23 10 24 Anantapura floodhit areas 12

ಅನಂತಪುರ :ಪರಿಹಾರ ಯೋಜನೆಯ ಚಿಂತನೆಯಲ್ಲಿ  ರಾಮಕೃಷ್ಣ ಸೇವಾಶ್ರಮ….!

DISTRICT NEWS ತುಮಕೂರು

ಪ್ರವಾಹ ಪರಿಸ್ಥಿತಿ :   ಪರಿಹಾರ ಯೋಜನೆಗೆ ಚಿಂತನೆಯಲ್ಲಿ  ರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಇನ್ಫೋಸಿಸ್ ಫೌಂಡೇಷನ್…..!

ಪಾವಗಡ :ಆಂಧ್ರಪ್ರದೇಶದ ಅನಂತಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉಂಟಾದ ಭೀಕರ ಪ್ರವಾಹ ಪರಿಸ್ಥಿತಿಯ ಅವಲೋಕನ ಮತ್ತು ಪರಿಹಾರ ಯೋಜನೆಗೆ ಚಿಂತನೆ. ಇಂದು  ಪೂಜ್ಯ ಸ್ವಾಮಿ ಜಪಾನಂದಜೀ ರವರು ಆಂಧ್ರಪ್ರದೇಶದ ಅನಂತಪುರಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೋಸ್ಕರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಅಂಬೇಡ್ಕರ್ ಕಾಲೋನಿ, ವೈ.ಎಸ್.ಆರ್.ಕಾಲೋನಿ, ಇಂದಿರಾ ಕಾಲೋನಿ ಮುಂತಾದ ಪ್ರದೇಶಗಳಿಗೆ ಭೇಟಿಯಿತ್ತು ಅಲ್ಲಿಯ ಸಂತ್ರಸ್ತರೊಂದಿಗೆ ಮಾತನಾಡಿ ಅವರ ಕಷ್ಟಗಳಿಗೆ ಸದ್ಯದಲ್ಲಿಯೇ ಪರಿಹಾರ ನೀಡುತ್ತೇವೆ ಎಂದು ಭರವಸೆಯಿತ್ತರು. ಸರಿಸುಮಾರು 1000 ಕುಟುಂಬಗಳಿಗೆ ತತ್ ಕ್ಷಣದ ಪರಿಹಾರ ನೀಡಲು ಸ್ವಾಮೀಜಿಯವರು ತೀರ್ಮಾನಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಶ್ರೀಮತಿ ಸುನೀತಾ ರವರೊಂದಿಗೆ  ಯಾವ ರೀತಿಯಲ್ಲಿ ತಕ್ಷಣದ ಪರಿಹಾರವನ್ನು ನೀಡಲು ಸಾಧ್ಯ ಎಂಬ ಬಗ್ಗೆ ಚರ್ಚಿಸಿದರು.

ಮೊದಲು ಭಾಗವಾಗಿ ಪ್ರವಾಹಕ್ಕೆ ತುತ್ತಾಗಿರುವ ಬಹುತೇಕ ಜನರು ಕೂಲಿ ಕಾರ್ಮಿಕರು, ಗುಡಿಸಲು ವಾಸಿಗಳು ಹಾಗೂ ನಿರ್ಗತಿಕರಾಗಿರುತ್ತಾರೆ. ಇವರಿಗೆ ಯಾವ ರೀತಿಯಲ್ಲಿ ಪರಿಹಾರವನ್ನು ನೀಡಬೇಕೆಂದು ಶ್ರೀಮತಿ ಸುನೀತಾ ಪೆರಿಟಾಲ, ಶಾಸಕರು ಇವರೊಂದಿಗೆ ಚರ್ಚಿಸಿದರು. ತದನಂತರ ಅನಂತಪುರದ ಕಲೆಕ್ಟರ್ ಆದ ಡಾ.ವಿನೋದ್ ಕುಮಾರ್, ಐ.ಎ.ಎಸ್. ರವರೊಂದಿಗೆ ಸುದೀರ್ಘವಾಗಿ ಕಾರ್ಯಯೋಜನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆದರು. ಇಲ್ಲಿ ಆಶ್ಚರ್ಯವೆಂಬಂತೆ ಡಾ.ವಿನೋದ್ ಕುಮಾರ್ ರವರು ಈ ಹಿಂದೆ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಸ್ವಯಂಸೇವಕ ವೈದ್ಯರಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು. ಹಾಗೆಯೇ ಐ.ಎ.ಎಸ್. ಪರೀಕ್ಷೆಯನ್ನು ಮುಗಿಸಿದ ನಂತರ ಪೂಜ್ಯ ಸ್ವಾಮಿ ಜಪಾನಂದಜೀ ರವರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದರು. ಇಂದು ಅವರ ಕಛೇರಿಯಲ್ಲಿ ಪೂಜ್ಯರನ್ನು ಗೌರವ ಆದ್ಯತೆಯಿಂದ ಬರಮಾಡಿಕೊಂಡು ಸಂಭಾಷಣೆ ನಡೆಸಿದ್ದು ನಿಜಕ್ಕೂ ಈರ್ವರಿಗೂ ಅತ್ಯಂತ ಸಂತೋಷದಾಯಕವಾದ ಸನ್ನಿವೇಶವಾಗಿತ್ತು.

