IMG 20250519 WA0008

ಬೆಂಗಳೂರು : ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿಎಂ ಭೇಟಿ

Genaral STATE

*ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿಎಂ ಭೇಟಿ*

*ಮೇ 21ರಂದು ಇಡೀ ದಿನ ನಗರ ಪ್ರದಕ್ಷಿಣೆ*: *ಮುಖ್ಯಮಂತ್ರಿ ಸಿದ್ದರಾಮಯ್ಯ*

ಬೆಂಗಳೂರು, ಮೇ 19: ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಜನರಿಗೆ ತೊಂದರೆಯಾಗುತ್ತದೆ ಎಂದು ಮನಗಂಡು ಇಂದು ಕೆಲವು ಸ್ಥಳಗಳಿಗೆ ಭೇಟಿ ನೀಡಲಾಗಿದೆ. ನಾಳಿದ್ದು ಇಡೀ ದಿನ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ನಗರ ಪ್ರದಕ್ಷಿಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಾಗುವುದು. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಕೊಡಲಾಗುವುದು ಎಂದರು.

*ಈವರೆಗೆ 491 ಕಿಮಿ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ*

ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಆಳವಿಲ್ಲದೆ ಚಿಕ್ಕದಾಗಿರುವುದಲ್ಲದೆ ಹೂಳು ತುಂಬಿದೆ. ಇದನ್ನು ತೆರವು ಮಾಡಲು ನಗರಪಾಲಿಕೆಯವರಿಗೆ ಅನೇಕ ಬಾರಿ ಸೂಚನೆ ನೀಡಲಾಗಿದ್ದು, ಇನ್ನೂ ಕಾಮಗಾರಿಗಳು ನಡೆಯುತ್ತಿವೆ. 859.90 ಕಿ. ಮಿ ಉದ್ದದ ರಾಜಕಾಲುವೆಗಳು ಇವೆ. ಇಲ್ಲಿಯವರೆಗೆ 491 ಕಿಮಿ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಉದ್ದದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು, 173 ಕಿ.ಮಿ ಉದ್ದದ ರಾಜಕಾಲುವೆಗಳನ್ನು ವರ್ಲ್ಡ್ ಬ್ಯಾಂಕ್ ವತಿಯಿಂದ ಕೈಗೊಳ್ಳಲಾಗಿದ್ದು, ರಾಜಕಾಲುವೆ ಕಾರ್ಯ ಪ್ರಗತಿಯಲ್ಲಿದೆ. ರಾಜಕಾಲುವೆಗಳಾಗದೆ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದು ಕಷ್ಟ. ಬೆಂಗಳೂರು ನಗರದಲ್ಲಿ ಸುಮಾರು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತು ಮಾಡಲಾಗಿದೆ. 166 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 24 ಕಾಮಗಾರಿ ಪ್ರಗತಿಯಲ್ಲಿದ್ದು, ಇವು ಪೂರ್ಣಗೊಂಡರೆ ಈ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

*ಮಹಿಳೆ ಸಾವು:*ಪರಿಹಾರ ಘೋಷಣೆ*
ವೈಟ್ ಫೀಲ್ಡ್ ನಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಸಿಎಂ ಘೋಷಿಸಿದರು.

*ರಾಜಕಾಲುವೆಗಳ ಕಾಮಗಾರಿ ಕೈಗೊಳ್ಳಲಾಗಿದೆ*

ಸಂಚಾರಿ ಪೊಲೀಸರು 132 ಸ್ಥಳಗಳನ್ನು ಗುರುತಿಸಿದ್ದಾರೆ. ಈ ಪೈಕಿ 82 ಕಾಮಗಾರಿ ಪೂರ್ಣಗೊಂಡಿದ್ದು, 41 ಕಾಮಗಾರಿಗಳು ಬಾಕಿ ಇವೆ. ಈ ವರ್ಷ ಇಡೀ ಬೆಂಗಳೂರಿನ ರಾಜಕಾಲುವೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ ಜಂಕ್ಷನ್ ಬಳಿ ಅತಿ ಹೆಚ್ಚು ಮಳೆಯಾಗಿದ್ದು, ನೀರು ಹರಿದುಹೋಗುವಂತೆ ದಾರಿ ಮಾಡಲು ರೈಲ್ವೆಯವರಿಗೆ ಕೆಲಸವನ್ನು ವಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿವರಿಸಿದರು.

*ಸಾರ್ವಜನಿಕರಿಗೆ ತೊಂದರೆಯಾಗದಂತೆ ಮರಗಳು ತೆರವು*
ಮರಗಳನ್ನು ಕೂಡಲೇ ತೆರವು ಮಾಡಲು ಖಾಯಂ ತಂಡಗಳಿವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

*ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು*
ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಸರ್ಕಾರ ಶ್ರೀಮಂತರು, ಬಡವರು ಎಂದು ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

*ಒತ್ತುವರಿಯಾಗದಂತೆ ತಡೆಯಲು ಸೂಚನೆ*

4292 ಒತ್ತುವರಿಯಾಗಿದ್ದು , ಈ ಪೈಕಿ 2326 ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಒತ್ತಿವರಿಯಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ ಎಂದರು.

IMG 20250519 WA0009 1

ಬಿಬಿಎಂಪಿ ವಾರ್ ರೂಮ್‌ನಲ್ಲಿ ಮಾಹಿತಿ ಪಡೆದ ಸಿ ಎಂ :

ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್‌ನಲ್ಲಿ ಮಾಹಿತಿ ಪಡೆದು, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದರು.

ಹಾನಿಗೆ ಒಳಗಾಗಿರುವ ಪ್ರದೇಶಗಳ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಅಗತ್ಯ ಕ್ರಮಗಳನ್ನು ಸರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.

ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಹಾಜರಿದ್ದು ಪರಿಸ್ಥಿತಿಯನ್ನು ಗಂಭೀರವಾಗಿ‌ ಅವಲೋಕಿಸಿದರು.

ಶಾಸಕರಾದ ಎನ್.ಎ.ಹ್ಯಾರಿಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್, ಪರಿಷತ್ ಸದಸ್ಯರಾದ ಸೀತಾರಾಮ್, ಸುಧಾಮ್‌ದಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *