DSC 2576 scaled

Tumkur : ಶಾಲೆಗಳು ಉಳಿದರೆ ಕನ್ನಡವೂ ಉಳಿಯುತ್ತದೆ….!

DISTRICT NEWS ತುಮಕೂರು
  • ನುಡಿ ತೇರಿಗೆ ಅದ್ದೂರಿ ಚಾಲನೆ
  • ಶಾಲೆಗಳು ಉಳಿದರೆ ಕನ್ನಡವೂ ಉಳಿಯುತ್ತದೆ

ತುಮಕೂರು(ಕ.ವಾ)ಡಿ.29: ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು ಹಮ್ಮಿಕೊಳ್ಳಲಾಗಿದ್ದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಸೋಮವಾರ ಮುಂಜಾನೆ 7 ಗಂಟೆಗೆ ಗಾಜಿನ ಮನೆ ಆವರಣದಲ್ಲಿ ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ನುಡಿ ತೇರಿಗೆ ಅದ್ದೂರಿ ಚಾಲನೆ ನೀಡಲಾಯಿತು. ತುಮಕೂರು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಬೆಳಿಗ್ಗೆ 9 ಗಂಟೆಗೆ ತುಮಕೂರು ಮಹಾನಗರಪಾಲಿಕೆ ಆವರಣದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ: ಕರೀಗೌಡ ಬೀಚನಹಳ್ಳಿ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರಪಾಲಿಕೆ ಆಯುಕ್ತ ಯೋಗಾನಂದ್ ಸೇರಿದಂತೆ ಅಪಾರ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಾಡ ದೇವಿ ಕನ್ನಡಾಂಬೆ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ: ಕರೀಗೌಡ ಬೀಚನಹಳ್ಳಿ ದಂಪತಿಯನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆಗೆ ಅಣಿಗೊಳಿಸಲಾಯಿತು.DSC 2627

ಡೊಳ್ಳು, ನಂದಿಧ್ವಜ, ಕೋಲಾಟ, ವೀರಗಾಸೆ, ಸೋಮನಕುಣಿತ, ತಮಟೆ, ಅರೆವಾದ್ಯ, ಚಿಟ್ಟಿಮೇಳ, ಕೊಂಬುಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಟೌನ್‍ಹಾಲ್ ವೃತ್ತದಿಂದ ಎಂ.ಜಿ.ರಸ್ತೆ, ಗುಂಚಿಚೌಕ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಡಾ: ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಗಾಜಿನಮನೆಯ ವೇದಿಕೆಗೆ ಮೆರವಣಿಗೆ ಸಾಗಿತು.
ಮೆರವಣಿಗೆಯುದ್ದಕ್ಕೂ ಕನ್ನಡಾಭಿಮಾನಿಗಳು ಸರ್ವಾಧ್ಯಕ್ಷ ದಂಪತಿಗೆ ಪುಷ್ಪವೃಷ್ಟಿಗರೆದು ಸಂತಸ ವ್ಯಕ್ತಪಡಿಸಿದರು.
ಅಂತಿಮವಾಗಿ ಗಾಜಿನ ಮನೆ ಆವರಣ ಸಾಹಿತ್ಯ ಸಂಭ್ರಮದ ತೀರ್ಥಕ್ಷೇತ್ರವಾಯಿತು. ಕರುನಾಡಿನ ಬಾವುಟಗಳು ಗಾಳಿಯಲ್ಲಿ ಹೆಮ್ಮೆಯಿಂದ ಹಾರಾಡುತ್ತಿದ್ದು, ಕನ್ನಡದ ಆತ್ಮಗೌರವವನ್ನೇ ಪ್ರತಿಬಿಂಬಿಸುತ್ತಿದ್ದವು. ಸಮ್ಮೇಳನ ಆವರಣದಲ್ಲಿದ್ದ ಪುಸ್ತಕ ಮಳಿಗೆಗಳ ಕಡೆಗೆ ಜನರು ಗುಂಪುಗೂಡಿ ಅಕ್ಷರ ಲೋಕದ ಭುವನವನ್ನು ತುಂಬಿಕೊಂಡರು. ಪುಸ್ತಕಗಳ ಮೇಲೆ ಜನರ ಪ್ರೀತಿ, ಓದುಗರ ಉತ್ಸಾಹ ಇವೆಲ್ಲವು ಕನ್ನಡ ಸಾಹಿತ್ಯದ ಭವಿಷ್ಯ ಸಧೃಢವಾಗಿದೆ ಎಂಬ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಈ ರೀತಿ ಅಕ್ಷರ, ಕಲೆ, ಸಂಸ್ಕೃತಿ, ಭಾವನೆ, ಭಕ್ತಿ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಒಂದಾಗಿಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ, ಕೇವಲ ಕಾರ್ಯಕ್ರಮವಲ್ಲ, ಇದು ಕನ್ನಡಿಗರ ಆತ್ಮಸಾಕ್ಷಿಯ ಸಂಭ್ರಮ, ಭಾμÉಯ ಗೌರವದ ಹಬ್ಬ ಮತ್ತು ಸಂಸ್ಕೃತಿಯ ಜೀವಂತ ರಂಗೋಲಿ ಎಂಬುದಾಗಿ ಸಮ್ಮೇಳನದ ಉತ್ಸವ ನೆನಪಿನಲ್ಲಿ ಸದಾಕಾಲ ಉಳಿಯುವಂತಾಯಿತು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ, ಖ್ಯಾತ ಸಾಹಿತಿ ನಾಡೋಜ ಡಾ: ಬರಗೂರು ರಾಮಚಂದ್ರಪ್ಪ, ನಿಕಟಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತಿಯಲ್ಲಿ 2 ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು.