ಪೂಜ್ಯ ಸ್ವಾಮೀಜಿಯವರ ಎಲ್ಲ ಸೇವಾ ಯೋಜನೆಗಳನ್ನು ವೀಕ್ಷಿಸಿ ಗಮನಿಸುತ್ತಿರುವ ಅನಂತಪುರ ಜಿಲ್ಲೆಯ ಕಲೆಕ್ಟರ್ ರವರು ಪೂಜ್ಯ ಸ್ವಾಮೀಜಿಯವರಿಗೆ ಇಂದು ಸರ್ವ ರೀತಿಯಲ್ಲಿ ಸಹಕಾರ ನೀಡುವುದಾಗಿ ಹಾಗೂ ಈ ಸೇವಾ ಯೋಜನೆಯಲ್ಲಿ ಭಾಗಿಯಾಗುವುದಕ್ಕೆ ತಮ್ಮ ಅದೃಷ್ಟವೆಂದು ವಿವರಿಸಿದರು.

ಈ ಸಭೆಯ ಬಳಿಕ ಪೂಜ್ಯ ಸ್ವಾಮೀಜಿಯವರು ಪ್ರವಾಹ ಸಂತ್ರಸ್ತರ ಗುಡಿಸಲುಗಳಿಗೆ ಸ್ವತಃ ಭೇಟಿಯಿತ್ತು ವಸ್ತು ಸ್ಥಿತಿಯನ್ನು ಪರಾಮರ್ಶಿಸಿದರು. ಸದ್ಯದಲ್ಲಿಯೇ ಸಂತ್ರಸ್ತರಿಗೆ ಪೂರ್ಣ ಸಹಕಾರ ಮತ್ತು ಸಹಾಯವನ್ನು ನೀಡಲು ಪೂಜ್ಯ ಸ್ವಾಮಿ ಜಪಾನಂದಜೀ ರವರು ಎಂದಿನಂತೆ ಅಣಿಯಾಗುತ್ತಿದ್ದಾರೆ.

ಈ ಸೇವಾ ಯೋಜನೆಗಳಿಗೆ ನಿರಂತರವಾಗಿ ತಮ್ಮ ಸಹಾಯಹಸ್ತವನ್ನು ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರವನ್ನು ಪೂಜ್ಯ ಸ್ವಾಮೀಜಿಯವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ಎಲ್ಲ ಭಕ್ತರು, ಸ್ವಾಮಿ ವಿವೇಕಾನಂದ ತಂಡದವರಿಗೂ ಹಾಗೂ ಸಮರ್ಪಣ ಇನ್ಫೋಸಿಸ್ ಸಿ.ಎಸ್.ಆರ್. ತಂಡದವರಿಗೂ ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಈ ಯೋಜನೆಗಳಿಗೆ ಸಂಪೂರ್ಣ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡುತ್ತಿರುವ ಎಲ್ಲ ತಂಡದವರಿಗೂ ಪೂಜ್ಯ ಸ್ವಾಮೀಜಿಯವರು ಹೃತ್ಪೂರ್ವಕವಾದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ..