IMG 20260203 WA0053

ವಿಧಾನ ಸಭೆ : ಉದ್ಯೋಗ ಖಾತ್ರಿ (MGNREGA) ಕಾಯ್ದೆಯನ್ನು ಮರುಸ್ಥಾಪಿಸುವಂತೆ ಒತ್ತಾಯ ದ ನಿರ್ಣಯ ಮಂಡನೆ……!

Genaral STATE
  • ಕೇಂದ್ರ ಸರ್ಕಾರದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‍ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಕಾಯ್ದೆಯನ್ನು ರದ್ದು ಪಡಿಸಿ.
  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಕಾಯ್ದೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳಿಂದ ನಿರ್ಣಯ ಮಂಡನೆ

ಬೆಂಗಳೂರು, ಫೆಬ್ರವರಿ 3 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿ, ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‍ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ಸದನವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (MGNREGA) ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯದ ವಿವರ:

ಈ ಸದನವು, ಭಾರತದ ಪ್ರಜಾಸತ್ತೆಯ ಭದ್ರಬುನಾದಿಯಾದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅಧಿಕಾರ ವಿಕೇಂದ್ರೀಕರಣದ ತತ್ವಗಳಿಗೆ ತನ್ನ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಗ್ರಾಮೀಣ ಬಡವರ ಪಾಲಿನ ‘ಸಂಜೀವಿನಿ’ಯಾಗಿದ್ದ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ’ಯನ್ನು ರದ್ದುಗೊಳಿಸಿರುವುದನ್ನು ಈ ಸದನವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಹೊಸ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ (ವಿಬಿ-ಜಿಗ್ರಾಮ್ ಜಿ) ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ.

ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಸಲುವಾಗಿ 2005 ರಲ್ಲಿ ಅಂದಿನ ಡಾ. ಮನ ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿರ್ಮೂಲನೆ, ವಲಸೆ ತಡೆ, ಲಿಂಗ ತಾರತಮ್ಯವಿಲ್ಲದೆ ವೇತನ ನೀಡುವಿಕೆ, ಪಂಚಾಯತ್ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳ ಸೃಜನೆಯಿಂದ ಕ್ರಾಂತಿಕಾರಿ ಬದಲಾವಣೆ ತಂದಿದೆ.

ಹೊಸ ಕಾಯ್ದೆಯು ಸಂವಿಧಾನದ 21ನೇ ಅನುಚ್ಛೇದದಡಿ ಸಿಗುವ ಜೀವಿಸುವ ಹಕ್ಕನ್ನು ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ ಹಾಗೂ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತ್‍ಗಳಿಗೆ ನೀಡಲಾದ ಅಧಿಕಾರವನ್ನು ಮತ್ತು ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಮೂಲಕ, ಸಂವಿಧಾನದ 73ನೇ ತಿದ್ದುಪಡಿಯ ಆಶಯಕ್ಕೆ ವಿರುದ್ಧವಾಗಿರುವುದಲ್ಲದೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕಲ್ಪನೆಯ ಗ್ರಾಮ ಸ್ವರಾಜ್ಯದ ಉದ್ದೇಶವನ್ನು ಸಹ ವಿಫಲಗೊಳಿಸುತ್ತದೆ. ಮನರೇಗಾ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ 100 ಮಾನವ ದಿನಗಳ ಕೂಲಿ ಹಣವನ್ನು ಶೇ.100 ರಷ್ಟು ಸಂಪೂರ್ಣವಾಗಿ ಭರಿಸುತ್ತಿತ್ತು. ರಾಜ್ಯಗಳ ಜೊತೆ ಸಮಾಲೋಚಿಸದೆ, ಕೇಂದ್ರವು ಏಕಾಏಕಿ ರಾಜ್ಯ ಸರ್ಕಾರಗಳು ಶೇ. 40 ರಷ್ಟು ಅನುದಾನವನ್ನು ಭರಿಸಬೇಕೆಂಬ ನಿಯಮವನ್ನು ಹೇರಿದೆ. ಇದರಿಂದ 125 ಮಾನವ ದಿನಗಳ ಕೆಲಸ ಒದಗಿಸುವುದಾಗಿ ಹೊಸ ಕಾಯ್ದೆಯಲ್ಲಿ ಹೇಳಲಾಗಿದ್ದರೂ, ವಾಸ್ತವವಾಗಿ 50 ಮಾನವ ದಿನಗಳ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ರಚನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗೂ ಸಂವಿಧಾನದ ಅನುಚ್ಛೇದ 258 ಮತ್ತು ಅನುಚ್ಛೇದ 280 ಗಳನ್ನು ಸ್ಪಷ್ಟ ಉಲ್ಲಂಘನೆ ಮಾಡಿದೆ.IMG 20260203 WA0050

ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ಗ್ರಾಮ ಪಂಚಾಯತಿಗಳು ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಕರ್ನಾಟಕವು ದೇಶದಲ್ಲಿಯೆ ಮೊದಲ ಸ್ಥಾನದಲ್ಲಿದೆ. ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಮಪರ್ಕವಾಗಿ ಅನುμÁ್ಠನ ಮಾಡಿರುವುದರಲ್ಲಿ ಕೂಡ ರಾಜ್ಯವು ಮೊದಲ ಸ್ಥಾನದಲ್ಲಿದೆ.

ಕರ್ನಾಟಕಕ್ಕೆ 14ನೇ ಹಣಕಾಸು ಆಯೋಗದಲ್ಲಿ ಶೇ.4.71 ರಷ್ಟು ತೆರಿಗೆ ಹಂಚಿಕೆಯನ್ನು ಶಿಫಾರಸ್ಸು ಮಾಡಲಾಗಿತ್ತು. 15ನೇ ಹಣಕಾಸು ಆಯೋಗದಲ್ಲಿ ಶೇ. 3.64ಕ್ಕೆ ಇಳಿಕೆಯಾಗಿತ್ತು. ಈಗ 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಶೇ. 4.131 ರಷ್ಟು ಹಂಚಿಕೆ ಮಾಡಿದ್ದರೂ, ಅದು 14ನೇ ಹಣಕಾಸು ಆಯೋಗದ ಶಿಫಾರಸ್ಸಿಗಿಂತ ಶೇ. 14.1 ರಷ್ಟು ಕಡಿಮೆ ಆಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ, ಹೊಸ ಕಾಯ್ದೆಯ ಮೂಲಕ ಯೋಜನೆಯ ಅನುμÁ್ಠನದಲ್ಲಿ ಶೇ.40 ರಷ್ಟು ಹೊರೆಯನ್ನು ರಾಜ್ಯದ ಮೇಲೆ ಹೊರಿಸುತ್ತಿರುವುದು ರಾಜ್ಯದ ಆರ್ಥಿಕ ಭದ್ರತೆಯನ್ನು ಮತ್ತು ಅಭಿವೃದ್ಧಿಯನ್ನು ಅಪಾಯಕ್ಕೆ ದೂಡುವ ಹುನ್ನಾರವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ ‘ಹಕ್ಕು’ ಹಾಗೂ ‘ಬೇಡಿಕೆ’ ಆಧಾರಿತ’ವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಹಂಗಿಗೆ ಒಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದೆಹಲಿಯ ದಂತ ಗೋಪುರದಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ, ಗ್ರಾಮಸಭೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದ್ದು, ಉಳಿದ ಕಡೆಗಳಲ್ಲಿ ಉದ್ಯೋಗದ ಹಕ್ಕನ್ನು ನಿರಾಕರಿಸಲಾಗಿದೆ.IMG 20260203 WA0055

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ನಮ್ಮ ಹೊಲ-ನಮ್ಮ ದಾರಿ, ದನದ ಕೊಟ್ಟಿಗೆ, ಕುರಿ ದೊಡ್ಡಿ, ಕಣ, ಶಾಲಾ ಕಾಂಪೌಂಡ್, ಶೌಚಾಲಯ, ಬದು, ಹೊಳಗಟ್ಟಿ, ಪಂಚಾಯತಿ ಕಟ್ಟಡ (ರಾಜೀವ ಗಾಂಧಿ ಸೇವಾ ಕೇಂದ್ರ), ತೋಟಗಾರಿಕೆ ಬೆಳೆಗಳು, ಆಟದ ಮೈದಾನದಂತಹ ಸ್ಥಳೀಯವಾಗಿ ಅಗತ್ಯವಿರುವ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಹೊಸ ಕಾಯ್ದೆಯನ್ನು ‘ಪಿ.ಎಂ ಗತಿಶಕ್ತಿ’ ಯೋಜನೆಗೆ ಜೋಡಿಸಿರುವುದರಿಂದ, ದೊಡ್ಡ ರಸ್ತೆಗಳು ಮತ್ತು ಹೈವೆಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದು, ಇದು ಪರೋಕ್ಷವಾಗಿ ಗುತ್ತಿಗೆದಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿ ಮಾರ್ಪಟ್ಟಿದೆ. ಇದು ಬಡವರ ಕೈಯಿಂದ ಅನ್ನ ಕಸಿದುಕೊಂಡು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ಯೋಜನೆಯಾಗಿದೆ.

ಈ ಹೊಸ ಕಾಯ್ದೆಯು ವರ್ಷಕ್ಕೆ 12 ತಿಂಗಳ ಬದಲು ಕೇವಲ 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತದೆ. ವಿಬಿ-ಗ್ರಾಮ್-ಜಿ ಕಾಯ್ದೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳು ಸೇರ್ಪಡೆಗೊಳ್ಳುವ ಖಚಿತತೆ ಇಲ್ಲ ಹಾಗೂ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಯಾವುದೇ ಖಚಿತತೆ / ಖಾತ್ರಿ ಇಲ್ಲ. ಈ ಅನಿಶ್ಚಿತತೆಯು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರು, ಆದಿವಾಸಿಗಳು, ರೈತಾಪಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ.

ಆದುದರಿಂದ, ಈ ಮೇಲೆ ವಿವರಿಸಿದ ಪ್ರಮುಖ ಕಾರಣಗಳಿಂದ ಕೇಂದ್ರದ ಈ ನಡೆಯನ್ನು ಈ ಸದನವು ತೀವ್ರವಾಗಿ ವಿರೋಧಿಸುತ್ತದೆ.

ಈ ಮೇಲ್ಕಂಡ ಎಲ್ಲ ಗಂಭೀರ ಅಂಶಗಳನ್ನು ಪರಿಗಣಿಸಿ, ಕರ್ನಾಟಕ ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ, ಒಕ್ಕೂಟ ತತ್ವಕ್ಕೆ ವಿರೋಧವಾಗಿರುವ ಮತ್ತು ರಾಜ್ಯದ ಬೊಕ್ಕಸಕ್ಕೆ ತೀವ್ರ ಹೊರೆ ಉಂಟುಮಾಡುವ ಮತ್ತು ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿರುವ ಗ್ರಾಮ ಪಂಚಾಯಿತಿಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿರುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಗ್ರಾಮೀಣ ಆಸ್ತಿ ಸೃಜನೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಈ ಹಿಂದಿನಂತೆ ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಈ ಸದನವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ತಿಳಿಸಿ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಯಿತು.

 

Leave a Reply

Your email address will not be published. Required fields are marked *