ನನ್ನ ರಾಜಕೀಯ ಜೀವನವನ್ನು ನಾವು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆರಂಭಿಸಿದ್ದೆ. ಕಾಂಗ್ರೆಸ್ ಪಕ್ಷ ಬಿಟ್ಟಿದ್ದೆ. ಈಗ ಮತ್ತೆ ಬಂದಿದ್ದೇನೆ. ನನ್ನ ಮುಂದಿನ ರಾಜಕೀಯ ಭಾಗ ಕಾಂಗ್ರೆಸ್ ನಲ್ಲಿ ಮುಂದುವರಿಯಲಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೇಸರವಾಗಿದೆ. ಕೆಲವೊಮ್ಮೆ ನಮಗಾಗಿ ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ. ಅದೇ ಸಂದರ್ಭ ನನಗೆ ಬಂದಿದೆ.
ನಾನಿದ್ದ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸೇರಿಕೊಂಡ ನಂತರ ಎನ್ಡಿಎ ಮೈತ್ರಿಕೂಟದಲ್ಲಿ ಇದ್ದ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾಗಿರಲಿಲ್ಲ ಎಂದು ಮನಗಂಡು ಸ್ವಯಂಪ್ರೇರಿತವಾಗಿ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ.
ಮಾಧ್ಯಮಗಳಲ್ಲಿ ರಾತ್ರಿ 12 ಗಂಟೆಗೆ ಭೇಟಿ ಮಾಡಿದ್ದಾರೆ ಎಂದು ವರದಿಯಾಗಿರುವುದನ್ನು ನೋಡಿದೆ. ನನಗೆ ಅಂತಹ ಅವಶ್ಯಕತೆ ಇಲ್ಲ. ನಾನು ಬೆಳಗ್ಗೆ 8 ಗಂಟೆಗೆ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗಿ ನನ್ನ ವಿಚಾರ ಚರ್ಚೆ ಮಾಡಿದೆ. ನಂತರ ಶಿವಕುಮಾರ್ ಅವರು ನನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿಯೂ ಮಾತನಾಡಿದೆವು. ನಂತರ ಸುರೇಶ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಿಸಿದರು. ಅವರ ಆಶೀರ್ವಾದ ಪಡೆದು ನನ್ನ ಮೂಲ ಪಕ್ಷಕ್ಕೆ ಸೇರಿದ್ದೇನೆ. ಇದರಲ್ಲಿ ಬಹಳ ವಿಶೇಷವಿಲ್ಲ.
ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ನಮ್ಮ ಗುರಿ. ಡಿ.ಕೆ. ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಕಳೆದ ಮೂರ್ನಾಲ್ಕು ತಿಂಗಳಲ್ಲಿ ತೆಗೆದುಕೊಂಡಿರುವ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ. ಇದರಲ್ಲಿ ನಾನು ಕೈಬಿಟ್ಟು ಹೋಗುತ್ತಿದ್ದೇನೆ ಎಂದು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ನಾನು ಪಾಲುದಾರನಾಗಬೇಕು. ಸರ್ಕಾರದ ಜತೆ ಕೈಜೋಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಈ ತೀರ್ಮಾನ ಮಾಡಿದ್ದೇನೆ.
ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ನಾನು ಕೆಲಸ ಮಾಡುತ್ತೇನೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ಪಕ್ಷ ಬೆಳೆಸಲು ಶ್ರಮಿಸಿದ ಎಲ್ಲಾ ಪದಾಧಿಕಾರಿಗಳು ಸೇರಿ ನಾವು ಒಟ್ಟಾಗಿ ಹೋಗೋಣ. ಒಟ್ಟಾಗಿ ಕೆಲಸ ಮಾಡೋಣ. ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ದುಡಿಯೋಣ ಎಂದು ಮನವಿ ಮಾಡುತ್ತೇನೆ. ಇಷ್ಟು ದಿನ ನಮ್ಮ ನಡುವೆ ಇದ್ದ ಟೀಕೆ ಟಿಪ್ಪಣಿ ಅಭಿವೃದ್ಧಿ ಪೂರಕವಾಗಿದ್ದವು. ಇನ್ನು ಮುಪಂದೆ ಜಿಲ್ಲೆಯ ಅಭಿವೃದ್ದಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳುತ್ತೇನೆ.
ನಾನು ಇಂದು ಪಕ್ಷಕ್ಕೆ ಸೇರಿದ್ದು, ಮುಂದೆ ಪಕ್ಷದ ಕಾರ್ಯಕರ್ತನಿಗೆ ಶ್ರಮಿಸುತ್ತೇನೆ. ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರು ರಾಜಕೀಯದ ಆರಂಭಿಕ ದಿನಗಳಿಂದಲೂ ನಾನು ಅವರ ಜತೆಗಿದ್ದೇನೆ. ಎರಡುಮೂರು ಬಾರಿ ಸುರೇಶ್ ಅವರ ಗೆಲುವಿನಲ್ಲಿಯೂ ನನ್ನ ಪಾತ್ರವಿದೆ. ಒಂದು ಬಾರಿ ಅವರ ಸೋಲಿನಲ್ಲೂ ನನ್ನ ಪಾತ್ರವಿದೆ. ಮುಂದಿನ ದಿನಗಳಲ್ಲಿ ಸುರೇಶ್ ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ. ರಾಜಕಾರಣದಲ್ಲಿ ಏರಿಳಿತಗಳು ಇರುತ್ತವೆ. ಪಕ್ಷ ಬಿಟ್ಟ ನಂತರ ಅನೇಕ ಟೀಕೆ ಟಿಪ್ಪಣಿ ಬಂದಿರುತ್ತವೆ ನಾನದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ.
ಸಿ.ಪಿ ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:
ಸಚಿವರಾದ ರಾಮಲಿಂಗಾ ರೆಡ್ಡಿ:
ಸಿ.ಪಿ ಯೋಗೇಶ್ವರ್ ವರು ಕಾಂಗ್ರೆಸ್ ಪಕ್ಷಕ್ಕೆ ಹೊಸಬರಲ್ಲ. ಕಾಂಗ್ರೆಸ್ ನಲ್ಲಿ ಇದ್ದವರು. ನಾನಾ ಕಾರಣಗಳಿಂದ ಪಕ್ಷ ಬಿಟ್ಟಿದ್ದರು. ಈಗ ಮತ್ತೆ ಪಕ್ಷಕ್ಕೆ ಸೇರಿರುವುದು ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲೆಯಲ್ಲಿ ಮತ್ತೆ ನಮ್ಮ ಪಕ್ಷಕ್ಕೆ ಶಕ್ತಿ ಬಂದಿದೆ. ನಾನು ರಾಮನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಜಿಲ್ಲೆ ಪ್ರವಾಸ ಮಾಡಿದಾಗ ಅಲ್ಲಿ ಯೋಗೇಶ್ವರ್ ಅವರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿತ್ತು.
ಕಳೆದ ಮೂರ್ನಾಲ್ಕು ತಿಂಗಳಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ನಮ್ಮ ನಾಯಕರು ಆ ಭಾಗದಲ್ಲಿ ಸುಮಾರು ಒಂದು ಸಾವಿರ ಕೋಟಿ ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದೇವೆ. ಯೋಗೇಶ್ವರ್ ಅವರ ಆಗಮನ ಪಕ್ಷಕ್ಕೆ ಬಲ ಬಂದಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.
ಸಚಿವ ಜಮೀರ್ ಅಹ್ಮದ್:
ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಆರಂಭಿಸಿದವರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅವರು ಹೊಸಬರಲ್ಲ. ಇಂದು ಪಕ್ಷಕ್ಕೆ ಸೇರಿರುವುದು ಆನೆ ಬಲ ಬಂದಿದೆ. ಕೇವಲ ಚನ್ನಪಟ್ಟಣ ಮತ್ತು ರಾಮನಗರ ಜಿಲ್ಲೆ ಮಾತ್ರವಲ್ಲ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದೆ.
ಬಹಳ ದಿನಗಳಿಂದ ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಯೋಗೇಶ್ವರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಇಂದು ಅವರು ಘರ್ ವಾಪಸಿ (ಮನೆಗೆ ಮರಳಿದ್ದಾರೆ) ಮಾಡಿದ್ದಾರೆ. ಅವರಿಗೆ ನಾನು ಸ್ವಾಗತಿಸುತ್ತೇನೆ.