Joint Press Meet Photos 4

Karanataka: ಅಧಿವೇಶನದಲ್ಲಿ ಹಾಜರಾಗುವ ಸದಸ್ಯರ ಹಾಜರು ಪರಿಶೀಲನೆಗಾಗಿ ವಿಶಿಷ್ಟ ರೀತಿಯ ತಂತ್ರಜ್ಞಾನ ಅಳವಡಿಕೆ…..!

Genaral POLATICAL STATE

ಅಧಿವೇಶನದಲ್ಲಿ ಹಾಜರಾಗುವ ಸಚಿವರ ಮತ್ತು ಶಾಸಕರ ಹಾಜರು ಪರಿಶೀಲನೆಗಾಗಿ ವಿಶಿಷ್ಟ ರೀತಿಯ ತಂತ್ರಜ್ಞಾನ ಅಳವಡಿಕೆ  – ಸಭಾಧ್ಯಕ್ಷ ಯು.ಟಿ. ಖಾದರ್ ಪರೀಧ್

ಬೆಂಗಳೂರು, ಜುಲೈ 12, (ಕರ್ನಾಟಕ ವಾರ್ತೆ) : ಅಧಿವೇಶನಕ್ಕೆ ಹಾಜರಾಗುವ ಸಚಿವರು ಮತ್ತು ಶಾಸಕರ ಹಾಜರು ಪರಿಶೀಲನೆಗಾಗಿ ಈ ಬಾರಿ ವಿಶಿಷ್ಟ ರೀತಿಯ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನದಿಂದಾಗಿ ಯಾರು ಎಷ್ಟು ಸಮಯ ಅಧಿವೇಶನದಲ್ಲಿ ಹಾಜರಿದ್ದರು, ದಿನಕ್ಕೆ ಎಷ್ಟು ಬಾರಿ ಅಧಿವೇಶನದ ಸಭಾಂಗಣಕ್ಕೆ ಬಂದು ಹೋದರು ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಗುವುದು. ಅದನ್ನು ಈ ಬಾರಿ ವ್ಯವಸ್ಥೆ ಮಾಡಲಾಗಿದೆ ಎಂದು  ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಪರೀಧ್ ಅವರು ತಿಳಿಸಿದರು.

ಇಂದು ಸಮ್ಮೇಳನ ಸಭಾಂಗಣದಲ್ಲಿ ಜುಲೈ 15ರಿಂದ ಆರಂಭವಾಗುವ ಅಧಿವೇಶನದ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಧ್ಯಮದವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನವು ಜುಲೈ 15ರಿಂದ 26ರ ವರೆಗೆ ಒಟ್ಟು 09 ದಿನಗಳ ಕಾಲ ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ. ಮೊದಲ ದಿನ  16ನೇ ವಿಧಾನಸಭೆಯ 03ನೇ ಅಧಿವೇಶನವು ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿರುವ ಗಣ್ಯವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗುವುದು. ನಂತರ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಒಟ್ಟು 9 ದಿನಗಳ ಕಾಲದ ಅಧಿವೇಶನದಲ್ಲಿ ಪ್ರಶೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
Joint Press Meet Photos 1
ಕಳೆದ ಬಾರಿಯಂತೆ ಒಂದನೇ ಮಹಡಿಯಲ್ಲಿರುವ ಪತ್ರಕರ್ತರ ಗ್ಯಾಲರಿಯಲ್ಲಿ ಕುರ್ಚಿಗಳ ಲಭ್ಯತೆಗೆ ಸೀಮಿತಗೊಂಡಂತೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪತ್ರಕರ್ತರಿಗೂ ಅಲ್ಲಿ ನಿಂತುಕೊಳ್ಳಲು ಅವಕಾಶವಿರುವುದಿಲ್ಲ. ಮಾನ್ಯ ಸದಸ್ಯರು, ಪತ್ರಕರ್ತರು ಹಾಗೂ ಇಲಾಖಾಧಿಕಾರಿಗಳಿಗಾಗಿ ವಿಧಾನ ಸಭೆಯ ಸಭಾಂಗಣದಲ್ಲಿದ್ದ ಕ್ಯಾಂಟೀನ್ ಸೌಲಭ್ಯವನ್ನು ಈ ಹಿಂದಿನಂತೆ ವಿಧಾನಸೌಧದ ಮೊದಲನೇ ಮಹಡಿಯ ಪೂರ್ವ ಭಾಗದಲ್ಲಿರುವ ಸೆಂಟ್ರಲ್ ಹಾಲಿನಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.
ಸದನದಲ್ಲಿ ಉತ್ತರಿಸಲಾಗುವ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಇತ್ಯಾದಿ ಸೂಚನೆಗಳಿಗೆ ಸರ್ಕಾರದವರು ನೀಡುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಮಾನ್ಯ ಸದಸ್ಯರಿಗೆ ಹಾಗೂ ಪತ್ರಕರ್ತರಿಗೆ ಇ-ಮೇಲ್ ಮುಖಾಂತರ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಪತ್ರಕರ್ತರಿಗೆ ವಾರ್ತಾ ಇಲಾಖೆಯ ಮುಖಾಂತರ ಇ-ಮೇಲ್ ಕಳುಹಿಸಲಾಗುವುದು. ಅಲ್ಲದೇ ಈ ಸಚಿವಾಲಯದ ವೆಬ್‍ಸೈಟ್‍ನಲ್ಲಿಯೂ ದೊರೆಯುತ್ತದೆ ಎಂದು ತಿಳಿಸಿದರು.

2023-24 ನೇ ಸಾಲಿನ ಕರ್ನಾಟಕ ವಿಧಾನ ಮಂಡಲ/ ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿಯು ದಿನಾಂಕ: 08.08.2024 ರಂದು ಮುಕ್ತಾಯಗೊಳ್ಳುತ್ತಿರುವುದರಿಂದ 2024-25ನೇ ಸಾಲಿಗೆ ಹೊಸದಾಗಿ ಸಮಿತಿಗಳನ್ನು ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನು ಮಂಡಿಸಿ, ಕ್ರಮ ಕೈಗೊಳ್ಳಲಾಗುವುದು.
ವಿಶ್ವ ಚೆಸ್ ದಿನಾಚರಣೆಯ ಅಂಗವಾಗಿ ಈ ಬಾರಿ ಸಚಿವರು, ಶಾಸಕರು ಅಧಿಕಾರಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ “ಲೆಜಿಸ್ಲೇಚರ್ ಕಫ್” ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಪತ್ರಕರ್ತರೂ ಸಹ ಭಾಗವಹಿಸಬಹುದಾಗಿದ್ದು, ಅವರೂ ಸಹ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಎಂದಿನಂತೆ ಈ ಬಾರಿಯು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಧಿವೇಶನ ವೀಕ್ಷಿಸಲು ಬರುವ ವಿದ್ಯಾರ್ಥಿಗಳನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಸಲುವಾಗಿ ಅವರಿಗಾಗಿ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ಸಭಾಂಗಣದಲ್ಲಿ ಅಗತ್ಯ ವ್ಯವಸ್ಥೆಯನ್ನು ಈ ಬಾರಿ ಕೈಗೊಳ್ಳಲಾಗಿದೆ. ಅದೇ ರೀತಿ ವಿವಿಧ ರಾಜ್ಯ, ಜಿಲ್ಲೆ, ತಾಲ್ಲೂಕುಗಳಿಂದ ಬರುವ ಜನರಿಗೂ ಸಹ ಅಧಿವೇಶನ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗುವುದು.

ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿಯನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದು ತಿಳಿಸಿದರು.
ನಂತರ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ ಈ ಬಾರಿ ಸದನಲ್ಲಿ ಉತ್ತರಿಸುವ ಸಲುವಾಗಿ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು, ನಿಯಮ 71ರಡಿ ಉತ್ತರಿಸುವ ಪ್ರಶ್ನೆಗಳು, ನಿಯಮ 331ರಡಿ ಉತ್ತರಿಸುವ ಪ್ರಶ್ನೆಗಳು ಸೇರಿದಂತೆ ಒಟ್ಟು 854 ಪ್ರಶ್ನೆಗಳನ್ನು ಸ್ವಿಕರಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಕಳೆದ ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿ ಮಂಡಿಸಲಾದ 2 ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕಾರಕ್ಕಾಗಿ ತೆಗೆದುಕೊಳ್ಳಲಾಗುವುದು. ಸದನವು ವರ್ಷಕ್ಕೆ 60 ದಿನಗಳ ಕಾಲ ನಡೆಯಬೇಕು ಎಂಬ ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ. ಅದರಂತೆ ವರ್ಷಕ್ಕೆ 60 ದಿನ ಸದನವು ನಡೆದರೆ ರಾಜ್ಯದ ಮತ್ತು ಜನರ ಸಮಸ್ಯೆಗಳು ಪರಿಹಾರವಾಗುವುದು ಎಂದು ಸಭಾಪತಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಕಾರ್ಯದರ್ಶಿಗಳಾದ ಕೆ.ಆರ್. ಮಹಾಲಕ್ಷ್ಮಿ, ವಿಧಾನ ಸಭೆಯ ಕಾರ್ಯದರ್ಶಿಗಳಾದ ಎಂ.ಕೆ. ವಿಶಾಲಾಕ್ಷಿ ಸೇರಿದಂತೆ ವಿಧಾನ ಪರಿಷತ್ ಮತ್ತು ವಿಧಾನ ಸಭೆ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.