ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಕಲಿಯುಗದಲ್ಲಿ,ದೇವರ ನಾಮವನ್ನು ಜಪಿಸುವುದರಿಂದ ಲೌಕಿಕ ದುಃಖದ ಸಾಗರದಿಂದ ಮುಕ್ತಿ ದೊರೆಯುತ್ತದೆ: ಪ್ರಧಾನಮಂತ್ರಿ
ಗೀತೆಯ ಮಾತುಗಳು ಜನರಿಗೆ ಮಾರ್ಗದರ್ಶನ ನೀಡುವುದಲ್ಲದೆ, ರಾಷ್ಟ್ರದ ನೀತಿಗಳ ದಿಕ್ಕನ್ನು ರೂಪಿಸುತ್ತವೆ: ಪ್ರಧಾನಮಂತ್ರಿಪ್ರಧಾನಮಂತ್ರಿ
ಶಾಂತಿ ಮತ್ತು ಸತ್ಯವನ್ನು ಎತ್ತಿಹಿಡಿಯಲು ಅನ್ಯಾಯದ ಶಕ್ತಿಗಳನ್ನು ಎದುರಿಸುವುದು ಮತ್ತು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಭಗವದ್ಗೀತೆ ಕಲಿಸುತ್ತದೆ ಮತ್ತು ಈ ತತ್ವವು ನಮ್ಮ ರಾಷ್ಟ್ರೀಯ ಭದ್ರತಾ ಚಿಂತನೆಯ ಹೃದಯಭಾಗದಲ್ಲಿದೆ: ಪ್ರಧಾನಮಂತ್ರಿ
ನೀರನ್ನು ಉಳಿಸುವುದು, ಮರಗಳನ್ನು ನೆಡುವುದು, ಬಡವರಿಗೆ ಸೇವೆ ಸಲ್ಲಿಸುವುದು, ಸ್ವದೇಶಿ ಅಳವಡಿಸಿಕೊಳ್ಳುವುದು, ಸಹಜ ಕೃಷಿಯನ್ನು ಉತ್ತೇಜಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು,
ಯೋಗವನ್ನು ಅಭ್ಯಾಸ ಮಾಡುವುದು, ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ಕನಿಷ್ಠ 25 ಪಾರಂಪರಿಕ ತಾಣಗಳಿಗೆ ಭೇಟಿ ನೀಡುವ ʼನವಸಂಕಲ್ಪʼಗಳನ್ನು ನಾವು ಮಾಡೋಣ: ಪ್ರಧಾನಮಂತ್ರಿ
ಉಡುಪಿ: ಕರ್ನಾಟಕದ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠದಲ್ಲಿ ಇಂದು ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಭಗವಾನ್ ಶ್ರೀ ಕೃಷ್ಣನ ದಿವ್ಯ ದರ್ಶನದ ತೃಪ್ತಿ, ಶ್ರೀಮದ್ ಭಗವದ್ಗೀತೆಯ ಮಂತ್ರಗಳ ಆಧ್ಯಾತ್ಮಿಕ ಅನುಭವ ಮತ್ತು ಹಲವಾರು ಪೂಜ್ಯ ಸಂತರು ಮತ್ತು ಗುರುಗಳ ಉಪಸ್ಥಿತಿಯು ತಮಗೆ ದೊರೆತ ಪರಮ ಭಾಗ್ಯ. ಇದು ಅಸಂಖ್ಯಾತ ಆಶೀರ್ವಾದಗಳನ್ನು ಪಡೆದಂತೆ ಎಂದು ಅವರು ಹೇಳಿದರು.