ಶಾಲೆಗಳು ಉಳಿದರೆ ಕನ್ನಡವೂ ಉಳಿಯುತ್ತದೆ: ಡಾ.ಕರೀಗೌಡ ಬೀಚನಹಳ್ಳಿ
ಅಭಿಮತ :
ಶಾಲೆಗಳು ಉಳಿದರೆ ಕನ್ನಡವೂ ಉಳಿತ್ತದೆ. ಆದ್ದರಿಂದ ಸರ್ಕಾರ ಯಾವುದೇ ಕೊರತೆಯ ಕಾರಣ ಹೇಳಿ ಶಾಲೆಗಳನ್ನು ಮುಚ್ಚಬಾರದು ಎಂದು 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ, ವಿದ್ವಾಂಸ ಡಾ. ಕರೀಗೌಡ ಬೀಚನಹಳ್ಳಿ ಅಭಿಪ್ರಾಯಿಸಿದ್ದಾರೆ.
ತುಮಕೂರಿನ ಅಮಾನಿಕೆರೆ ಗಾಜಿನಮನೆಯಲ್ಲಿ ಡಿಸೆಂಬರ್ 29 ಹಾಗೂ 30ರಂದು ಎರಡು ದಿನಗಳು ನಡೆಯುತ್ತಿರುವ 17ನೇ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸರ್ವಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕದ ಶಿಕ್ಷಣ ಇಲಾಖೆಯ ವರದಿಗಳ ಪ್ರಕಾರ ರಾಜ್ಯದಲ್ಲಿ 3222 ಸರ್ಕಾರಿ ಶಾಲೆಗಳು ಶತಮಾನ ಕಂಡಿವೆ. ಈ ಶಾಲೆಗಳು ದುರಸ್ತಿಯಾಗಿ ಸಬಲೀಕರಣಗೊಳ್ಳಬೇಕಿದೆ. ಅವುಗಳ ಜೀರ್ಣೋದ್ಧಾರದ ಅವಶ್ಯಕತೆ ಇದೆ. ಕೆಲವು ಊರುಗಳಲ್ಲಿ ಶಾಲಾ ಕಟ್ಟಡಗಳಿಲ್ಲ. ಕೆಲವೆಡೆ ಶಿಕ್ಷಕರಿಲ್ಲ, ಕೆಲವೆಡೆ ಮಕ್ಕಳೇ ಇಲ್ಲ ಎಂಬ ವೈರುದ್ಯಗಳು ಇವೆ. ಆದರೆ ಸರ್ಕಾರ ಇದರ ಸುಧಾರಣೆಗೆ ಕ್ರಮ ವಹಿಸಬೇಕೆ ವಿನಃ ಕೊರತೆಯ ಕಾರಣ ಹೇಳಿ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಮುಂದಾಗಬಾರದು ಎಂದು ಅವರು ಹೇಳಿದರು.
ಕರ್ನಾಟಕದ ವಿಶ್ವ ವಿದ್ಯಾಲಯಗಳು ಆರ್ಥಿಕ ಅನುದಾನವಿಲ್ಲದೆ, ಬೋಧಕರ ಕೊರತೆಯಿಂದ ದಿನೇ ದಿನೇ ಅವನತಿಯ ಹಾದಿ ಹಿಡಿದಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನಿಕಾಯಕ್ಕೊಂದು ವಿಶ್ವವಿದ್ಯಾಲಯ ತೆರೆದು ಅದಕ್ಕೊಬ್ಬ ಕುಲಪತಿ ನೇಮಿಸಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಯುಜಿಸಿ ನಿಯಮಗಳು ಹಾಗೂ ರಾಜ್ಯ ಸರ್ಕಾರದ ನಿಯಮಗಳ ಗೊಂದಲಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಅಪಾಯದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

DSC 2646
ಕನಿಷ್ಠ 10ನೇ ತರಗತಿವರೆಗಾದರೂ ಶಿಕ್ಷಣ ರಾಷ್ಟ್ರೀಕರಣವಾಗುವುದು ಅನಿವಾರ್ಯ ಎಂದು ಪ್ರತಿಪಾದಿಸಿದ ಅವರು, ಮಹಿಳೆಯರ ಧ್ವನಿಗಳು ಅವರ ದೃಷ್ಟಿಕೋನಗಳನ್ನು ವಿಶ್ಲೇಷಿಸುವ ಚಿಂತನೆಗಳು ರೂಪುಗೊಳ್ಳಬೇಕಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ, ವೈಚಾರಿಕವಾಗಿ ಸಮಸ್ಯೆಗಳ್ನು ಅನ್ವೇಷಿಸುವತ್ತ ಲೇಖಕಿಯರು ಧಾವಿಸಬೇಕು ಎಂದರು.
ಹಿಂದಿ ಭಾμÉಯನ್ನು ಕೇಂದ್ರ ಸರ್ಕಾರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಾದೇಶಿಕ ಭಾμÉಗಳ ಮೇಲೆ ಹೇರುತ್ತಿರುವುದು ಕಳವಳಕಾರಿ ಎಂದ ಅವರು, ಹಿಂದಿ ಒಂದು ಆಕ್ರಮಣಕಾರಿ ಭಾಷೆ ಈ ಮನೋಭಾವ ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು ಎಂದು ಡಾ. ಬೀಚನಹಳ್ಳಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಜಾತಿ ಧರ್ಮಗಳ ಪ್ರಶ್ನೆ ವಿಜೃಂಭಿಸುತ್ತಿರುವುದು ಬಹುತ್ವ ಭಾರತಕ್ಕೆ
ಆರೋಗ್ಯಕಾರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇಶ, ನಾಡು, ನುಡಿ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಕರೆ ನೀಡಿದರು.DSC 2798

