ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಪ್ರಕ್ರಿಯೆ ಕುರಿತಂತೆ ಪ್ರಧಾನಿ ಪರಿಶೀಲನೆ
ಮೂರು ಲಸಿಕಾ ಉದ್ಘಾಟನಾ ಘಟಕಗಳಿಗೆ ಶ್ರೀ ನರೇಂದ್ರ ಮೋದಿ ಭೇಟಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮೂರು ನಗರಗಳಿಗೆ ಭೇಟಿ ನೀಡಿ, ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯ ವ್ಯಾಪಕ ಪರಾಮರ್ಶೆ ನಡೆಸಿದರು. ಅವರು ಅಹ್ಮದಾಬಾದ್ ನ ಜೈಡುಸ್ ಬಯೋಟೆಕ್ ಪಾರ್ಕ್, ಹೈದ್ರಾಬಾದ್ ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಿದ್ದರು.
ಲಸಿಕೆ ಅಭಿವೃದ್ಧಿ ಪಯಣದ ಈ ನಿರ್ಣಾಯಕ ಹಂತದಲ್ಲಿ ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಲು ಮತ್ತು ತಮ್ಮ ಪ್ರಯತ್ನಗಳನ್ನು ವೇಗಗೊಳಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ತಮ್ಮನ್ನು ಮುಖಾಮುಖಿ ಭೇಟಿಯಾದ ಬಗ್ಗೆ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದರು. ಭಾರತದ ದೇಶೀಯ ಲಸಿಕೆ ಅಭಿವೃದ್ಧಿ ಇಲ್ಲಿಯವರೆಗೆ ತ್ವರಿತವಾಗಿ ಪ್ರಗತಿಯಲ್ಲಿರುವ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತವು ಲಸಿಕೆ ಅಭಿವೃದ್ಧಿಯ ಸಂಪೂರ್ಣ ಪಯಣದಲ್ಲಿ ವಿಜ್ಞಾನದ ಉತ್ತಮ ತತ್ವಗಳನ್ನು ಹೇಗೆ ಅನುಸರಿಸುತ್ತಿದೆ ಎಂಬುದರ ಬಗ್ಗೆ ಮಾತನಾಡಿದ ಅವರು, ಲಸಿಕೆ ವಿತರಣಾ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಸಲಹೆ ಕೇಳಿದರು.
ಲಸಿಕೆ ಉತ್ತಮ ಆರೋಗ್ಯಕ್ಕೆ ಮಾತ್ರವೇ ಮುಖ್ಯವಲ್ಲ ಜೊತೆಗೆ ಜಾಗತಿಕ ಒಳಿತಗೂ ಅದೂ ಉತ್ತಮ ಹಾಗೂ ವೈರಾಣುವಿನ ವಿರುದ್ಧ ಸಂಘಟಿತವಾದ ಹೋರಾಟದಲ್ಲಿ ನೆರೆಯ ರಾಷ್ಟ್ರಗಳೂ ಸೇರಿದಂತೆ ಇತರ ರಾಷ್ಟ್ರಗಳಿಗೆ ನೆರವಾಗುವುದು ಭಾರತದ ಕರ್ತವ್ಯ ಎಂದು ದೇಶ ಪರಿಗಣಿಸುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ದೇಶವು ತನ್ನ ನಿಯಂತ್ರಕ ಪ್ರಕ್ರಿಯೆಗಳನ್ನು ಹೇಗೆ ಮತ್ತಷ್ಟು ಸುಧಾರಿಸಬಹುದು ಎಂಬುದರ ಕುರಿತು ತಮ್ಮ ಮುಕ್ತ ಮತ್ತು ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವರು ವಿಜ್ಞಾನಿಗಳಿಗೆ ಕೇಳಿದರು. ಕೋವಿಡ್-19 ವಿರುದ್ಧ ಉತ್ತಮವಾಗಿ ಹೋರಾಡಲು ವಿವಿಧ ನೂತನ ಮತ್ತು ಪುನರ್ ರೂಪಿತ ಔಷಧಿಗಳನ್ನು ಹೇಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಬಗ್ಗೆ ವಿಜ್ಞಾನಿಗಳು ಒಂದು ಪಕ್ಷಿನೋಟ ಪ್ರಸ್ತುತಪಡಿಸಿದರು.
ಅಹ್ಮದಾಬಾದ್ ನ ಜೈಡುಸ್ ಬಯೋಟೆಕ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು “ದೇಶೀಯವಾಗಿ ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿ.ಎನ್.ಎ ಆಧಾರಿತ ಲಸಿಕೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಹಮದಾಬಾದ್ ನ ಜೈಡುಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಿದ್ದೆ. ಈ ಉತ್ತಮ ಪ್ರಯತ್ನದ ಹಿಂದಿನ ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಪಯಣದಲ್ಲಿ ಅವರನ್ನು ಬೆಂಬಲಿಸಲು ಭಾರತ ಸರ್ಕಾರ ಅವರೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.” ಎಂದರು.
ಹೈದ್ರಾಬಾದ್ ನ ಭಾರತ್ ಬಯೋಟೆಕ್ ಗೆ ಭೇಟಿ ನೀಡಿದ ತರುವಾಯ ಪ್ರಧಾನಮಂತ್ರಿಯವರು , “ಹೈದರಾಬಾದ್ ನ ಭಾರತ್ ಬಯೋಟೆಕ್ ಸೌಲಭ್ಯದಲ್ಲಿ, ದೇಶೀಯ ಕೋವಿಡ್-19 ಲಸಿಕೆ ಬಗ್ಗೆ ತಮಗೆ ವಿವರಿಸಲಾಯಿತು. ಇದುವರೆಗಿನ ಪ್ರಯೋಗಗಳಲ್ಲಿ ವಿಜ್ಞಾನಿಗಳು ಪ್ರಗತಿ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ತ್ವರಿತ ಪ್ರಗತಿಗೆ ಅನುಕೂಲವಾಗುವಂತೆ ಅವರ ತಂಡ ಐಸಿಎಂಆರ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.” ಎಂದರು.
ಸೆರಮ್ ಇನ್ ಸ್ಟಿಟ್ಯೂಟ್ ಗೆ ಭೇಟಿ ನೀಡಿದ ಬಳಿಕ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿ “ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಂಡದೊಂದಿಗೆ ಉತ್ತಮ ಸಂವಾದ ನಡೆಸಿದೆ. ಲಸಿಕೆ ತಯಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ಅವರು ಹೇಗೆ ಯೋಜಿಸಿದ್ದಾರೆ ಎಂಬುದರ ಕುರಿತ ಈವರೆಗಿನ ಪ್ರಗತಿಯ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಅವರ ಉತ್ಪಾದನಾ ಸೌಲಭ್ಯವನ್ನೂ ನೋಡಿದೆ.” ಎಂದು ತಿಳಿಸಿದ್ದಾರೆ.