ಪಾವಗಡ ತಾಲ್ಲೂಕು ಪಂಚಾಯತಿಗೆ ಹೊಸ ಸಾರಥಿ.
ಪಾವಗಡ: – ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಸ್ಥಾನ ಭರ್ತಿ ಮಾಡುವ ಕುತೂಹಲದ ತೆರೆಯನ್ನ ಇಂದು ಚುನಾವಣೆಯಲ್ಲಿ ತಾ.ಪಂ.ಸದಸ್ಯೆ ಮಾಳಮ್ಮ ಸುಬ್ಬರಾಯಪ್ಪ ಅವರ ಆಯ್ಕೆ ಪ್ರಕ್ರಿಯೆ ನಡೆದು ನಡೆದು ಕೊನೆಗೂ ತೆರೆ ಎಳೆದಂತಾಗಿದೆ.
ಈ ಹಿಂದಿದ್ದ ತಾ.ಪಂ.ಅಧ್ಯಕ್ಷ ಸೊಗಡು ವೆಂಕಟೇಶ್ ಅಧ್ಯಕ್ಷಗಿರಿಯಿಂದ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಗದ್ದುಗೆಗೆ ಕೈ ಪಾಳೆಯದಲ್ಲಿ ತೀವ್ರ ಪೈಪೋಟಿ ನಡೆದಿತ್ತು.
ಪಳವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾದಿಗ ಸಮುದಾಯದ ಮಾಳಮ್ಮ ಸುಬ್ಬರಾಯಪ್ಪ ಮತ್ತು ಕಾಮನದುರ್ಗ ಕ್ಷೇತ್ರದಿಂದ ಗೆಲುವು ಪಡೆದಿದ್ದ ಲಂಬಾಣಿ ಜನಾಂಗದ ಮಂಜುಳಾ ಸೇವಾನಾಯ್ಕ ಅವರ ನಡುವಿನ ಅಧ್ಯಕ್ಷರ ಸ್ಥಾನವನ್ನು ಮುಡಿಗೇರಿಸಿಕೊಳ್ಳುವಲ್ಲಿ ನೇರಾ ಹಣಾಹಣಿಯಿದ್ದಿತು. 22 ತಾ.ಪಂ ಸದಸ್ಯರ ಸಂಖ್ಯೆ ಪೈಕಿ 16 ಮಂದಿ ಕಾಂಗ್ರೆಸ್ಸಿಗರಾದ್ದರಿಂದ ಅಧ್ಯಕ್ಷ ಪಟ್ಟವನ್ನು ಯಾರಿಗೆ ನೀಡಬೇಕು ಅನ್ನುವ ಲೆಕ್ಕಚಾರದಲ್ಲಿ ಇಂದು ಪಲಿತಾಂಶ ಹೊರಬಿದ್ದು ಮಾದಿಗ ಸಮುದಾಯದ ಮಾಳಮ್ಮ ಸುಬ್ಬರಾಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಧುರೀಣ ಹಾಗೂ ಶಾಸಕ ವೆಂಕಟರವಣಪ್ಪ ಮಾತನಾಡಿ ಕೊರೊನಾ ಹಿನ್ನೆಲೆ ಸರ್ಕಾರದ ಅಭಿವೃದ್ಧಿ ಕಾರ್ಯ ಯೋಜನೆಗಳಿಲ್ಲ ಇದರ ನಡುವೆಯೂ ಜನ ಸಾಮಾನ್ಯರ ಆರ್ತನಾದ ಅರಿತು ಅವರಿಗೆ ಸ್ಪಂದನೆ ನೀಡಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿ ಇನ್ನುಳಿದ ಹತ್ತು ತಿಂಗಳ ಅವಧಿಯಲ್ಲಿ ಲಂಬಾಣಿ ಸಮಾಜ ಹಾಗೂ ಮಾದಿಗ ಸಮಾಜದ ಆಭ್ಯರ್ಥಿಗಳಿಗೆ ಸಮಾನತೆ ನ್ಯಾಯ ಒದಗಿಸಿ ಆಡಳಿತ ನಡೆಸುವಂತೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಮಧಿಗಿರಿ ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ ಇದ್ದರು. ತಹಶೀಲ್ದಾರ್ ವರದರಾಜು,ಮಾಜಿ ಶಾಸಕ ಸೋಮ್ಲನಾಯ್ಕ, ಹಿರಿಯ ಮುಖಂಡ ತಾಳೇಮರದಳ್ಳಿ ನರಸಿಂಹಯ್ಯ, ತಾ.ಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಉಪಾಧ್ಯಕ್ಷ ಐಜಿ ನಾಗರಾಜು, ಮುಖಂಡ ಶಂಕರ್ರೆಡ್ಡಿ ಸೇರಿದಂತೆ ಹಲ ಮುಖಂಡರಿದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ*