IMG 20250721 WA0055

Karnataka : ಅಂಡಾಣು ಸಂರಕ್ಷಣೆ ಬಗ್ಗೆ ವೃತ್ತಿಪರ ಮಹಿಳೆಯರಲ್ಲಿ ಹೆಚ್ಚಿದ ಒಲವು…!

BUSINESS

ಅಂಡಾಣು ಸಂರಕ್ಷಣೆ ಬಗ್ಗೆ ವೃತ್ತಿಪರ ಮಹಿಳೆಯರಲ್ಲಿ ಹೆಚ್ಚಿದ ಒಲವು
ಈ ಬಗೆಗಿನ ವಿಚಾರಣೆಗಳಲ್ಲಿ ಶೇ.25 ರಷ್ಟು ಹೆಚ್ಚಳ: ತಜ್ಞ ವೈದ್ಯರು

ಬೆಂಗಳೂರು, ಜುಲೈ 21, 2025: ಭಾರತದಲ್ಲಿ ಅಂಡಾಣು ಸಂರಕ್ಷಣೆ ಹೊಸ ಪದ್ಧತಿಯಾಗಿ ಪರಿಣಮಿಸಿದೆ. ಆದರೆ, ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದ್ರಾಬಾದ್ ನಂತಹ ಮೆಟ್ರೋ ನಗರಗಳಲ್ಲಿ ಇದು ಕ್ರಮೇಣ ಜನಪ್ರಿಯತೆ ಪಡೆಯುತ್ತಿದೆ. ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಸಮಯದ ವಿಚಾರದಲ್ಲಿ ನಿಯಂತ್ರಣವನ್ನು ಸಾಧಿಸುವ ಆಯ್ಕೆಯಾಗಿ ಈ ಅಂಡಾಣು ಸಂರಕ್ಷಣೆ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜೈವಿಕ ವಾಸ್ತವವು ಸಹ ಇಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅನೇಕ ಮಹಿಳೆಯರು ವಯಸ್ಸಿಗೆ ಸಂಬಂಧಿಸಿದ ಫಲವತ್ತತೆ ಕುಸಿತದಿಂದ ರಕ್ಷಣೆ ಪಡೆಯಲು ಈ ಪದ್ಧತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ & ಐವಿಎಫ್ ಸೆಂಟರ್ ನ ವೈದ್ಯಕೀಯ ನಿರ್ದೇಶಕಿ ಡಾ.ವಿದ್ಯಾ ವಿ.ಭಟ್ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಐವಿಎಫ್ ದಿನದ ಅಂಗವಾಗಿ ಮಾತನಾಡಿದ ಅವರು, ಅಂಡಾಣು ಸಂರಕ್ಷಣೆ (ಎಗ್ ಫ್ರೀಜಿಂಗ್) ಎಂಬುದು ಮಹಿಳೆಯ ಅಂಡಾಣುಗಳನ್ನು ಹೊರ ತೆಗೆದು ಸಂರಕ್ಷಿಸಿಡುವ ಪ್ರಕ್ರಿಯೆಯಾಗಿದೆ. ವಿಟ್ರಿಫಿಕೇಶನ್ ಎಂಬ ತಂತ್ರವನ್ನು ಬಳಸಿಕೊಂಡು ಅವುಗಳನ್ನು ಸಂರಕ್ಷಣೆ ಮಾಡುವುದು ಮತ್ತು ಭವಿಷ್ಯದ ಬಳಕೆಗಾಗಿ ಸಂಗ್ರಹ ಮಾಡುವುದಾಗಿದೆ. ಇದು ಮಹಿಳೆಯರು ತಡವಾಗಿ ಮಕ್ಕಳನ್ನು ಪಡೆಯುವುದಕ್ಕೆ ಅನುವು ಮಾಡಿಕೊಡುತ್ತದೆ’’ ಎಂದು ಹೇಳಿದ್ದಾರೆ.

