ತಾಯಂದಿರ ಬೊಜ್ಜು ಗರ್ಭಧಾರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅವ್ಯಕ್ತ ಅಪಾಯ: ವಿಶ್ವ ಬೊಜ್ಜು ದಿನದಂದು ತಜ್ಞರ ಕಳವಳ
ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳ ಸಮಾನಾಂತರ ಏರಿಕೆಯನ್ನು ಬೆಂಗಳೂರಿನಾದ್ಯಂತ ಆಸ್ಪತ್ರೆಗಳು ವರದಿ ಮಾಡುತ್ತಿವೆ
ಬೆಂಗಳೂರು / ಮಾರ್ಚ್ 3, 2026: ವಿಶ್ವ ಬೊಜ್ಜು ದಿನದ ಸಂದರ್ಭದಲ್ಲಿ, ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಹಿರಿಯ ಸ್ತ್ರೀರೋಗತಜ್ಞರು ಮತ್ತು ಬಂಜೆತನ ತಜ್ಞರೂ ಆಗಿರುವ ಡಾ. ವಿದ್ಯಾ ವಿ. ಭಟ್ ಅವರು, ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಬೊಜ್ಜಿನಲ್ಲಿ ಸ್ಥಿರವಾಗಿ ಆಗುತ್ತಿರುವ ಏರಿಕೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕರ್ನಾಟಕದಲ್ಲಿ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯಕ್ಕೆ ಅವ್ಯಕ್ತವಾದ ಆದರೆ ಗಮನಾರ್ಹವಾದ ಬೆದರಿಕೆಯಾಗಿದೆ ಎಂದು ಎಚ್ಚರಿಸಿದ್ದಾರೆ.
“ಎರಡು ದಶಕಗಳ ಹಿಂದೆ, ಬೊಜ್ಜನ್ನು ನಗರವಾಸಿಗಳ ಸಮಸ್ಯೆ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಈಗ ಅರೆ ನಗರ ಮತ್ತು ಗ್ರಾಮೀಣ ಕರ್ನಾಟಕದಲ್ಲಿಯೂ ನಾವು ಇದನ್ನು ತುಂಬ ಸಾಮಾನ್ಯವಾಗಿ ಗಮನಿಸುತ್ತಿದ್ದೇವೆ. ಜೀವನಶೈಲಿಯಲ್ಲಿ ವ್ಯಾಪಕವಾದ ಬದಲಾವಣೆಗಳಾಗಿವೆ, ದೈಹಿಕ ಚಟುವಟಿಕೆ ಮತ್ತು ಪರಿಶ್ರಮ ಕಡಿಮೆಯಾಗಿದೆ, ಸಂಸ್ಕರಿಸಿದ ಆಹಾರಗಳ ಸೇವನೆ ಅತಿಯಾಗಿದೆ, ನಿದ್ರೆಯ ಮಾದರಿಗಳು ಸಮರ್ಪಕವಾಗಿಲ್ಲ ಮತ್ತು ಸಮಾಜದ ಎಲ್ಲ ವರ್ಗಗಳ ಜನರೂ ಒತ್ತಡದಲ್ಲೇ ಬದುಕುತ್ತಿದ್ದಾರೆ. ಇವೇ ಈ ಸಮಸ್ಯೆಗೆ ಪ್ರಮುಖ ಕಾರಣಗಳು” ಎಂದು ಅವರು ಗಮನಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಸಂಶೋಧನೆಗಳ ಪ್ರಕಾರ, ಕರ್ನಾಟಕದ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಮೂವರು ಮಹಿಳೆಯರಲ್ಲಿ ಒಬ್ಬರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯನ್ನು ಹೊಂದಿದ್ದಾರೆ. ಬೆಂಗಳೂರಿನಲ್ಲಿ, 25 ರಿಂದ 39 ವರ್ಷ ವಯಸ್ಸಿನ ಉದ್ಯೋಗಸ್ಥ ಮಹಿಳೆಯರಲ್ಲಿ ಈ ಪ್ರವೃತ್ತಿ ವಿಶೇಷವಾಗಿ ಕಂಡುಬರುತ್ತದೆ. ಇದರೊಂದಿಗೆ, ಗರ್ಭಾವಸ್ಥೆಯ ಮಧುಮೇಹ ಮತ್ತು ಗರ್ಭಾವಸ್ಥೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡದಲ್ಲಿ ಸಮಾನಾಂತರ ಏರಿಕೆ ಆಗುತ್ತಿರುವುದನ್ನು ನಗರದೆಲ್ಲೆಡೆಯ ಆಸ್ಪತ್ರೆಗಳ ವರದಿಗಳು ತಿಳಿಸುತ್ತಿವೆ.
