IMG 20201117 141950 1

ಬಿಜೆಪಿ ಸಂಸದರ ತುರ್ತು ಸಭೆ ಕರೆದ ಮುಖ್ಯಮಂತ್ರಿ ಬಿಎಸ್ ವೈ..

STATE POLATICAL

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಾಯಕತ್ವ ಬದಲಾವಣೆಗಳ ಗೊಂದಲ ಹಾಗೂ ಪಕ್ಷದಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಸಂಜೆ 4 ಗಂಟೆಗೆ ಬಿಜೆಪಿ ಸಂಸದರ ತುರ್ತು ಸಭೆ ಕರೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಒಂದೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಸಂಸದರ ಸಭೆಯನ್ನು ಕರೆದಿದ್ದಾರೆ. ನಾಳೆ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು ರಾಜ್ಯದ ಸಂಸದರು ಸಭೆಯಲ್ಲಿ ಭಾಗಿಯಾಗುವಂತೆ ಸಂದೇಶ ರವಾನಿಸಿದ್ದಾರೆ.

ಸಂಸದರ ಜೊತೆ ಬಹುತೇಕ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಗಳು, ಯೋಜನೆಗಳು ಬಾಕಿ ಹಣ ಬಿಡುಗಡೆ ಸೇರಿದಂತೆ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು, ಮುಂಬರುವ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

 

ಆದರೆ ಆಂತರ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೇಂದ್ರ ನಾಯಕತ್ವದ ಜೊತೆ ರಾಜ್ಯದ ಮುಖ್ಯಮಂತ್ರಿಗಳ ನಡುವೆ ಇರುವ ಗೊಂದಲಗಳು, ಸಂಸದರು ಹಾಗೂ ಸರ್ಕಾರದ ನಡುವೆ ಇರುವ ಅಸಮಾಧಾನಗಳನ್ನು ಸರಿಪಡಿಸಿಕೊಳ್ಳುವ ಆ ಮೂಲಕ ಅಧಿಕಾರದಲ್ಲಿ ಮುಂದುವರೆಯುವ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಎದುರಾದ ಅತಿವೃಷ್ಠಿ ಹಾಗೂ ಪ್ರವಾಹದಿಂದ ಭಾರೀ ಹಾನಿಯಾದರೂ ಕೇಂದ್ರ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡದಿರುವುದು, ಜಿಎಸ್ ಟಿ ಪರಿಹಾರ ಹಣ ಬಾಕಿ , ರಾಜ್ಯದ ಹಲವಾರು ಮಹತ್ವದ ನೀರಾವರಿ ಯೋಜನೆಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮೋದನೆ ನೀಡದಿರುವುದು, ಮಹ ದಾಯಿ, ಕೃಷ್ಣಾ, ಮೇಕೆದಾಟು ಯೋಜನೆ ಸೇರಿದಂತೆ ಬಾಕಿ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಅನುಮೋದನೆ ಪಡೆದುಕೊಳ್ಳಲು ಸಂಸದರ ಮೇಲೆ ಒತ್ತಡ ಹೇರಲು ಸಭೆ ಕರೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಧಾನ ಸೌಧದಲ್ಲಿಂದು ಮಾತನಾಡಿದ ಕಲಬುರಗಿ ಸಂಸದ ಉಮೇಶ್ ಜಾಧವ್, ನಾಳೆ ಮುಖ್ಯಮಂತ್ರಿ ಸಂಸದರ ಸಭೆ ಕರೆದಿದ್ದಾರೆ, ಸಿಎಂ ಕಚೇರಿಯಿಂದ ಕರೆ ಮಾಡಿ ಸಭೆಗೆ ಹಾಜ ರಾಗುವಂತೆ ಆಹ್ವಾನಿಸಿದ್ದಾರೆ, ಕೆಲವು ವಿಚಾರಗಳ ಬಗ್ಗೆ ಅನೌಪಚಾರಿಕೆ ಚರ್ಚೆ ನಡೆಯಲಿದೆ, ನಾಳಿನ ಸಭೆಯ ಉದ್ದೇಶವೇನೆಂಬುದರ ವಿಚಾರವನ್ನು ತಿಳಿಸಿಲ್ಲ ಕೇಂದ್ರ ಸರ್ಕಾರ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚೆ ನಡೆಯಬಹುದು ಹಾಗೂ ರಾಜಕೀಯ ಬೆಳವಣಿಗಳ ಬಗ್ಗೆಯೂ ಚೆರ್ಚೆ ನಡೆಯಬಹುದು ಎಂದು ಅವರು ತಿಳಿಸಿದರು.

ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಂಸದರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಉದ್ದೇಶವೂ ಇದರ ಹಿಂದೆ ಇದೆ ಎನ್ನಲಾಗುತ್ತಿದೆ. ಒಂದು ಕಡೆ ಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ಮತ್ತೊಂದು ಕಡೆಯಲ್ಲಿ ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಸಂಸದರ ಸಭೆ ನಡೆಯುತ್ತಿರುವುದ ತೀವ್ರ ಕುತೂಹಲ ಕೆರಳಿಸಿದೆ.