ಕೇವಲ ಮೂರು ದಿನಗಳ ಹಿಂದೆ ತಾನು ಗೀತೆಯ ನಾಡು ಕುರುಕ್ಷೇತ್ರದಲ್ಲಿದ್ದೆನು ಎಂದು ನೆನಪಿಸಿಕೊಂಡ ಶ್ರೀ ನರೇಂದ್ರ ಮೋದಿ ಅವರು, ಭಗವಾನ್ ಶ್ರೀ ಕೃಷ್ಣನ ಆಶೀರ್ವಾದ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯರ ಮಹಿಮೆಯಿಂದ ಆಶೀರ್ವದಿಸಲ್ಪಟ್ಟ ಈ ಭೂಮಿಗೆ ಭೇಟಿ ನೀಡಿದ್ದು ತಮಗೆ ಅತ್ಯಂತ ಸಂತೃಪ್ತಿಯ ಕ್ಷಣ ಎಂದು ಹೇಳಿದರು. ಈ ಸಂದರ್ಭದಲ್ಲಿ, ಒಂದು ಲಕ್ಷ ಜನರು ಏಕಕಾಲದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದಾಗ, ಪ್ರಪಂಚದಾದ್ಯಂತದ ಜನರು ಭಾರತದ ಸಹಸ್ರಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಪರಂಪರೆಯ ಜೀವಂತ ದೈವತ್ವವನ್ನು ವೀಕ್ಷಿಸಿದರು ಎಂದು ಹೇಳಿದರು.
ಕರ್ನಾಟಕದ ನೆಲಕ್ಕೆ ಭೇಟಿ ನೀಡುವುದು ಮತ್ತು ಇಲ್ಲಿನ ಅಕ್ಕರೆಯ ಜನರ ನಡುವೆ ಇರುವುದು ಯಾವಾಗಲೂ ತಮಗೆ ಒಂದು ವಿಶಿಷ್ಟ ಅನುಭವ ಎಂದು ಪ್ರಧಾನಮಂತ್ರಿ ಹೇಳಿದರು. ಉಡುಪಿಯ ಪವಿತ್ರ ಭೂಮಿಗೆ ಭೇಟಿ ನೀಡುವುದು ಯಾವಾಗಲೂ ಅಸಾಧಾರಣವಾದುದು ಎಂದು ಅವರು ಒತ್ತಿ ಹೇಳಿದರು. ತಾವು ಗುಜರಾತಿನಲ್ಲಿ ಜನಿಸಿದರೂ, ಗುಜರಾತ್ ಮತ್ತು ಉಡುಪಿ ಯಾವಾಗಲೂ ಆಳವಾದ ಮತ್ತು ವಿಶೇಷ ಬಾಂಧವ್ಯವನ್ನು ಹೊಂದಿವೆ ಎಂದು ಹೇಳಿದರು. ಇಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಕೃಷ್ಣನ ವಿಗ್ರಹವನ್ನು ಮೊದಲು ಮಾತಾ ರುಕ್ಮಿಣಿ ದ್ವಾರಕಾದಲ್ಲಿ ಪೂಜಿಸಿದ್ದರು ಮತ್ತು ನಂತರ ಉಡುಪಿಯಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರು ಎಂಬ ನಂಬಿಕೆಯನ್ನು ಶ್ರೀ ಮೋದಿ ಅವರು ನೆನಪಿಸಿಕೊಂಡರು. ಕಳೆದ ವರ್ಷವಷ್ಟೇ ಸಮುದ್ರದ ಒಳಗೆ ಶ್ರೀ ದ್ವಾರಕಾನಾಥನನ್ನು ನೋಡಿದ ದಿವ್ಯ ಅನುಭವವನ್ನು ಅವರು ಹಂಚಿಕೊಂಡರು. ಈ ವಿಗ್ರಹದ ದರ್ಶನ ಪಡೆದಾಗ ತಾವು ಅನುಭವಿಸಿದ ಆಳವಾದ ಭಾವನೆಯನ್ನು ಯಾರಾದರೂ ಊಹಿಸಬಹುದು ಮತ್ತು ಈ ದರ್ಶನವು ತಮಗೆ ಅಪಾರ ಆಧ್ಯಾತ್ಮಿಕ ಆನಂದವನ್ನು ನೀಡಿತು ಎಂದರು.