“ಮೊದಲ ಗರ್ಭಧಾರಣೆಯ ಪೂರ್ವದಲ್ಲಿ ಮೆಟಾಬಾಲಿಕ್ ಸಿಂಡ್ರೋಮ್‌ನ ಲಕ್ಷಣಗಳು ಯುವತಿಯರಲ್ಲಿ ಈ ಮೊದಲು ಇರುತ್ತಿರಲಿಲ್ಲ, ಈಗಿನ ಯುವತಿಯರಲ್ಲಿ ಅದು ಸಾಮಾನ್ಯವಾಗುತ್ತಿರುವುದು ಚಿಂತೆಯ ವಿಷಯ. ತೂಕ ನಿರ್ವಹಣೆಯು ದೇಹವು ಹೇಗೆ ಕಾಣುತ್ತಿದೆ ಎಂಬುದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಸುರಕ್ಷಿತ ಗರ್ಭಧಾರಣೆಯನ್ನು ಮತ್ತು ಭವಿಷ್ಯದ ಆರೋಗ್ಯಕರ ಪೀಳಿಗೆಯನ್ನು ನಿರ್ಮಿಸುವುದಕ್ಕೂ ಸಂಬಂಧಿಸಿದೆ. ಸಣ್ಣ ಮತ್ತು ಸ್ಥಿರವಾದ ಜೀವನಶೈಲಿ ಬದಲಾವಣೆಗಳು ಈ ಫಲಿತಾಂಶಗಳನ್ನು ಪರಿವರ್ತಿಸಬಹುದು.ವೈ
ದ್ಯರಾಗಿ, ಮಹಿಳೆಯರು ತಮ್ಮ ಭವಿಷ್ಯವನ್ನು ಯೋಜಿಸುವಷ್ಟೇ ಎಚ್ಚರಿಕೆಯಿಂದ ತಮ್ಮ ದೇಹವನ್ನು ಗರ್ಭಧಾರಣೆಗೆ ಸಿದ್ಧಪಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವಿದ್ಯಾ ವಿ ಭಟ್ ಹೇಳಿದರು.
“ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ BMI ಏರಿಕೆಯಾಗುವುದು ಹೆಚ್ಚಿದ ಬಂಜೆತನ, ಹೆಚ್ಚಿನ ಗರ್ಭಪಾತ ದರಗಳು, ಹೆಚ್ಚಿನ ಅಪಾಯದ ಗರ್ಭಧಾರಣೆಗಳು ಮತ್ತು ತಾಯಂದಿರಿಗೆ ಇನ್ನಷ್ಟು ತೊಡಕುಗಳು ಉಂಟಾಗುವುದಕ್ಕೆ ಸಂಬಂಧಿಸಿದೆ. ಹಾರ್ಮೋನುಗಳ ಸಮತೋಲನವನ್ನು ಬೊಜ್ಜು ಅಡ್ಡಿಪಡಿಸುತ್ತದೆ ಮತ್ತು ಅನಿಯಮಿತ ಅಂಡೋತ್ಪತ್ತಿ, ಇನ್ಸುಲಿನ್ ಪ್ರತಿರೋಧ ಮತ್ತು ಕೆಲವು ಸಂದರ್ಭಗಳಲ್ಲಿ ಅಂಡಾಣು ಗುಣಮಟ್ಟವು ಕಡಿಮೆಯಾಗುವುದನ್ನೂ ನಾವು ಗಮನಿಸುತ್ತೇವೆ” ಎಂದು ಅವರು ಹೇಳಿದರು.
