*ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ಸರ್ಕಾರ, ಪ್ರಕರಣವನ್ನು ಮುಚ್ಚಿಹಾಕುವ ಯತ್ನ*
*ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ*
ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ನಾಯಕರು
*ಬೆಂಗಳೂರು, ಫೆಬ್ರವರಿ 29, : *ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ಸರ್ಕಾರ, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ. ಎಫ್ಎಸ್ಎಲ್ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವೀಡಿಯೋ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ರೂಪಿಸಲಾಗುತ್ತಿದೆ. ಇದನ್ನು ಮುಚ್ಚಿ ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರದಿಯನ್ನು ತಿರುಚುವುದು ಖಂಡಿತ ಎಂದರು.
ಜೈಕಾರದ ಸುದ್ದಿ ಮಾಧ್ಯಮಗಳಲ್ಲಿ ಬಂದು ಜನರಿಗೆ ಗೊತ್ತಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗೆಯೇ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸ ಎಂದರೆ, ಈ ಸರ್ಕಾರ ಅದಕ್ಕೆ ಅಪಮಾನ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಇವರು ಭಂಡರು ಎಂದರು.
ಆದ್ದರಿಂದ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಜನರು ಇದನ್ನು ಮನಗಾಣಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ *ರಾಜೀನಾಮೆ ನೀಡಬೇಕು* ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯಲ್ಲಿ
*ಹಿಂದೂ ವಿರೋಧಿ ಕಾರ್ಕೋಟಕ ವಿಷ,* ಪ್ರಧಾನಿ ಮೋದಿ ವಿರುದ್ಧ ದ್ವೇಷ ತುಂಬಿದೆ. ಮೋದಿ ಎಂದರೆ ಕಾಂಗ್ರೆಸ್ ನಾಯಕರು ಭಯ ಪಡುತ್ತಾರೆ ಎಂದರು.
ಬಿ.ಕೆ.ಹರಿಪ್ರಸಾದ್ ಅವರು ಪಾಕಿಸ್ತಾನಿಗಳು ಸಹೋದರರು ಎನ್ನುತ್ತಾರೆ. ಕಾಂಗ್ರೆಸ್ ನಾಯಕರ ಮನಸ್ಸಿನ ಪೂರ್ತಿ ಪಾಕಿಸ್ತಾನ ತುಂಬಿಕೊಂಡಿದೆ. ಇದೇ ರೀತಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನ ಬ್ರದರ್ಸ್ ಎಂದಿದ್ದರು ಎಂದು ನೆನಪಿಸಿದರು.
*ಎಫ್ಎಸ್ಎಲ್ ವರದಿ ಬಹಿರಂಗಪಡಿಸಿ*
ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ. ಯಾರನ್ನೋ ರಕ್ಷಣೆ ಮಾಡಲು ಸರ್ಕಾರ ವರದಿಯನ್ನು ಮುಚ್ಚಿಡುವುದು ಬೇಡ. ಈಗಾಗಲೇ ಮಾಧ್ಯಮಗಳಲ್ಲಿ ಈ ಸುದ್ದಿ ಬಂದಿದೆ. ಈಗ ಜನರಿಗೆ ವರದಿ ನೀಡಲಿ ಎಂದು ಆರ್.ಅಶೋಕ ಆಗ್ರಹಿಸಿದರು.
*ಜಾತಿ ಗಣತಿ ಅವೈಜ್ಞಾನಿಕ*
ಸರ್ಕಾರ ರೂಪಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಇದನ್ನು ವೈಜ್ಞಾನಿಕವಾಗಿ ರೂಪಿಸಲಿ. ಸರಿಯಾದ ಅಂಕಿ ಅಂಶ ಸಂಗ್ರಹಿಸಿ ವರದಿ ರೂಪಿಸಲಿ ಎಂದು ಆರ್.ಅಶೋಕ ಒತ್ತಾಯಿಸಿದರು.
*ಕಾಂತರಾಜ ವರದಿನಾ, ಜಯ ಪ್ರಕಾಶ್ ಹೆಗಡೆ ವರದಿನಾ ಎಂದು ಸರ್ಕಾರ ಸ್ಪಷ್ಟಪಡಿಸಬೇಕು : ಬಸವರಾಜ ಬೊಮ್ಮಾಯಿ*
*ವರದಿಯ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಲಿ: ಬಸವರಾಜ ಬೊಮ್ಮಾಯಿ*
ರಾಜ್ಯ ಸರ್ಕಾರ ಸ್ವೀಕರಿಸಿರುವುದು ಕಾಂತರಾಜು ವರದಿನಾ ಜಯ ಪ್ರಕಾಶ ಹೆಗಡೆ ವರದಿನಾ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳಿಗೆ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ನೀಡಿದ ಆದೇಶದಲ್ಲಿ ಜಾತಿ ಗಣತಿ ಮಾಡಲು ಆದೇಶ ಇರಲಿಲ್ಲ. ಆಗ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಲಿಲ್ಲ. ಜಾತಿ ಗಣತಿ ಯಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಐದಾರು ಅರ್ಜಿ ವಿಚಾರಣೆ ಹಂತದಲ್ಲಿವೆ ಎಂದರು.
ಈಗ ನೀಡಿರುವ ವರದಿಯಲ್ಲಿ ಕೆಲವು ಜಾತಿಗಳ ಉಪಜಾತಿಗಳನ್ನು ಬೇರ್ಪಡಿಸಿದ್ದಾರೆ. ಕೆಲವು ಜಾತಿಗಳ ಉಪ ಜಾತಿಗಳನ್ನು ಬೇರ್ಪಡಿಸಿಲ್ಲ ಎಂಬ ಮಾಹಿತಿ ಇದೆ. ಈ ವರದಿ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ,. ಈ ವರದಿ ಸಾರ್ವಜನಿಕವಾಗಿ ಚರ್ಚೆಯಾಗಲಿ. ನಾವು ಹಿಂದುಳಿದ ವರ್ಗದವರ ವಿರೋಧಿಗಳಲ್ಲ. ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ನ್ಯಾಯ ಸಿಗಬೇಕು. ಈ ವರದಿ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಳಕೆಯಾಗಬಾರದು ಎಂದು ಹೇಳಿದರು.