ಬೆಂಗಳೂರು: ಕಲ್ಪತರು ನಾಡು ತುಮಕೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಂಘಟನೆ ಮಾಡುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಜ.18 ಮತ್ತು 19 ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಜ.18ರಂದು ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಡಿವಿಜಿ ಸಂಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಶತಮಾನೋತ್ಸದತ್ತ ಮುನ್ನಡೆಯುತ್ತಿದ್ದು, ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಉಳ್ಳ ದೇಶದ ಏಕೈಕ ಬೃಹತ್ ಸಂಘಟನೆಯಾಗಿದೆ ಎಂದರು.
ಪತ್ರಕರ್ತರು ಎದುರಿಸುತ್ತಿರುವ ವೃತ್ತಿ ಪರ ಸಮಸ್ಯೆಗಳು , ಆರೋಗ್ಯ, ಪ್ರೋತ್ಸಾಹಕ ಯೋಜನೆಗಳ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲು ಸಮ್ಮೇಳನಗಳು ಸಮರ್ಥ ವೇದಿಕೆಯಾಗುತ್ತವೆ.
ಸಂಜೆ 4.30ಕ್ಕೆ ಸುದ್ದಿಮನೆ ಮತ್ತು ಪೋಟೋಗ್ರಾಫಿ ಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅವರು ಉದ್ಘಾಟಿಸಲಿದ್ದು, ಹಿರಿಯ ಪತ್ರಿಕಾಛಾಯಾಗ್ರಾಹಕ ಕೆ.ಗೋಪಿನಾಥ್ ಅನು ಶಾಂತರಾಜ್, ಶರಣು ಬಸಪ್ಪ ಪಾಲ್ಗೊಳ್ಳಲಿದ್ದಾರೆ.
ಜ. 19 ರಂದು ಬೆಳಗ್ಗೆ 10.30ಕ್ಕೆ ಮಾಧ್ಯಮ ಮತ್ತು ಓದುಗರು /ನೋಡುಗರು/ಕೇಳುಗರು ಗೋಷ್ಟಿಯನ್ನು ವಿಜಯವಾಣಿ ಸಂಪಾದಕರಾದ ಕೆ.ಎನ್ ಚನ್ನೆಗೌಡ ಉದ್ಘಾಟಿಸಿದರೆ, ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್ ಐನಕೈ ಅವರು ಅಧ್ಯಕ್ಷತಗೆ ವಹಿಸಲಿದದಾರೆ. ಹಿರಿಯ ಪತ್ರಕರ್ತರಾದ ಅನಂತಚಿನಿವಾರ, ಮೈಸೂರುವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಎಂ ಎಸ್ ಸ್ವಪ್ನ, ಅವರುಗಳು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12 ಕ್ಕೆ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಗೋಷ್ಟಿಯನ್ನು ಸುವರ್ಣ ನ್ಯೂಸ್ ಸಂಪಾದಕರ ಅಜಿತ್ ಹನುಮಕ್ಕನವರ್ ಉದ್ಘಾಟಿಸಲಿದ್ದು, ವಿಜಯಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ , ಕಸ್ತೂರಿ ಸಂಪಾದಕರಾದ ಶಾಂತಲಾ ಧರ್ಮರಾಜ್, ದಾವಣಗೆರೆವಿವಿ ಡಾ. ಶಿವಕುಮಾರ ಕಣಸೋಗಿ ಪಾಲ್ಗೋಳ್ಳಲಿದ್ದಾರೆ.
ಎರಡು ದಿನಗಳ ಗೋಷ್ಟಿಗಳಲ್ಲಿ ಸಂವಾದಕರಾಗಿ ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಶಿವಕುಮಾರ್ ಬೆಳ್ಳಿತಟ್ಟೆ, ಉಗಮ ಶ್ರೀನಿವಾಸ್, ಕುಚ್ಚಂಗಿ ಪ್ರಸನ್ನ, ಮರಿಯಪ್ಪ, ಉಮೇಶ್ ಭಟ್ , ಹರೀಶ್ ರೈ, ಗುರುನಾಥ್, ಬಿ.ಎಂ ಹನೀಫ್, ಟಿ ಎಂ ಸತೀಶ್ ಮೊದಲಾದವರು ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಭೆ ಮತ್ತು ಕಲ್ಪತರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಶಾಖೆಯು ಸಮ್ಮೇಳನದ ಆತಿಥ್ಯ ವಹಿಸಿದ್ದು ಜಿಲ್ಲಾ ಘಟಕದ ಅಧ್ಯಕ್ಷರಾದ ಚಿ ನಿ ಪುರುಷೋತ್ತಮ, ಪ್ರಧಾನಕಾರ್ಯದರ್ಶಿ ರಘುರಾಮ್ ತಂಡ ಅವಿರತವಾಗಿ ಶ್ರಮಿಸುತ್ತಿದೆ.
ಸಮ್ಮೇಳನವು ಸಾಂಸ್ಕೃತಿಕ ಸಮಾರಂಭಗಳನ್ನು ಒಳಗೊಂಡಿದ್ದು ಖ್ಯಾತ ಗಾಯಕಿ ಶಮಿತ ಮಲ್ನಾಡ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶಿವಾನಂದ ತಗಡೂರು ಹೇಳಿದರು.