IMG 20241204 WA0025

JD (S) : ಕಾಂಗ್ರೆಸ್ ಸರಕಾರವನ್ನು ಅಲಿಬಾಬಾ ನಲವತ್ತು ಕಳ್ಳರಿಗೆ ಹೋಲಿಸಿದ ದಳಪತಿ….!

POLATICAL STATE

* ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ಪಾರಾಗಲು ಸಾಧ್ಯವೇ ಇಲ್ಲ ಎಂದ ಸಚಿವರು*

*//ED ಸೀಳು ನಾಯಿ ಎಂದ ಸಚಿವ ಕೃಷ್ಣಭೈರೇಗೌಡಗೆ ಹೆಚ್.ಡಿ.ಕುಮಾರಸ್ವಾಮಿ ತರಾಟೆ//*

*ಕಾಂಗ್ರೆಸ್ ಸರಕಾರವನ್ನು ಅಲಿಬಾಬಾ ನಲವತ್ತು ಕಳ್ಳರಿಗೆ ಹೋಲಿಸಿದ ಕೇಂದ್ರ ಸಚಿವರು*

ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಸೀಳು ನಾಯಿ ಎಂದು ನಿಂದಿಸಿದ ಸಚಿವ ಕೃಷ್ಣಭೈರೇಗೌಡರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ಸರಕಾರ ಅಲಿಬಾಬಾ ನಲವತ್ತು ಕಳ್ಳರ ಗುಂಪಿನಂತೆ ಇದೆ ಎಂದು ದೂರಿದರು.

ಅಧಿಕಾರಕ್ಕೆ ಬಂದಾಗಿನಿಂದ 17ರಿಂದ 18 ಎಸ್ ಐಟಿಗಳನ್ನು ರಚನೆ ಮಾಡಿಕೊಂಡು ರಾಜಕೀಯ ಹಗೆತನ ತೋರುತ್ತಿರುವ ವ್ಯಕ್ತಿಗಳನ್ನು ಏನೆಂದು ಕರೆಯಬೇಕು? ಒಬ್ಬ ಸಚಿವರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಕೇಂದ್ರ ಸಚಿವರು; ಇಡಿಯನ್ನು ಸಚಿವ ಕೃಷ್ಣಭೈರೇಗೌಡರು ಸೀಳುನಾಯಿ ಎಂದು ನಿಂದಿಸಿದ್ದಾರೆ. ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರಿಗೆ ಹ್ಯಾಟ್ಸ್ ಆಫ್ ಮಾಡೋಣ ಎಂದು ಲೇವಡಿ ಮಾಡಿದರು.

ಲೋಕಾಯುಕ್ತ ಅಧಿಕಾರಿಗಳು ಯಾರು? ಸರಕಾರದ ಅಧೀನದಲ್ಲಿ ಬರುವರರು ತಾನೇ? ಇವತ್ತು ಎಷ್ಟು ಜನ ಮಂತ್ರಿಗಳು ಸಮಜಾಯಿಷಿ ಕೊಡುತ್ತಿದ್ದಾರೆ. ಎಲ್ಲರೂ ರಿಲೆಯಲ್ಲಿ ನಿಂತವರಂತೆ ಇಡಿಯನ್ನು ಬೈಯ್ಯುತ್ತಿದ್ದಾರೆ. ತಪ್ಪು ಮಾಡಿದ್ದಾರೆ. ಹತಾಶೆಯಿಂದ ನಿಂದನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಅವರು.

ಕೃಷ್ಣಭೈರೇಗೌಡರು ಇಡಿಯನ್ನು ಸೀಳುನಾಯಿ ಎನ್ನುತ್ತಾರೆ, ಹಾಗಾದರೆ ಅವರ ಸರ್ಕಾರ ರಾಜಕೀಯ ದ್ವೇಷದಿಂದ ರಚನೆ ಮಾಡಿರುವ ಎಸ್ ಐಟಿಗಳನ್ನು ಏನೆಂದು ಕರೆಯಬೇಕು? ಅಧಿಕಾರಿಗಳನ್ನು ಹಾಗೆ ಕರೆಯುವುದು ಸರಿಯೇ? ಮೇಲಿನವರು ಏನು ಹೇಳಿದರೆ ಅದನ್ನು ಅಧಿಕಾರಿಗಳು ಮಾಡುತ್ತಾರೆ. ಹಾಗೆಂದು ಎಸ್ ಐಟಿ ಅವರು ಏನು ಮಾಡಿದ್ದಾರೆ? ಇದುವರೆಗೆ ಎಷ್ಟು ಎಸ್ ಐಟಿ ರಚನೆ ಮಾಡಿದ್ದೀರಿ? 17-18 ಎಸ್ ಐಟಿ ಮಾಡಿದ್ದಾರೆ. ಕೆಲ ಪ್ರಕರಣಗಳ ವಿಷಯದಲ್ಲಿ ಈ ಎಸ್ ಐಟಿ ಹೇಗೆ ನಡೆದುಕೊಂಡಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಕಿಡಿಕಾರಿದರು.

ಹಾಸನದ ಪ್ರಕರಣಕ್ಕೆ ಸಂಬಂಧಿಸಿ ವಕೀಲ ದೇವರಾಜೇಗೌಡ ಅವರು ಆಡಿಯೋ ರಿಲೀಸ್ ಮಾಡಿದ್ದರು. ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಏನೇನು ಹೇಳಿದರು ಎನ್ನುವುದನ್ನು ಇಡೀ ದೇಶವೇ ಕೇಳಿಸಿಕೊಂಡಿದೆ. ಹಾಸನದಲ್ಲಿ ಅದೇನೋ ಸಮಾವೇಶ ಮಾಡುತ್ತಿದ್ದಾರಂತೆ. ಸಾಂತ್ವನ ಹೇಳುವುದಕ್ಕೆ ಹೋಗುತ್ತಾರಂತೆ. ಯಾರಿಗೆ ಸಾಂತ್ವನ ಹೇಳ್ತೀಯಪ್ಪ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಅ ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿದರಲ್ಲವೇ? ಯಾರಾದರೂ ಒಬ್ಬರನ್ನಾದರೂ ಬಂಧಿಸಿದ್ದೀರಾ ಇವರು? ಆ ವಿಡಿಯೋ ಹರಿಯಬಿಟ್ಟವರನ್ನು ಅರೆಸ್ಟ್ ಮಾಡಿದಿರಾ? ಇದು ನಿಮ್ಮ ಎಸ್ ಐಟಿ ತನಿಖೆನಾ? ಇದೆಲ್ಲದ್ದಕ್ಕೂ ಕಾಲ ಒಂದು ದಿನ ಉತ್ತರ ಕೊಡುತ್ತದೆ. ಸತ್ಯಗಳು ಹೊರಗೆ ಬರುವುದು ನಿಶ್ಚಿತ. ಕೃಷ್ಣಭೈರೇಗೌಡರೇ ನೀವು ಹೇಗೆ ನಡೆದುಕೊಳ್ತೀರಾ. ನಿಮ್ ಸರಕಾರ ಹೇಗೆ ನಡೆದುಕೊಳ್ತಿದೆ? ಸಚಿವ ಪರಮೇಶ್ವರ್ ಹೇಳಿಕೆ ನೋಡಿದೆ‌. ಇವರನ್ನು ದೇವರೇ ಕಾಪಾಡಬೇಕು. ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಆಗಿದೆ ಇವರದ್ದು ಎಂದು ಅವರು ತರಾಟೆಗೆ ತೆಗೆದುಕೊಂಡರು

*ಸಿದ್ದರಾಮಯ್ಯ ಪಾರಾಗಲು ಸಾಧ್ಯವೇ ಇಲ್ಲ:*

ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿ ಏನೆಲ್ಲಾ ನಡೆದಿದೆ ಎಂಬುದು ಹಾದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಈ‌ ಸರಕಾರ ಮತ್ತು ಸಚಿವರು ಆಲಿಬಾಬಾ 40 ಕಳ್ಳರಿ ರೀತಿ ಇದ್ದಾರೆ. ಮುಡಾ ಅಕ್ರಮದ ಬಗ್ಗೆ ಜಾರಿ ನಿರ್ದೇಶನಾಲಯ ಲೋಕಾಯುಕ್ತಗೆ ಪತ್ರ ಬರೆದಿದೆ, ಸರಿ. ಇಡಿ ಪತ್ರಕ್ಕೂ ಕೇಂದ್ರ ಸರಕಾರಕ್ಕೂ ಏನ್ ಸಂಬಂಧ? ಮುಡಾ ಹಗರಣದ ಬಗ್ಗೆ ಹೈಕೋರ್ಟ್ ನಲ್ಲಿ ತನಿಖೆಗೆ ಆದೇಶ ಆಗಿದೆ. ಅದರ ಮೇಲೆ ತನಿಖೆ ನಡೆಯಿತ್ತಿದೆ. ಇಡಿಯವರಿಗೆ ಕೇಂದ್ರ ಸೂಚನೆ ಕೊಟ್ಟಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಮುಡಾ ಕೇಸಿನಲ್ಲಿ ರಾಜ್ಯಪಾಲರಿಗೆ ದೂರು ನೀಡಿದವರೇ ಇಡಿಗೂ ದೂರು ಕೊಟ್ಡಿದ್ದಾರೆ. ಮುಡಾದಲ್ಲಿ‌ ಹಣಕಾಸು ವ್ಯವಹಾರ ನಡೆದಿರುವ ಹಿನ್ನಲೆಯಲ್ಲಿ ದೂರು ನೀಡಿದ್ದಾರೆ. ಅದರ ಮೇಲೆ ಇಡಿ ತನಿಖೆ ನಡೆಸಿದೆ. ಮಾಹಿತಿ ಕೊಟ್ಟಿದೆ. ಇದರಲ್ಲಿ ಕೇಂದ್ರವನ್ನು ದೂರಿದರೆ ಉಪಯೋಗ ಏನು? ಎಂದು ಕೇಳಿದರು ಸಚಿವರು.

ಸಿಎಂ-ಡಿಸಿಎಂ ನಡುವೆ ಪವರ್ ಶೇರಿಂಗ್ ಫೈಟ್ ವಿಚಾರದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ನೋಡಿ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ. ರಾಷ್ಟ್ರೀಯ ವಾಹಿನಿಯಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಸ್ವತಃ ಡಿ.ಕೆ.ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಅಂತಹ ಒಪ್ಪಂದ ಆಗಿಲ್ಲ ಎಂದು ಈಗ ಸಿದ್ದರಾಮಯ್ಯ ಹೇಳಿಕೆ ಕೊಡುತ್ತಿದ್ದಾರೆ. ಇದು ಎಲ್ಲೆಲ್ಲಿಗೆ ಹೋಗಿ ಇದು ನಿಲ್ಲುತ್ತದೆ ಎಂದು ನೋಡೋಣ ಎಂದು ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ನಮ್ಮ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ? ಪರಿಹಾರ ಅಂತ 14 ಸೈಟ್ ಪಡೆದಿರೋದೆ ಕಾನೂನುಬಾಹಿರ. ಬಾಮೈದ ಕೊಂಡುಕೊಂಡಿರೋದೆ ಕಾನೂನುಬಾಹಿರ. ಸಿದ್ದರಾಮಯ್ಯ ಈ ಕೇಸ್ ನಲ್ಲಿ ತಪ್ಪಿಸಿಕೊಳ್ಳೋಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ವ್ಯಾಪ್ತಿಯಲ್ಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

 

Leave a Reply

Your email address will not be published. Required fields are marked *