ಕನ್ನಡದ ಅಸ್ತಿತ್ವಕ್ಕಾಗಿ ಕ್ರಿಯಾಶೀಲತೆ ಅಗತ್ಯ : ಡಾ: ಎನ್. ತಿಪ್ಪೇಸ್ವಾಮಿ

ಕನ್ನಡ ಭಾ ಸಾಹಿತ್ಯ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು, ಕನ್ನಡದ ಅಸ್ತಿತ್ವವನ್ನು ಉಳಿಸಲು ಸಾಹಿತ್ಯದಲ್ಲಿ ಕ್ರಿಯಾಶೀಲತೆ ನಿರಂತರವಾಗಿರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ನಗರದ ಗಾಜಿನ ಮನೆಯಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಆಂಗ್ಲಪದಗಳ ಅತಿಯಾದ ಬಳಕೆ ನಮ್ಮ ಭಾಷೆ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ಆದರೆ ಕನ್ನಡ ಸಾಹಿತ್ಯ ಪರಂಪರೆ ನಮ್ಮ ಹೆಮ್ಮೆ. ಹಲವಾರು ಕವಿವರರು, ಐತಿಹಾಸಿಕ ಕಾದಂಬರಿಕಾರರು ಕನ್ನಡಮ್ಮನ ಮಮತೆಯ ಗುಣವಿಶೇಷಗಳನ್ನು, ಕನ್ನಡಿಗರ ಜೀವನಶೈಲಿ ಹಾಗೂ ಸಾಧನೆಯನ್ನು ಲೋಕದ ಗಮನಕ್ಕೆ ತಂದಿದ್ದಾರೆ ಎಂದು ಸ್ಮರಿಸಿದರು.

ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ಪೂರಕ ವೇದಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ಹೊರಗೆ ಹೇಗೋ ಹಾಗೆಯೇ ಅಂತರಂಗದಲ್ಲೂ ‘ಉಸಿರು ಕನ್ನಡವಾಗುವಂತೆ’ ಪ್ರತಿಯೊಬ್ಬರೂ ಪಣತೊಡಬೇಕು ಎಂದು ಕರೆ ನೀಡಿದರು.

ಮನೆ-ಮನೆಗಳಲ್ಲಿ ಪುಸ್ತಕ ಸಂಗ್ರಹ, ನಿರಂತರ ಓದು, ವಿಚಾರ ವಿನಿಮಯ, ಸಂವಾದ, ಕವಿತಾ ವಾಚನ, ಕಥಾ ರಚನೆ ತರಬೇತಿ ಮುಂತಾದ ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದ ಅವರು, ಬರಹಗಾರರು, ಓದುಗರು, ಸಾಹಿತ್ಯ ಪೆÇೀಷಕರು, ಸ್ವಯಂಸೇವಾ ಸಂಘಟನೆಗಳು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಒಂದಾಗಿ ಸಾಹಿತ್ಯದ ಆಗುಹೋಗುಗಳ ವಿಚಾರ ಚರ್ಚಿಸಿ, ನವೀನ ಮಾರ್ಗಗಳನ್ನು ಶೋಧಿಸುವ ಮೂಲಕ ಸದಭಿರುಚಿಯ ಸಾಹಿತ್ಯ ರಚನೆ ಹಾಗೂ ಪ್ರಸಾರದತ್ತ ಕ್ರಿಯಾಶೀಲರಾಗಬೇಕು ಎಂದು ಸಲಹೆ ನೀಡಿದರು.

ಶಾಲೆಗಳಲ್ಲೂ ಹೆಚ್ಚು ಹೆಚ್ಚು ಸಾಹಿತ್ಯ ಚಟುವಟಿಕೆಗಳು ಆಯೋಜನೆಯಾಗಲಿ ಎಂದು ಆಶಿಸಿದ ಅವರು, ಕನ್ನಡದ ಭವಿಷ್ಯ ಯುವ ಪೀಳಿಗೆಯ ಕೈಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ತಹಸೀಲ್ದಾರ್ ರಾಜೇಶ್ವರಿ ಹಾಗೂ ಕನ್ನಡ ಸೇನೆ ಪದಾಧಿಕಾರಿಗಳಾದ ಧನಿಯಾಕುಮಾರ್, ಶಬ್ಬೀರ್ ಅಹ್ಮದ್, ನಟರಾಜ್ ಶೆಟ್ಟಿ, ಮಲ್ಲಿಕಾರ್ಜುನಯ್ಯ ಉಮಾ ಮಹೇಶ್, ಗುರು ರಾಘವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.