ThyroidDiseases

Karnataka : ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಬಂಜೆತನ ಮತ್ತು ಗರ್ಭಪಾತಕ್ಕೆ ಕಾರಣ….!

BUSINESS

ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಬಂಜೆತನ ಮತ್ತು ಗರ್ಭಪಾತಕ್ಕೆ ಕಾರಣ: ಬೆಂಗಳೂರು ಸ್ತ್ರೀರೋಗ ತಜ್ಞರ ಎಚ್ಚರಿಕೆ

ಬೆಂಗಳೂರು, ಮೇ 21, 2026: ನಗರ ಪ್ರದೇಶಗಳ ಮಹಿಳೆಯರಲ್ಲಿ ಬಂಜೆತನ, ಅನಿಯಮಿತ ಋತು ಚಕ್ರಗಳು, ಗರ್ಭಧಾರಣೆಯ ವಿಫಲ ಪ್ರಯತ್ನಗಳು ಮತ್ತು ಪದೇ ಪದೆ ಸಂಭವಿಸುವ ಗರ್ಭಪಾತಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಜ್ಞರ ಪ್ರಕಾರ, ಈ ಸಮಸ್ಯೆಗಳ ಹಿಂದೆ ಅಡಗಿರುವ ಪ್ರಮುಖ ಕಾರಣ ಥೈರಾಯ್ಡ್. ಇದು ಮೌನವಾಗಿ ಪರಿಣಾಮ ಬೀರುವುದಾದರೂ ಸರಿಯಾದ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆಯುವುದರಿಂದ ಸುಲಭವಾಗಿ ನಿಯಂತ್ರಿಸಬಹುದಾಗಿದೆ.
ಬೆಂಗಳೂರಿನಲ್ಲಿ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಮತ್ತು ಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ IVF ಪರಿಣಿತರಾಗಿರುವ ಡಾ.ವಿದ್ಯಾ ವಿ ಭಟ್ ಅವರು ಹೇಳುವಂತೆ, ಥೈರಾಯ್ಡ್ ಅಸ್ವಸ್ಥತೆ ಮಹಿಳೆಯರ ಫಲವತ್ತತೆಯನ್ನು ಪರಿಣಾಮಕಾರಿಗೊಳಿಸುವ ಪ್ರಮುಖವಾದರೂ ಹೆಚ್ಚಾಗಿ ಗಮನಿಸದ ಕಾರಣವಾಗಿ ಹೊರಹೊಮ್ಮುತ್ತಿದೆ. ಇದು ಭಾರತದ ನಗರ ಪ್ರದೇಶಗಳ ಮಹಿಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಮಹಿಳಾ ಆರೋಗ್ಯ ಮತ್ತು ಫಲವತ್ತತೆ ಚಿಕಿತ್ಸೆಯಲ್ಲಿ 35 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಡಾ.ವಿದ್ಯಾ ಭಟ್ ಅವರು, ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ 20 ರ ದಶಕ ಮತ್ತು 30 ರ ದಶಕದಲ್ಲಿನ ವಯಸ್ಸಿನ ಮಹಿಳೆಯರಲ್ಲಿ ಥೈರಾಯ್ಡ್ ಸಂಬಂಧಿತ ಸಂತಾನೋತ್ಪತ್ತಿ ಸಮಸ್ಯೆಗಳು ತೀವ್ರವಾಗಿ ಹೆಚ್ಚುತ್ತಿರುವುದನ್ನು ಗಮನಿಸಿದ್ದಾರೆ. ಹೆಚ್ಚುತ್ತಿರುವ ಒತ್ತಡದ ಜೀವನಶೈಲಿ, ಅಸಮರ್ಪಕವಾಗಿ ನಿದ್ದೆ ಮಾಡುವುದು, ಸದಾ ಕುಳಿತುಕೊಂಡೇ ಕೆಲಸ ನಿಭಾಯಿಸುವುದು, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಅತಿಯಾದ ತೂಕ ಅಥವಾ ಬೊಜ್ಜುವೇ ಈ ಪ್ರವೃತ್ತಿಗೆ ಕಾರಣ ಎಂದು ಹೇಳಿದ್ದಾರೆ.
“ಬಹಳಷ್ಟು ಮಹಿಳೆಯರು ಹಲವಾರು ವರ್ಷಗಳ ಕಾಲ ಗರ್ಭಧಾರಣೆಗೆ ಹೋರಾಟ ನಡೆಸಿದ ನಂತರ ಅಥವಾ ಪದೇಪದೆ ಗರ್ಭಪಾತ ಅನುಭವಿಸಿದ ನಂತರ ನಮ್ಮ ಬಳಿ ಚಿಕಿತ್ಸೆ, ಸಮಾಲೋಚನೆಗೆಂದು ಬರುತ್ತಾರೆ. ಆದರೆ, ಅಂತಹ ಸಮಸ್ಯೆಗಳ ಹಿಂದೆ ಸರಳವಾರ ಥೈರಾಯ್ಡ್ ಅಸಮತೋಲನ ಕಾರಣವಾಗಿರಬಹುದು ಎಂಬುದು ಅವರಿಗೆ ತಿಳಿದಿರುವುದಿಲ್ಲ’’ ಎಂದು ಅವರು ತಿಳಿಸಿದ್ದಾರೆ.
“ಗಾತ್ರದಲ್ಲಿ ಚಿಕ್ಕದಾಗಿದ್ದರೂ ಥೈರಾಯ್ಡ್ ಗ್ರಂಥಿ ಹಾರ್ಮೋನ್ ನಿಯಂತ್ರಣ, ಅಂಡೋತ್ಪತ್ತಿ, ಮಾಸಿಕ ಮುಟ್ಟಿನ ಚಕ್ರಗಳು, ಗರ್ಭಧಾರಣೆಯ ಆರೋಗ್ಯ ಮತ್ತು ಭ್ರೂಣದ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ’’ ಎಂದು ಹೇಳಿದ್ದಾರೆ.
ಡಾ.ವಿದ್ಯಾಭಟ್ ಅವರ ಪ್ರಕಾರ, ಹೈಪೋಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್ ಎರಡೂ ಮಹಿಳೆಯರ ಫಲವತ್ತತೆಯನ್ನು ಗಂಭೀರಗೊಳಿಸಬಹುದು. ಥೈರಾಯ್ಡ್ ಅಸ್ವಸ್ಥತೆ ಅಂಡೋತ್ಪತ್ತಿಯನ್ನು ಅಸ್ತವ್ಯವಸ್ತಗೊಳಿಸಬಹುದಾಗಿದೆ. ಅಲ್ಲದೇ, ಅಂಡಾಣುವಿನ ಗುಣಮಟ್ಟವನ್ನು ಹಾಳು ಮಾಡಬಹುದು, ಭ್ರೂಣ ಗುಣಮಟ್ಟ ಇಳಿಕೆಗೆ ಕಾರಣವಾಗಬಹುದು ಮತ್ತು ಬೆಳವಣಿಗೆಯನ್ನು ವಿಳಂಬಗೊಳಿಸಬಹುದು, ಮಾಸಿಕ ಮುಟ್ಟಿನ ಚಕ್ರದ ನಿಯಮಿತತೆಯನ್ನು ವಿಳಂಬಗೊಳಿಸಬಹುದು ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಪಡೆಯದಿದ್ದರೆ ಗರ್ಭಧಾರಣೆಯ ಸಮಸ್ಯೆಗಳು ಮತ್ತು ಅಪಾಯದ ಮಟ್ಟವನ್ನು ಹೆಚ್ಚಿಸಬಹುದು. ಅನೇಕ ಸಂದರ್ಭದಲ್ಲಿ ಇದರ ಲಕ್ಷಣಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸಾಮಾನ್ಯವಾಗಿ ನಿರ್ಲಕ್ಷ್ಯಗೊಳ್ಳುತ್ತವೆ ಅಥವಾ ಕಡೆಗಣಿಸಲಾಗುತ್ತದೆ.