“ತೂಕದಲ್ಲಿ ಸಾಧಾರಣ ಪ್ರಮಾಣದ ಇಳಿಕೆಯೂ ಅರ್ಥಪೂರ್ಣ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಅನೇಕ ಮಹಿಳೆಯರು ತಮ್ಮ ದೇಹದ ತೂಕದ ಕೇವಲ 5 ರಿಂದ 10 ಶೇಕಡಾ ಕಡಿಮೆ ಮಾಡಿಕೊಂಡ ಮೇಲೆ ಸ್ವಾಭಾವಿಕವಾಗಿ ಗರ್ಭಧರಿಸುವುದನ್ನು ನಾನು ನೋಡಿದ್ದೇನೆ. ಕೆಲವು ಸಂದರ್ಭಗಳಲ್ಲಿ ತೂಕವನ್ನು ಸರಿಪಡಿಸಿಕೊಳ್ಳುವುದು ಔಷಧಿಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ತಾವು ಅನುಸರಿಸುತ್ತಿರುವ ಬಂಜೆತನ ಚಿಕಿತ್ಸಾ ಪದ್ಧತಿಯನ್ನು ಆಧರಿಸಿ ಡಾ. ಭಟ್ ವಿವರಿಸಿದರು.
ಬೆಂಗಳೂರಿನಂತಹ ನಗರ ಕೇಂದ್ರಗಳು ಗರ್ಭಾವಸ್ಥೆಯ ಮಧುಮೇಹದಲ್ಲಿ ಗಮನಾರ್ಹ ಹೆಚ್ಚಳವನ್ನು ದಾಖಲಿಸಿವೆ. ಈ ಸ್ಥಿತಿಯು ತಾಯಿಯ ಸ್ಥೂಲಕಾಯತೆಗೆ ನಿಕಟ ಸಂಬಂಧ ಹೊಂದಿದೆ. ಅಧಿಕ ತೂಕದ ಮಹಿಳೆ ಗರ್ಭವತಿಯಾದಾಗ, ಅವಳ ಇನ್ಸುಲಿನ್ ಪ್ರತಿರೋಧವು ಹದಗೆಡುತ್ತದೆ. ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಬೊಜ್ಜು ಪ್ರಬಲವಾದ ಆದರೆ ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ ಎಂದು ಡಾ. ಭಟ್ ವಿವರಿಸಿದರು.
ಸ್ಥೂಲಕಾಯವು ಸಿಸೇರಿಯನ್ ಹೆರಿಗೆಗಳು ಹೆಚ್ಚುವುದಕ್ಕೂ ಗಣನೀಯ ಕೊಡುಗೆ ನೀಡುತ್ತಿವೆ. “ಬೊಜ್ಜು ಇರುವ ಮಹಿಳೆಯರಿಗೆ ದೀರ್ಘಕಾಲದ ಹೆರಿಗೆ, ಗರ್ಭಾಶಯದ ಸಂಕೋಚನ ಕಳಪೆಯಾಗಿರುವುದು, ಶಿಶುಗಳ ಗಾತ್ರ ಮತ್ತು ತೂಕ ಅಧಿಕವಾಗಿರುವುದು ಹಾಗೂ ಭ್ರೂಣದ ತೊಂದರೆ ಇವೆಲ್ಲವೂ ಸಿ-ಸೆಕ್ಷನ್ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ” ಎಂದು ಡಾ. ಭಟ್ ಹೇಳಿದರು.
ಸ್ಥೂಲಕಾಯವಿರುವ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯು ಗಾಯದ ಸೋಂಕುಗಳು, ಗುಣಪಡಿಸುವಿಕೆ ವಿಳಂಬವಾಗುವುದು, ರಕ್ತದ ನಷ್ಟ ಹೆಚ್ಚಾಗುವುದು, ಅರಿವಳಿಕೆಗೆ ಸಂಬಂಧಿಸಿದ ತೊಡಕುಗಳು, ರಕ್ತನಾಳದ ಆಳದಲ್ಲಿ ಥ್ರಂಬೋಸಿಸ್ ಮತ್ತು ದೀರ್ಘಾವಧಿಯ ಆಸ್ಪತ್ರೆ ವಾಸಗಳು ಮುಂತಾದ ಹೆಚ್ಚುವರಿ ಅಪಾಯಗಳನ್ನು ಹೊಂದಿದೆ ಮತ್ತು ಶಸ್ತ್ರಚಿಕಿತ್ಸೆಯು ತಾಂತ್ರಿಕವಾಗಿ ಹೆಚ್ಚು ಸವಾಲಿನದಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ತಾಯಿಯ ಸ್ಥೂಲಕಾಯತೆಯನ್ನು “ಅವ್ಯಕ್ತ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು” ಎಂದು ವಿವರಿಸಿದ ಡಾ. ಭಟ್ ಅವರು, ತೊಡಕುಗಳು ಉಂಟಾಗುವ ತನಕ ಇದು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಬೊಜ್ಜು ಕ್ರಮೇಣ ಬೆಳೆಯುತ್ತದೆ ಮತ್ತು ಇತ್ತೀಚೆಗಂತೂ ತುಂಬ ಸಾಮಾನ್ಯವಾಗುತ್ತಿದೆ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಕಾಡತೊಡಗುವ ತನಕ ಕುಟುಂಬಗಳು ಇದನ್ನು ಆರೋಗ್ಯ ಸಮಸ್ಯೆಯಾಗಿ ಗುರುತಿಸುವುದೇ ಇಲ್ಲ ಎಂದರು. “ಸಂಕೀರ್ಣ ಆರೋಗ್ಯ ಸಮಸ್ಯೆಗಳೊಂದಿಗೆ ಹೆಚ್ಚು ಪ್ರಮಾಣದ ರೋಗಿಗಳು ಐಸಿಯುಗಳಲ್ಲಿ ದಾಖಲಾಗುತ್ತಿದ್ದಾರೆ. ಹೆರಿಗೆಗಳು ಮತ್ತು ಅಧಿಕ ಅಪಾಯವಿರುವ ನವಜಾತ ಶಿಶುಗಳು ತಾಯಿಯ ಬೊಜ್ಜಿಗೆ ಸಂಬಂಧಿಸಿವೆ” ಎಂದರು.
ಬೊಜ್ಜಿನ ಸಮಸ್ಯೆ ಹೊಂದಿರುವ ತಾಯಿಗೆ ಜನಿಸಿದ ಮಕ್ಕಳ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಹೊಂದಿರುತ್ತಾರೆ. ಮುಂದಿನ ಜೀವನದಲ್ಲಿ ಬೊಜ್ಜು ಮತ್ತು ಚಯಾಪಚಯ ಅಸ್ವಸ್ಥತೆಗಳ ಅಧಿಕ ಅಪಾಯವನ್ನು ಹೊಂದಿರುತ್ತಾರೆ. ಇದು ಕೇವಲ ಒಂದು ಗರ್ಭಧಾರಣೆಗೆ ಸಂಬಂಧಿಸಿ ಅಲ್ಲ, ಮುಂದಿನ ಪೀಳಿಗೆಯ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಡಾ. ವಿದ್ಯಾ ವಿ. ಭಟ್ ಅವರು ಒತ್ತಿ ಹೇಳಿದರು.
ಗರ್ಭಧಾರಣೆಗೆ ಪೂರ್ವದಲ್ಲಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟ ಡಾ. ಭಟ್ ಅವರು, ಇದು ಮಹಿಳೆಯರಿಗೆ ತೂಕವನ್ನು ಮಿತಿಯಲ್ಲಿಟ್ಟುಕೊಳ್ಳಲು, ಥೈರಾಯ್ಡ್ ಅಸಮತೋಲನವನ್ನು ಸರಿಪಡಿಸಲು, ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ನಿರ್ವಹಿಸಲು ಮತ್ತು ಸಮಗ್ರ ಪೋಷಣೆಯನ್ನು ಸುಧಾರಿಸಲು ಅವಕಾಶ ನೀಡುತ್ತದೆ. ವಿಶೇಷವಾಗಿ ಅಧಿಕ ತೂಕವಿರುವ ಮಹಿಳೆಯರಲ್ಲಿ ಯೋಜಿತ ಗರ್ಭಧಾರಣೆಯು ಯಾವಾಗಲೂ ಸುರಕ್ಷಿತವಾಗಿರುತ್ತದೆ. ಅತಿಯಾಗಿ ತಿನ್ನಬಾರದು, ಮನೆಯಲ್ಲೇ ಸಿದ್ಧಪಡಿಸಿದ ಸಮತೋಲಿತ ಊಟವನ್ನು ಪ್ರೋತ್ಸಾಹಿಸುವ ಮತ್ತು ಲಘುವಾದ ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಅಭ್ಯಾಸಗಳನ್ನು ಬೆಂಬಲಿಸುವಲ್ಲಿ ಕುಟುಂಬಗಳ ಪಾತ್ರವನ್ನು ಅವರು ಒತ್ತಿ ಹೇಳಿದರು.
