IMG 20240212 162650 scaled

ಮಲೇಷ್ಯಾಪ್ರವಾಸ: ಭಾರತೀಯ ಪ್ರವಾಸಿಗರಿಗೆ “ಪ್ರವೇಶ ವೀಸಾ” ನಿಯಮ ರದ್ದು….!

BUSINESS
  • ಮಲೇಷ್ಯಾ ಪ್ರವಾಸೋದ್ಯಮ- ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ, ಮಲೇಷ್ಯಕ್ಕೆ ಭೇಟಿ ನೀಡುತ್ತಿರುವ ಐದನೇ ಅತಿದೊಡ್ಡ ದೇಶವಾಗಿ ಭಾರತ
  • ಭಾರತೀಯ ಪ್ರವಾಸಿಗರಿಗೆ “ಪ್ರವೇಶ ವೀಸಾ” ನಿಯಮ ರದ್ದು..

ಬೆಂಗಳೂರು, 12 ಫೆಬ್ರವರಿ 2024 – “ಬಲವಾದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧದಿಂದಾಗಿ ಮಲೇಷ್ಯಾಕ್ಕೆ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಭಾರತವು ಮಲೇಷ್ಯಾದ ಐದನೇ ಅತಿ ದೊಡ್ಡ ಪ್ರವಾಸಿಗರ ಮೂಲವಾಗಿದೆ” ಎಂದು ‘ಟೂರಿಸಂ ಮಲೇಷ್ಯಾ’ದ ಹೊಸದಿಲ್ಲಿಯ ನಿರ್ದೇಶಕರಾದ ಅಕ್ಮಲ್ ಅಜೀಜ್ ತಿಳಿಸಿದರು.

ಭಾರತದಲ್ಲಿ ಮಲೇಷ್ಯಾ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಪ್ರಚಾರ ಕಾರ್ಯತಂತ್ರದ ಭಾಗವಾಗಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ರೋಡ್‌ಶೋ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

KNR03474

“2023ರ ಜನವರಿಯಿಂದ ನವೆಂಬರ್‌ವರೆಗೆ ಭಾರತದಿಂದ ದಾಖಲೆಯ 17.8 ದಶಲಕ್ಷ (587,703) ಪ್ರವಾಸಿಗರು ಮಲೇಷ್ಯಾಕ್ಕೆ ಭೇಟಿ ನೀಡಿದ್ದಾರೆ. ಮಲೇಷ್ಯಾ ಏರ್‌ಲೈನ್ಸ್, ಬಾಟಿಕ್ ಏರ್, ಏರ್‌ಏಷ್ಯಾ ಮತ್ತು ಇಂಡಿಗೋ ಮೂಲಕ ಭಾರತ ಮತ್ತು ಮಲೇಷ್ಯಾ ನಡುವೆ ವಾರಕ್ಕೆ 33,851 ಆಸನಗಳೊಂದಿಗೆ 181 ವಿಮಾನಗಳು ಸಂಚರಿಸುತ್ತವೆ” ಎಂದು ಅವರು ವಿವರಿಸಿದರು.

‘ವಿಸಿಟ್ ಮಲೇಷ್ಯಾ 2026’ರ ಪ್ರಚಾರದ ಭಾಗವಾಗಿ ಭಾರತೀಯ ಪ್ರವಾಸಿಗರಿಗೆ “ಪ್ರವೇಶ ವೀಸಾ” ನಿಯಮ ರದ್ದುಗೊಳಿಸಲಾಗಿದೆ. 2023ರ ಡಿಸೆಂಬರ್ 1ರಿಂದ 2024ರ ಡಿಸೆಂಬರ್‌ 31ರವರೆಗಿನ ಅವಧಿಯಲ್ಲಿ ಭಾರತದ ನಾಗರಿಕರು 30 ದಿನಗಳವರೆಗೆ ತಂಗಲು ವೀಸಾ-ಮುಕ್ತ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

ನವದೆಹಲಿಯಲ್ಲಿ ಫೆಬ್ರವರಿ 12 ರಿಂದ 22ರವರೆಗೆ ನಡೆಯಲಿರುವ ದಕ್ಷಿಣ ಏಷ್ಯಾ ಟ್ರಾವೆಲ್ ಮತ್ತು ಟೂರಿಸಂ ಎಕ್ಸ್‌ಚೇಂಜ್ (ಎಸ್‌ಎಟಿಟಿಇ) ಸೇರಿದಂತೆ ಹಲವಾರು ಪ್ರವಾಸೋದ್ಯಮ ಎಕ್ಸ್‌ಪೋಗಳ ಮೂಲಕ ‘ಟೂರಿಸಂ ಮಲೇಷ್ಯಾ’ ಭಾರತೀಯ ಪ್ರಯಾಣಿಕರಿಗಾಗಿ ತನ್ನ ಪ್ರಚಾರ ಕಾರ್ಯತಂತ್ರಗಳನ್ನು ಪ್ರಸ್ತುತಪಡಿಸಲಿದೆ.

