ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಕ್ವಾಲ್ ಕಾಮ್ 2 ಎನ್‌ಎಂ (ನ್ಯಾನೊಮೀಟರ್) ಸೆಮಿಕಂಡಕ್ಟರ್ ಚಿಪ್ ಅನ್ನು ಬಿಡುಗಡೆ ಮಾಡಿದರು,
ಇದು ಸುಧಾರಿತ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ಒಂದು ಮಹತ್ವದ ಕ್ಷಣವನ್ನು ಮತ್ತು ಜಾಗತಿಕ ಎಂಜಿನಿಯರಿಂಗ್ ಕಾರ್ಯಾಚರಣೆಗಳಲ್ಲಿ ಭಾರತದ ಪ್ರಮುಖ ಪಾತ್ರವನ್ನು ಗುರುತಿಸಿದೆ. “ಈ ಪ್ರಗತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ದೇಶದಲ್ಲಿ ಇರುವ ಅಪಾರ ಪ್ರತಿಭೆಯಿಂದಾಗಿ ಇಡೀ ಜಗತ್ತು ನಮ್ಮನ್ನು ಭರವಸೆಯಿಂದ ನೋಡುತ್ತಿದೆ. ಮುಂದಿನ ಹಂತದ ಸಾಧನೆಯು ಭಾರತದಿಂದ ಬರಲಿದೆ” ಎಂದು ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು.

“ನಾವು ಇಡೀ ಜಾಗತಿಕ ಸಮುದಾಯದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು. ನಾವು ಸಹ-ಸೃಷ್ಟಿ ಮತ್ತು ಸಹ-ಅಭಿವೃದ್ಧಿಯಲ್ಲಿ ನಂಬಿಕೆ ಹೊಂದಿರುವ ದೇಶ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ನಿರ್ಣಾಯಕ ನಾಯಕತ್ವವು ನಮ್ಮ ದೇಶದಲ್ಲಿ ಸೆಮಿಕಂಡಕ್ಟರ್ ಮಿಷನ್ ನ ಈ ಸಂಪೂರ್ಣ ಹೊಸ ಅಧ್ಯಾಯವನ್ನು ನಮಗೆ ನೀಡಿದೆ” ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. ಈ ಕಥೆಯು 1960 ರ ದಶಕದಲ್ಲಿ ಪ್ರಾರಂಭವಾಯಿತು, ಇಂಟೆಲ್ ನ ಮೂಲವಾದ ಫೇರ್ ಚೈಲ್ಡ್ ಸಮೂಹವು ಭಾರತದಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಲು ಬಯಸಿತ್ತು. ಆದರೆ ಅಂದಿನ ಸರ್ಕಾರವು ಸೆಮಿಕಂಡಕ್ಟರ್ ಚಿಪ್ ಗಳ ಮಹತ್ವವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲಿಲ್ಲ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರು ಇದರ ಮಹತ್ವವನ್ನು ಅರ್ಥಮಾಡಿಕೊಂಡರು ಮತ್ತು ಮೊದಲ ಸೆಮಿಕಂಡಕ್ಟರ್ ಯಂತ್ರವನ್ನು ಪ್ರಾರಂಭಿಸಿದರು.
ನಾವು ಮೊದಲ ಕೆಲವು ಘಟಕಗಳನ್ನು ಕಾರ್ಯಗತಗೊಳಿಸುವ ಮತ್ತು ಕನಿಷ್ಠ ಒಂದು ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಹೊಂದುವ ಕಾರ್ಯಕ್ರಮವನ್ನು ಕೈಗೊಂಡೆವು. ನಾವು 28 ನ್ಯಾನೊಮೀಟರ್ ನಿಂದ ಪ್ರಾರಂಭಿಸಿದೆವು, ಏಕೆಂದರೆ ಇದು ಆಟೋಮೋಟಿವ್, ಟೆಲಿಕಾಂ, ವಿದ್ಯುತ್ ನಿರ್ವಹಣೆ ಮತ್ತು ಕಾರ್ಯತಂತ್ರದ ಅವಶ್ಯಕತೆಗಳವರೆಗೆ ಸುಮಾರು ಶೇ.75 ರಷ್ಟು ಅಗತ್ಯಗಳನ್ನು ಪೂರೈಸುತ್ತದೆ ಎಂದು ಅವರು ಹೇಳಿದರು.
ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ, 10 ಘಟಕಗಳು ನಿರ್ಮಾಣ ಹಂತದಲ್ಲಿವೆ. ಅವುಗಳಲ್ಲಿ 4 ಘಟಕಗಳು ಇತ್ತೀಚೆಗೆ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿವೆ. ಅವರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ದೃಢೀಕರಿಸುತ್ತಿದ್ದಾರೆ, ಗ್ರಾಹಕರು ಅವುಗಳನ್ನು ಮೌಲ್ಯೀಕರಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ನಾವು ವಾಣಿಜ್ಯ ಉತ್ಪಾದನೆಯ ಮೊದಲ ಘಟಕವನ್ನು ಹೊಂದಲಿದ್ದೇವೆ ಎಂದು ಅವರು ಹೇಳಿದರು.

2022 ರಿಂದ ಇಲ್ಲಿಯವರೆಗಿನ ಅಲ್ಪಾವಧಿಯಲ್ಲಿ, ನಾವು 315 ವಿಶ್ವವಿದ್ಯಾನಿಲಯಗಳನ್ನು ಹೊಂದಿದ್ದೇವೆ, ಅಲ್ಲಿ ಸಿನೋಪ್ಸಿಸ್, ಕ್ಯಾಡೆನ್ಸ್ ಅಥವಾ ಸೀಮೆನ್ಸ್ ನಂತಹ ಎಲ್ಲಾ ಪ್ರಮುಖ ಎಲೆಕ್ಟ್ರಾನಿಕ್ ವಿನ್ಯಾಸ ಆಟೊಮೇಷನ್ (ಇಡಿಎ) ಪರಿಕರಗಳನ್ನು ವಿದ್ಯಾರ್ಥಿಗಳು ಚಿಪ್ ಗಳನ್ನು ವಿನ್ಯಾಸಗೊಳಿಸಲು ಬಳಸುತ್ತಿದ್ದಾರೆ. ದೂರದ ಪ್ರದೇಶಗಳ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಚಿಪ್ ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ,ಅವುಗಳನ್ನು ಉತ್ಪಾದನೆಗೆ ಕಳುಹಿಸುತ್ತಿದ್ದಾರೆ ಮತ್ತು ನೈಜ ಕಾರ್ಯನಿರ್ವಹಣೆಯ ಪ್ರಕ್ರಿಯೆಗೆ ಒಳಪಡಿಸಿ ದೃಢೀಕರಿಸುತ್ತಿದ್ದಾರೆ. ಒಂದು ಬೃಹತ್ ಪ್ರತಿಭಾ ಸಮೂಹವು ಸೃಷ್ಟಿಯಾಗುತ್ತಿದ್ದು, ಇದು ನಮ್ಮ ದೇಶಕ್ಕೆ ಜಾಗತಿಕವಾಗಿ ಹೆಸರಾಗಿರುವ ಗಮನಾರ್ಹ ಶಕ್ತಿ ಮತ್ತು ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡಲಿದೆ ಎಂದು ಸಚಿವರು ಹೇಳಿದರು.
ಮುಂದಿನ ದಿನಗಳಲ್ಲಿ, ನಾವು ಭಾರತ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) 2.0 ಅನ್ನು ವಿಭಿನ್ನ ದೃಷ್ಟಿಕೋನದೊಂದಿಗೆ ಪ್ರಾರಂಭಿಸುತ್ತೇವೆ. ಐ ಎಸ್ ಎಂ 1.0 ರಲ್ಲಿ, ಮೊದಲ ಕೆಲವು ಸೆಮಿಕಂಡಕ್ಟರ್ ಅಸೆಂಬ್ಲಿ, ಪರೀಕ್ಷೆ, ಗುರುತು ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಸೌಲಭ್ಯಗಳನ್ನು ಸ್ಥಾಪಿಸುವುದು, ಪೂರಕ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಮತ್ತು ಪ್ರತಿಭಾ ಪೈಪ್‌ಲೈನ್ ಅನ್ನು ಪ್ರಾರಂಭಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು. ಭಾರತ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) 2.0 ರಲ್ಲಿ, ಮೊದಲ ಗಮನವು ವಿನ್ಯಾಸ ಕಂಪನಿಗಳು ಮತ್ತು ಉತ್ಪನ್ನವನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಕೊಂಡೊಯ್ಯಬಲ್ಲ ನವೋದ್ಯಮಗಳ ಮೇಲೆ ಇರುತ್ತದೆ.
