ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಕಾಂಗ್ರೆಸ್ ಸರಕಾರವು ವಾಲ್ಮೀಕಿ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆ ಏನು….? ವಿಜಯೇಂದ್ರ
ಬಳ್ಳಾರಿ: ಇವತ್ತು ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಕೂರಿಸುವ ವಿಷಯದಲ್ಲಿ ಗಲಾಟೆ ಆಗಿದೆ. ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸರಕಾರವು ವಾಲ್ಮೀಕಿ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ವತಿಯಿಂದ ಬಳ್ಳಾರಿಯಲ್ಲಿ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಏರ್ಪಡಿಸಿದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ವಾಲ್ಮೀಕಿ ಜಯಂತಿ ರಜೆಯನ್ನು ಘೋಷಿಸಿದ್ದರು ಎಂದು ನೆನಪಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಯಡಿಯೂರಪ್ಪ ಅವರ ಬಳಿ ಶ್ರೀರಾಮುಲು ಅವರು ಹೇಳಿಕೊಂಡಿದ್ದರು. ಬಳಿಕ ವಾಲ್ಮೀಕಿ ಜಯಂತಿ ಘೋಷಿಸಿ ರಜೆಯನ್ನು ಕೊಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿದ್ದರು ಎಂದು ಗಮನಕ್ಕೆ ತಂದರು.
ಶ್ರೀರಾಮುಲು, ಜನಾರ್ಧನ ರೆಡ್ಡಿಯವರು ಇಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ವಾಲ್ಮೀಕಿ ಸಮುದಾಯಕ್ಕೆ, ಪರಿಶಿಷ್ಟ ಪಂಗಡಕ್ಕೆ ಇದ್ದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಏರಿಸಿದ್ದರು ಎಂದು ವಿವರಿಸಿದರು. ಆರೋಗ್ಯ ಸರಿ ಇಲ್ಲದಿದ್ದರೂ ಇಲ್ಲಿ ಈ ನಿರ್ಲಜ್ಜ ಕಾಂಗ್ರೆಸ್ ಸರಕಾರದ ವಿರುದ್ಧ ನಡೆಯುತ್ತಿರುವ ಈ ಹೋರಾಟದಲ್ಲಿ ಭಾಗವಹಿಸಲೇ ಬೇಕೆಂದು ಬಂದಿರುವುದಾಗಿ ತಿಳಿಸಿದರು.
ಮೊಸಳೆಕಣ್ಣೀರು ಸುರಿಸುವ ಕೆಲಸ..
ಸಿದ್ದರಾಮಯ್ಯನವರೇ, ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು ಎಂದು ಸವಾಲೆಸೆದರು. ರಾಜ್ಯಕ್ಕೂ ಏನೂ ಕೊಡುಗೆ ಇಲ್ಲ; ಆ ಸಮುದಾಯಕ್ಕೂ ಏನೂ ಕೊಡುಗೆ ಇಲ್ಲ. ಕಾಂಗ್ರೆಸ್ ಪಕ್ಷವು ಇವತ್ತು ಮೊಸಳೆಕಣ್ಣೀರು ಸುರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಯಲ್ಲಾಪುರದಲ್ಲಿ ದಲಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅದಕ್ಕೂ ಕಾಂಗ್ರೆಸ್ ಸರಕಾರ ನ್ಯಾಯ ಕೊಟ್ಟಿಲ್ಲ ಎಂದು ಆರೋಪಿಸಿದರು.
ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ..
ಮಂಗಳೂರಿನಲ್ಲಿ ದೇಶದ್ರೋಹಿಗಳ ಕೊಲೆ ಆದರೆ, ಸಿದ್ದರಾಮಯ್ಯನವರ ಸರಕಾರ 25 ಲಕ್ಷ ಕೊಟ್ಟು ಬರುತ್ತದೆ. ಆದರೆ, ಮಂಗಳೂರಿನಲ್ಲಿ ನಮ್ಮ ಹಿಂದೂ ಕಾರ್ಯಕರ್ತರ ಹತ್ಯೆ ಆದರೆ, ಕಾಂಗ್ರೆಸ್ ಸರಕಾರ ಒಂದು ರೂಪಾಯಿ ಪರಿಹಾರ ಕೊಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಎಂದು ಟೀಕಿಸಿದರು.
ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಾಗಿವೆ. ಹಾಗಾಗಿಯೇ ದೇಶದ್ರೋಹಿಗಳು, ಕೊಲೆಗಡುಕರು ಅಟ್ಟಹಾಸದಿಂದ ಮೆರೆಯತ್ತಿದ್ದಾರೆ. ಇವರಿಗೆ ತಕ್ಕ ಪಾಠವನ್ನು ಕಲಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ತಿಳಿಸಿದರು. ಶ್ರೀರಾಮುಲು- ಜನಾರ್ಧನ ರೆಡ್ಡಿಯವರು ಪಾದಯಾತ್ರೆ ಬಗ್ಗೆ ಆಲೋಚನೆ ಮಾಡಿದ್ದಾರೆ; ನಮ್ಮ ಯಾರದೂ ವಿರೋಧ ಇಲ್ಲ. ಕೋರ್ ಕಮಿಟಿ ಸದಸ್ಯರ ಅಭಿಪ್ರಾಯವನ್ನು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು; ಎಲ್ಲಿಂದ ಪಾದಯಾತ್ರೆ ಮಾಡಬೇಕೆಂದು ಕೇಂದ್ರದ ನಮ್ಮ ನಾಯಕರ ಸೂಚನೆ ಮೇರೆಗೆ ಹೋರಾಟವನ್ನು ಯೋಜಿಸುವುದಾಗಿ ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನೀಲ್ ಕುಮಾರ್, ಪಿ. ರಾಜೀವ್, ಶಾಸಕ ಜಿ. ಜನಾರ್ಧನ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