ಮುಂಬೈನಲ್ಲಿ ಫೆಬ್ರವರಿ 8 ರಿಂದ 10ರವರೆಗೆ ನಡೆದ ಔಟ್‌ಬೌಂಡ್ ಟ್ರಾವೆಲ್ ಮಾರ್ಟ್ (ಓಟಿಎಂ)ನಲ್ಲಿ ಭಾಗವಹಿಸಿದ್ದ ‘ಟೂರಿಸಂ ಮಲೇಷ್ಯಾ’, ಫೆಬ್ರವರಿ 5ರಿಂದ 11ರವರೆಗೆ ಆಹಾರ ಮತ್ತು ಸಂಸ್ಕೃತಿ ಪ್ರಚಾರ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿನ ಪ್ರೇರಣೆಯೊಂದಿಗೆ ‘ಟೂರಿಸಂ ಮಲೇಷ್ಯಾ’ ಫೆಬ್ರವರಿ 12ರಿಂದ 22ರವರೆಗೆ 5 ಪ್ರಮುಖ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ ಆರಂಭಗೊಂಡು ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್‌ ನಂತರ ಹೊಸದಿಲ್ಲಿಯಲ್ಲಿ ಈ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

IMG 20240212 165937

‘ಟೂರಿಸಂ ಮಲೇಷ್ಯಾ’ದ ಚೆನ್ನೈ ನಿರ್ದೇಶಕ ರಝೈದಿ ಅಬ್ದುಲ್ ರಹೀಮ್, ‘ಟೂರಿಸಂ ಮಲೇಷ್ಯಾ’ದ ಮುಂಬೈ ನಿರ್ದೇಶಕರಾದ ನೋರಿಯಾ ಜಾಫರ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಜೊತೆಗೆ, 45 ಸಂಸ್ಥೆಗಳು, 2 ರಾಜ್ಯ ಪ್ರವಾಸೋದ್ಯಮ ಸಂಸ್ಥೆಗಳು, 3 ವಿಮಾನಯಾನ ಸಂಸ್ಥೆಗಳು, 14 ಹೋಟೆಲ್ ಮತ್ತು ರೆಸಾರ್ಟ್ ನಿರ್ವಾಹಕರು, 19 ಟ್ರಾವೆಲ್ ಏಜೆಂಟ್‌ಗಳು, 6 ಉತ್ಪನ್ನ ಮಾಲೀಕರು ಮತ್ತು ಮಲೇಷ್ಯಾದ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವಾಲಯದ ‘ಮಲೇಷ್ಯಾ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಬ್ಯೂರೋ’ ಈ ಕಾರ್ಯಕ್ರಮದ ಭಾಗವಾಗಿದೆ.

ಈ ಬಿ2ಬಿ ಕಾರ್ಯಕ್ರಮವು ಪ್ರವಾಸೋದ್ಯಮ ಉತ್ಪನ್ನಗಳ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರ ಸಂಪರ್ಕಜಾಲವನ್ನು ಬಲಪಡಿಸುವುದಲ್ಲದೇ, ಪ್ರಮುಖ ಮಾರುಕಟ್ಟೆಯೊಂದಿಗೆ ವ್ಯಾಪಾರ ಅವಕಾಶಗಳನ್ನು ಬೆಳೆಸಲು ಭಾರತೀಯ ಸಹವರ್ತಿಗಳ ಜತೆಗಿನ ಸಂವಹನಕ್ಕೆ ವೇದಿಕೆಯಾಗಲಿದೆ. ವ್ಯಾಪಾರ ಹೊಂದಾಣಿಕೆಯ ಸೆಷನ್‌ಗಳ ಹೊರತಾಗಿ, ಮೀಟಿಂಗ್ ಮತ್ತು ಇನ್ಸೆಂಟಿವ್ಸ್ ಗುಂಪುಗಳು (ಎಂಐಸಿಇ), ಮದುವೆ, ಗಾಲ್ಫ್ ಮತ್ತು ಕುಟುಂಬದ ರಜೆಯ ಮೋಜು ಮತ್ತು ಪ್ರವಾಸೋದ್ಯಮ ಮಾರುಕಟ್ಟೆ ಕುರಿತ ಸೆಮಿನಾರ್‌ಗಳು ಮತ್ತು ಪ್ರಸ್ತುತಿಗಳು ಇರುತ್ತವೆ.