ಪಾವಗಡ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ಶನಿವಾರ ಪಟ್ಟಣದ ಗುರುಭವನದಲ್ಲಿ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದ ಶಾಸಕ ವೆಂಕಟರವಣಪ್ಪ ಮಾದರಿ ಶಿಕ್ಷಕರಾದ ಸರ್ವಪಲ್ಲಿ ರಾಧಕೃಷ್ಣ ರವರನ್ನು ಸ್ಮರಿಸಿ ಶಿಕ್ಷಕರು ಪಠ್ಯದ ಜೊತೆಗೆ ಸೃಜನಾತ್ಮಕವಾಗಿ ಬೋಧಿಸುವ ಕಲೆ ಮೈಗೂಡಿಸಿಕೊಂಡಾಗ ಇಂತಹ ಫಲಿತಾಂಶ ಬರಲು ಸಾಧ್ಯ ಎಂದು ಶಿಕ್ಷಕರನ್ನ ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮಾತನಾಡಿ ರಾಜ್ಯದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮೂರನೇ ಸ್ಥಾನ ಗಳಿಸಿದರೆ..ಎಸ್.ಎಸ್.ಎಲ್ಸಿ ಪರೀಕ್ಷೆಯಲ್ಲಿ ಪಾವಗಡ ತಾಲ್ಲೂಕು 204 ಬ್ಲಾಕ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು ತುಮಕೂರು ಜಿಲ್ಲೆಯಲ್ಲಿಯೇ ತಾಲ್ಲೂಕು ಮೊದಲ ಸ್ಥಾನ ಬಂದಿರೋದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು. ಇದರಲ್ಲಿ ಶಿಕ್ಷಕರ ಪಾತ್ರ ಹಾಗೂ ಶ್ರಮ ಅತ್ಯಮೂಲ್ಯವಾಗಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ
ತಾಲ್ಲೂಕಿನಲ್ಲಿ ಮೂವತ್ತಕ್ಕಿಂತ ಅಧಿಕ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಲ್ಗೊಂಡು ಶೇಕಡವಾರು 100 ಅಂಕ ಗಳಿಸಿದ ಸರ್ಕಾರಿ ಶಾಲೆಗಳ ಪೈಕಿ ಐದು, ಮೂರು ಅನುದಾನಿತ ಶಾಲೆಗಳಿಗೆ ಸರ್ಕಾರದ ವತಿಯಿಂದ ಅಭಿನಂದನಾಫಲಕದೊಂದಿಗೆ 25 ಪ್ರೋತ್ಸಾಹ ಧನವನ್ನು ನೀಡಲಾಯಿತು.ಹಾಗೆಯೇ ತಾಲ್ಲೂಕಿನ ಏಳು ಖಾಸಗಿ ಶಾಲೆಗಳಿಗೆ ಅಭಿನಂದನಾ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಸತ್ಯ ನಾರಾಯಣರವರು ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ, ಬಿ .ಆರ್. ಸಿ. ಪವನ್ ಕುಮಾರ್ ರೆಡ್ಡಿ, ಪ್ರಭಾರ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಎ.ಡಿ. ರಂಗನಾಥ್ ಸೇರಿದಂತೆ ತಾಲ್ಲೂಕಿನ ಶಿಕ್ಷಕರ ಸಂಘದ ಎಲ್ಲಾ ಶಿಕ್ಷಕ ವೃಂದ ಭಾಗಿಯಾಗಿದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