ಕೇಂದ್ರ ಬಜೆಟ್ 2047ಕ್ಕೆ ‘ವಿಕಸಿತ ಭಾರತ’ದ ರೋಡ್‍ಮ್ಯಾಪ್: ಸಚಿವ ಅಶ್ವಿನಿ ವೈಷ್ಣವ್ ವಿಶ್ಲೇಷಣೆ
ಬೆಂಗಳೂರು: ಈ ವರ್ಷದ ಕೇಂದ್ರ ಬಜೆಟ್ 2047ಕ್ಕೆ ವಿಕಸಿತ ಭಾರತದ ರೋಡ್‍ಮ್ಯಾಪ್ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅವರು ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 2047ಕ್ಕೆ ನಾವು ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಈ ರೋಡ್‍ಮ್ಯಾಪ್ ಪೂರಕ ಎಂದು ನುಡಿದರು.
ಈ ರೋಡ್ ಮ್ಯಾಪ್ 3 ಪ್ರಮುಖ ಸ್ತÀಂಬಗಳನ್ನು ಹೊಂದಿದೆ. ಉತ್ಪಾದನಾ ಕ್ಷೇತ್ರದ ನಾವೀನ್ಯತೆ ಹಾಗೂ ನಮ್ಮ ದೇಶವನ್ನು ಆಧುನಿಕ ವಿಶ್ವಕ್ಕೆ ಸಿದ್ಧಪಡಿಸುವುದು, ಸಮಾಜದ ಪ್ರತಿವರ್ಗವೂ ಬೆಳವಣಿಗೆಯ ಪ್ರಯೋಜನ ಪಡೆಯುವಂತೆ ಮಾಡುವ ಅಂತರ್ಗತ ಬೆಳವಣಿಗೆ, ನಾವು ಮಾಡಬೇಕಾದ ಕರ್ತವ್ಯಗಳೇ ಈ 3 ಕಂಬಗಳು ಎಂದು ವಿವರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೀ ಅವರು 2047ಕ್ಕೆ ಅತ್ಯಂತ ಸ್ಪಷ್ಟ ರೋಡ್ ಮ್ಯಾಪ್ ಸಿದ್ಧಪಡಿಸಿ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಮೇಕ್ ಇನ್ ಇಂಡಿಯವು ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಈ ಬಜೆಟ್‍ನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಲಾಗುತ್ತಿದೆ. ಬಯೋಫಾರ್ಮಕ್ಕೆ ಆದ್ಯತೆ ನೀಡಲಿದ್ದೇವೆ. ವಾಯುಯಾನ, ಬಾಹ್ಯಾಕಾಶ, ಕೈಗಾರಿಕೆಯಡಿ ಹೈಟೆಕ್ ಟೂಲ್ ರೂಮ್‍ಗಳು ಪ್ರಿಸಿಶನ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂದು ಅವರು ನುಡಿದರು. ಬೆಂಗಳೂರಿನಲ್ಲಿರುವ ಸೆಂಟ್ರಲ್ ಟೂಲ್ ರೂಮ್‍ನಿಂದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮೂಲಕ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು.
ನಮ್ಮ ದೇಶವು ರಫ್ತು ಆಧರಿತ ರಾಷ್ಟ್ರವಾಗುವ ಹಿನ್ನೆಲೆಯಲ್ಲಿ ನಾವು ನಮ್ಮದೇ ಆದ ನೌಕಾಯಾನ, ನೌಕಾ ತಯಾರಿಕಾ ವ್ಯವಸ್ಥೆ, ಹಡಗುಗಳನ್ನು ಹೊಂದಿರುವ ಅವಶ್ಯಕತೆ ಇದೆ. ಇದಕ್ಕಾಗಿಯೇ ನಾವು ನೌಕಾ ಕ್ಷೇತ್ರಕ್ಕೆ ಒತ್ತು ಕೊಟ್ಟಿದ್ದೇವೆ. ಇದಲ್ಲದೇ ಬಟ್ಟೆ ಉದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು. ಬೃಹತ್ ಟೆಕ್ಸ್‍ಟೈಲ್ ಪಾರ್ಕ್‍ಗಳ ನಿರ್ಮಾಣ, ಸಂಶೋಧನೆಗೆ ಒತ್ತು ಕೊಡಲಿದ್ದೇವೆ ಎಂದು ಹೇಳಿದರು.
ಕಳೆದ ಒಂದು ದಶಕದಲ್ಲಿ ನಮ್ಮ ಇಲೆಕ್ಟ್ರಾನಿಕ್ಸ್ ಉತ್ಪಾದನೆಯು 6 ಪಟ್ಟು ಹೆಚ್ಚಾಗಿದೆ. ಅಲ್ಲದೇ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತು 8 ಪಟ್ಟು ಹೆಚ್ಚಾಗಿದೆ. ಪ್ರಪಂಚದ ಇಲೆಕ್ಟ್ರಾನಿಕ್ಸ್ ಉತ್ಪಾದಕರಲ್ಲಿ ಟಾಪ್ 3 ಅಡಿಯಲ್ಲಿ ನಾವಿದ್ದೇವೆ. ನಾವಿನ್ನು ಇಲೆಕ್ಟ್ರಾನಿಕ್ಸ್ ಕಂಪೋನೆಂಟ್‍ಗಳ ಉತ್ಪಾದನೆಗೆ ಆದ್ಯತೆ ನೀಡಲಿದ್ದೇವೆ. 46 ಘಟಕಗಳಿಗೆ ಈಗಾಗಲೇ ಅನುಮೋದನೆ ಕೊಡಲಾಗಿದೆ. ಕರ್ನಾಟಕದಲ್ಲಿ ಈ ಕ್ಷೇತ್ರದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಿದೆ. ಇಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದ ಕೊಡುಗೆ ಪ್ರಮಾಣವನ್ನು 22 ಸಾವಿರ ಕೋಟಿಯಿಂದ ರೂ. 40 ಸಾವಿರ ಕೋಟಿಗೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಅಪಾರ ಪ್ರಮಾಣದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಯೂ ನಡೆಯಬೇಕಾಗಿದೆ. 200 ಪರಂಪರಾ ಕೈಗಾರಿಕಾ ಸಮೂಹಗಳ ಪುನರುತ್ಥಾನ ಕಾರ್ಯ ನಡೆಯಬೇಕಿದೆ. ಸ್ಪರ್ಧಾತ್ಮಕ ಜಗತ್ತು ಇದಾಗಿದ್ದು, ವೆಚ್ಚದ ಮೇಲಿನ ನಿಯಂತ್ರಣ, ಸಮೂಹ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಹೊಂದುವುದು, ನೀರಿನ ಸೌಕರ್ಯ ವೃದ್ಧಿ, ಕಾರ್ಮಿಕರ ಸಮೂಹ ಗೃಹ ವ್ಯವಸ್ಥೆ, ಉತ್ತಮ ರಸ್ತೆ ವ್ಯವಸ್ಥೆ- ಇವೆಲ್ಲವನ್ನೂ ಪರಂಪರಾ ಕೈಗಾರಿಕಾ ಸಮೂಹಗಳಲ್ಲಿ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.
ಕ್ರೀಡಾ ಸಾಮಗ್ರಿಗಳು ವಿಶ್ವಾದ್ಯಂತ ಅತ್ಯಂತ ಜನಪ್ರಿಯತೆ ಪಡೆದಿವೆ. ಕ್ರೀಡಾ ಸಾಮಗ್ರಿ ಉತ್ಪಾದನೆಯ ಮೂಲಕ ಹೆಚ್ಚು ಉದ್ಯೋಗ ನೀಡಿಕೆ ಸಾಧ್ಯವಿದೆ. ಹಾಗಾಗಿ ಈ ಕ್ಷೇತ್ರಕ್ಕೂ ಒತ್ತು ಕೊಡಲು ಉದ್ದೇಶಿಸಲಾಗಿದೆ ಎಂದು ಅವರು ನುಡಿದರು.
56 ಕೋಟಿ ಜನ್‍ಧನ್ ಖಾತೆ..
ಉತ್ಪಾದನೆ, ಅಂತರ್ಗತ ಬೆಳವಣಿಗೆ ಮತ್ತು ಸುಧಾರಣೆಗಳಿಗೆ ಆದ್ಯತೆ ನೀಡಿದ್ದೇವೆ. ತಳಹಂತದಲ್ಲಿರುವ ಜನರು ವಸತಿ, ಉತ್ತಮ ಅಡುಗೆ ವ್ಯವಸ್ಥೆ, ಉತ್ತಮ ನೀರಿನ ಸೌಲಭ್ಯ, ಅತ್ಯುತ್ತಮ ಶುಚಿತ್ವ ವ್ಯವಸ್ಥೆಯನ್ನು ಪಡೆಯುವಂತಾಗಲು ಪ್ರಧಾನಿಯವರ ಚಿಂತನೆಯಡಿ 56 ಕೋಟಿ ಜನ್‍ಧನ್ ಖಾತೆಗಳನ್ನು ತೆರೆಯಲಾಗಿದೆ. ಇzಲ್ಲದೇ ಈಗಾಗಲೇ 25 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಿಸಿದರು.
ಘೋಷಣೆಯಲ್ಲೇ ಉಳಿದ ಗರೀಬಿ ಹಠಾವೋ..
ಹಲವು ದಶಕಗಳ ಕಾಲ ಕಾಂಗ್ರೆಸ್ ಸರಕಾರಗಳು ಗರೀಬಿ ಹಠಾವೋ ಕುರಿತು ಘೋಷಣೆ ಮಾಡುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್‍ಡಿಎ ಸರಕಾರವು ಜನರ ಜೀವನದಲ್ಲಿ ನಿಜವಾದ ಸುಧಾರಣೆ ತರಲು ಸಾಧ್ಯವಾಗಿದೆ. ಇದಕ್ಕಾಗಿಯೇ ಈ ಬಜೆಟ್‍ನಲ್ಲಿ ಪ್ರಧಾನಿಯವರು ಜನಪ್ರಿಯತೆ ಬದಲಾಗಿ ಜನಪರ ಅಂಶಗಳನ್ನು ಅಳವಡಿಸಿದ್ದಾರೆ ಎಂದು ತಿಳಿಸಿದರು.
ಸೆಮಿ ಕಂಡಕ್ಟರ್ ಕೈಗಾರಿಕೆಯಲ್ಲಿ ಬೆಂಗಳೂರು ಮತ್ತು ಮೈಸೂರು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ಶ್ಲಾಘಿಸಿದರು. ಎಐ ಕ್ರಾಂತಿಗೆ ಅನುಗುಣವಾಗಿ ಬಿ ಟೆಕ್, ಎಂ ಟೆಕ್ ಪಠ್ಯಕ್ರಮದಲ್ಲೂ ಬದಲಾವಣೆ ಆಗುತ್ತಿದೆ ಎಂದು ತಿಳಿಸಿದರು.
ರೈಲ್ವೆ- ರಾಜ್ಯಕ್ಕೆ 7,748 ಕೋಟಿ
ರೈಲ್ವೆ ಇಲಾಖೆಯಡಿ ಕರ್ನಾಟಕಕ್ಕೆ ದಾಖಲೆ ಮೊತ್ತ ಸಿಗಲಿದೆ. ರೂ. 7,748 ಕೋಟಿ ಮೊತ್ತ ಸಿಗಲಿದ್ದು, ಇದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು ಎಂದು ವಿವರಿಸಿದರು. ಕಾಂಗ್ರೆಸ್ ಆಡಳಿತದಡಿ 800 ಕೋಟಿ ರಾಜ್ಯಕ್ಕೆ ಸಿಗುತ್ತಿತ್ತು. ಅದೀಗ 7,748 ಕೋಟಿಗೆ ಏರಿಕೆಯಾಗಿದೆ ಎಂದು ಗಮನ ಸೆಳೆದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಪಿ.ಸಿ. ಮೋಹನ್, ಡಾ.ಸಿ.ಎನ್.ಮಂಜುನಾಥ್, ಮಾಜಿ ಸಂಸದ ಮುನಿಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
