rjp 010819 kageri1

ಶಾಸಕರಿಗೆ ಕೋವಿಡ್ 19 ಟೆಸ್ಟ್ ಕಡ್ಡಾಯ….!

STATE Genaral

ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೋವಿಡ್-19 ಪರೀಕ್ಷೆ ಕಡ್ಡಾಯ
ಬೆಂಗಳೂರು, ಸೆಪ್ಟಂಬರ್ 08 (ಕರ್ನಾಟಕ ವಾರ್ತೆ):
ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ 15 ನೇ ವಿಧಾನ ಸಭೆಯ 7ನೇ ಅಧಿವೇಶನದಲ್ಲಿ ಪಾಲ್ಗೋಳ್ಳುವ ಪ್ರತಿಯೊಬ್ಬರೂ ಅಧಿವೇಶನದ 72 ಗಂಟೆಗಳ ಮುನ್ನ ಆರ್ ಟಿ ಪಿ ಸಿ ಆರ್ ನಾಸಿಕ ಮತ್ತು ಗಂಟಲು ದ್ರವ ಕೋವಿಡ್-19 ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು. ಆರ್‍ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ಇಲ್ಲದಿರುವುದು ದೃಢಪಟ್ಟಲ್ಲಿ ಮಾತ್ರ ಸಂಬಂಧಿತ ಪ್ರಮಾಣ ಪತ್ರವನ್ನು ಆಧರಿಸಿ ಅಧಿವೇಶನದ ಕಲಾಪಗಳಲ್ಲಿ ಪಾಲ್ಗೊಳ್ಳಲು ಅಧಿವೇಶವನ್ನು ವರದಿ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಪ್ರಕಟಿಸಿದರು.
ಅಧಿವೇಶನದ ಸಿದ್ಧತೆ ಕುರಿತು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾತಾನಾಡಿದ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸದಸ್ಯರೂ ಒಳಗೊಂಡಂತೆ ಎಲ್ಲರ ಆರೋಗ್ಯ ದೃಷ್ಠಿಯಿಂದ ಮುಂಜಾಗ್ರತವಾಗಿ ಅನೇಕ ಕ್ರಮ ಹಾಗೂ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಸಾರ್ವಜನಿಕರಿಗೆ ಸದನದ ಕಲಾಪಗಳನ್ನು ವೀಕ್ಷಿಸಲು ಅವಕಾಶ ಇರುವುದಿಲ್ಲ. ಒಮ್ಮೆ ಕೋವಿಡ್-19 ಪರೀಕ್ಷೆಗೆ ಒಳಪಟ್ಟವರೂ ಹಾಗೂ ಕೋವಿಡ್-19 ಸೋಂಕು ದೃಢಪಟ್ಟು ಗೆದ್ದು ಬಂದವರೂ ಸೆಪ್ಟೆಂಬರ್ 18 ರ ನಂತರ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟು ಕೋವಿಡ್-19 ರ ಪರೀಕ್ಷೆಯಲ್ಲಿ ನೆಗೆಟೀವ್ ಎಂದು ಖಚಿತಗೊಂಡ ನಂತರವೇ ಪ್ರವೇಶ ನೀಡಲಾಗುವುದು. ಇದರಲ್ಲಿ ಯಾರಿಗೂ ರಿಯಾಯಿತಿ ಅಥವಾ ವಿನಾಯಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನ ಸಭಾ ಸಭಾಂಗಣವೂ ಸೇರಿದಂತೆ ಸದನದ ಪ್ರಾಂಗಣ ಹಾಗೂ ಸುತ್ತ-ಮುತ್ತಲ ಆವರಣವನ್ನು ಸ್ಯಾನಿಟೈಸರ್ ಮೂಲಕ ಶುಚಿಗೊಳಿಸಲಲಾಗುವುದು. ಪ್ರತಿದಿನವೂ ಅಧಿವೇಶನಕ್ಕೆ ಹಾಜಾರಾಗುವ ಎಲ್ಲರನ್ನೂ ದೇಹದ ಉಷ್ಣಾಂಶ ಪರೀಕ್ಷಿಸಿದ ನಂತರವೇ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಸದನಕ್ಕೆ ಹಾಜರಾಗಬೇಕಾದ ಸಚಿವಾಲಯದ ಅಧಿಕಾರಿ-ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳೂ ಕೂಡಾ ಸೆಪ್ಟೆಂಬರ್ 18 ರಂದು ಕೋವಿಡ್-19 ರ ಪರೀಕ್ಷೆಗೆ ಕಡ್ಡಾಯವಾಗಿ ಒಳಪಟ್ಟು ಪ್ರಮಾಣ ಪತ್ರ ಪಡೆದು, ಅದನ್ನು ಹಾಜರುಪಡಿಸಿದಾಗಲೇ ಸದನದಲ್ಲಿ ನಿಗದಿತ ಸ್ಥಳಕ್ಕೆ ಪ್ರವೇಶ ಕಲ್ಪಿಸಲಾಗುವುದು. ಇತರರ ಹಿತಕ್ಕಾಗಿ ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ಧಾರಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಇದರಲ್ಲಿ ಯಾರೂ ಅನಗತ್ಯ ತಪ್ಪು ಹುಡುಕುವುದಾಗಲೀ ಅಥವಾ ಅನ್ಯತಾ ಭಾವಿಸುವುದಾಗಲೀ ಬೇಡ ಎಂದು ಸಭಾಧ್ಯಕ್ಷರು ತಾಕೀತು ಮಾಡಿದರು.

ಸದನಕ್ಕೆ ಆಗಮಿಸುವ ಎಲ್ಲಾ ಸದಸ್ಯರಿಗೆ ಕೈ ಶುಚಿಗೊಳಿಸಿಕೊಳ್ಳಲು ಸ್ಯಾನಿಟೈಸರ್, ಧರಿಸಲು ಮುಖಗವಸು ( ಮಾಸ್ಕ್ ) ಹಾಗೂ ಮುಖ ಕವಚ ( ಫೇಸ್ ಶೀಲ್ಡ್ ) ಒದಗಿಸಲಾಗುವುದು. ಪ್ರತಿಯೊಬ್ಬರೂ ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲಿಸಿದಾಗ ಮಾತ್ರವೇ ಸುಗಮ ಕಾರ್ಯಕಲಾಪ ನಡೆಸಲು ಸಾಧ್ಯ. ಅಧಿವೇಶನದ ಕಾರ್ಯಸೂಚಿಯನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಲಭ್ಯವಿರುವ ಅವಧಿಯಲ್ಲಿಯೇ ಕಾಲ ಮಿತಿಯೊಳಗೆ ಈ ಅಧಿವೇಶನದ ಸಂದರ್ಭದಲ್ಲಿ 10 ವಿಧೇಯಕ ಮಂಡನೆ, 19 ಅಧ್ಯಾದೇಶಗಳ ಪರ್ಯಾಲೋಚನೆ ಎರಡು ವಿಧೇಯಕಗಳ ಅಂಗೀಕಾರಕ್ಕೆ ಕಾರ್ಯಸೂಚಿಯಲ್ಲಿ ನಮೂದಿಸಲಾಇದೆ. ಒಟ್ಟಾರೆ 31 ವಿಷಯಗಳ ಮೇಲೆ ಚರ್ಚೆಗೆ ಅವಕಾಶ ಇರುತ್ತದೆ ಎಂದು ವಿಶ್ವೇಶ್ವರ ಹೆಗಡಿ ಕಾಗೇರಿ ಅವರು ಹೇಳಿದರು.
ಆರಂಭದ ದಿನವಾದ ಸೆಪ್ಟೆಂಬರ್ 21 ರಂದು ಮೊದಲ ದಿನ ಶ್ರದ್ದಾಂಜಲಿಯಿಂದ ಆರಂಭವಾಗಿ ಒಟ್ಟು ಎಂಟು ದಿನಗಳಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಿದೆ. ಇದಕ್ಕೆ ಕಾಲಾವಕಾಶ ಅವಶ್ಯಕ. ಪತ್ರಕರ್ತರ ಗ್ಯಾಲರಿಯನ್ನು ಈ ಹಿಂದೆ ಇದ್ದ ವೀಕ್ಷಕರ ಗ್ಯಾಲರಿಗೆ ಸ್ಥಳಾಂತರಿಸಿ ಮಾಧ್ಯಮಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು, ಕೋವಿಡ್-19 ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಈ ಅಧಿವೇಶನಕ್ಕೆ ತಮ್ಮೆಲ್ಲರ ಸಹಕಾರ ಅತೀ ಮುಖ್ಯ ಎಂದು ಮಾಧ್ಯಮ ಪ್ರತಿನಿಧಿಗಳಲ್ಲಿ ಸಭಾಧ್ಯಕ್ಷರು ಮನವಿ ಮಾಡಿದರು.
ರಾಜ್ಯದಲ್ಲಿನ ಮಾದಕ ವಸ್ತುಗಳ ( ಡ್ರಗ್ಸ್ ) ವಿರುದ್ಧದ ಕಾರ್ಯಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಭಾಧ್ಯಕ್ಷರು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಕ್ರಮಗಳನ್ನು ಸ್ವಾಗತಿಸಿ ಯುವಶಕ್ತಿಯನ್ನು ಹಾಳುಗೆಡವುತ್ತಿರುವ ಮಾದಕ ವಸ್ತು ಜಾಲವನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ಜರುಗಿಸಬೇಕು.
ರಾಜ್ಯ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಮತ್ತಿತರ ಹಿರಿಯ ಅಧಿಕಾರಿಗಳೂ ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದರು.