ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸ್ ಅಧಿಕಾರಿಗಳ ತನಿಖೆಯಲ್ಲಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರಿಗೆ ಯಾರ ಮೇಲೆ ಅನುಮಾನ ಇದೆಯೋ ಕರೆಸಿ ವಿಚಾರಣೆ ನಡೆಸಲಿ, ತಪ್ಪೇನಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…
‘ಪೊಲೀಸರು ಏಕಾಏಕಿ ಯಾರಿಗೂ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲ್ಲ. ಅವರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಅವರು ವಿಚಾರಣೆ ನಡೆಸಲು ನಿರ್ಧರಿಸಿರುತ್ತಾರೆ. ಅವರಿಗೆ ಬೇಕಾದ ಮಾಹಿತಿಯನ್ನು ಅವರು ಪಡೆಯಲಿ. ಯಾರು ತಪ್ಪು ಮಾಡಿರುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆದರೆ ನನ್ನ ಪ್ರಕಾರ ಯಾರದ್ದೋ ರಾಜಕಾರಣದ ಒತ್ತಡದ ಮೇಲೆ ಒಬ್ಬರನ್ನು ಕರೆದು ಅವರನ್ನು ಸಿಲುಕಿಸುವ ಕೆಲಸ ಮಾಡಬಾರದು.
*ಬೀದಿಯಲ್ಲಿ ಹೋಗುವವರ ಮಾತಿಗೆ ತಲೆಕೆಡಿಸಿಕೊಳ್ಳಲ್ಲ:*
ಜಮೀರ್ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿಲ್ಲ. ಬೀದಿಯಲ್ಲಿ ಹೋಗುವವರು ನೂರೈವತ್ತು ಮಾತನಾಡುತ್ತಾರೆ. ಜಮೀರ್ ವೈಯಕ್ತಿಕ ಜೀವನದಲ್ಲಿ ಕೊಲಂಬೋಗಾದರೂ ಹೋಗಲಿ, ಅಮೆರಿಕಾಕ್ಕಾದರೂ ಹೋಗಲಿ, ಲಾಸ್ ವೇಗಸ್ ಗಾದರೂ ಹೋಗಲಿ, ಅವರ ದುದ್ದಲ್ಲಿ ಅವರು ಹೋಗುತ್ತಾರೆ. ರಸ್ತೆಯಲ್ಲಿ ಮಾತಾಡಿದವರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಜಮೀರ್ ಒಬ್ಬ ಜವಾಬ್ದಾರಿಯುತ ಶಾಸಕ, ಈ ವಿಚಾರ ಹೇಗೆ ನಿಭಾಯಿಸಬೇಕು ಅಂತಾ ಅವರಿಗೆ ಗೊತ್ತಿದೆ.
*ತನಿಖೆ ನಡೆಸುತ್ತಿರೋದು ಮಂತ್ರಿಗಳಾ? ಪೊಲೀಸರಾ?*
ಈ ಪ್ರಕರಣದಲ್ಲಿ ಒಬ್ಬೊಬ್ಬ ಮಂತ್ರಿಗಳು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ನೋಡಿ ಭಯ ಆಗುತ್ತಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೋ? ಮಂತ್ರಿಗಳು ಮಾಡುತ್ತಿದ್ದಾರೋ ಗೊತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಗೃಹ ಸಚಿವರು ಹೇಳಿಕೆ ನೀಡುವುದು ಸಹಜ. ಪೊಲೀಸರಿಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಬೇಕು. ಅವರಿಗೆ ಏನಾದರೂ ಸರಿ ಇಲ್ಲ ಎಂದರೆ ಅವರಿಗೆ ಹೇಳಬೇಕು. ಆದರೆ ಮಂತ್ರಿಗಳು ಅನವಶ್ಯಕ ಹೇಳಿಕೆ ನೀಡುವುದು ಸರಿಯಲ್ಲ.
*ರಾಮಲಿಂಗಾ ರೆಡ್ಡಿ ಅವರಿಗೆ ನ್ಯಾಯ ಒಡಗಿಸಬೇಕಿದೆ:*
ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯ ನಾಯಕ. ನನ್ನಷ್ಟೇ ಅನುಭವ ಅವರಿಗಿದೆ. ಪ್ರಮುಖ ಜವಾಬ್ದಾರಿ ಪಡೆಯುವ ಅರ್ಹತೆ ಅವರಿಗಿದೆ. ಈ ವಿಚಾರವಾಗಿ ನಾನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಮೊನ್ನೆ ದೆಹಲಿಗೆ ಹೋದಾಗ ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡಿದೆವು. ಅವರಿಗೆ ಅನ್ಯಾಯ ಆಗಿದೆ. ಇಲ್ಲ ಎಂದು ಹೇಳುವುದಿಲ್ಲ. ಅವರಿಗೆ ನ್ಯಾಯ ಒಡಗಿಸಿಕೊಡುವುದಿದೆ. ಈ ಬಾರಿ ನಮ್ಮ ರಾಜ್ಯಕ್ಕೆ ಹೈಕಮಾಂಡ್ ಉತ್ತಮ ಪ್ರಾತಿನಿಧ್ಯ ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ, ದಿನೇಶ್ ಗುಂಡೂರಾವ್ ಅವರಿಗೆ, ಕೃಷ್ಣ ಭೈರೇಗೌಡರಿಗೆ, ಎಚ್.ಕೆ ಪಾಟೀಲರಿಗೆ ಜವಾಬ್ದಾರಿ ನೀಡಿದೆ.
*ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ*
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಮಾತನಾಡಲು ಧ್ವನಿ ಕಳೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಸಂಸದರು ಮುಖ್ಯಮಂತ್ರಿಗಳಿಗೆ ಶಕ್ತಿ ತುಂಬುತ್ತಿಲ್ಲ. ಮಂತ್ರಿಗಳು ಅವರದೇ ಆದ ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. 25 ಸಂಸದರನ್ನು ಇಟ್ಟುಕೊಂಡು ನೆರೆ ಪರಿಹಾರ, ಜಿಎಸ್ಟಿ ಬಾಕಿ, ವಿವಿಧ ಯೋಜನೆಗಳ ವಿಚಾರದಲ್ಲಿ ಒಂದು ಗುಡುಗು ಗುಡುಗಿದರೆ ಎಲ್ಲ ಕೆಲಸ ಆಗುತ್ತದೆ. ಆದರೆ ಭವಿಷ್ಯದಲ್ಲಿ ತಮ್ಮ ಕುರ್ಚಿಗೆ ಎಲ್ಲಿ ತೊಂದರೆಯಾಗುತ್ತದೆಯೋ ಎಂದು ಯಾರೂ ಮಾತನಾಡುತ್ತಿಲ್ಲ. ರಾಜ್ಯದ ಮತದಾರರು ನಮ್ಮ ರಾಜ್ಯಕ್ಕೆ ನಿಮ್ಮ ಸಂಸದರ ಕೊಡುಗೆ ಏನು ಎಂದು ಪ್ರಶ್ನೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.
*ಅಧಿವೇಶನದಲ್ಲಿ ಎಲ್ಲ ವಿಚಾರದ ಚರ್ಚೆ:*
ನೆರೆ ವಿಚಾರ, ಡಿ.ಜೆ ಹಳ್ಳಿ ಘಟನೆ, ಕೊರೋನಾ ನಿರ್ವಹಣೆ ವೈಫಲ್ಯ, ಭ್ರಷ್ಟಾಚಾರ, ಆಡಳಿತ ಕುಸಿತ, ಮಂತ್ರಿಗಳ ಸಮನ್ವಯತೆ ಕೊರತೆ, ಯಾರದ್ದೋ ಇಲಾಖೆಯನ್ನು ಇನ್ಯಾರೋ ನಡೆಸುತ್ತಿದ್ದಾರೆ. ಕೊರೋನಾ ವಿಚಾರದಲ್ಲಿ ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಅದಾದ ಮೇಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಅದಾದ ಮೇಲೆ ಏಳು ಜನ ಮಂತ್ರಿಗಳು ಬಂದರು. ಈ ಸಮಯದಲ್ಲೇ ಪೊಲೀಸ್ ಆಯುಕ್ತರು, ಕಾರ್ಮಿಕ ಆಯುಕ್ತರು ಬದಲಾದರು. ಇವೆಲ್ಲವೂ ಸರ್ಕಾರದ ಆಡಳಿತ ವೈಫಲ್ಯದ ಸಂಕೇತವಾಗಿದೆ. ಮಂತ್ರಿಗಳನ್ನು ಬದಲಿಸಲಾಗದೆ, ಅಧಿಕಾರಿಗಳನ್ನು ಬದಲಾಯಿಸಿದರು. ಈ ಎಲ್ಲ ವಿಚಾರದ ಬಗ್ಗೆ ಚರ್ಚಿಸುತ್ತೇವೆ.
*ಒಳ್ಳೆ ಕೆಲಸಕ್ಕೆ ಸಹಕಾರ ನೀಡುತ್ತೇನೆ:*
ಮೇಕೆದಾಟು ಆಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರದ ಮಂತ್ರಿಗಳ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಇದು ಸಂತೋಷದ ವಿಚಾರ. ಒಳ್ಳೆ ಕೆಲಸ ಮಾಡಲಿ. ನಾವು ಶುಭ ಹಾರೈಸಿ, ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನನ್ನ ಅವಧಿಯಲ್ಲಿ ಡಿಪಿಆರ್ ಸಲ್ಲಿಕೆ ಮಾಡಿದ್ದೆವು. ಎರಡೂ ಕಡೆ ಅವರದ್ದೇ ಸರ್ಕಾರ ಇದೆ. 5 ನಿಮಿಷದಲ್ಲಿ ಅನುಮತಿ ಪಡೆಯಬಹುದು. ಆದಷ್ಟು ಬೇಗ ಇದಕ್ಕೆ ಅನುಮತಿ ಪಡೆಯಲಿ.