images 63

Karnataka : ಆದಿ ಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆ – ಫಲಪುಷ್ಪ ಪ್ರದರ್ಶನದ ಉದ್ಘಾಟನೆ….!

Genaral STATE

ಆದಿ ಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆ – ಜನವರಿ 16ರಿಂದ 27ರ ವರೆಗೆ ಲಾಲ್‍ಬಾಗ್‍ನಲ್ಲಿ ಫಲ ಪುಷ್ಪ ಪ್ರದರ್ಶನ

ಬೆಂಗಳೂರು, ಜನವರಿ 15 (ಕರ್ನಾಟಕ ವಾರ್ತೆ):ಜನವರಿ 26ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಜನವರಿ 16ರಿಂದ 27ರ ವರಗೆ “ಆದಿ ಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯಡಿ 217ನೇ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ.ಎಸ್. ರಮೇಶ್ ಅವರು ತಿಳಿಸಿದರು.

ಇಂದು ಲಾಲ್‍ಬಾಗ್‍ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ 85 ತಳಿಯ ವಿವಿಧ ಹೂಗಳನ್ನು ಬಳಕೆ ಮಾಡಲಾಗಿದ್ದು, ಸುಮಾರು 32 ಲಕ್ಷ ಹೂಗಳಿಂದ ಮಹರ್ಷಿ ವಾಲ್ಮೀಕಿ ಕಾಲಾವಧಿಯಲ್ಲಿ ಶ್ರಮಿಸಿದ ವಿಶೇಷ ಸ್ಥಳಗಳ ಪ್ರಾತ್ಯಕ್ಷಿಕೆಗಳು, ಹಾಗೂ ಹಲವಾರು ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಉದ್ದೇಶಿಸಲಾಗಿದೆ ಎಂದರು.

ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ:

1820ರಲ್ಲಿ ಪ್ರಾರಂಭವಾದ ಅಗ್ರಿ-ಹಾರ್ಟಿಕಲ್ಟರ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಯಾಗಿದ್ದ ವಿಲಿಯಂ ಮನ್ರೊ ಎಂಬ ಅಧಿಕಾರಿಯ ವರದಿಗಳು, 1838-39ರಲ್ಲಿ, ಲಾಲ್‍ಬಾಗ್ ತೋಟದಲ್ಲಿ ವಿವಿಧ ಬಗೆಯ ಪ್ರದರ್ಶನಗಳು ನಡೆದು, ವಿಜೇತರಿಗೆ ಬಹುಮಾನ ವಿತರಣೆಯಾಗಿರುವ ಬಗ್ಗೆ ಉಲ್ಲೇಖಿಸುತ್ತವೆ. 1867ನೇ ಫೆಬ್ರವರಿ 16 ಮತ್ತು 17 ರಂದು ಶನಿವಾರ, ಭಾನುವಾರ, ಎರಡು ದಿನಗಳ ಪ್ರಥಮ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದ ವಿಜೇತರಿಗೆ ಬೆಳ್ಳಿ ಮತ್ತು ಕಂಚಿನ ಬಹುಮಾನಗಳನ್ನು ವಿತರಿಸಲಾಗಿತ್ತು. ಈ ವಿಚಾರಗಳು 1867ರ ಮೈಸೂರು ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟವಾಗಿರುವುದರಿಂದ, ಇದೇ ಲಾಲ್‍ಬಾಗ್‍ನಲ್ಲಿ ನಡೆದ ಪ್ರಥಮ ಫಲಪುಷ್ಪ ಪ್ರದರ್ಶನವಾಗಿದೆ ಎಂದು ತಿಳಿಸಿದರು.

ಲಾಲ್‍ಬಾಗ್‍ನ ಸೂಪರಿಂಟೆಂಡೆಂಟರಾಗಿದ್ದ ಜಾನ್ ಕ್ಯಾಮರಾನ್ ನೇತೃತ್ವದಲ್ಲಿ, ಲಾಲ್‍ಬಾಗ್‍ನಲ್ಲಿ ದೇಶ-ವಿದೇಶಿ ಸಸ್ಯ ಪ್ರಭೇದಗಳನ್ನು ನಮ್ಮ ವಾತಾವರಣಕ್ಕೆ ಹೊಂದಿಸುವ ಮೂಲ ಉದ್ದೇಶದಿಂದ 1889-91ರ ಅವಧಿಯಲ್ಲಿ ಗಾಜಿನ ಮನೆಯನ್ನು ನಿರ್ಮಿಸಲಾಯಿತು. ನಂತರದಲ್ಲಿ ಗಾಜಿನ ಮನೆಯಲ್ಲಿಯೇ ಫಲಪುಷ್ಪ ಪ್ರದರ್ಶನಗಳನ್ನು ಆಯೋಜಿಸಲು ಪ್ರಾರಂಭಿಸಲಾಯಿತು.

ಗಾಜಿನ ಮನೆಯು ಇದುವರೆಗೆ ಸುಮಾರು 216ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಹಾಗೂ ಹಲವಾರು ಐತಿಹಾಸಿಕ ರಾಜ್ಯದ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭಗಳಿಗೆ ವೇದಿಕೆಯಾಗಿ ಪ್ರಸಿದ್ದಿ ಪಡೆದಿದೆ. 1912ನೇ ಇಸವಿಯಲ್ಲಿ ಅಂದಿನ ಲಾಲ್‍ಬಾಗ್ ಮೇಲ್ವಿಚಾರಕರಾಗಿದ್ದ ಜಿ.ಹೆಚ್.ಕೃಂಬಿಗಲ್ ಅವರು ಬೆಂಗಳೂರು ನಗರದ ಪ್ರಮುಖರನ್ನು ಹಾಗೂ ಅಂದಿನ ಮೈಸೂರು ಸಂಸ್ಥಾನದ ತೋಟಗಾರಿಕೆ ಪರಿಣಿತರು ಹಾಗೂ ಉತ್ಸಾಹ ಶಾಲಿಗಳನ್ನು ಸೇರಿಸಿಕೊಂಡು, ಅಲಂಕಾರಿಕ ತೋಟಗಾರಿಕೆಗೆ ಒತ್ತು ನೀಡಲು ಪ್ರಾರಂಭಿಸಿದರು. ಅಂದಿನಿಂದ. ಮೊದಲಿಗೆ ಮೈಸೂರು ಸಂಸ್ಥಾನ, ನಂತರ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಈವರೆಗೆ, 212 ಫಲಪುಷ್ಪ ಪ್ರದರ್ಶನಗಳನ್ನು ಪೂರೈಸಿತ್ತು. ತೋಟಗಾರಿಕೆ ಇಲಾಖೆಯ

ವತಿಯಿಂದ ಆಯೋಜನೆಗೊಂಡ ಹಿಂದಿನ 3 ಪ್ರದರ್ಶನಗಳನ್ನು ಒಳಗೊಂಡಂತೆ ಈವರೆಗೆ 216 ಪ್ರದರ್ಶನಗಳು ಜರುಗಿದ್ದು, ಪ್ರಸ್ತುತ ಪ್ರದರ್ಶನವು 217ನೇ ಪ್ರದರ್ಶನವಾಗಿರುತ್ತದೆ. ಫಲಪುಷ್ಪ ಪ್ರದರ್ಶನದ ಕ್ಷೇತ್ರದಲ್ಲಿ, ರಾಷ್ಟ್ರ ಮಟ್ಟದಲ್ಲಿಯೇ  ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಇದೊಂದು ದಾಖಲೆಯಾಗಿದೆ ಎಂದು ತಿಳಿಸಿದರು.

ಅಮೇರಿಕಾ, ಲಂಡನ್‍ನ ‘ಕ್ಯೂ’ ಗಾರ್ಡನ್ನಿನ ರಾಯಲ್ ಬಟಾನಿಕಲ್ ಸೊಸೈಟಿಯು ಆಯೋಜಿಸುವ ‘ಚಲ್ಲಿ’ ಪ್ರದರ್ಶನಗಳನ್ನು ಹೊರತುಪಡಿಸಿದರೆ ಲಾಲ್‍ಬಾಗ್‍ನ ಫಲಪುಷ್ಪ ಪ್ರದರ್ಶನಗಳು ಜಾಗತಿಕವಾಗಿ 3ನೇ ಸ್ಥಾನ ಪಡೆದಿರುವುದು ರಾಷ್ಟ್ರ ಹಾಗೂ ರಾಜ್ಯದ ಹೆಗ್ಗಳಿಕೆಯಾಗಿದೆ.

ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ವರ್ಷಕ್ಕೆ ಎರಡು ಫಲಪುಷ್ಪ ಪ್ರದರ್ಶನ:
ಲಾಲ್‍ಬಾಗ್‍ನಲ್ಲಿ ವರ್ಷಕ್ಕೆ ಎರಡು ಫಲಪುಷ್ಪ ಪ್ರದರ್ಶನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಈ ಪ್ರದರ್ಶನಗಳನ್ನು ‘ಬೇಸಿಗೆ’ ಮತ್ತು ‘ಚಳಿಗಾಲದ’ ಪ್ರದರ್ಶನಗಳೆಂದು ಕರೆಯಲಾಗುತ್ತಿತ್ತು. 1951 ರಿಂದ ಈಚೆಗೆ, ಎರಡು ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಏರ್ಪಡಿಸುವುದರಿಂದ, ಈ ಪ್ರದರ್ಶನಗಳನ್ನು ‘ಗಣರಾಜ್ಯೋತ್ಸವ’ ಮತ್ತು ‘ಸ್ವಾತಂತ್ರೋತ್ಸವ’ ಫಲಪುಷ್ಪ ಪ್ರದರ್ಶನಗಳೆಂದು ಕರೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತ ವಿಶೇಷ ಪ್ರದರ್ಶನಗಳು ವೈಭವ ಪೂರ್ಣವಾಗಿ ಆಯೋಜನೆಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಅಪೂರ್ವ ಸಂಚಲನೆಯನ್ನು ಉಂಟು ಮಾಡಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.

ಈ ಸಾಲಿನ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ “ಆದಿಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯಡಿ 2025ನೇ ಜನವರಿ 16 ರಿಂದ 27 ರವರೆಗೆ 12 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಫಲಪುಷ್ಪ ಪ್ರದರ್ಶನದ ಉದ್ಘಾಟನೆ:

“ಆದಿಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯ ಗಣರಾಜ್ಯೋತ್ಸವ 217ನೇ ಫಲಪುಷ್ಪ ಪ್ರದರ್ಶನವನ್ನು ಜನವರಿ 16ರ ಗುರುವಾರ, ಬೆಳಿಗ್ಗೆ 10.00 ಗಂಟೆಗೆ, ಲಾಲ್‍ಬಾಗ್‍ನಲ್ಲಿರುವ ಗಾಜಿನ ಮನೆಯಲ್ಲಿ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅವರು ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರು ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಅವರು ಅತಿಥಿಗಳಾಗಿರುತ್ತಾರೆ. ದಾವಣಗೆರೆ ಜಿಲ್ಲೆಯ ರಾಜನಹಳಿಯ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನು ಸಹ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ  ಮಾನ್ಯ ಶಾಸಕರಾದ ಉದಯ್ ಬಿ. ಗರುಡಾಚಾರ್ ಅವರು  ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಮಾನ್ಯ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ರವರು, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ ಮತ್ತು ರಾಮೋಜಿಗೌಡ ರವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಹಾಗೂ ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆಟ್ರ್ಸ್, ಜಾನೂರು ಮತ್ತು ಪೂರಕ ಕಲೆಗಳ ಪ್ರದರ್ಶನದ ಉದ್ಘಾಟನೆ:

ಫಲಪುಷ್ಪ ಪ್ರದರ್ಶನದ ಜೊತೆಗೆ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನವನ್ನು ತೋಟಗಾರಿಕೆ ಮಾಹಿತಿ ಕೇಂದ್ರ, ಲಾಲ್‍ಬಾಗ್‍ನಲ್ಲಿ ಏರ್ಪಡಿಸಲಾಗಿದೆ. ಜನವರಿ 18ರ ಶನಿವಾರ ಮಧ್ಯಾಹ್ನ 1.00 ಗಂಟೆಗೆ  ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಿದ್ದ ಚಲನಚಿತ್ರ ನಟಿ ಪ್ರೇಮಾ ಅವರು ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಬಹುಮಾನ ವಿತರಣಾ ಸಮಾರಂಭ:

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಜನವರಿ 24 ರ ಶುಕ್ರವಾರ ಮಧ್ಯಾಹ್ನ 2.30 ಗಂಟೆಗೆ ಲಾಲ್‍ಬಾಗ್‍ನ ಡಾ. ಎಂ.ಹೆಚ್. ಮರಿಗೌಡ ಸ್ಮಾರಕ ಭವನ ಇಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಬಿ. ಗರುಡಾಚಾರ್ ಅವರು  ಅಧ್ಯಕ್ಷತೆ ವಹಿಸಲಿದ್ದಾರೆ.

ತೋಟಗಾರಿಕೆ ಮತ್ತು ರೇಷ್ಮೇ  ಇಲಾಖೆಯ  ಕಾರ್ಯದರ್ಶಿಗಳಾದ ಶ್ರೀಮತಿ ಡಾ. ಶಮ್ಲಾ ಇಕ್ಬಾಲ್ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿ.ಐ.ಜಿ ಡಾ. ರವಿ ಡಿ. ಚೆನ್ನಣ್ಣನವರ್ ಅವರುಗಳು ಬಹುಮಾನಗಳನ್ನು ವಿತರಿಸಲಿದ್ದಾರೆ.

Leave a Reply

Your email address will not be published. Required fields are marked *