ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರದು: ಹೆಚ್.ಡಿ.ಕುಮಾರಸ್ವಾಮಿ
ಸಿಎಂ ಹೇಳಿಕೆ ಸರಿಯಲ್ಲ, ಫಲಿತಾಂಶ ಅಚ್ಚರಿ ತಂದಿಲ್ಲ ಎಂದ ಮಾಜಿ ಸಿಎಂ
ಕಲಬುರಗಿ: ಗುಜರಾತ್ ಫಲಿತಾಂಶ ನನಗೇನು ಅಚ್ಚರಿ ಉಂಟು ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಗುಜರಾತಿನ ಫಲಿತಾಂಶ ಅಚ್ಚರಿ ಮೂಡಿಸುವ ಫಲಿತಾಂಶ ಅಲ್ಲ. ಈ ಚುನಾವಣೆ ಪೂರ್ವದಲ್ಲೇ ಅಲ್ಲಿ ವಿಪಕ್ಷಗಳ ಶಕ್ತಿ ಕುಂಠಿತವಾಗಿತ್ತು ಎಂದರು.
ಗುಜರಾತ್‌ನಲ್ಲಿ ವಿಪಕ್ಷಗಳು ಇಲ್ಲದ ಕಾರಣ ಜನತೆ ಇಂತಹ ತೀರ್ಮಾನ ಕೈಗೊಂಡಿದ್ದಾರೆ. ನನ್ನ ಪ್ರಕಾರ ನಿರೀಕ್ಷಿತ ಫಲಿತಾಂಶ ಬಂದಿದೆ. ಇದರಿಂದ ಅಚ್ಚರಿ ಏನೂ ಆಗಿಲ್ಲ. ಗುಜರಾತ್ ಚುನಾವಣೆ ಫಲಿತಾಂಶ ಕರ್ನಾಟಕ ಮೇಲೆ ಪರಿಣಾಮ ಬಿರಲ್ಲ ಎಂದು ಅವರು ಹೇಳಿದರು.
ಗುಜರಾತ್ ಫಲಿತಾಂಶ ಇಟ್ಕೊಂಡು ಇವರು ರಾಜ್ಯಕ್ಕೆ ಬಂದು ಹೇಗೆ ಮತ ಕೇಳುತ್ತಾರೆ ಎಂದು ಕೇಳಿದ ಮಾಜಿ ಮುಖ್ಯಮಂತ್ರಿಗಳು ಓಟ್ ಹೇಗೆ ಕೇಳ್ತಾರೆ? ಇವರು ರಾಜ್ಯದಲ್ಲಿ ಏನ್ ಕೆಲಸ ಮಾಡಿದಾರೆ ಅಂತಾ ಗುಜರಾತ್ ಹೆಸರು ಹೇಳಿ ಓಟ್ ಕೇಳ್ತಾರೆ? ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿ ಮಕಾಡೆ ಮಲಗಿದೆ. ಮಕಾಡೆ ಮಲಗೋದು ಎದ್ದೇಳೋದು ಆ ಪಕ್ಷಗಳ ಸಂಘಟನೆ ಮೇಲೆ ಅವಲಂಭಿಸಿರುತ್ತದೆ ಎಂದು ಹೇಳಿದರು.
ಗುಜರಾತ್ ಚುನಾವಣೆ ಫಲಿತಾಂಶದಿಂದ ಯಾವುದೇ ರಾಜ್ಯದ ಮೇಲೆ ಪರಿಣಾಮ ಬಿರಲ್ಲ ಎಂದು ಒತ್ತಿ ಹೇಳಿದ ಅವರು, ಗುಜರಾತ್ ಫಲಿತಾಂಶ ಬೀರುತ್ತೆ ಅಂತಾ ಸಿಎಂ ಬೊಮ್ಮಾಯಿ ಹೇಳಿಕೆ ಸರಿಯಲ್ಲ. ಅಖಾಡಕ್ಕೆ ಇಳಿದಾಗ ಯಾರೆನು ಅನ್ನೊದು ತಿಳಿಯಲಿದೆ ಎಂದರು.