IMG 20260327 WA0022 scaled

BJP : ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ…!

POLATICAL STATE

ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ

ದೇಶದ ಸಾಮಾನ್ಯ ಜನರ ಪರವಾಗಿ ಪ್ರಧಾನಿ ದೃಢನಿರ್ಧಾರ: ವಿಜಯೇಂದ್ರ ಅಭಿನಂದನೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನಿರ್ಧಾರದಿಂದ ನಮ್ಮ ದೇಶದಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ. ಕಡಿಮೆ ಮಾಡಿದ್ದಾರೆ. ಜನರ ಮೇಲೆ ಬೀಳುವ ಹೊರೆಯನ್ನು ಕೇಂದ್ರ ಸರಕಾರವೇ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ನರೇಂದ್ರ ಮೋದಿಜೀ ಅವರು ದೇಶದ ಸಾಮಾನ್ಯ ಜನರ ಪರವಾಗಿ ದೃಢನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಯುದ್ಧದ ಈ ಸಂದರ್ಭದಲ್ಲಿ ರಾಜ್ಯ- ದೇಶದ ಜನತೆ ಪರವಾಗಿ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಿಗೆ ಹಾಗೂ ಪೆಟ್ರೋಲಿಯಂ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಲು ಬಯಸುವುದಾಗಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ಸಿನವರು, ಈ ಸರಕಾರವು ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ ಮಾಡಿದ್ದಾರೆ. ಆದರೆ, ಮೋದಿಜೀ ಅವರ ಜನಪರ ಕಾಳಜಿ ಏನು ಎಂಬುದನ್ನು ರಾಜ್ಯದ ಮುಖ್ಯಮಂತ್ರಿಗಳು, ಅವರ ಸಚಿವಸಂಪುಟದ ಸದಸ್ಯರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಪ್ರಶ್ನೆಗೆ ಉತ್ತರ ನೀಡಿದ ಅವರು, ಅಮೆರಿಕ, ಆಸ್ಟ್ರೇಲಿಯ ಮೊದಲಾದ ಕಡೆ ಶೇ 25, ಶೇ 30ರಷ್ಟು ಜನರ ಮೇಲೆ ಹೊರೆ ಬೀಳುವಂತಾಗಿದೆ. ಆದರೆ, ಅಬಕಾರಿ ಸುಂಕ ಕಡಿಮೆ ಮಾಡುವ ಕೇಂದ್ರ ಸರಕಾರದ ದೃಢನಿರ್ಧಾರದಿಂದ ಜನರಿಗೆ ಅನುಕೂಲ ಆಗುತ್ತಿದೆ. ಇದು ಸ್ವಾಗತಾರ್ಹ ಎಂದು ತಿಳಿಸಿದರು. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಬೇರೆಯವರ ಮೇಲೆ ಗೂಬೆ ಕೂರಿಸುವ ಚಾಳಿ, ಚಟ ಕಾಂಗ್ರೆಸ್ಸಿನವರಿಗೆ ಮುಂಚಿನಿಂದಲೂ ಬಂದಿದೆ. ಕೇಂದ್ರ ಸರಕಾರವನ್ನು ದೂರುತ್ತಲೇ ಮುಖ್ಯಮಂತ್ರಿಗಳು 3 ವರ್ಷಗಳ ಅವಧಿ ಪೂರೈಸಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಅದು ಬಿಟ್ಟು ಬೇರೆ ಏನು ಸಾಧನೆ ಮಾಡಿದ್ದಾರೆ ಎಂದು ಕೇಳಿದರು. ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರದ ಸಾಧನೆ ಏನು ಎಂದು ಪ್ರಶ್ನಿಸಿದರು. ಜನರೂ ಇದನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಶಾಸಕರಿಗೆ ಐಪಿಎಲ್ ಟಿಕೆಟ್ ವಿಚಾರದ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನಿನ್ನೆ ಆಡಳಿತ ಪಕ್ಷ, ವಿಪಕ್ಷಗಳ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ. ವೈಯಕ್ತಿಕವಾಗಿ ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ರಾಜಕಾರಣಿಗಳೆಂದರೆ ಜನಸಾಮಾನ್ಯರು ನಮ್ಮನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ಪತ್ರಿಕೆಗಳು, ಟಿ.ವಿ.ಗಳಲ್ಲಿ ನೋಡುತ್ತಿದ್ದೇವೆ. ಕಳೆದ ಬಾರಿ ಇದೇ ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಆಡಳಿತ ಪಕ್ಷದ ಮೂರ್ಖತನದಿಂದ 11 ಜನ ಮುಗ್ಧರು ಪ್ರಾಣ ಕಳಕೊಂಡರು. ಅದನ್ನು ರಾಜ್ಯದ, ದೇಶದ ಜನರು ಮರೆತಿಲ್ಲ ಎಂದು ತಿಳಿಸಿದರು. ಇಂಥ ಸಂದರ್ಭದಲ್ಲಿ ಇಂಥ ಹೇಳಿಕೆಗಳ ಅವಶ್ಯಕತೆ ಇತ್ತೇ ಎಂಬುದು ನನಗಂತೂ ಅರ್ಥವಾಗುವುದಿಲ್ಲ. ನಾನಿದರ ಪರವಾಗಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಒಬ್ಬ ಶಾಸಕ, ಜನಪ್ರತಿನಿಧಿ ಆಗಿರುವವರು ಜನಸಾಮಾನ್ಯರಿಗಿಂತ ವಿಭಿನ್ನ, ವಿಐಪಿ ಎಂಬುದು ಖಂಡಿತವಾಗಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದಕ್ಕೆ ನನ್ನ ಬೆಂಬಲ ಇಲ್ಲ ಎಂದು ನುಡಿದರು.

ದಾವಣಗೆರೆ, ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್‍ನವರು ಭಾಗವಹಿಸಿದ್ದಾರೆ. ನಾನು ಮಾಜಿ ಮುಖ್ಯಮಂತ್ರಿ- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. 1ನೇ ತಾರೀಖಿನ ನಂತರ ಸಮಯ ಕೊಡುವುದಾಗಿ ಹೇಳಿದ್ದಾರೆ ಎಂದು ಪ್ರಶ್ನೆಗೆ ಉತ್ತರವಿತ್ತರು.