಅವರ ನಾಡು, ಶಿವಶರಣರ ಬೀಡು, ಕಲಬುರ್ಗಿಯ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಕರ್ನಾಟಕವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆ ಸೀಟು ನೀಡುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಕಳೆದ 2 ದಿನಗಳಿಂದ ಭಾರತದ ದಕ್ಷಿಣ ಭಾಗದಲ್ಲಿ ಸುತ್ತಾಡಿದ್ದೇನೆ. ಅದಕ್ಕಿಂತ ಮೊದಲು ಶ್ರೀನಗರಕ್ಕೆ ತೆರಳಿದ್ದೆ. 1988ರ ಬಳಿಕ ಶ್ರೀನಗರದಲ್ಲಿ ಇಷ್ಟು ದೊಡ್ಡ ರಾಜಕೀಯ ರ್ಯಾಲಿ ನಡೆದಿಲ್ಲ ಎಂದು ಮಾಧ್ಯಮದವರು ಬರೆದುದನ್ನು ನೆನಪಿಸಿದರು. ದಕ್ಷಿಣದ ರಾಜ್ಯಗಳಲ್ಲೂ ಜನರು ಉತ್ಸಾಹದಿಂದ ಪಾಲ್ಗೊಂಡು ವಿಕಸಿತ ಭಾರತದ ಸಂಕಲ್ಪ ಮಾಡುತ್ತಿದ್ದಾರೆ ಎಂದ ಅವರು, ದಕ್ಷಿಣ ಭಾರತದಲ್ಲಿ ಎಲ್ಲ ವರ್ಗದ ಜನರು ಬಿಜೆಪಿಗೆ ತಮ್ಮ ಅಪಾರ ಬೆಂಬಲ ಕೊಡಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಮೋದಿಜೀ ಅವರು ಕೊಟ್ಟ ಜನಪರ ಯೋಜನೆಗಳನ್ನು ಗಮನಿಸಿ ಜನರು 28ಕ್ಕೆ 28 ಬಿಜೆಪಿ- ಜೆಡಿಎಸ್ ಲೋಕಸಭಾ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಈ ಮೂಲಕ ಜನತೆ ಸಿದ್ದರಾಮಯ್ಯನವರಿಗೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರನ್ನು 2 ಬಾರಿ ಸೋಲಿಸಿದ ಕಾಂಗ್ರೆಸ್ ಪಕ್ಷದವರು ಅವರಿಗೆ ಭಾರತರತ್ನ ಕೊಡಲಿಲ್ಲ. ಬಿಜೆಪಿ ಪ್ರಧಾನಿ ಮೋದಿಜೀ ಅವರು ಸಂವಿಧಾನಕ್ಕೆ ಗೌರವ ಕೊಟ್ಟವರು. ಕರ್ನಾಟಕದ ಅಭಿವೃದ್ಧಿಗಾಗಿ ಮೋದಿಜೀ ಅವರು ಕೊಟ್ಟ ಕೊಡುಗೆಗಳನ್ನು ಗಮನಿಸಿ ಜನರು ಸಂತಸಪಟ್ಟಿದ್ದಾರೆ ಎಂದು ನುಡಿದರು. ಪ್ರಧಾನಿಯವರ ಕನ್ನಡ ಭಾಷಾಭಿಮಾನವನ್ನು ಮೆಚ್ಚಿಕೊಂಡರು. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸ ಅವರಿಂದ ಆಗುತ್ತಿದೆ ಎಂದರು. ಕಲ್ಯಾಣ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಭಗವಂತ ಖೂಬಾ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಉಮೇಶ್ ಜಾಧವ್, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಪ್ರಮುಖರಾದ ಅವಿನಾಶ್ ಜಾಧವ್, ಬಿ.ಜಿ.ಪಾಟೀಲ್, ಅಮರನಾಥ ಪಾಟೀಲ್, ಚಂದು ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಶರಣು ಸಲಗರ, ಲಲಿತಾ ಅನಪೂರ, ರಾಜಕುಮಾರ್ ಪಾಟೀಲ ತೇಲ್ಕೂರ, ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ, ಸಂಸದರು, ಶಾಸಕರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.