ಖ್ಯಾತ ಪ್ರಸೂತಿ ತಜ್ಞೆ, ಸ್ತ್ರೀರೋಗ ತಜ್ಞೆ, ಲ್ಯಾಪರೋಸ್ಕೋಪಿಕ್ ಸರ್ಜನ್ ಮತ್ತು ಐವಿಎಫ್ ತಜ್ಞೆಯಾಗಿರುವ ಡಾ.ವಿದ್ಯಾ ವಿ ಭಟ್ ಅವರು, “ಕಳೆದ ಐದು ವರ್ಷಗಳಲ್ಲಿ ಅಂಡಾಣು ಸಂರಕ್ಷಣೆ ಬಗ್ಗೆ ವಿಚಾರಣೆ ಮಾಡುವ ಅಥವಾ ಈ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆಯಲ್ಲಿ ಶೇ.20-25 ರಷ್ಟು ಹೆಚ್ಚಳ ಕಂಡುಬಂದಿದೆ. ಇದೇ ಅವಧಿಯಲ್ಲಿ ನಮ್ಮಲ್ಲಿ ಇಂತಹ ಪ್ರಕರಣಗಳು ದ್ವಿಗುಣಗೊಂಡಿವೆ. ಮಹಿಳೆಯರು ತಮ್ಮ ಅಂಡಾಣುಗಳನ್ನು ಸಂರಕ್ಷಣೆ ಮಾಡುವುದು ತಕ್ಷಣದ ವೈದ್ಯಕೀಯ ಅಗತ್ಯತೆಯಿಂದಲ್ಲ. ಇದರ ಬದಲಿಗೆ ಭವಿಷ್ಯಕ್ಕಾಗಿ ಅಂಡಾಣುಗಳನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳುವ ಆಯ್ಕೆಗೆ ಮೊರೆ ಹೋಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಮಹಿಳೆಯರು ತಮ್ಮ ವೃತ್ತಿಯ ಬೆಳವಣಿಗೆ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿರುವುದು, ವಿಳಂಬವಾದ ಮದುವೆ ಅಥವಾ ಸರಿಯಾದ ಸಂಗಾತಿಗಾಗಿ ಕಾಯುವುದಾಗಿದೆ’’ ಎಂದು ವಿವರಿಸಿದರು.

ಮಹಿಳೆಯು ಯಾವ ವಯೋಮಾನದಲ್ಲಿ ಅಂಡಾಣುವನ್ನು ಸಂರಕ್ಷಿಸಿಟ್ಟುಕೊಳ್ಳುವುದು ಸೂಕ್ತ ಎಂಬುದನ್ನು ವಿವರಿಸಿರುವ ಡಾ.ವಿದ್ಯಾ ವಿ.ಭಟ್ ಅವರು, “ಸಾಮಾನ್ಯವಾಗಿ 20 ವರ್ಷದ ನಂತರ ಮತ್ತು 30 ವರ್ಷದೊಳಗಿನ ಮಹಿಳೆಯರಿಗೆ ಅಂಡಾಣು ಸಂರಕ್ಷಣೆ ಮಾಡಿಕೊಳ್ಳುವುದು ಸೂಕ್ತ ಎಂಬ ಶಿಫಾರಸನ್ನು ನಾವು ಮಾಡುತ್ತೇವೆ. ಈ ವಯೋಮಾನದಲ್ಲಿ ಮೊಟ್ಟೆ ಅಂದರೆ ಅಂಡಾಣುಗಳ ಗುಣಮಟ್ಟ ಮತ್ತು ಸಂಖ್ಯೆ ಗಣನೀಯವಾಗಿ ಉತ್ತಮವಾಗಿರುತ್ತದೆ. 35 ವರ್ಷಕ್ಕಿಂತ ಕಡಿಮೆ ವಯೋಮಾನದಲ್ಲಿ ಅಂಡಾಣುಗಳನ್ನು ಸಂರಕ್ಷಣೆ ಮಾಡಿದರೆ ನಂತರ ಗರ್ಭಿಣಿಯಾಗುವ ಅವಕಾಶ ಉತ್ತಮವಾಗಿರುತ್ತದೆ. ಆದರೆ, 35 ರ ನಂತರ ಅಂಡಾಣುಗಳ ಗುಣಮಟ್ಟ ಕ್ರಮೇಣವಾಗಿ ಕುಸಿತಗೊಳ್ಳುತ್ತಾ ಹೋಗುತ್ತದೆ. ಆದಾಗ್ಯೂ, ಈ ವಯೋಮಾನದಲ್ಲಿ ಅಂಡಾಣು ಸಂರಕ್ಷಣೆಗೆ ಅವಕಾಶವಿರುತ್ತದೆಯಾದರೂ ಅಷ್ಟೊಂದು ಪರಿಣಾಮಕಾರಿಯಾದ ಗುಣಮಟ್ಟವಾಗಲೀ ಅಥವಾ ಫಲವತ್ತತೆಯಾಗಲೀ ಕಂಡುಬರುವುದಿಲ್ಲ. ಸಂರಕ್ಷಣೆ ಮಾಡಿದ ಅಂಡಾಣುಗಳೆಲ್ಲವೂ ಜೀವಂತವಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಅವುಗಳು ಜೀವಂತವಾಗಿದ್ದರೂ ಫಲವತ್ತತೆಯ ಗ್ಯಾರಂಟಿಯನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನವು ಅಭೂತಪೂರ್ವವಾಗಿ ಸುಧಾರಣೆ ಕಾಣುತ್ತಿದ್ದರೂ ಇದು ಸಂಪೂರ್ಣ ವಿಮಾ ಪಾಲಿಸಿಯಲ್ಲ, ಇದು ಕೇವಲ ಸಂಭವನೀಯತೆಯ ವರ್ಧಕವಾಗಿರುತ್ತದೆ’’ ಎಂದು ಸಲಹೆ ನೀಡಿದರು.