ಉಡುಪಿಗೆ ಬರುವುದು ತಮಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ ಎಂದು ಹೇಳಿದ ಶ್ರೀ ಮೋದಿ, ಉಡುಪಿಯು ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಆಡಳಿತ ಮಾದರಿಯ ಕರ್ಮಭೂಮಿಯಾಗಿದೆ ಎಂದರು. 1968ರಲ್ಲಿ ಉಡುಪಿಯ ಜನರು ಜನಸಂಘದ ವಿ.ಎಸ್. ಆಚಾರ್ಯ ಅವರನ್ನು ನಗರಸಭೆಗೆ ಆಯ್ಕೆ ಮಾಡಿ ಉಡುಪಿಯಲ್ಲಿ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿದರು ಎಂದು ಅವರು ನೆನಪಿಸಿಕೊಂಡರು. ಇಂದು ರಾಷ್ಟ್ರೀಯ ಮಟ್ಟದಲ್ಲಿ ಕಂಡುಬರುವ ಸ್ವಚ್ಛತಾ ಅಭಿಯಾನಗಳನ್ನು ಐದು ದಶಕಗಳ ಹಿಂದೆಯೇ ಉಡುಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಹೊಸ ಮಾದರಿಯಂತಹ ಕಾರ್ಯಕ್ರಮಗಳನ್ನು ಉಡುಪಿಯು 1970ರ ದಶಕದಲ್ಲಿಯೇ ಪ್ರಾರಂಭಿಸಿತ್ತು ಎಂದು ಅವರು ಒತ್ತಿ ಹೇಳಿದರು. ಇಂದು ಈ ಅಭಿಯಾನಗಳು ರಾಷ್ಟ್ರೀಯ ಅಭಿವೃದ್ಧಿ ಮತ್ತು ಆದ್ಯತೆಯ ಭಾಗವಾಗಿದ್ದು, ದೇಶವನ್ನು ಮುನ್ನಡೆಸಲು ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ಹೇಳಿದರು.
ಜ್ಞಾನವನ್ನು ಸಂರಕ್ಷಿಸಲು ಭಾರತ ಸರ್ಕಾರವು ಜ್ಞಾನ ಭಾರತಂ ಮಿಷನ್ ನಲ್ಲಿ ಕೆಲಸ ಮಾಡುತ್ತಿದೆ ಮತ್ತು ಜನರ ಸಹಕಾರವು ಈ ಅಮೂಲ್ಯ ಪರಂಪರೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ನಮ್ಮ ಪರಂಪರೆಗೆ ಸಂಬಂಧಿಸಿದ ದೇಶದ ಕನಿಷ್ಠ 25 ಸ್ಥಳಗಳಿಗೆ ಭೇಟಿ ನೀಡುವ ಒಂಬತ್ತನೇ ಸಂಕಲ್ಪವನ್ನು ಮಾಡುವಂತೆ ಜನರನ್ನು ಒತ್ತಾಯಿಸಿದ ಶ್ರೀ ಮೋದಿ, ಮೂರು ನಾಲ್ಕು ದಿನಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಮಹಾಭಾರತ ಅನುಭವ ಕೇಂದ್ರವನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು. ಭಗವಾನ್ ಶ್ರೀ ಕೃಷ್ಣನ ಜೀವನ ತತ್ವವನ್ನು ವೀಕ್ಷಿಸಲು ಈ ಕೇಂದ್ರಕ್ಕೆ ಭೇಟಿ ನೀಡುವಂತೆ ಅವರು ಜನರಿಗೆ ಮನವಿ ಮಾಡಿದರು. ಗುಜರಾತಿನಲ್ಲಿ ಪ್ರತಿ ವರ್ಷ ಶ್ರೀ ಕೃಷ್ಣ ಮತ್ತು ಮಾತಾ ರುಕ್ಮಿಣಿಯವರ ವಿವಾಹಕ್ಕೆ ಮೀಸಲಾಗಿರುವ ಮಾಧವಪುರ ಮೇಳವನ್ನು ಆಯೋಜಿಸಲಾಗುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು. ಇದು ದೇಶಾದ್ಯಂತ, ವಿಶೇಷವಾಗಿ ಈಶಾನ್ಯದಿಂದ ಜನರನ್ನು ಆಕರ್ಷಿಸುತ್ತದೆ ಮತ್ತು ಮುಂದಿನ ವರ್ಷ ಎಲ್ಲರೂ ಇದರಲ್ಲಿ ಭಾಗವಹಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ಶ್ರೀ ಕೃಷ್ಣನ ಸಂಪೂರ್ಣ ಜೀವನ ಮತ್ತು ಗೀತೆಯ ಪ್ರತಿಯೊಂದು ಅಧ್ಯಾಯವು ಕರ್ಮ, ಕರ್ತವ್ಯ ಮತ್ತು ಕಲ್ಯಾಣದ ಸಂದೇಶವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಅವರು ಹೇಳಿದರು. 2047 ಭಾರತೀಯರಿಗೆ ಕೇವಲ ಅಮೃತ ಕಾಲವಲ್ಲ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕರ್ತವ್ಯ ಬದ್ಧ ಯುಗವಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಭಾರತೀಯನಿಗೆ ಜವಾಬ್ದಾರಿ ಇದೆ ಮತ್ತು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಗೆ ಕರ್ತವ್ಯವಿದೆ ಎಂದು ಶ್ರೀ ಮೋದಿ ಹೇಳಿದರು. ಕರ್ನಾಟಕದ ಶ್ರಮಶೀಲ ಜನರು ಈ ಕರ್ತವ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಂದು ಪ್ರಯತ್ನವನ್ನೂ ದೇಶಕ್ಕೆ ಸಮರ್ಪಿಸಬೇಕು ಮತ್ತು ಈ ಕರ್ತವ್ಯ ಪ್ರಜ್ಞೆಯನ್ನು ಅನುಸರಿಸುವ ಮೂಲಕ ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು. ಉಡುಪಿಯ ನೆಲದಿಂದ ಹೊರಹೊಮ್ಮುವ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿ ಎಂದು ಹಾರೈಸುವ ಮೂಲಕ ಶ್ರೀ ಮೋದಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಈ ಪವಿತ್ರ ಸಂದರ್ಭದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು, ಸಂತರು, ವಿದ್ವಾಂಸರು ಮತ್ತು ಸಮಾಜದ ಎಲ್ಲಾ ವರ್ಗಗಳ ಜನರು ಸೇರಿದಂತೆ 100,000 ಜನರು ಭಾಗವಹಿಸಿದ ಕಾರ್ಯಕ್ರಮದಲ್ಲಿ, ಅವರು ಒಟ್ಟಾಗಿ ಭಗವದ್ಗೀತೆಯನ್ನು ಪಠಿಸುತ್ತಾರೆ.
ಪ್ರಧಾನಮಂತ್ರಿಯವರು ಶ್ರೀಕೃಷ್ಣ ಗರ್ಭಗುಡಿಯ ಮುಂಭಾಗದಲ್ಲಿರುವ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದರು ಮತ್ತು ಪವಿತ್ರ ಕನಕನ ಕಿಂಡಿಗೆ ಕನಕ ಕವಚವನ್ನು (ಚಿನ್ನದ ಹೊದಿಕೆ) ಸಮರ್ಪಿಸಿದರು, ಇದು ಸಂತ ಕನಕದಾಸರು ಭಗವಾನ್ ಕೃಷ್ಣನ ದೈವಿಕ ದರ್ಶನ ಪಡೆದ ಪವಿತ್ರ ಕಿಟಕಿ ಎಂಬ ನಂಬಿಕೆಯಿದೆ. ಉಡುಪಿಯ ಶ್ರೀ ಕೃಷ್ಣ ಮಠವನ್ನು 800 ವರ್ಷಗಳ ಹಿಂದೆ ವೇದಾಂತದ ದ್ವೈತ ಸಿದ್ಧಾಂತದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