ಎರಡನೇ ಗಮನವು ಉಪಕರಣ ತಯಾರಕರು, ರಾಸಾಯನಿಕ ಮತ್ತು ಅನಿಲ ತಯಾರಕರು, ಮೌಲ್ಯೀಕರಣ ಮತ್ತು ಪರೀಕ್ಷೆಯನ್ನು ಒಳಗೊಂಡ ಇಡೀ ಪರಿಸರ ವ್ಯವಸ್ಥೆಯನ್ನು ಭಾರತಕ್ಕೆ ತರುವುದರ ಮೇಲೆ ಇರುತ್ತದೆ. ಮೂರನೇ ಗಮನವು ಪ್ರತಿಭಾ ನೆಲೆಯನ್ನು ಗಾಢವಾಗಿಸುವುದಾಗಿದೆ. ಈಗ ಪ್ರತಿಭಾ ಸಮೂಹ ವಿಸ್ತಾರವಾಗಿರುವುದರಿಂದ, ವಿವಿಧ ವಲಯಗಳಲ್ಲಿ ಪರಿಹಾರವನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಸಚಿವರು ಹೇಳಿದರು.

“5ನೇ ಕೈಗಾರಿಕಾ ಕ್ರಾಂತಿ ತೆರೆದುಕೊಳ್ಳುತ್ತಿರುವಂತೆ, ಸರ್ಕಾರ, ಉದ್ಯಮ ಮತ್ತು ಶೈಕ್ಷಣಿಕ ವಲಯವು ಕೈಜೋಡಿಸಿ ಭಾರತದಿಂದ ಡೀಪ್ ಟೆಕ್ ನಾವೀನ್ಯತೆಗಳು ಬರುವಂತಹ ವಾತಾವರಣವನ್ನು ನಿರ್ಮಿಸುವುದು ಮುಖ್ಯವಾಗಿದೆ. ನಾವು ಇಡೀ ಜಗತ್ತಿಗೆ ಹೆಚ್ಚಿನ ಮೌಲ್ಯವನ್ನು ನೀಡಲು ಶಕ್ತರಾಗಿರಬೇಕು. ಆಗ ಹಲವು ವರ್ಷಗಳಿಂದ ಇರುವ ನಮ್ಮ ಶಕ್ತಿಯು ಒಂದು ದೊಡ್ಡ ಶಕ್ತಿಯಾಗಿ ಮುಂದುವರಿಯುತ್ತದೆ” ಎಂದು ಶ್ರೀ ವೈಷ್ಣವ್ ಹೇಳಿದರು.
ಇದಕ್ಕಾಗಿ, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಜಗತ್ತಿಗೆ ಪರಿಹಾರಗಳನ್ನು ಒದಗಿಸಲು ಅಗತ್ಯವಿರುವ ಸೂಕ್ತ ಕೌಶಲ್ಯಗಳನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಉದ್ಯಮ-ಶೈಕ್ಷಣಿಕ ವಲಯವು ಸಂಬಂಧಿತ ಪಠ್ಯಕ್ರಮವನ್ನು ರೂಪಿಸಬೇಕು ಮತ್ತು ಉದ್ಯೋಗಿಗಳಿಗೆ ಕೌಶಲ್ಯದ ಉನ್ನತೀಕರಣ ಮತ್ತು ಮರುಕೌಶಲ್ಯ ನೀಡಬೇಕು. ಇದು ನಮ್ಮ ದೇಶಕ್ಕೆ ಹೊಸ ಅವಕಾಶಗಳನ್ನು ತರುತ್ತದೆ ಎಂದು ಸಚಿವರು ಹೇಳಿದರು.