“35 ವರ್ಷಕ್ಕಿಂತ ಮೊದಲು ಅಂಡಾಣುಗಳನ್ನು ಸಂರಕ್ಷಣೆ ಮಾಡಿಟ್ಟರೆ ಉತ್ತಮ ರೀತಿಯಲ್ಲಿ ಹೆರಿಗೆಯಾಗುವ ಸಾಧ್ಯತೆಗಳು ಶೇ.40-60 ರಷ್ಟು ಆಗಿರಬಹುದು. ಭಾರತದಲ್ಲಿ ಪ್ರಮುಖ ಐವಿಎಫ್ ಕೇಂದ್ರಗಳು ಶೇ.90 ಕ್ಕಿಂತ ಹೆಚ್ಚು ಬದುಕುಳುವಿಕೆಯ ಪ್ರಮಾಣವನ್ನು ನೀಡುತ್ತವೆ. ಭಾರತದಲ್ಲಿ ಫಲವತ್ತತೆ ಮತ್ತು ಭ್ರೂಣದ ಬೆಳವಣಿಗೆ ಸಹ ಸಾಕಷ್ಟು ಉತ್ತೇಜನಕಾರಿಯಾಗಿದೆ. ಆದಾಗ್ಯೂ, ಅತ್ಯುತ್ತಮ ಯಶಸ್ಸಿಗೆ ಒಂದಕ್ಕಿಂತ ಹೆಚ್ಚು ಬಾರಿ ಈ ಪ್ರಯತ್ನಗಳ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ಮಹಿಳೆಯರು ಸಿದ್ಧರಾಗಿರಬೇಕಾಗುತ್ತದೆ’’ ಎಂದು ಡಾ.ವಿದ್ಯಾ ವಿ.ಭಟ್ ತಿಳಿಸಿದರು.

“ಈ ಅಂಡಾಣು ಸಂರಕ್ಷಣೆ ಬಗ್ಗೆ ನಮ್ಮ ಸಮಾಜ ಹೇಗೆ ಪರಿಗಣಿಸುತ್ತದೆ ಎಂಬುದನ್ನು ಗಮನಿಸಿದಾಗ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಮಕ್ಕಳಾಗದಿರುವುದಕ್ಕೆ ಮಹಿಳೆಯರೇ ಕಾರಣ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿ ಮನೆ ಮಾಡಿತ್ತು. ಈ ಕಳಂಕವನ್ನೂ ಮಹಿಳೆಯೇ ಹೊರಬೇಕಿತ್ತು. ಇಂದು ವಿಶೇಷವಾಗಿ ನಗರಗಳಲ್ಲಿ ಅನೇಕ ಕುಟುಂಬಗಳು ಮತ್ತು ಗಂಡಂದಿರು ಅಂಡಾಣು ಸಂರಕ್ಷಣೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದಾಗ್ಯೂ, ಅದರ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳು ಮತ್ತು ಫಲವತ್ತತೆ ಸಂರಕ್ಷಣೆ ಅಸ್ವಾಭಾವಿಕ ಎಂಬ ಕಲ್ಪನೆಗಳು ಮುಂದುವರಿದಿವೆ. ಆದರೆ, ಈ ಬಗ್ಗೆ ತಪ್ಪು ಕಲ್ಪನೆಗಳು ನಿಧಾನವಾಗಿ ಬದಲಾಗುತ್ತಿರುವುದು ಸಂತಸದ ವಿಚಾರವಾಗಿದೆ’’ ಎಂದರು.

“ಅಂಡಾಣು ಸಂರಕ್ಷಣೆಯಿಂದ ಮಕ್ಕಳಾಗುವುದು ಶತಃಸಿದ್ಧ ಎಂಬ ಅತಿದೊಡ್ಡ ಕಟ್ಟುಕತೆಯೂ ಇದೆ. ಆದರೆ, ಇದು ಶೇ.100 ರಷ್ಟು ವಿಮಾ ಪಾಲಿಸಿಯಲ್ಲ ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಇದು ನಿಮ್ಮ ಸಾಧ್ಯತೆಗಳನ್ನು ಹೆಚ್ಚು ಮಾಡುತ್ತದೆ. ಇದೊಂದು ಅತ್ಯುತ್ತಮ ಆಯ್ಕೆಯೇ ಹೊರತು ಪರಿಪೂರ್ಣವಾದ ಭರವಸೆಯಲ್ಲ. ಮಹಿಳೆಯರು ಅಂಡಾಣುಗಳನ್ನು ಸಂರಕ್ಷಣೆ ಮಾಡುವ ವಿಧಾವನವನ್ನು ಬೇಗನೇ ಅಳವಡಿಸಿಕೊಂಡರೆ ಅವರಿಗೆ ವೈದ್ಯಕೀಯವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚಿನ ಆಯ್ಕೆಗಳು ಲಭ್ಯವಾಗುತ್ತವೆ. ಅವರು ಭವಿಷ್ಯದಲ್ಲಿ ಅನಿರ್ದಿಷ್ಟವಾಗಿ ತಾಯ್ತನವನ್ನು ಮುಂದೂಡುವ ಬದಲು ಅದನ್ನು ನಿಯಂತ್ರಣ ಎಂಬುದಷ್ಟನ್ನೇ ಭಾವಿಸಬೇಕು’’ ಎಂದು ಅವರು ಸಲಹೆ ನೀಡಿದರು.

“ಭಾರತದಲ್ಲಿ ಅಂಡಾಣು ಸಂರಕ್ಷಣೆಯು ಇನ್ನೂ ಒಂದು ಪ್ರೀಮಿಯಂ ವಿಧಾನವೆಂದು ಗ್ರಹಿಸಲಾಗುತ್ತಿದೆ. ಹೆಚ್ಚಾಗಿ ಸ್ಥಿರವಾದ ವೃತ್ತಿಜೀವನ ಹೊಂದಿರುವ ಮಹಿಳೆಯರು ಇದನ್ನು ಅಳವಡಿಸಿಕೊಳ್ಳುತ್ತಾರೆ. ಹೆಚ್ಚುತ್ತಿರುವ ಜಾಗೃತಿಯು ಹೆಚ್ಚಿನ ಮಹಿಳೆಯರು ಅಂಡಾಣು ಸಂರಕ್ಷಣೆಯನ್ನು ತಕ್ಷಣವೇ ಆಯ್ಕೆ ಮಾಡಿಕೊಳ್ಳದಿದ್ದರೂ ಸಹ ಕನಿಷ್ಠ ಸಮಾಲೋಚನೆಗಳನ್ನು ಪಡೆದುಕೊಳ್ಳುವುದು ಸೂಕ್ತವಾಗಿದೆ. ತಂತ್ರಜ್ಞಾನವು ಹೆಚ್ಚು ಹೆಚ್ಚು ಮುಖ್ಯವಾಹಿನಿಗೆ ಬರುತ್ತಿದ್ದಂತೆ ವೆಚ್ಚಗಳು ಮತ್ತಷ್ಟು ಕಡಿಮೆಯಾಗುತ್ತವೆ. ಹೀಗಾಗಿ ಈ ಅಂಡಾಣು ಸಂರಕ್ಷಣೆಯು ಹೆಚ್ಚು ಹೆಚ್ಚು ಮಹಿಳೆಯರಿಗೆ ಒಂದು ಆಯ್ಕೆಯಾಗಿದೆ’’ ಎಂದು ಡಾ.ವಿದ್ಯಾ ವಿ.ಭಟ್ ಅಭಿಪ್ರಾಯಪಟ್ಟರು.