“ಆಯಾಸ, ಗಣನೀಯ ಪ್ರಮಾಣದಲ್ಲಿ ತೂಕ ಹೆಚ್ಚಳ ಅಥವಾ ತೂಕ ಇಳಿಕೆ, ಕೂದಲು ಉದುರುವಿಕೆ, ಆತಂಕ, ಮನಸ್ಥಿತಿಯಲ್ಲಿ ಬದಲಾವಣೆಗಳು, ಅನಿಯಮಿತ ಋತುಚಕ್ರ, ಕಳಪೆ ನಿದ್ರೆ ಮತ್ತು ಶಕ್ತಿಹೀನತೆ ಉಂಟಾಗುವುದು ಸೇರಿದಂತೆ ಮುಂತಾದ ಲಕ್ಷಣಗಳಿಂದ ಕೆಲಸ ಮಾಡುವ ಮಹಿಳೆಯರಲ್ಲಿ ಒತ್ತಡ –ಸಂಬಂಧಿತ ಸಮಸ್ಯೆಗಳೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ದುರಾದೃಷ್ಟವಶಾತ್, ಇದು ಹೆಚ್ಚಾಗಿ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ವಿಳಂಬಗೊಳಿಸುತ್ತದೆ’’ ಎಂದು ಅವರು ಹೇಳುತ್ತಾರೆ.
PCOS(Polycystic Ovary Syndrome) ನಂತಹ ಪರಿಸ್ಥಿತಿಗಳ ಜೊತೆಗೆ ಥೈರಾಯ್ಡ್ ಅಸ್ವಸ್ಥತೆಗಳು ಹೆಚ್ಚಾಗಿ ಕಂಡುಬರುತ್ತಿರುವುದನ್ನು ಡಾ.ಭಟ್ ಗಮನಿಸಿದ್ದಾರೆ. ಇದು ಫಲವತ್ತತೆ ನಿರ್ವಹಣೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಭಾರತೀಯ ಮಹಿಳೆಯರಲ್ಲಿ ಥೈರಾಯ್ಡ್ ಅಸ್ವಸ್ಥತೆಗಳು ಹೆಚ್ಚಾಗಿದ್ದರೂ, ಥೈರಾಯ್ಡ್ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಅರಿವು ಕಡಿಮೆಯಾಗಿರುವುದು ಆತಂಕಕಾರಿಯಾಗಿದೆ ಎನ್ನುತ್ತಾರೆ.
“ನಾನು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕಂಡುಬಂದ ಬಹುದೊಡ್ಡ ತಪ್ಪು ಕಲ್ಪನೆಯೇನೆಂದರೆ, ಥೈರಾಯ್ಡ್ ಅಸ್ವಸ್ಥತೆ ಇರುವ ಮಹಿಳೆಯರು ಸಹಜವಾಗಿ ಗರ್ಭ ಧರಿಸುವುದಿಲ್ಲ ಎಂದು. ಇದು ಶುದ್ಧ ತಪ್ಪು. ಸಕಾಲದಲ್ಲಿ ರೋಗ ಪತ್ತೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ, ನಿಯಮಿತ ನಿರ್ವಹಣೆ ಮತ್ತು ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡರೆ ಅನೇಕ ಮಹಿಳೆಯರು ಆರೋಗ್ಯಕರವಾದ ಗರ್ಭ ಧರಿಸಬಹುದು ಮತ್ತು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಬಹುದು’’ ಎಂದು ಡಾ.ಭಟ್ ತಿಳಿಸಿದ್ದಾರೆ.
“ಗರ್ಭಾವಸ್ಥೆಯಲ್ಲಿ ಚಿಕಿತ್ಸೆ ಪಡೆಯದ ಥೈರಾಯ್ಡ್ ಕಾಯಿಲೆಗಳು ಪುನರಾವರ್ತಿತ ಗರ್ಭಪಾತಗಳು, ಅವಧಿಪೂರ್ವ ಹೆರಿಗೆ, ಗರ್ಭಾವಸ್ಥೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡ ಮತ್ತು ಶಿಶುಗಳಲ್ಲಿ ಬೆಳವಣಿಗೆಯ ಕಾಳಜಿಗಳ ಅಪಾಯವನ್ನು ಹೆಚ್ಚಿಸಬಹುದು. ಅದರಲ್ಲೂ ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಭ್ರೂಣವು ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ತಾಯಿಯ ಥೈರಾಯ್ಡ್ ಹಾರ್ಮೋನುಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ’’ ಎಂದು ಅವರು ಎಚ್ಚರಿಸಿದ್ದಾರೆ.
ಪೂರ್ವಭಾವಿ ಗರ್ಭಧಾರಣೆ ಯೋಜನೆ ಮತ್ತು ಫಲವತ್ತತೆ ಮೌಲ್ಯಮಾಪನಗಳ ಭಾಗವಾಗಿ ನಿಯಮಿತ ಥೈರಾಯ್ಡ್ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಇಂದಿನ ನಗರ ಆರೋಗ್ಯ ಕ್ಷೇತ್ರದಲ್ಲಿ ಥೈರಾಯ್ಡ್ ಪರೀಕ್ಷೆಯು ಗರ್ಭಧಾರಣೆಯ ಪೂರ್ವ ಸಮಾಲೋಚನೆ ಮತ್ತು ಪ್ರಸವಪೂರ್ವ ಆರೈಕೆಯ ನಿಯಮಿತ ಅಂಶವಾಗಬೇಕು. ಅದರಲ್ಲೂ ವಿಶೇಷವಾಗಿ ಅನಿಯಮಿತ ಋತುಚಕ್ರ, ಪಿಸಿಒಎಸ್, ಬಂಜೆತನ, ಹಿಂದಿನ ಗರ್ಭಪಾತಗಳು ಅಥವಾ ಥೈರಾಯ್ಡ್ ಅಸ್ವಸ್ಥತೆಗಳ ಕುಟುಂಬದ ಇತಿಹಾಸ ಹೊಂದಿರುವ ಮಹಿಳೆಯರು ಈ ಸಲಹೆಯನ್ನು ಪಾಲಿಸಬೇಕು’’ ಎಂದು ತಿಳಿಸಿದ್ದಾರೆ.
ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಕಿರಿಯ ಮಹಿಳೆಯರು ಜೀವನಶೈಲಿ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನೂ ಅವರು ಹೇಳಿದ್ದಾರೆ.
“20 ಮತ್ತು 30 ರ ಹರೆಯದ ಮಹಿಳೆಯರು ಈ ಹಿಂದಿಗಿಂತಲೂ ಮುಂಚೆಯೇ ಹಾರ್ಮೋನುಗಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ನಿಯಮಿತ ವ್ಯಾಯಾಮ, ಸಮತೋಲಿತ ಪೋಷಣೆ, ಆರೋಗ್ಯಕರ ನಿದ್ರೆ, ಒತ್ತಡ ನಿರ್ವಹಣೆ, ಉತ್ತಮ ರೀತಿಯಲ್ಲಿ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಮುಟ್ಟಿನಿಂದಾಗುವ ಸಮಸ್ಯೆಗಳನ್ನು ನಿರ್ಲಕ್ಷಿಸದೇ ಇರುವುದು ಸಂತಾನೋತ್ಪತ್ತಿ ಆರೋಗ್ಯವನ್ನು ರಕ್ಷಿಸುವಲ್ಲಿ ಬಹಳ ದೂರ ಹೋಗಬಹುದು’’ ಎಂದು ಡಾ.ಭಟ್ ತಿಳಿಸಿದ್ದಾರೆ.
ಭಾರತದ ನಗರ ಪ್ರದೇಶದಾದ್ಯಂತ ಬಂಜೆತನದ ಪ್ರಮಾಣ ಹೆಚ್ಚುತ್ತಿರುವಂತೆ ಥೈರಾಯ್ಡ್ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಈ ಮೂಲಕ ಸಾವಿರಾರು ದಂಪತಿಗಳು ಚಿಕಿತ್ಸೆ ನೀಡಬಹುದಾದ ಕಾರಣಗಳನ್ನು ಮೊದಲೇ ಗುರುತಿಸಲು ಮತ್ತು ಫಲವತ್ತತೆಯ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಣೆ ಮಾಡಲು ಸಹಾಯ ಮಾಡುತ್ತದೆ’’ ಎಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *