*ಸಣ್ಣಪುಟ್ಟ ವ್ಯಾಪಾರಿಗಳಿಗೆ ಅವೈಜ್ಞಾನಿಕ ಜಿ.ಎಸ್.ಟಿ ನೋಟೀಸ್ ವಿರುದ್ಧ ಜು. 24 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ*
*ಬೆಂಗಳೂರು,ಜು.22:* ಸಣ್ಣಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ಜಿ.ಎಸ್.ಟಿ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜುಲೈ 24 ರಂದು ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮತ್ತು ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ (ರಿ) ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಬಿ.ಪ್ರತಾಪ್ ಶೆಟ್ಟಿ, ಕಾಂಡಿಮೆಂಟ್ಸ್, ಬೇಕರಿ, ಹಾಲು, ತರಕಾರಿ ಅಂಗಡಿ ಇತ್ಯಾದಿ ಸಣ್ಣ ಉದ್ದಿಮೆದಾರರಿಗೆ ಜಿ.ಎಸ್.ಟಿ ನೋಟಿಸ್ ನೀಡಿ ಒಂದು ವಾರದಲ್ಲಿ ಉತ್ತರಿಸುವಂತೆ ಹೇಳಿರುವುದರಿಂದ ಭೀತಿಯ ವಾತಾವರಣ ನಿರ್ಮಾಣವಾಗಿದೆ. 4 ವರ್ಷದ ಬ್ಯಾಂಕ್ ವಹಿವಾಟು, ಖರೀದಿ ರಸೀದಿ, ವ್ಯಾಪಾರ, ವಹಿವಾಟಿನ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ. ಆದರೆ ವಾಸ್ತವವಾಗಿ ನಮ್ಮ ಬಳಿ ಯಾವುದೇ ದಾಖಲೆ ಇಲ್ಲ.
ವ್ಯಾಪಾರ, ಕಾರ್ಮಿಕರ ಪರವಾನಗಿ ಕೂಡ ನೀಡಲು ಸಾಧ್ಯವಿಲ್ಲ. ಇವೆಲ್ಲವನ್ನೂ ಒಂದು ವಾರದಲ್ಲಿ ಸಲ್ಲಿಸಿ ಎಂದರೆ ಹೇಗೆ?. ನಮ್ಮವರು ವ್ಯಾಪಾರದ ಪುಸ್ತಕ ನಿರ್ವಹಣೆ ಮಾಡಿಲ್ಲ. ಇಲ್ಲಿ ಮಾಲೀಕರೇ ಕೆಲಸಗಾರರು. ನಾಳಿನ ವ್ಯಾಪಾರಕ್ಕೆ ಯಾವ ವಸ್ತುಗಳನ್ನು ತರಬೇಕು ಎಂಬುದನ್ನು ಯೋಚಿಸುತ್ತಾರೆಯೇ ವಿನಃ ಲೆಕ್ಕ ಬರೆಯಲು ನಮ್ಮಲ್ಲಿ ಯಾರ ಬಳಿಯೂ ಪುರುಸೊತ್ತಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಪುಂಡರ ಕಾಟ ಅತ್ಯಧಿಕವಾಗಿದ್ದು, ಸಣ್ಣಪುಟ್ಟ ವ್ಯಾಪಾರಿಗಳಲ್ಲಿ ಸಾಲ ಮಾಡಿ ಮರು ಪಾವತಿಸುತ್ತಿಲ್ಲ. ನಮ್ಮಲ್ಲಿ ಕೆಲಸ ಮಾಡುವ ಶೇ 70 ರಷ್ಟು ಜನ ಉಬ್ಬಿದ ರಕ್ತನಾಳ ಮತ್ತಿತರೆ ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ. ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗದಷ್ಟು ಸೊರಗಿದ್ದಾರೆ. ಚಹಾ, ಕಾಫಿ ಸಿಗರೇಟು, ಪಾನ್ ಮಸಾಲೆ ಮಾರಾಟಕ್ಕೆ ಪೊಲೀಸರ ಉಪಟಳ ಹೆಚ್ಚಾಗಿದ್ದು, ಉತ್ಪಾದಕರನ್ನು ಬಿಟ್ಟು ವಿನಾಕಾರಣ ನಮ್ಮನ್ನು ಗುರಿಯಾಗಿಸಿಕೊಂಡು ದಂಡ ವಿಧಿಸುತ್ತಿದ್ದಾರೆ. ನಾವು ಸಣ್ಣ ಮತ್ತು ಮದ್ಯಮ ಉದ್ಯಮದ ವ್ಯಾಪ್ತಿಗೆ ಒಳಪಡುತ್ತಿಲ್ಲ. ನಮಗೆ ಸಾಲ, ಸೌಲಭ್ಯ ಮರಿಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೇ 95 ರಷ್ಟು ಜನ ಡಿಟಿಟಲ್ ಪಾವತಿ ಮಾಡುತ್ತಿದ್ದು, 20 ರಿಂದ 40 ಲಕ್ಷ ವಹಿವಾಟು ಮಾಡಿದವರಿಗೆ ನೋಟೀಸ್ ನೀಡುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದ್ದು, ಇಂತಹ ನೋಟೀಸ್ ಗಳನ್ನು ಹಿಂಪಡೆಯಬೇಕು. ವಾರ್ಷಿಕ 40 ಲಕ್ಷ ವಹಿವಾಟು ದಾಟಿರುವ ವ್ಯಾಪಾರಿಗಳಿಂದ ಲಭ್ಯವಿರುವ ದಾಖಲೆಗಳನ್ನು ಪಡೆದುಕೊಂಡು ಶೇ 1 ರಷ್ಟು ರಾಜೀ ತೆರಿಗೆ ಪರಿಹಾರ ಯೋಜನೆಯಡಿ ತೆರಿಗೆ ಪಾವತಿಸಿ ವ್ಯಾಪಾರ ವಹಿವಾಟು ನಡೆಸಲು ಅನುವು ಮಾಡಿಕೊಡಬೇಕು. ಪುಂಡರ ಕಾಟಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಅಸಂಘಟಿತ ವಲಯದವರಾದ ನಮಗೆ ಸರ್ಕಾರದಿಂದ ಆರೋಗ್ಯ ವಿಮೆ ಸೌಲಭ್ಯ ದೊರಕಿಸಿಕೊಡಬೇಕು. ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಪೊಲೀಸರು, ಮಾರ್ಷಲ್ ಗಳು ವಿನಾಕಾರಣ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಬಾರದು. ಕಾಂಡಿಮೆಂಟ್ಸ್, ಬೇಕರಿ, ಹಾಗೂ ಸಣ್ಣ ಉದ್ದಿಮೆದಾರರಿಗೆ ಸರ್ಕಾರದಿಂದ ಸಾಲ ಸೌಲಭ್ಯದ ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗುತ್ತಿರುವಂತೆ ಎಲ್ಲಾ ಬಗೆಯ ಸೌಲಭ್ಯ ಗಳನ್ನು ನಮಗೂ ಕಲ್ಪಿಸಿ ಕೊಡಬೇಕು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಬಿ.ಪ್ರತಾಪ್ ಶೆಟ್ಟಿ ಒತ್ತಾಯಿಸಿದರು. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ವಿರುದ್ಧ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಯುಪಿಐ ಸ್ಕ್ಯಾನರ್ ಹರಿದು ಹಾಕುವ ಅಭಿಯಾನ ನಡೆಸುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ ದ ಕರುಣಾಕರ ಶೆಟ್ಟಿ ಹಟ್ಟಿಯಂಗಡಿ – ಉಪಾಧ್ಯಕ್ಷರು, ಕೇಶವ ಪೂಜಾರಿ – ಉಪಾಧ್ಯಕ್ಷರು,ಭೋಜರಾಜ್ ಶೆಟ್ಟಿ – ಉಪಾಧ್ಯಕ್ಷರು , ವಸಂತ ಶೆಟ್ಟಿ – ಕಾರ್ಯದಕ್ಷರು, ವೆಂಕಟೇಶ್ ಪೈ – ಖಜಾಂಚಿ, ರವೀಂದ್ರ ಶೆಟ್ಟಿ ಹಟ್ಟಿಯಂಗಡಿ – ಪ್ರಧಾನ ಕಾರ್ಯದರ್ಶಿ, ಗೀತಾ – ಸಹ ಕಾರ್ಯದರ್ಶಿ, ಹೈಕೋರ್ಟ್ ವಕೀಲರಾದ ಶಕುಂತಲಾ ಶೆಟ್, ಅಮರನಾಥ್ – ರಾಜ್ಯ ಸಂಚಾಲಕರು, ಸಂತೋಷ್ ಶೆಟ್ಟಿ – ಬೆಂಗಳೂರು ನಗರ ಅಧ್ಯಕ್ಷರು, ಹಾಗೂ ಮುಖಂಡರುಗಳಾದ ಅಭಿಲಾಷ್ ಶೆಟ್ಟಿ, ಗಣೇಶ , ಉಮೇಶ್ ಕೊಠಾರಿ ಮುಂತಾದವರು ನಮ್ಮೊಂದಿಗೆ ಉಪಸ್ಥಿತರು.
